Asianet Suvarna News Asianet Suvarna News

ಭೂತಗಳ ಮುಖವರ್ಣಿಕೆಗಳ ಪ್ರಭೇದ, ಪ್ರಾದೇಶಿಕ ಭಿನ್ನತೆಗಳ ಬಗ್ಗೆ ಗೊತ್ತಾ?

ಭೂತಗಳ ಮುಖವರ್ಣಿಕೆಗಳಲ್ಲಿ ಇರುವಷ್ಟು ಪ್ರಭೇದಗಳು ಮತ್ತು ಪ್ರಾದೇಶಿಕ ಭಿನ್ನತೆಗಳು ಇತರೆ ಯಾವುದೇ ಕಲಾಪ್ರಕಾರಗಳಲ್ಲಿ ಇಲ್ಲ. ಬೆಳ್ಳಿ ಬಂಗಾರದಂತಹ ಲೋಹ, ಹಾಳೆ ತೆಂಗಿನಮರ ಮತ್ತು ಬಟ್ಟೆಯ ಅಲಂಕಾರ ಸಾಮಾಗ್ರಿಗಳು ಬಳಕೆಯಾಗುತ್ತದೆ. 
 

Do you know about the variety of ghosts face paint regional differences gvd
Author
First Published Nov 5, 2022, 7:15 PM IST

ಭೂತಗಳ ಮುಖವರ್ಣಿಕೆಗಳಲ್ಲಿ ಇರುವಷ್ಟು ಪ್ರಭೇದಗಳು ಮತ್ತು ಪ್ರಾದೇಶಿಕ ಭಿನ್ನತೆಗಳು ಇತರೆ ಯಾವುದೇ ಕಲಾಪ್ರಕಾರಗಳಲ್ಲಿ ಇಲ್ಲ. ಬೆಳ್ಳಿ ಬಂಗಾರದಂತಹ ಲೋಹ, ಹಾಳೆ ತೆಂಗಿನಮರ ಮತ್ತು ಬಟ್ಟೆಯ ಅಲಂಕಾರ ಸಾಮಾಗ್ರಿಗಳು ಬಳಕೆಯಾಗುತ್ತದೆ. ಈ ಅಲಂಕಾರ ಸಾಮಾಗ್ರಿಗಳಲ್ಲಿ ಚಿನ್ನ, ಬೆಳ್ಳಿ ಇತ್ಯಾದಿ ಅಮೂಲ್ಯವಾದವು ಆಡಳಿತ ವರ್ಗದವರ ವಶವಿರುತ್ತದೆ. ಬಟ್ಟೆ, ಮರ ಮತ್ತು ಹಾಳೆಯ ಸಾಮಾಗ್ರಿಗಳು ಕಲಾವಿದರ ವಶವಿರುತ್ತದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೊತ್ತು ಸಾಗಿಸಬೇಕಾದ ಕಷ್ಟವಿರುವುದರಿಂದ ಕಲಾವಿದರು ಕೆಲವು ನಿಶ್ಚಿತ ಬಗೆಯ ಅಲಂಕಾರ ಸಾಮಾಗ್ರಿಗಳನ್ನು ತಯಾರು ಮಾಡಿಕೊಂಡು ಭೂತಕಟ್ಟುವ ಸಂದರ್ಭದಲ್ಲಿ ಬಳಸುತ್ತಾರೆ.

ಮುಖವಾಡ, ಆಯುಧ, ಆಭರಣ ಇವುಗಳನ್ನು ಲೋಹದಿಂದ ತಯಾರಿಸುತ್ತಾರೆ. ಭೂತಗಳ ಶ್ರೀಮಂತಿಕೆಗೆ ಅನುಸಾರವಾಗಿ ಚಿನ್ನ, ಬೆಳ್ಳಿಯ ವಸ್ತುಗಳನ್ನು ಬಳಸುತ್ತಾರೆ. ಸೊಂಟ, ಎದೆ, ಕೊರಳು, ತಲೆಗೆ ಸಂಬಂಧಪಟ್ಟ ಆಭರಣಗಳು ಬಳಕೆಯಾಗುತ್ತದೆ. ಹತ್ತಾರು ಆಭರಣಗಳು ಬಳಕೆಯಾಗುತ್ತದೆ. ಪ್ರಧಾನ ಭೂತಗಳಿಗೆ ಈ ಬಗೆಯ ಆಭರಣಗಳಲ್ಲಿ ಕೆಲವಾದರೂ ಸರ್ವ ಸಾಧಾರಣವಾಗಿ ಇರುತ್ತವೆ. ಒಂದರ ಅನಂತರ ಮತ್ತೊಂದು ಭೂತಕ್ಕೆ ಉತ್ಸವ ನಡೆಯುವುದರಿಂದ ಇದೇ ಆಭರಣಗಳನ್ನು ಬಳಸಿಕೊಳ್ಳುತ್ತಾರೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಪರವರು-ಪಂಬದರು ಕಟ್ಟುವ ಭೂತಗಳು ಮತ್ತು ನಲಿಕೆಯವರು ಕಟ್ಟುವ ಭೂತಗಳು - ಈ ವ್ಯತ್ಯಾಸದ ಹಿನ್ನೆಲೆಯಲ್ಲಿ ಆಭರಣಗಳ ವಿತರಣೆಯಲ್ಲಿ ವ್ಯತ್ಯಾಸವು ಕಂಡುಬರುತ್ತದೆ. 

ಲೋಕ ಕಲ್ಯಾಣಾರ್ಥವಾಗಿ ಲಾಸ್ ಏಂಜಲೀಸ್‌ನಲ್ಲಿ ಮಹಾರುದ್ರಯಾಗ

ಭೂತಗಳ ಅಂತಸ್ತು, ಅಧಿಕಾರವನ್ನು ಪ್ರತ್ಯೇಕಿಸಿ ತೋರಿಸುವ ಉದ್ದೇಶ ಇಟ್ಟುಕೊಂಡಿರುವುದರಿಂದ ಪ್ರಧಾನ ಭೂತಗಳ ಆಭರಣಗಳನ್ನು ಬೇರೆ ದೈವಗಳಿಗೆ ಬಳಸೋದಿಲ್ಲ.  ಮುಖಕ್ಕೆ ಅರದಾಲ ಅಂದರೆ ಹಳದಿ ಬಣ್ಣ. ಕಾಡಿಗೆ ಮತ್ತು ಬಿಳಿಯಲ್ಲಿ ಚಿತ್ರಿಕೆಗಳು, ಕೆಂಪು ಬಣ್ಣದ ಬಟ್ಟೆ, ಕಾಲಿಗೆ ಗಗ್ಗರ, ತಲೆಪಟ್ಟಿ, ತಲೆಪಟ್ಟೊ, ಭುಜದಂಡೆ, ಎದೆಪದಕ ಇತ್ಯಾದಿ. ಹೆಣ್ಣು ಗಂಡು ಎಂಬ ವ್ಯತ್ಯಾಸ ಮಾಡದೆ ಎಲ್ಲಾ ಬಗೆಯ ಆಭರಣಗಳನ್ನು ಭೂತಗಳಿಗೆ ತೊಡಿಸಲಾಗುತ್ತದೆ. ಭಂಡಾರದಲ್ಲಿ ಎಷ್ಟೇ ಆಭರಣಗಳಿರಲಿ, ಕೆಲವು ಕಡೆಗಳಲ್ಲಿ ಭೂತದ ಕೋಲ, ನೇಮ ನಡೆಯುವ ಮನೆಯ ಒಡತಿ ತನ್ ಕೊರಳ ಸರವನ್ನು ತೆಗೆದು ಕಿನಿದಾರು, ಕಲ್ಲುರ್ಟಿ ಭೂತಕ್ಕೆ ಸ್ವತಃ ತೊಡಿಸುವ ಸಂಪ್ರದಾಯವಿದೆ.ದೈವ ಮುಖವಾಡವನ್ನು ಧರಿಸುವ ಕ್ರಿಯೆಯು ಆರಾಧನೆಯಲ್ಲಿ ಬಹು ಮುಖ್ಯವಾದ ಒಂದು ಭಾಗ. ಭೂತಶಕ್ತಿಯ ಪ್ರತೀಕವೇ ಮುಖವಾಡ ಎಂಬ ನಂಬಿಕೆಯಿದೆ. ಈ ಮುಖವಾಡಗಳು ಆರಾಧನೆಯ ಸಂದರ್ಭದಲ್ಲಿ ಮಾತ್ರವಲ್ಲದೆ ದೈವಸ್ಥಾನ, ಗುಡಿಯೊಳಗೂ ಪೂಜಿಸಲ್ಪಡುತ್ತದೆ. ಭೂತದ ಭಂಡಾರ ಎಂದರೆ ಮುಖ್ಯವಾಗಿ ಮುಖವಾಡ ಮತ್ತು ಆಯುಧಗಳು. ಭಂಡಾರವನ್ನು ಗುತ್ತಿನಮನೆ, ಭೂತದ ಗುಡಿಯಿಂದ ಮೆರವಣಿಗೆಯಲ್ಲಿ ಭೂತಾರಾಧನೆ ನಡೆಯುವ ಸ್ಥಳಕ್ಕೆ ತರುವಾಗ ಮುಖವಾಡವನ್ನು ಪ್ರತ್ಯೇಕವಾಗಿ ಹೆಗಲ ಮೇಲೆ ಹೊತ್ತು ತರುತ್ತಾರೆ. ಮುಖವಾಡವನ್ನು ಮೆರವಣಿಗೆಯಲ್ಲಿ ತಂದು ಭೂತದ ಮಾನಿಗೂ ಪಾತ್ರಿಗೂ ಒಪ್ಪಿಸುವ ಜವಾಬ್ದಾರಿ ಇರುತ್ತದೆ.

ಕಡಗೋಲು ಕೃಷ್ಣನಿಗೆ ಪಕ್ಷಿ ಕೂಗುವ ಹೊತ್ತಲ್ಲಿ ಪಶ್ಚಿಮ ಜಾಗರಣ ಪೂಜೆ

ಮುಖವಡಗಳನ್ನು ಮರ, ಹಾಳೆ, ಲೋಹ ಈ ಮೂರು ಬಗೆಯ ವಸ್ತುಗಳಿಂದ ನಿರ್ಮಿಸುತ್ತಾರೆ. ಕಲ್ಕುಡ, ಕಲ್ಲುರ್ಟಿ, ಪಂಜುರ್ಲಿಯಂತಹ ಭೂತಗಳಿಗೆ ಲೋಹದ ಮುಖವಾಡಗಳು ಇಲ್ಲದೇ ಹೋದಾಗ ಹಾಳೆಯ ಮುಖವಾಡಗಳನ್ನು ಬಳಸುತ್ತಾರೆ. ಉಳ್ಳಾಲ್ತಿ, ಕೊಡಮಣಿತ್ತಾಯ, ಮಲರಾಯಿ, ಜುಮಾದಿ, ರಕ್ತೇಶ್ವರಿ ಮುಂತಾದ ಪ್ರಧಾನ ಭೂತಗಳಿಗೆ ಲೋಹದ ಮುಖವಾಡಗಳು ಬಳಕೆಯಾಗುತ್ತವೆ. ಅನಂತಾಡಿಯ ಉಳ್ಳಾಲ್ಪಿಗೆ ಎರಡು ಬಗೆಯ ಮುಖವಾಡಗಳಿವೆ. ಪಂಜುರ್ಲಿ ಭೂತಗಳಿಗೆ ಹಂದಿಯ ಮುಖವನ್ನು ಹೋಲುವ ಒಂದೇ ವಿನ್ಯಾಸದ ಮುಖವಾಡಗಳಿವೆ.ತುಳುನಾಡಿನಲ್ಲಿ  ಒಂದು ಸಾವಿರದ ಏಳುನೂರ ಐವತ್ತೈದು ದೈವಗಳಿವೆ ಎಂದು 20 ವರ್ಷಗಳ ಅಧ್ಯಯನದಲ್ಲಿ ಡಾ.ಲಕ್ಷ್ಮೀ ಜಿ. ಪ್ರಸಾದ್ ದಾಖಲಿಸಿದ್ದಾರೆ. ತುಳುನಾಡಿನಲ್ಲಿ ಸಾರತ್ತೊಂಜಿ ದೈವ ಉಂಡು ಎಂಬ ಆಡು ಮಾತಿದೆ. ಸಾವಿರದೊಂದು ಭೂತಗಳಿಗೆ ಸಮೂಹದಲ್ಲಿ ಆರಾಧನೆ ನಡೆಯುತ್ತದೆ. ಆದರೆ ನಿಜಕ್ಕೂ ಸಾವಿರದೊಂದು ಭೂತಗಳಿವೆ.

Follow Us:
Download App:
  • android
  • ios