World Sleep Day: ಸರ್‌ಪ್ರೈಸ್..ಉದ್ಯೋಗಿಗಳಿಗೆ ನಿದ್ದೆ ಮಾಡಲು ರಜೆ ನೀಡಿದ ಬೆಂಗಳೂರಿನ ಕಂಪೆನಿ

By Vinutha Perla  |  First Published Mar 17, 2023, 11:04 AM IST

ನಿದ್ರೆ ಮಾಡೋದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಕೂತಲ್ಲಿ ನಿಂತಲ್ಲಿ ತೂಕಡಿಕೆ ಅಂತೂ ಬಂದೇ ಬರುತ್ತೆ. ಕ್ಲಾಸ್‌ನಲ್ಲಿ, ಕಚೇರಿಯಲ್ಲೂ ಇದು ತಪ್ಪಲ್ಲ. ಹೀಗಿರುವಾಗ ಬೆಂಗಳೂರಿನ ಕಂಪೆನಿಯೊಂದು ಉದ್ಯೋಗಿಗಳಿಗೆ ಸರ್ಪ್ರೈಸ್ ಆಗಿ ನಿದ್ದೆ ಮಾಡಲೆಂದೇ ಒಂದು ದಿನ ರಜೆಯನ್ನು ನೀಡಿದೆ. ಆ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ. 


ನಿದ್ದೆ ಆರೋಗ್ಯಕ್ಕೆ ತುಂಬಾ ಮುಖ್ಯ. ಸರಿಯಾಗಿ ನಿದ್ದೆಯಾಗದಿದ್ದರೆ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಬದಲಾಗುತ್ತಿರುವ ಜೀವನಶೈಲಿಯಿಂದಾಗಿ, ಜನರ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಈ ಕಾರಣದಿಂದಾಗಿ, ಜನರು ಅನೇಕ ರೀತಿಯ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಹದಗೆಡುತ್ತಿರುವ ಜೀವನಶೈಲಿ ಮತ್ತು ಹೆಚ್ಚುತ್ತಿರುವ ಕೆಲಸದ ಹೊರೆಯಿಂದಾಗಿ, ಜನರ ನಿದ್ರಾ ಚಕ್ರದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಜನರಲ್ಲಿ ನಿದ್ರಾಹೀನತೆಯ ಸಮಸ್ಯೆ (sleeping problem) ವೇಗವಾಗಿ ಹೆಚ್ಚುತ್ತಿದೆ. ಹೀಗಿರುವಾಗ ಬೆಂಗಳೂರಿನ ಕಂಪೆನಿಯೊಂದು ತನ್ನ ಉದ್ಯೋಗಿಗಳಿಗೆ ಸರ್‌ಪ್ರೈಸ್ ಆಗಿ ನಿದ್ದೆ ಮಾಡಲೆಂದೇ ಒಂದು ದಿನದ ರಜೆಯನ್ನು ನೀಡಿದೆ.

ಮಾರ್ಚ್ 17, ವಿಶ್ವ ನಿದ್ರಾ ದಿನ (World sleep day). ಹೀಗಾಗಿ ಬೆಂಗಳೂರು ಮೂಲದ ಕಂಪನಿಯೊಂದು ವಿಶ್ವ ನಿದ್ರಾ ದಿನವನ್ನು ಆಚರಿಸಲು ತನ್ನ ಉದ್ಯೋಗಿಗಳಿಗೆ ಒಂದು ದಿನದ ರಜೆ ನೀಡಿದೆ.  Wakefit Solutions, D2C ಮನೆ ಮತ್ತು ನಿದ್ರೆ ಪರಿಹಾರಗಳ ಕಂಪನಿಯು ಈಗ ತನ್ನ ಗೃಹೋಪಯೋಗಿ ಉತ್ಪನ್ನಗಳ ಕಾರಣದಿಂದಾಗಿ ಬಹಳ ಜನಪ್ರಿಯವಾಗಿದೆ. ಸದ್ಯ ವಿಶ್ವ ನಿದ್ರಾ ದಿನದಂದು ತನ್ನ ಉದ್ಯೋಗಿಗಳಿಗೆ ಒಂದು ದಿನದ ರಜೆ ಘೋಷಿಸುವ ಮೂಲಕ ಎಲ್ಲೆಡೆ ವೈರಲ್ ಆಗ್ತಿದೆ. ಲಿಂಕ್ಡ್‌ಇನ್‌ನಲ್ಲಿ ಈ ಕುರಿತಾಗಿ ಪೋಸ್ಟ್ ಹಂಚಿಕೊಳ್ಳಲಾಗಿದೆ.

Latest Videos

undefined

ಬೆಳಗ್ಗೆ ಎದ್ದ ಮೇಲೆ ಮತ್ತೆ ಮಲಗಬೇಕೆನಿಸಿದರೆ, ಈ ರೋಗವಿರಬಹುದು!

ಉದ್ಯೋಗಿಗಳಿಗೆ ವಿಶ್ರಾಂತಿ ಪಡೆಯಲು ರಜಾ ದಿನ
ಎಲ್ಲಾ ಉದ್ಯೋಗಿಗಳಿಗೆ ಕಳುಹಿಸಲಾಗಿರುವ ಸ್ಕ್ರೀನ್‌ಶಾಟ್‌ನಲ್ಲಿ 'ವಿಶ್ವ ನಿದ್ರಾ ಆಚರಣೆಯ ದಿನವಾದ ಮಾರ್ಚ್ 17, 2023 ರಂದು, ಎಲ್ಲಾ ವೇಕ್‌ಫಿಟ್ ಉದ್ಯೋಗಿಗಳಿಗೆ ರಜೆಯೆಂದು ಘೋಷಿಸಲಾಗಿದೆ. ಮತ್ತು ದೀರ್ಘ ವಾರಾಂತ್ಯವನ್ನು ಅನುಸರಿಸಲು, ಹೆಚ್ಚು ಅಗತ್ಯವಿರುವ ವಿಶ್ರಾಂತಿ ಪಡೆಯಲು ಇದು ಪರಿಪೂರ್ಣ ಅವಕಾಶವಾಗಿದೆ' ಎಂದು ತಿಳಿಸಲಾಗಿದೆ.

ಕಂಪನಿಯು ಉದ್ಯೋಗಿಗಳಿಗೆ ಕಳುಹಿಸಲಾದ ಇಮೇಲ್‌ನ ಸ್ಕ್ರೀನ್‌ಶಾಟ್ ಅನ್ನು ಸಹ ಪೋಸ್ಟ್ ಮಾಡಿದೆ. ಇಮೇಲ್‌ನ ವಿಷಯವು, 'ಸರ್ಪ್ರೈಸ್ ಹಾಲಿಡೇ: ಅನೌನ್ಸಿಂಗ್ ದಿ ಗಿಫ್ಟ್ ಆಫ್ ಸ್ಲೀಪ್' ಎಂಬ ಶೀರ್ಷಿಕೆಯನ್ನು ಒಳಗೊಂಡಿದೆ. ಕಂಪೆನಿಯ ಹೆಚ್‌ಆರ್‌ ಪೋರ್ಟಲ್‌ ಮೂಲಕ ಈ ರಜೆಯನ್ನು ಸಾಂಕ್ಷನ್ ಮಾಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಲಾಗಿದೆ. ಗ್ರೇಟ್ ಇಂಡಿಯನ್ ಸ್ಲೀಪ್ ಸ್ಕೋರ್‌ಕಾರ್ಡ್‌ನ 6ನೇ ಆವೃತ್ತಿಯ ಪ್ರಕಾರ 2022ರಲ್ಲಿ 21% ನಷ್ಟು ಜನರು ಕೆಲಸದ ಸಮಯದಲ್ಲಿ ನಿದ್ರೆಯ ಸಮಸ್ಯೆಯನ್ನು ಅನುಭವಿಸುತ್ತಾರೆ. 21% ನಷ್ಟು ಮಂದಿ ಕೆಲಸ ಮುಗಿಸಿ ಮನೆಗೆ ತೆರಳಿದ ಬಳಿಕ ಬೆಳಗ್ಗೆ ಸುಸ್ತಾಗಿ ಏಳುತ್ತಾರೆ ಎಂದು ತಿಳಿದುಬಂದಿದೆ.

ಕುಂಭಕರ್ಣನ ತಂಗಿ ಅಲ್ಲ..ದಿನದ 22 ಗಂಟೆಯೂ ನಿದ್ರಿಸುವ ಈಕೆಗೆ ಎದ್ದರೆ ಭ್ರಮೆ!

'ರೈಟ್ ಟು ನ್ಯಾಪ್ ನೀತಿ'ಯನ್ನು ಘೋಷಿಸಿದ್ದ ಕಂಪೆನಿ
ಹೀಗಾಗಿ ಉದ್ಯೋಗಿಗಳಿಗೆ ನಿದ್ರೆ ಮಾಡಲು ಅವಕಾಶವನ್ನು ನೀಡಲು ನಿರ್ಧರಿಸಿದೆವು ಎಂದು Wakefit Solutions ತಿಳಿಸಿದೆ. ನಿದ್ರಾಹೀನತೆಯನ್ನು ತಡೆಗಟ್ಟಲು, ಆರೋಗ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಪ್ರತಿ ವರ್ಷ ಮಾರ್ಚ್ 17 ರಂದು ವಿಶ್ವ ನಿದ್ರಾ ದಿನವನ್ನು ಆಚರಿಸಲಾಗುತ್ತದೆ. ಕಂಪನಿಯು ತನ್ನ ಉದ್ಯೋಗಿಗಳಿಗೆ ನಿದ್ದೆಯ ಸಮಯವನ್ನು ಘೋಷಿಸಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಕಂಪನಿಯು ತನ್ನ ಉದ್ಯೋಗಿಗಳಿಗೆ "ರೈಟ್ ಟು ನ್ಯಾಪ್ ನೀತಿ" ಯನ್ನು ಘೋಷಿಸಿತು, ಅದು ಎಲ್ಲಾ ಉದ್ಯೋಗಿಗಳಿಗೆ ತಮ್ಮ ಕೆಲಸದ ಸಮಯದಲ್ಲಿ 30 ನಿಮಿಷಗಳ ಕಿರು ನಿದ್ದೆ ಮಾಡಲು ಅವಕಾಶ ಮಾಡಿಕೊಟ್ಟಿತ್ತು.

ಅದೇನೆ ಇರ್ಲಿ, ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಾಗುವ ಒತ್ತಡ, ಆತಂಕ, ನಿದ್ರಾಹೀನತೆಯ ಸಮಸ್ಯೆಯನ್ನು ಮನಗಂಡು ಕಂಪೆನಿಯೊಂದು ನಿದ್ದೆ ಮಾಡಲೆಂದೇ ರಜೆಯೊಂದನ್ನು ನೀಡಿರುವುದು ನಿಜಕ್ಕೂ ಮೆಚ್ಚುವಂತಹಾ ವಿಚಾರ. ಅದರಲ್ಲೂ ವಿಶ್ವ ನಿದ್ರಾ ದಿನವೇ ಇಂಥಾ ನಿರ್ಧಾರ ತೆಗೆದುಕೊಂಡಿರುವುದು ಉದ್ಯೋಗಿಗಳ ಮೇಲಿರುವ ಕಾಳಜಿಯನ್ನು ತೋರಿಸುತ್ತದೆ.

click me!