
ತೂಕ ಇಳಿಸಲು ಜನರು ಅನೇಕ ರೀತಿಯ ಡಯಟ್ ಫಾಲೋ ಮಾಡ್ತಾರೆ. ಇದರಲ್ಲಿ ಪ್ಯಾಲಿಯೊ ಆಹಾರ, ಕಡಿಮೆ ಕಾರ್ಬ್ ಆಹಾರ, ಹೆಚ್ಚಿನ ಪ್ರೋಟೀನ್ ಆಹಾರ ಇತ್ಯಾದಿ ಸೇರಿದೆ. ಇದ್ರಲ್ಲಿ ಪ್ರಸಿದ್ಧವಾಗಿರುವ ಒಂದು ಡಯಟ್ ಅಂದ್ರೆ ಕೆಟೋಜೆನಿಕ್ ಅಥವಾ ಕೀಟೋ ಡಯಟ್. ತೂಕ ಇಳಿಸಲು ಇದು ಹೆಚ್ಚು ಪರಿಣಾಮಕಾರಿ ಎನ್ನಲಾಗಿದೆ. ಅನೇಕ ಬಾಲಿವುಡ್ ಕಲಾವಿದರು ಕೂಡ ಈ ಡಯಟ್ ಫಾಲೋ ಮಾಡಿರೋದಾಗಿ ಒಪ್ಪಿಕೊಂಡಿದ್ದಾರೆ. ಆದ್ರೆ ಕೀಟೋ ಡಯಟ್ ಅಪಾಯಕಾರಿ ಕೂಡ ಹೌದು.
ವರ್ಲ್ಡ್ ಕಾಂಗ್ರೆಸ್ ಆಫ್ ಕಾರ್ಡಿಯಾಲಜಿ ಜೊತೆಗೆ ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ನಡೆಸಿದ ವೈಜ್ಞಾನಿಕ ಅಧಿವೇಶನದಲ್ಲಿ ಅಧ್ಯಯನ (Study)ದ ವರದಿಯೊಂದನ್ನು ಪ್ರಸ್ತುತಪಡಿಸಲಾಗಿದೆ. ಅದ್ರಲ್ಲಿ ಕೀಟೋ ಡಯಟ್, ಕೆಟ್ಟ ಕೊಲೆಸ್ಟ್ರಾಲ್ (Cholesterol) ಪ್ರಮಾಣವನ್ನು ದ್ವಿಗುಣಗೊಳಿಸುತ್ತದೆ ಎಂದು ಹೇಳಲಾಗಿದೆ. ಇದು ಎದೆ ನೋವು ಅಪಧಮನಿಗಳಲ್ಲಿ ತೊಂದರೆ, ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಹೃದಯ (Heart) ರಕ್ತನಾಳದ ಪರಿಸ್ಥಿತಿಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ.
ಪುರುಷರ ಲೈಂಗಿಕ ಶಕ್ತಿ ಹೆಚ್ಚಿಸುತ್ತವೆ ಈ ಆಯುರ್ವೇದ ಮೂಲಿಕೆಗಳು!
ಹೃದಯ ರೋಗ ಹೆಚ್ಚಳದ ಅಪಾಯ : ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ಹೆಚ್ಚಿನ ಕೊಬ್ಬಿನ ಆಹಾರದ ನಿಯಮಿತ ಬಳಕೆಯಿಂದ ಎಲ್‌ಡಿಎಲ್ (ಕೆಟ್ಟ) ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ. ಇದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನ ತಂಡ ಹೇಳಿದೆ. ಈ ಅಧ್ಯಯನ ಫಲಿತಾಂಶ ಗೇಮ್ ಚೇಂಜರ್ ಆಗುವ ಸಾಧ್ಯತೆಯಿದೆ. ಯಾಕೆಂದ್ರೆ ಕೇಟೋ ಡಯಟ್ ಬಗ್ಗೆ ನಡೆದ ಅತ್ಯಂತ ದೊಡ್ಡ ಅಧ್ಯಯನ ಇದಾಗಿದೆ. ಹಾಗೆಯೇ ಕೇಟೋ ಡಯಟ್ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಐದು ಲಕ್ಷ ಜನರ ಜೀವನ ಶೈಲಿಯನ್ನು 10 ವರ್ಷಗಳಿಂದ ಅಧ್ಯಯನ ಮಾಡಲಾಗಿದೆ. ಕೀಟೋ ಡಯಟ್ ಜನರು ತಮ್ಮ ದೈನಂದಿನ ಕ್ಯಾಲೊರಿಗಳಲ್ಲಿ ಶೇಕಡಾ 25ರಷ್ಟನ್ನು ಕಾರ್ಬೋಹೈಡ್ರೇಟ್‌ಗಳಿಂದ ಮತ್ತು ಶೇಕಡಾ 45 ಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ಕೊಬ್ಬಿನೊಂದಿಗೆ ತೆಗೆದುಕೊಳ್ಳುತ್ತಿದ್ದಾರೆ. ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಜನರಲ್ಲಿ ಶೇಕಡಾ 73ರಷ್ಟು ಮಹಿಳೆಯರಿದ್ದರು. ಅವರು ತೂಕ ಹೆಚ್ಚಿತ್ತು. ಅವರು 54 ವರ್ಷ ಮೇಲ್ಪಟ್ಟವರಾಗಿದ್ದರು. ಯಾರು ಕೇಟೋ ಡಯಟ್ ಫಾಲೋ ಮಾಡ್ತಿದ್ದಾರೆಯೋ ಅವರಲ್ಲಿ ಎಲ್ಡಿಎಲ್ ಕೊಲೆಸ್ಟ್ರಾಲ್ ಗಮನಾರ್ಹವಾಗಿ ಹೆಚ್ಚಾಗಿತ್ತು ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ಅಧ್ಯಯನದ ಸಮಯದಲ್ಲಿ ಸಾಮಾನ್ಯ ಡಯಟ್ ಜನರಿಗಿಂತ ಕೇಟೋ ಡಯಟ್ ಪಾಲನೆ ಮಾಡ್ತಿದ್ದ ಜನರಲ್ಲಿ ಹೃದಯ ಸಂಬಂಧಿ ರೋಗದ ಅಪಾಯ ಶೇಕಡಾ 9.8ರಷ್ಟು ಹೆಚ್ಚಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. ಕೇಟೋ ಡಯಟ್ ಫಾಲೋ ಮಾಡುವ ಜನರು ಮೊದಲೇ ವೈದ್ಯರ ಸಲಹೆ ಪಡೆಯೋದು ಒಳ್ಳೆಯದು ಎನ್ನುತ್ತಾರೆ ತಜ್ಞರು.
ಕುಡಿಯುವ ನೀರಿನ ಬಾಟಲಿಯಲ್ಲಿ ಟಾಯ್ಲೆಟ್ ಸೀಟ್‌ಗಿಂತಲೂ ಅಧಿಕ ಬ್ಯಾಕ್ಟಿರೀಯಾ ಇರುತ್ತಂತೆ!
ಕೇಟೋ ಡಯಟ್ ಅಂದ್ರೇನು? : ಕೇಟೋ ಡಯಟ್ ನಲ್ಲಿ ಜನರು ಶೇಕಡಾ 10ರಷ್ಟು ಕಾರ್ಬೋಹೈಡ್ರೇಟ್, ಶೇಕಡಾ 20-30ರಷ್ಟು ಪ್ರೋಟೀನ್ ಮತ್ತು ಶೇಕಡಾ 60-80 ರಷ್ಟು ಕೊಬ್ಬನ್ನು ಸೇವನೆ ಮಾಡ್ತಾರೆ. ಸೇಬು ಮತ್ತು ಬಾಳೆ ಹಣ್ಣಿನಿಂದ ಕಾರ್ಬೋಹೈಡ್ರೇಟ್ ಪಡೆಯುತ್ತಾರೆ. ಅವರು ರೊಟ್ಟಿ, ಅನ್ನ, ಬ್ರೆಡ್, ಪಾಸ್ತಾ ಯಾವುದನ್ನೂ ಸೇವನೆ ಮಾಡೋದಿಲ್ಲ. ದೇಹಕ್ಕೆ ಬೇಕಾದ ಶೇಕಡಾ 60 -80ರಷ್ಟು ಕ್ಯಾಲೋರಿಯನ್ನು ಜನರು ಕೊಬ್ಬಿನಿಂದ ಪಡೆಯುತ್ತಾರೆ.
ಅದಕ್ಕಾಗಿ ಬೆಣ್ಣೆ, ತುಪ್ಪ ಮತ್ತು ಚೀಸ್ ಸೇವನೆ ಮಾಡ್ತಾರೆ. ಇದ್ರಲ್ಲಿ ಸ್ಯಾಚುರೇಟೆಡ್ ಕೊಬ್ಬು ಅಧಿಕವಾಗಿರುತ್ತದೆ. ಇಷ್ಟೊಂದು ಕೊಬ್ಬಿನ ಸೇವನೆಯಿಂದ ಕೆಟ್ಟ ಕೊಬ್ಬಿನ ಪ್ರಮಾಣ ಹೆಚ್ಚಾಗಿ, ಹೃದಯ ಸಂಬಂಧಿ ಖಾಯಿಲೆ ಕಾಡುತ್ತದೆ. ವೈದ್ಯರ ಸಲಹೆಪಡೆಯದೆ ಇದನ್ನು ಶುರು ಮಾಡಬಾರದು. ಹಾಗೆ 3 ತಿಂಗಳಿಗಿಂತ ಹೆಚ್ಚು ಸಮಯ ಇದನ್ನು ಪಾಲಿಸಬಾರದು. ಮೇದೋಜ್ಜೀರಕ ಗ್ರಂಥಿ, ಯಕೃತ್ತು, ಥೈರಾಯ್ಡ್, ಮೂತ್ರಪಿಂಡ ಮತ್ತು ಪಿತ್ತಕೋಶಕ್ಕೆ ಸಂಬಂಧಿಸಿದ ರೋಗಗಳು ಈ ಡಯಟ್ ನಿಂದ ಕಾಡುವ ಅಪಾಯವಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.