
ಜನನದಿಂದ ಮರಣದವರಗೆ ಒಂದು ಕ್ಷಣವೂ ವಿಶ್ರಾಂತಿ ಬಯಸದೆ ಕ್ರಿಯಾಶೀಲವಾಗಿರುವ ಮಾನವ ದೇಹದ ಪ್ರಬಲ ಅಂಗ ಹೃದಯ. ಹೃದಯವು ರಕ್ತ ಪರಿಚಲನಾ ವ್ಯವಸ್ಥೆಯ ರಕ್ತನಾಳಗಳ ಮೂಲಕ ರಕ್ತವನ್ನು ಪಂಪ್ ಮಾಡಿ ದೇಹಕ್ಕೆ ಅಗತ್ಯವಾದ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಒದಗಿಸುವುದರಿಂದ ಜೀವಿಯು ಜೀವಿಸಲು ಸಾಧ್ಯವಾಗುತ್ತದೆ. ಆದಕಾರಣ ಸುದೀರ್ಘ ಮತ್ತು ಗುಣಮಟ್ಟದ ಜೀವನವನ್ನು ನಡೆಸಲು ನಮ್ಮ ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ತುಂಬಾ ಅಗತ್ಯವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ವರ್ಷ ಸುಮಾರು 1.8 ಕೋಟಿ ಜನರು ಜಗತ್ತಿನಾದ್ಯಾಂತ ಹೃದಯ ಸಂಬಂಧಿ ಖಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಶೇಕಡ 30ರಷ್ಟು ಜನರು ಹೃದಯಘಾತದಿಂದ ಸಾಯುತ್ತಿದ್ದಾರೆ. ಹೃದಯಘಾತವು ಎಲ್ಲಾ ವಯೋಮಾನದವರನ್ನು ಕಾಡುತ್ತಿರುವ ಗಂಭೀರವಾದ ರೋಗವಾಗಿದೆ.
ಸಂಶೋಧನೆಗಳ ಪ್ರಕಾರ ಅತಿಯಾದ ಆತಂಕ, ಮಾನಸಿಕ ಒತ್ತಡ, ಖಿನ್ನತೆ, ಜಡಜೀವನ ಶೈಲಿ, ಕಾರ್ಯದ ಒತ್ತಡ, ಆವೇಗ, ಆಕ್ರಮಣಕಾರಿ ಮನೋಭಾವ, ಒಂಟಿತನ, ನಿರಾಶಾವಾದ, ಭಾವನಾತ್ಮಕ ಘರ್ಷಣೆಗಳು, ಆರೋಗ್ಯ ಮತ್ತು ವೈಯಕ್ತಿಕ ಸಮಸ್ಯೆಗಳ ಬಗೆಗೆ ಅತಿಯಾದ ಚಿಂತೆ, ಅತಿಯಾದ ಮಾನಸಿಕ ಮತ್ತು ದೈಹಿಕ ಆಯಾಸ, ಅವಿಶ್ರಾಂತ ದುಡಿಮೆ ಮುಂತಾದ ಮಾನಸಿಕ ಕಾರಣಗಳು, ಅಧಿಕ ರಕ್ತದ ಒತ್ತಡ ಮತ್ತು ಹೃದಯಘಾತಕ್ಕೆ ಕಾರಣಗಳಾಗಿವೆ.
ಆರೋಗ್ಯ ಮನೋವಿಜ್ಞಾನವು ಹೃದಯದ ಆರೋಗ್ಯದ ಬಗೆಗೆ ವಿಶೇಷ ಗಮನವನ್ನು ಕೇಂದ್ರೀಕರಿಸುತ್ತದೆ. ಒತ್ತಡ ನಿರ್ವಹಣೆ, ಭಾವನಾತ್ಮಕ ಸಮತೋಲನ, ವಿಶ್ರಾಂತಿ ಚಿಕಿತ್ಸೆ, ಮನೋಚಿಕಿತ್ಸೆ ಮತ್ತು ಉತ್ತಮ ಜೀವನಶೈಲಿ ರೂಪಿಸಿಕೊಳ್ಳುವಿಕೆ ಮುಂತಾದ ವಿಧಾನಗಳ ಮೂಲಕ ಹೃದಯ ಸಂಬಂಧಿ ರೋಗಗಳನ್ನು ತಡೆಗಟ್ಟಲಾಗುತ್ತದೆ.
ಮನೋವಿಜ್ಞಾನದ ಪ್ರಕಾರ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಳಕಂಡ ಅಂಶಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕ.
ಹೃದಯ ಸಂಬಂಧಿತ ಆರೋಗ್ಯ ಸಮಸ್ಯೆಗಳಿದ್ದಲ್ಲಿ ವಿನಾಕಾರಣ ವಿಳಂಬ ಮಾಡದೆ ವೈದ್ಯರನ್ನು ತತ್‌ಕ್ಷಣ ಭೇಟಿ ಮಾಡಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ.
ಆರೋಗ್ಯವನ್ನು ವೃದ್ಧಿಸುವಂತಹ ಆಲೋಚನೆಗಳು, ವರ್ತನೆಗಳು, ಹವ್ಯಾಸಗಳು, ಅಭ್ಯಾಸಗಳನ್ನು ಸಮರ್ಪಕವಾಗಿ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ಮಾನಸಿಕ ಮತ್ತು ದೈಹಿಕ ಆರೋಗ್ಯದ ಜೊತೆಗೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
-ಡಾ। ಪಿ.ಮಂಜುನಾಥ, ಮುಖ್ಯಸ್ಥರು, ಮನೋವಿಜ್ಞಾನ ಅಧ್ಯಯನ ವಿಭಾಗ
ಕರ್ನಾಟಕ ರಾಜ್ಯ ಮುಕ್ತ ವಿವಿ
ಮುಕ್ತ ಗಂಗೋತ್ರಿ, ಮೈಸೂರು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.