ತುಳುನಾಡು ಅಂದ್ರೆ ಸಾಕು ಅಲ್ಲಿನ ದೈವಾರಾಧಾನೆ, ವಿಶಿಷ್ಟ ಆಚರಣೆಗಳು ಕಣ್ಮುಂದೆ ಬರುತ್ತೆ. ಅದರಲ್ಲೂ ಆಟಿ ತಿಂಗಳು ಬಂತೂಂದ್ರೆ ಸಾಕು ಊರಿನ ಮನೆಯ ಅಂಗಳಗಳಲ್ಲಿ ಆಟಿಕಳಂಜನ ಸಂಭ್ರಮ. ಏನಿದು? ಆಟಿ ಕಳಂಜ ಯಾರು, ಮನೆ ಮನೆಗೆ ಬರೋದು ಯಾಕೆ? ಇಲ್ಲಿದೆ ಮಾಹಿತಿ.
ಆಷಾಢ ತಿಂಗಳು ಬಂತೂಂದ್ರೆ ಸಾಕು ಕರಾವಳಿಯಲ್ಲಿ ಜಡಿಮಳೆ ಶುರುವಾಗಿ ಬಿಡುತ್ತದೆ. ತುಂಬಿ ಹರಿಯುವ ನದಿ-ತೋಡುಗಳು, ಮನೆಯ ಹತ್ತಿರ ಸುಳಿಯೋ ಕಪ್ಪೆ, ಏಡಿಗಳ ಸಂಖ್ಯೆ ಹೆಚ್ಚಾಗುತ್ತೆ. ಇದೆಲ್ಲದರ ಮಧ್ಯೆ ಮಳೆಯಲ್ಲಿ ನೆನೆಯುತ್ತಾ, ಆಟವಾಡುತ್ತಾ ಖುಷಿಪಡೋ ಮಕ್ಕಳು. ಎಣ್ಣೆಯಲ್ಲಿ ಕರಿದ ಹಲಸಿನ ಹಪ್ಪಳ, ಬೆಂಕಿಯಲ್ಲಿ ಸುಟ್ಟ ಹಲಸಿನ ಬೀಜ, ಪತ್ರೊಡೆ, ಹಲಸಿನ ಗಟ್ಟಿಯನ್ನು ಸವಿದು ಮಜಾ ಮಾಡುತ್ತಾರೆ. ಭಾರೀ ಮಳೆಗೆ ಶಾಲೆಗೆ ರಜಾ ಸಿಕ್ಕು ಮನೆಯ ಮುಂದೆ ಹರಿದು ಹೋಗೋ ನೀರಲ್ಲಿ ಕಾಗದದ ದೋಣಿ ಬಿಡುತ್ತಾ ಆ ಪುಟ್ಟ ಮಕ್ಕಳು ಕಾಯುವುದು ಅವನ ದಾರಿಯನ್ನು. ತೆಂಗಿನ ಮಡಲಿನಿಂದ ಮಾಡಿದ ಉಡುಪು, ಕಾಲಿಗೆ ಗೆಜ್ಜೆ, ಕೈಯಲ್ಲೊಂದು ಕೊಡೆ ಹಿಡಿದು ಕುಣಿಯುತ್ತಾ ಬರುವ ಆಟಿಕಳಂಜನನ್ನು.
ಆಟಿ ಕಳೆಂಜ ತುಳು ನಾಡಿನ (Tulunadu) ಜನಪದ ಕುಣಿತಗಳಲ್ಲಿ ಒಂದು ಆಚರಣಾತ್ಮಕ ಕಲಾ ಪ್ರಕಾರ. ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯಲ್ಲಿ ಹೆಚ್ಚಾಗಿ ನಲಿಕೆ ಜನವರ್ಗದಲ್ಲಿ ಕಾಣಸಿಗುವ ಕುಣಿತ. ಇದು ತುಳು ಕ್ಯಾಲೆಂಡರ್‌ನಲ್ಲಿ ತಿಂಗಳುಗಳಲ್ಲಿ ಒಂದಾದ ಆಟಿ ಸಮಯದಲ್ಲಿ ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.
Mangalore Recipe: ಪೇಪರ್‌ನಷ್ಟು ತೆಳ್ಳಗಿರೋ ನೀರ್‌ದೋಸೆ ಮಾಡೋದು ಹೀಗೆ ನೋಡಿ
ಆಟಿ ಕಳಂಜ ಎಂದರೆ ಯಾರು?
ತುಳುನಾಡು ಅಂದ್ರೆ ಸಾಕು ಅಲ್ಲಿನ ದೈವಾರಾಧಾನೆ, ವಿಶಿಷ್ಟ ಆಚರಣೆಗಳು ಕಣ್ಮುಂದೆ ಬರುತ್ತದೆ. ಇಲ್ಲಿನ ಪ್ರತಿಯೊಂದು ಆಚರಣೆಗಳೂ ಬದುಕಿನೊಂದಿಗೆ ಹಾಸು ಹೊಕ್ಕಾಗಿವೆ. ಇದು ಜನರಿಗೆಂದೇ ರೂಪಿತಗೊಂಡಿವೆ. ಹಾಗೆಯೇ ಆಟಿ ಕಳೆಂಜವು ಭಾರತದ ತುಳುನಾಡಿನ ಪ್ರದೇಶದ ತುಳು ಜನರು ಅಭ್ಯಾಸ ಮಾಡುವ ಪುರಾತನ ಸಾಂಪ್ರದಾಯಿಕ ಜಾನಪದ ಕಲಾ ಪ್ರಕಾರವಾಗಿದೆ (Folk culture). ಈ ಕುಣಿತವನ್ನು ಆಟಿ (ಆಷಾಡ) ತಿಂಗಳಲ್ಲಿ ನಡೆಸುವುದರಿಂದ ಇದನ್ನು ಆಟಿ ಕಳಂಜ ಎಂದು ಕರೆಯಲಾಗುತ್ತದೆ. ಸೊಂಟಕ್ಕೆ ತೆಂಗಿನ ತಿರಿ, ಕಾಲಿಗೆ ಗಗ್ಗರ, ಅಥವಾ ಕೈಗೆ-ಮೈಗೆ ಬಣ್ಣ, ಮುಖ್ಯವಾಗಿ ಗಡ್ಡ ಮತ್ತು ಮೀಸೆ, ಅಡಿಕೆ ಹಾಳೆಯಿಂದ ಮಾಡಿದ ಮತ್ತು ಕಿಸಗಾರ ಹೂವಿನಿಂದ ಸಿಂಗರಿಸಿದ ಟೊಪ್ಪಿಯಲ್ಲಿ ಆಟಿ ಕಳಂಜನನ್ನು ನೋಡಬಹುದು.
ಆಷಾಢದಲ್ಲಿ ಮನೆ ಮನೆಗೆ ಆಟಿ ಕಳಂಜ ಬರೋದು ಯಾಕೆ?
ಆಷಾಢ ಮತ್ತು ಆಟಿಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತದೆ. ಮಳೆಗಾಲದ (Monsoon) ಜೊತೆ ಜೊತೆಯಲ್ಲೇ ನಾನಾ ಕಾಯಿಲೆಗಳು ವಕ್ಕರಿಸಿಕೊಂಡು ಬಿಡುತ್ತವೆ. ಜ್ವರ, ಶೀತ, ಕೆಮ್ಮು ಅಂತ ಜನರು ಬಳಲಿ ಹೋಗಿ ಬಿಡುತ್ತಾರೆ. ಈ ಸಂದರ್ಭದಲ್ಲಿ ಮಹಾಮಾರಿಯನ್ನು ಓಡಿಸಲೆಂದೇ ಬರುವವನೇ ಆಟಿಕಳಂಜ. ಆಟಿ ಕಳಂಜನು ದುಷ್ಟಶಕ್ತಿಗಳು ಮತ್ತು ರೋಗಗಳನ್ನು (Disease) ದೂರವಿಡುವ ಧನಾತ್ಮಕ ಶಕ್ತಿಯನ್ನು ತರುತ್ತಾನೆ ಎಂದು ಜನರು ನಂಬುತ್ತಾರೆ. 'ಕಳಂಜ' ಎಂದರೆ 'ಕಳೆಯುವವನು' ಎಂಬರ್ಥವಿದೆ. ಅದರಂತೆ ಊರಿಗೆ ಆಗಮಿಸಿದ ಮಾರಿಯನ್ನು ಆಟಿಕಳಂಜ ಕಳೆಯುತ್ತಾನೆ ಎಂದು ಜನರು ನಂಬುತ್ತಾರೆ.
ಭೂತಗಳ ಮುಖವರ್ಣಿಕೆಗಳ ಪ್ರಭೇದ, ಪ್ರಾದೇಶಿಕ ಭಿನ್ನತೆಗಳ ಬಗ್ಗೆ ಗೊತ್ತಾ?
ಮಾತ್ರವಲ್ಲ ಆಟಿಯಲ್ಲಿ ಮಳೆಯಿಂದ ಕೃಷಿ ಹಾಳಾಗುತ್ತದೆ. ಕೃಷಿಯನ್ನೇ (Agriculture) ಅವಲಂಬಿಸಿರುವ ಜನರಿಗೆ ಕೆಲಸದ ಕೊರತೆಯಿಂದ ಈ ಋತುವಿನಲ್ಲಿ ಅನಾರೋಗ್ಯ ಮತ್ತು ಬಡತನ ಉಂಟಾಗುತ್ತದೆ. ಆಟಿಯನ್ನು ವಿಪತ್ತುಗಳ ಮಾಸವೆಂದು ಪರಿಗಣಿಸಲು ಇದು ಕಾರಣವಾಗಿದೆ. ಹೀಗಾಗಿ ಇದನ್ನು ಹೋಗಲಾಡಿಸಲು ಆಟಿ ಕಳಂಜ ಬರುತ್ತಾನೆ ಎಂದು ನಂಬುತ್ತಾರೆ.
ನಲಿಕೆ ಅಥವಾ ಪಾಣಾರ ಜನವರ್ಗದವರು ಆಟಿಕಳಂಕ ವೇಷವನ್ನು ಹಾಕಿಕೊಂಡು ಮನೆ ಮನೆಗೆ ಹೋಗಿ ಕುಣಿಯುತ್ತಾರೆ, ಸಣ್ಣ ಬಾಲಕನಿಗೆ ತಾಳೆಗರಿಯ ಛತ್ರಿ ಕೊಟ್ಟಿರುತ್ತಾರೆ. ಹಿಮ್ಮೇಳದಲ್ಲಿ ವ್ಯಕ್ತಿಯೊಬ್ಬ ತಂಬರ (ಚರ್ಮದ ವಾದ್ಯ)ವನ್ನು ನುಡಿಸುತ್ತಿರುತ್ತಾನೆ. ಕಳೆಂಜ ಎಂದರೆ ಚಿಕ್ಕ ಬಾಲಕ, ದುಷ್ಟ ಶಕ್ತಿಗಳನ್ನು ಹೊಡೆದೋಡಿಸುವ ಮಾಂತ್ರಿಕ ಎಂಬ ಅರ್ಥವೂ ಇದೆ. ಕಳಂಜನು ಊರಿಗೆ ಬಂದ ಮಾರಿಯನ್ನು ಅಂದರೆ ರೋಗ-ರುಜಿನವನ್ನು ಹೊಡೆದೋಡಿಸುತ್ತಾನೆ ಎಂದು ಜನರು ನಂಬುತ್ತಾರೆ. ಹೀಗಾಗಿ ಆಟಿ ಕಳಂಜ ಮನೆಗೆ ಬಂದಾಗ ಅಕ್ಕಿ, ತೆಂಗಿನಕಾಯಿ ಮೊದಲಾದವುಗಳನ್ನು ದಾನ ಮಾಡುತ್ತಾರೆ.
ಆಟಿ ಕಳಂಜನ ಕುರಿತಾದ ಮಾಹಿತಿಯನ್ನು ಕಿರುತೆರೆ ನಟಿ ಭವ್ಯಾ ಪೂಜಾರಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.