ಎಚ್‌3ಎನ್‌2 ತಡೆಗೆ ರಾಜ್ಯ ಸರ್ಕಾರದ ಮುನ್ನೆಚ್ಚರಿಕೆ, ಆಸ್ಪತ್ರೆ ಸಿಬ್ಬಂದಿಗೆ ಮಾಸ್ಕ್‌ ಕಡ್ಡಾಯ

By Kannadaprabha News  |  First Published Mar 7, 2023, 10:08 AM IST

ರಾಜ್ಯದಲ್ಲಿ 26 ಜನರಲ್ಲಿ ಎಚ್3ಎನ್2 ವೈರಸ್ ಸೋಂಕು ಪತ್ತೆಯಾದ ಬೆನ್ನಲ್ಲೇ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ರಾಜ್ಯ ಸರ್ಕಾರ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ವಿಸ್ತೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


ಬೆಂಗಳೂರು: ‘ಎಚ್‌3ಎನ್‌2 ವೈರಾಣು ಸೋಂಕಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ 26 ಪ್ರಕರಣ ಪತ್ತೆಯಾಗಿದ್ದು, ಆತಂಕದ ಸ್ಥಿತಿ ನಿರ್ಮಾಣವಾಗಿಲ್ಲ. ಹಾಗಂತ ನಿರ್ಲಕ್ಷ್ಯ ಮಾಡುವ ಪರಿಸ್ಥಿತಿಯೂ ಇಲ್ಲ. ಹೀಗಾಗಿ ಎಲ್ಲಾ ಆಸ್ಪತ್ರೆಗಳ ಆರೋಗ್ಯ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕೆಂದು ಸೂಚನೆ ನೀಡಿ ಆದೇಶ ಹೊರಡಿಸಲಾಗುವುದು. ಹಾಗೆಯೇ ಜನರು ಮುನ್ನೆಚ್ಚರಿಕೆ ವಹಿಸಲು ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ರಾಜ್ಯ ಸೇರಿದಂತೆ ದೇಶಾದ್ಯಂತ ಎಚ್‌3ಎನ್‌2 ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಆತಂಕ ವ್ಯಕ್ತಪಡಿಸಿರುವ ಬೆನ್ನಲ್ಲೇ ಸೋಮವಾರ ಸುಧಾಕರ್‌ ಅವರು ತಾಂತ್ರಿಕ ಸಲಹಾ ಸಮಿತಿ ತಜ್ಞರು (Experts) ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಮಹತ್ವದ ಸಭೆ (Meeting) ನಡೆಸಿದರು.

Tap to resize

Latest Videos

ಯಾಕೋ ಏನೋ ಮಾಡಿದ್ರೂ ಕೆಮ್ಮು ಹುಷಾರಾಗ್ತಿಲ್ವಾ? ಇಗ್ನೋರ್ ಮಾಡ್ಬೇಡಿ

ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಲವು ದಿನಗಳಿಂದ ಎಚ್‌3ಎನ್‌2 ವೈರಸ್‌ ಹರಡುವಿಕೆಯನ್ನು ಗಮನಿಸಿ ಸಭೆ ನಡೆಸಿದ್ದೇವೆ. ಸೋಂಕಿನ ಬಗ್ಗೆ ಹೆಚ್ಚು ಆತಂಕ (Anxiety) ಪಡುವ ಅಗತ್ಯವಿಲ್ಲ. ಆದರೆ, 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಹಾಗೂ 65 ವರ್ಷ ಮೇಲ್ಪಟ್ಟವೃದ್ಧರಿಗೆ ಈ ಸೋಂಕು (Virus) ತಗುಲುವ ಸಾಧ್ಯತೆಯಿದೆ. ಗರ್ಭಿಣಿಯರಿಗೂ ಸೋಂಕು ಬರುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಸೋಂಕು ಹರಡದಂತೆ ತಡೆಯಲು ಶುಚಿತ್ವ (Clean), ಗುಂಪುಗೂಡುವುದನ್ನು ತಡೆಯುವುದು, ಕೈಗಳ ಸ್ವಚ್ಛತೆ ಮೊದಲಾದ ಮುನ್ನೆಚ್ಚರಿಕಾ ಕ್ರಮಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ವೈದ್ಯಕೀಯ ಸಿಬ್ಬಂದಿಗೆ ಲಸಿಕೆ: ಐಸಿಯುನಲ್ಲಿ ಕೆಲಸ ಮಾಡುವ ನಿರ್ದಿಷ್ಟವೈದ್ಯರು ಹಾಗೂ ಸಿಬ್ಬಂದಿಗೆ ಸರ್ಕಾರದಿಂದಲೇ ಇನ್‌ಫ್ಲುಯೆಂಜಾ ತಡೆಗೆ ಪ್ರತಿ ವರ್ಷ ಲಸಿಕೆ (Vaccine) ನೀಡಲಾಗುತ್ತಿತ್ತು. 2019ರವರೆಗೆ ಲಸಿಕೆ ನೀಡಲಾಗಿತ್ತಾದರೂ ಕೊರೋನಾ ಹಿನ್ನೆಲೆಯಲ್ಲಿ 2019ರ ಬಳಿಕ ನೀಡಿರಲಿಲ್ಲ. ಈಗ ಐಸಿಯುನಲ್ಲಿ ಕೆಲಸ ಮಾಡುವವರು ಸೇರಿದಂತೆ ಕೆಲ ನಿರ್ದಿಷ್ಟವೈದ್ಯರು, ಸಿಬ್ಬಂದಿಗೆ ಸರ್ಕಾರದಿಂದಲೇ ಲಸಿಕೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಪ್ರತಿ ವಾರ 25 ಪರೀಕ್ಷೆ: ಎಚ್‌3ಎನ್‌2 ಪತ್ತೆಗೆ ಪ್ರತಿ ವಾರ 25 ಪರೀಕ್ಷೆಗಳನ್ನು ಮಾಡಬೇಕೆಂದು ಕೇಂದ್ರ ಸರ್ಕಾರ ಗುರಿ ನೀಡಿದೆ. ಬೆಂಗಳೂರಿನ ವಿಕ್ಟೋರಿಯಾ ಹಾಗೂ ವಾಣಿ ವಿಲಾಸ ಆಸ್ಪತ್ರೆಗಳಲ್ಲಿ ಸಾರಿ (ಉಸಿರಾಟ ಸಮಸ್ಯೆ) ಹಾಗೂ ಐಎಲ್‌ಐ (ವಿಷಮಶೀತ ಜ್ವರ) ಪ್ರಕರಣಗಳ ಪೈಕಿ 25 ಮಂದಿಗೆ ಈ ಪರೀಕ್ಷೆ ಮಾಡಿ ಯಾವ ಪ್ರಭೇದದ ವೈರಾಣು ಎಂದು ಪತ್ತೆ ಮಾಡಲಾಗುವುದು. ಇದರಿಂದ ತ್ವರಿತವಾಗಿ ಎಚ್‌3ಎನ್‌2 ಪ್ರಕರಣಗಳ ಪತ್ತೆಗೆ ಅನುಕೂಲವಾಗಲಿದೆ ಎಂದರು.

ಭಾರತದ ಮೊದಲ ಕೋವಿಡ್ ಪತ್ತೆಯಾಗಿ 3 ವರ್ಷ, ಸರಿಯಾಗಿ ನೆನಪಿದೆ ಕೊರೋನಾ ಸಂಕಷ್ಟ!

ಅನಗತ್ಯವಾಗಿ ಆ್ಯಂಟಿ ಬಯೋಟಿಕ್‌ ಬೇಡ: ರಾಜ್ಯದಲ್ಲಿ ಜನವರಿಯಿಂದ ಮಾಚ್‌ರ್‍ವರೆಗೆ ಎಚ್‌1ಎನ್‌1ನ 20 ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ ಒಟ್ಟು ಎಚ್‌3ಎನ್‌2 ಸೋಂಕಿನ 26 ಪ್ರಕರಣ ಪತ್ತೆಯಾಗಿವೆ. ಇನ್‌ಫ್ಲುಯೆಂಜಾ ಬಿ 10, ಅಡಿನೋ 69 ಪ್ರಕರಣ ಕಂಡುಬಂದಿದೆ. ಅನೇಕರು ಈ ಸೋಂಕಿಗೆ ಆ್ಯಂಟಿ ಬಯೋಟಿಕ್‌ ಮಾತ್ರೆಗಳನ್ನು ಸೇವಿಸುತ್ತಿದ್ದಾರೆ. ವೈದ್ಯರ ಸಲಹೆ ಇಲ್ಲದೆ ಔಷಧಿ ಸೇವಿಸುವುದು, ಅನಗತ್ಯವಾಗಿ ಆ್ಯಂಟಿ ಬಯೋಟಿಕ್‌ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಐಸಿಎಂಆರ್‌ ಎಚ್ಚರಿಸಿದೆ. ಇದಕ್ಕೆ ರೋಗ ಲಕ್ಷಣ (Symptoms) ಆಧರಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ಹೀಗಾಗಿ ರೋಗದ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಸೂಕ್ತ ವೈದ್ಯರನ್ನು ಸಂಪರ್ಕ ಮಾಡಬೇಕು ಎಂದು ಮನವಿ ಮಾಡಿದರು.

2-5 ದಿನದಲ್ಲಿ ಸೋಂಕು ನಿವಾರಣೆ: ಎಚ್‌3ಎನ್‌2 ಸೋಂಕು ಬಂದರೆ 2-5 ದಿನದೊಳಗೆ ನಿವಾರಣೆಯಾಗುತ್ತದೆ. ಬೆಂಗಳೂರಿನಲ್ಲಿ ಈ ಸೋಂಕಿನ ತೀವ್ರತೆ ಕಡಿಮೆಯಿದ್ದು, ಈವರೆಗೆ ಎರಡು ಪ್ರಕರಣಗಳು ಮಾತ್ರ ಕಂಡುಬಂದಿವೆ ಎಂದು ಸಚಿವರು ಮಾಹಿತಿ ನೀಡಿದರು. ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಸುದರ್ಶನ್‌, ಆರೋಗ್ಯ ಇಲಾಖೆ ಆಯುಕ್ತ ರಂದೀಪ್‌ ಸೇರಿದಂತೆ ಸಲಹಾ ಸಮಿತಿ ತಜ್ಞರು ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಸೋಂಕು ಪರೀಕ್ಷೆ ದರ ನಿಯಂತ್ರಣಕ್ಕೆ ಸಮಿತಿ: ಎಚ್‌3ಎನ್‌2 ಹೊಸ ಸೋಂಕು ಪರೀಕ್ಷೆಗೆ ಕೆಲವು ಕಡೆ ಹೆಚ್ಚುವರಿ ದರ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಇದರ ನಿಯಂತ್ರಣಕ್ಕೆ ಕಡಿವಾಣ ಹಾಕಲು ಸಮಿತಿ ರಚಿಸಲು ಸೂಚಿಸಲಾಗಿದೆ. ಕಡಿಮೆ ದರದಲ್ಲಿ ಪರೀಕ್ಷೆ ಮಾಡುವಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ವರದಿ ಬಂದ ಬಳಿಕ ಪರೀಕ್ಷೆಗೆ ದರ ನಿಗದಿ ಮಾಡಲಾಗುವುದು ಎಂದು ಸುಧಾಕರ್‌ ತಿಳಿಸಿದರು.

ತಾಪಮಾನದ ಬಗ್ಗೆ ಎಚ್ಚರ ಅಗತ್ಯ: ರಾಜ್ಯದಲ್ಲಿ ಬೇಸಿಗೆಯ ಆರಂಭಕ್ಕೆ ಮುನ್ನವೇ ತಾಪಮಾನ ಹೆಚ್ಚಾಗಿದ್ದು, ಇದರಿಂದ ಅನಾರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು. ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಬಿಸಿಲಲ್ಲಿ ಓಡಾಡುವುದನ್ನು ತಪ್ಪಿಸಬೇಕು. ಕನಿಷ್ಠ 2-3 ಲೀಟರ್‌ ನೀರು, ಮಜ್ಜಿಗೆ, ಎಳನೀರು, ಶರಬತ್‌ ಕುಡಿಯುವುದೊಳಿತು. ದೇಹದಲ್ಲಿ ನೀರು ಕಡಿಮೆ ಆಗದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

ಸರ್ಕಾರದಿಂದ ಮಾರ್ಗಸೂಚಿ
- 15 ವರ್ಷದೊಳಗಿನ ಮಕ್ಕಳು, 65 ಮೇಲ್ಪಟ್ಟವೃದ್ಧರಿಗೆ ಸೋಂಕಿನ ಅಪಾಯ ಅಧಿಕ: ಎಚ್ಚರ
- ಗರ್ಭಿಣಿಯರು ಮೊದಲಾದ ರೋಗನಿರೋಧಕ ಶಕ್ತಿ ಕಡಿಮೆಯಿರುವವರಿಗೆ ಅಪಾಯ ಹೆಚ್ಚು
- ಆಸ್ಪತ್ರೆಗಳಲ್ಲಿ ಪ್ರತಿಯೊಬ್ಬ ವೈದ್ಯಕೀಯ ಸಿಬ್ಬಂದಿಯೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು
- ಐಎಲ್‌ಐ (ಶೀತಜ್ವರ), ಸಾರಿ (ಉಸಿರಾಟ ಸಮಸ್ಯೆ) ಪ್ರಕರಣಗಳ ಮಾದರಿ ಪರೀಕ್ಷಿಸಬೇಕು
- ಸೋಂಕಿನ ಚಿಕಿತ್ಸೆಗೆ ಅಗತ್ಯವಾದ ಔಷಧ, ಉಪಕರಣ, ಪಿಪಿಇ ಕಿಟ್‌ ಸಿದ್ಧಪಡಿಸಿಕೊಳ್ಳಬೇಕು
- ಐಸಿಯು, ಹೈರಿಸ್ಕ್ ಪ್ರದೇಶದಲ್ಲಿ ಕೆಲಸ ಮಾಡುವ ಆರೋಗ್ಯ ಸಿಬ್ಬಂದಿ ಲಸಿಕೆ ಪಡೆಯಬೇಕು
- ಕೊರೋನಾ ನೆಗೆಟಿವ್‌ ಇದ್ದರೂ ಸಾರಿ ಮಾದರಿ ವಿಆರ್‌ಡಿಎಲ್‌ ಪರೀಕ್ಷೆಗೆ ಒಳಪಡಿಸಬೇಕು

click me!