H3N2 ವೃದ್ಧರು, ಮಕ್ಕಳಿಗೆ ಹೆಚ್ಚು ಅಪಾಯಕಾರಿ, ಸಾವಿನ ಪ್ರಮಾಣ ಕಡಿಮೆ, ಆದರೆ ನಿರ್ಲಕ್ಷ್ಯ ಬೇಡ

By Kannadaprabha News  |  First Published Mar 7, 2023, 2:25 PM IST

ರಾಜ್ಯದಲ್ಲಿ ಸದ್ಯ ಹೊಸ ವೈರಸ್‌ನ ಹಾವಳಿ ಶುರುವಾಗಿದೆ. ಎಚ್‌3ಎನ್‌2 ವೃದ್ಧರು, ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಿದೆ ಎಂದು ಹೇಳಲಾಗುತ್ತಿದೆ. ಸೋಂಕು ಹರಡುವಿಕೆ, ಲಕ್ಷಣ, ಎಚ್ಚರಿಕೆ ಬಗ್ಗೆ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. 


ಬೆಂಗಳೂರು: ರಾಜ್ಯದಲ್ಲಿ ಎಚ್‌3ಎನ್‌2 ಸೇರಿದಂತೆ ವಿವಿಧ ರೀತಿಯ ಶೀತ ಜ್ವರ ಪ್ರಕರಣ (ಸೀಸನಲ್‌ ಫ್ಲು-ಇನ್‌ಫ್ಲುಯೆಂಜಾ) ಹೆಚ್ಚಾಗುತ್ತಿರುವುದರಿಂದ ಕೈಗೊಳ್ಳಬೇಕಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಸೋಂಕಿನ ಅಪಾಯ ಹೆಚ್ಚಿರುವ 15 ವರ್ಷದೊಳಗಿನ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟವರು ಹೆಚ್ಚು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದೆ. ವಿಧಾನಸೌಧದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ತಾಂತ್ರಿಕ ಸಮಿತಿ ಸಭೆಯ ಬಳಿಕ ಆರೋಗ್ಯ ಇಲಾಖೆಯು ಸಭೆಯ ನಿರ್ಣಯಗಳನ್ನು ಆಧರಿಸಿ ಸುತ್ತೋಲೆ ಹೊರಡಿಸಿದೆ. ಇದರಲ್ಲಿ ಕಾಯಿಲೆ, ಹರಡುವ ವಿಧಾನ, ತಡೆಯಲು ಮಾಡಬೇಕಾದ ಕ್ರಮಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ.

ಸೋಂಕು ಹೇಗೆ ಹರಡುತ್ತದೆ?:
ಇನ್‌ಫ್ಲುಯೆಂಜಾ ಎ, ಎಚ್‌1ಎನ್‌1, ಎಚ್‌3ಎನ್‌2, ಇನ್‌ಫ್ಲುಯೆಂಜಾ ಬಿ, ಆರ್‌ಎಸ್ವಿ, ಅಡೆನೊ ವೈರಸ್‌ ಪ್ರಕರಣಗಳು ಸೀಸನಲ್‌ ಜ್ವರಗಳಾಗಿದ್ದು, ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುವ ಸಾಂಕ್ರಾಮಿಕ ಲಕ್ಷಣ ಹೊಂದಿವೆ. ಸೋಂಕಿತ ವ್ಯಕ್ತಿಯ ಕೆಮ್ಮು (Cough) ಅಥವಾ ಸೀನಿನಿಂದ ಹೊರ ಹೊಮ್ಮುವ ಡ್ರಾಪ್ಲೆಟ್ಸ್‌ಗಳಿಂದ (ಹನಿ), ಸೋಂಕಿತ ವ್ಯಕ್ತಿಗಳ ಕೈ ಸ್ಪರ್ಶ ಹಾಗೂ ಸೋಂಕಿತ ಸ್ಥಳದಿಂದ ಮತ್ತೊಬ್ಬರಿಗೆ ಸೋಂಕು (Virus) ಹರಡುವ ಸಾಧ್ಯತೆ ಇರುತ್ತದೆ.

Latest Videos

undefined

ಯಾಕೋ ಏನೋ ಮಾಡಿದ್ರೂ ಕೆಮ್ಮು ಹುಷಾರಾಗ್ತಿಲ್ವಾ? ಇಗ್ನೋರ್ ಮಾಡ್ಬೇಡಿ

ಲಕ್ಷಣಗಳೇನು ?
ಸಾಮಾನ್ಯವಾಗಿ ಈ ಸೋಂಕಿಗೆ ಒಳಗಾದವರಲ್ಲಿ ಚಳಿ-ಜ್ವರ, ಅಸ್ವಸ್ಥತೆ, ಊಟ ರುಚಿಸದಿರುವುದು, ವಾಂತಿ, ದೀರ್ಘಕಾಲೀನ ಒಣ ಕೆಮ್ಮು, ಮೈ-ಕೈ ನೋವು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ 5ರಿಂದ 7 ದಿನಗಳಲ್ಲಿ ವಾಸಿಯಾಗಬಲ್ಲ ಲಕ್ಷಣಗಳು ಗಂಭೀರವಾಗಿ ಸೋಂಕಿತರಾದವರು ಅಥವಾ ರೋಗ ನಿರೋಧಕ ಶಕ್ತಿ (Immunity power) ಕಡಿಮೆ ಇರುವವರೆಗೆ 3 ವಾರಗಳ ವರೆಗೆ ಕಾಡಬಹುದು. ಈ ಸೋಂಕಿನಿಂದ ಸಾವಿನ ಪ್ರಮಾಣ (Death rate) ಕಡಿಮೆಯಾದರೂ ನಿರ್ಲಕ್ಷಿಸುವಂತಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಯಾರಿಗೆ ಹೆಚ್ಚು ಅಪಾಯಕಾರಿ?:
ಈ ಸೋಂಕು ನವಜಾತ ಶಿಶುಗಳು, ವೃದ್ಧರು, ಗರ್ಭಿಣಿಯರಂತಹ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವರ್ಗದವರಿಗೆ ಹೆಚ್ಚು ಅಪಾಯಕಾರಿ. ಜತೆಗೆ ಸ್ಟೆರಾಯ್ಡ್‌ನಂತಹ ದೀರ್ಘಕಾಲಿನ ಚಿಕಿತ್ಸೆ ಪಡೆದವರಿಗೂ ಹೆಚ್ಚು ಕಾಡಬಹುದು ಎಂದು ತಿಳಿಸಲಾಗಿದೆ.

ಎಚ್‌3ಎನ್‌2 ತಡೆಗೆ ರಾಜ್ಯ ಸರ್ಕಾರದ ಮುನ್ನೆಚ್ಚರಿಕೆ, ಆಸ್ಪತ್ರೆ ಸಿಬ್ಬಂದಿಗೆ ಮಾಸ್ಕ್‌ ಕಡ್ಡಾಯ

ಮಾರ್ಗಸೂಚಿಯಲ್ಲೇನಿದೆ?
* ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿಯೊಬ್ಬ ವೈದ್ಯಕೀಯ ಸಿಬ್ಬಂದಿಯೂ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು

* ಐಎಲ್‌ಐ (ಶೀತಜ್ವರ)- ಸಾರಿ (ಉಸಿರಾಟ ಸಮಸ್ಯೆ) ಪ್ರಕರಣಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಬೇಕು

* ಸೋಂಕಿನ ಚಿಕಿತ್ಸೆಗೆ ಅಗತ್ಯವಾದ ಔಷಧ, ಉಪಕರಣ, ಪಿಪಿಇ ಕಿಟ್‌ ಸಿದ್ಧಪಡಿಸಿಕೊಳ್ಳಬೇಕು

* ಐಸಿಯು ಸೇರಿದಂತೆ ಹೈರಿಸ್‌್ಕ ಪ್ರದೇಶದಲ್ಲಿ ಕೆಲಸ ಮಾಡುವ ಆರೋಗ್ಯ ಸಿಬ್ಬಂದಿ ಲಸಿಕೆ ಪಡೆಯಬೇಕು

* ಕೊರೋನಾ ನೆಗೆಟಿವ್‌ ವರದಿಯಿದ್ದರೂ ಮೃತಪಟ್ಟಸಾರಿ (ತೀವ್ರ ಉಸಿರಾಟ) ರೋಗಿಗಳ ಮಾದರಿಯನ್ನು ವಿಆರ್‌ಡಿಎಲ್‌ (ವೈರಾಣು) ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

click me!