
ಶುದ್ಧ ನೀರು, ಕಲ್ಮಷ ರಹಿತವಾದ ನೀರು ಹಾಗೆ ಹೀಗೆ ಎಂದೆಲ್ಲಾ ಈಗ ಬಹುತೇಕ ಮನೆಗಳಲ್ಲಿ RO ವಾಟರ್ಗೆ ಭಾರಿ ಡಿಮಾಂಡ್. ನಮಗೆ ಕೆಟ್ಟದ್ದೆಲ್ಲಾ ಆಗಿಬರಲ್ಲ. ಅದಕ್ಕಾಗಿಯೇ ಶುದ್ಧ ನೀರನ್ನೇ ಬಳಸುವುದು ಎಂದು ಹಲವರು RO Water (Reverse Osmosis) ಮೊರೆ ಹೋಗುವುದು ಮಾಮೂಲಾಗಿದ್ದರೆ, ನೀರಿನಿಂದಲೇ ಹಲವಾರು ರೋಗಗಳು ಬರುವುದರಿಂದ ಶುದ್ಧ ನೀರಿಗೆ ಇದೇ ಬೆಸ್ಟ್ ಎಂದು ಅದನ್ನು ಸೇವಿಸುವವರು ಲಕ್ಷಾಂತರ ಮಂದಿ ಇದ್ದಾರೆ. ಆದರೆ, ಹೀಗೆ ಆರೋಗ್ಯಕರ, ಶುದ್ಧವಾದ ನೀರು ಎಂದು ದಿನವೂ ಕುಡಿಯುವ ನೀರು ನಿಜಕ್ಕೂ ಶುದ್ಧವೆ? ಅದು ದೇಹಕ್ಕೆ ಎಷ್ಟು ಮಾರಕವಾಗಿ ಪರಿಣಮಿಸುತ್ತಿದೆ, ಸ್ಲೋ ಪಾಯಿಸನ್ ಆಗಿ ಹೇಗೆ ಕೆಲಸ ಮಾಡುತ್ತಿದೆ ಎಂಬ ಅರಿವೇ ನಮಗಿಲ್ಲದಂತೆ ಅದರ ಸೇವನೆ ಮಾಡುತ್ತಿದ್ದೇವೆ.
ಈ ಬಗ್ಗೆ ಶಗುನ್ ವಶಿಷ್ಠ ಅವರ ಪಾಡ್ಕಾಸ್ಟ್ನಲ್ಲಿ ತಜ್ಞರು ಅತ್ಯಂತ ಸುಂದರವಾಗಿ ಉದಾಹರಣೆ ಸಹಿತ ಇದು ಎಷ್ಟು ವಿಷಪೂರಕ ಎನ್ನುವುದನ್ನು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಈ ಬಗ್ಗೆ ಅಧ್ಯಯನಗಳೂ ನಡೆದಿವೆ. ಈ ನೀರು ದೇಹಕ್ಕೆ ಮಾರಕ ಎಂದರೆ ಅದನ್ನು ನಂಬದವರು ಅನೇಕ ಮಂದಿ ಇರಬಹುದು. ಏಕೆಂದರೆ ಕಂಪೆನಿಗಳು ಜನರ ಬ್ರೇನ್ವಾಷ್ ಅಷ್ಟು ಚೆನ್ನಾಗಿ ಮಾಡಿರುತ್ತದೆ. ಇದೊಂದು ರೀತಿಯಲ್ಲಿ ಮಾಫಿಯಾ ಆಗಿ ಬೆಳೆದಿದೆ ಎಂದು ಕೆಲ ವರ್ಷಗಳ ಹಿಂದೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಎ. ಆರ್. ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದರು. 'ವಾಟರ್ ಫಿಲ್ಟರ್ ಉದ್ಯಮ ಮಾಫಿಯಾವಾಗಿ ಮಾರ್ಪಾಡಾಗಿದೆ. ಹೀಗಾಗಿ ಅವರ ಉದ್ಯಮಕ್ಕೆ ಧಕ್ಕೆಯುಂಟು ಮಾಡುವ ಯಾವುದೇ ಅಧ್ಯಯನವನ್ನು ಅವರು ಒಪ್ಪಿಕೊಳ್ಳುವುದಿಲ್ಲ' ಎಂದಿದ್ದರು. ಇದರ ಪ್ರಚಾರಕ್ಕಾಗಿ ಸೆಲೆಬ್ರಿಟಿಗಳಿಗೆ ಕೋಟಿ ಕೋಟಿ ಹಣ ಕೊಟ್ಟು ಜಾಹೀರಾತಿಗೆ ಬಳಸಿಕೊಳ್ಳುತ್ತಿವೆ. ಅದನ್ನು ನೋಡಿದ ಜನರು ಮರುಳಾಗಲೇಬೇಕು. ಇದು ಎಲ್ಲಾ ರೀತಿಯ ಜಾಹೀರಾತುಗಳಿಗೂ ಅನ್ವಯ ಆಗುವಂಥ ಮಾತೇ. ಅದಿರಲಿ, ಈಗ ಈ RO Water ವಿಷಯಕ್ಕೆ ಬರುವುದಾದರೆ ಇದು ಶುದ್ಧ ಅಲ್ಲ ಎನ್ನುವುದನ್ನು ಹೇಗೆ ನೋಡಬಹುದು ಎನ್ನುವ ಬಗ್ಗೆ ಅವರು ವಿವರಿಸಿದ್ದಾರೆ.
ನಿಮ್ಮ ಮನೆಯಲ್ಲಿ ಅಕ್ವೇರಿಯಂ ಇದ್ದರೆ, ಅಲ್ಲಿರುವ ನೀರಿನ ಬದಲು ನೀವು ಶುದ್ಧ ಎಂದು ಬಳಸುತ್ತಿರುವ RO Water ಹಾಕಿ ನೋಡಿ. ಮೀನುಗಳೆಲ್ಲವೂ ಸಾಯುತ್ತವೆ. ಅದೂ ಕಷ್ಟನಾ? ಹಾಗಿದ್ರೆ ನಿಮ್ಮ ಮನೆಯಲ್ಲಿ ಇರುವ ಗಿಡಗಳಿಗೆ ಇದೇ ಶುದ್ಧ ಎಂದುಕೊಂಡಿರುವ ನೀರು ಹಾಕಿದರೆ ಅವು ಕೂಡ ಸತ್ತು ಹೋಗುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ. ಅಷ್ಟೇ ಏಕೆ, ಹಸುಗಳಿಗೆ ಈ ನೀರನ್ನು ಕುಡಿಸಿದರೆ ಹಾಲೇ ಕೊಡುವುದಿಲ್ಲ. ಅದನ್ನು ನೀವು ಶುದ್ಧ ನೀರು ಎಂದು ಕುಡಿಯುತ್ತಿದ್ದೀರಾ ಎಂದು ಅವರು ಪ್ರಶ್ನಿಸಿದ್ದಾರೆ. ಈ ನೀರನ್ನು ಕುಡಿದರೆ, ನಿಮ್ಮ ಬಾಯಾರಿಕೆ ತಣಿಯಬಹುದು ಅಷ್ಟೇ. ಆದರೆ ದೇಹಕ್ಕೆ ಯಾವುದೇ ರೀತಿಯ ಲಾಭವೂ ಇಲ್ಲ ಎಂದಿದ್ದಾರೆ ಅವರು. ದೇಹಕ್ಕೆ ಬೇಕಾದ ಖನಿಜಗಳನ್ನೇ ಈ ನೀರು ಶುದ್ಧೀಕರಣದ ಹೆಸರಿನಲ್ಲಿ ತೆಗೆದು ಹಾಕುವುದರಿಂದ ದೇಹಕ್ಕೆ ಕ್ರಮೇಣ ಸಮಸ್ಯೆಯಾಗುತ್ತದೆ ಎಂದಿದ್ದಾರೆ.
ಹಾಗೆಂದು ಈ ಮಾತನ್ನು ಇವರೇ ಹೇಳುತ್ತಿದ್ದಾರೆ ಅಂತೇನಲ್ಲ. ಈ ಹಿಂದೆ ಈ ಕುರಿತಾಗಿ ಖುದ್ದು ವಿಶ್ವ ಆರೋಗ್ಯ ಸಂಸ್ಥೆಯೇ ಎಚ್ಚರಿಕೆ ನೀಡಿತ್ತು. RO ವಾಟರ್ ನೀರಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದಷ್ಟೇ ಅಲ್ಲದೇ, ನೀರಿನಲ್ಲಿರುವ ಉಪ್ಪಿನಾಂಶ ಹಾಗೂ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂನಂತಹ ಅಗತ್ಯ ಪೋಷಕಾಂಶಗಳನ್ನೂ ತೆಗೆದು ಹಾಕುತ್ತದೆ. ಇದೊಂದು ರೀತಿಯಲ್ಲಿ ನೀರಿನ ಮಾಫಿಯಾ ಆಗಿ ನಡೆಯುತ್ತಿದೆ. ಸರ್ಕಾರಗಳೂ 'ಶುದ್ಧ ಕುಡಿಯುವ ನೀರಿನ ಘಟಕ' ಇದರ ಘಟಕ ಸ್ಥಾಪಿಸುತ್ತಿರುವುದು ಆತಂಕಕಾರಿಯಾಗಿದೆ ಎಂದು 2019ರಲ್ಲಿಯೇ ಅದು ವರದಿ ನೀಡಿದೆ.
RO Water ಬಗ್ಗೆ ತಜ್ಞರ ಮಾತನ್ನು ಕೇಳಲು ಇದರ ಮೇಲೆ ಕ್ಲಿಕ್ ಮಾಡಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.