ಕಳೆದ ಎರಡು ವರ್ಷಗಳ ಹಿಂದೆ ಅಂದರೆ 2023ರ ಮಿಸೆಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದಿದ್ದ ಡಾ. ರೋಹಿಣಿ ಝಾ, ಇದೀಗ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 17ನೇ ರ್ಯಾಂಕ್ ಪಡೆಯುವ ಮೂಲಕ ವೀರ ಕುನ್ವರ್ ಸಿಂಗ್ ವಿಶ್ವವಿದ್ಯಾಲಯದಲ್ಲಿ (VKSU) ಸಹಾಯಕ ಪ್ರಾಧ್ಯಾಪಕರಾಗಿ ನೇಮಕವಾಗಿದ್ದಾರೆ.
ಬಿಹಾರ ರಾಜ್ಯ ಮೂಲದ ಮಹಿಳೆಯಾಗಿರುವ ಡಾ. ರೋಹಿಣಿ ಝಾ ಅವರು ಮತ್ತೊಮ್ಮೆ ತಮ್ಮ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಮಿಸೆಸ್ ಇಂಡಿಯಾ 2023 ಪ್ರಶಸ್ತಿ ಗೆದ್ದ ಡಾ. ರೋಹಿಣಿ ಇದೀಗ ಆರಾ ನಗರದ ವೀರ ಕುನ್ವರ್ ಸಿಂಗ್ ವಿಶ್ವವಿದ್ಯಾಲಯದ (VKSU) ಸಹಾಯಕ ಪ್ರಾಧ್ಯಾಪಕರಾಗಿ ನೇಮಕವಾಗಿದ್ದಾರೆ. ಇಲ್ಲಿ ಇಂಗ್ಲಿಷ್ ಬೋಧನೆ ಮಾಡುತ್ತಾರೆ. ಬಿಹಾರ ರಾಜ್ಯ ವಿಶ್ವವಿದ್ಯಾಲಯ ಸೇವಾ ಆಯೋಗ (BPSC) ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಅವರು 17ನೇ ಸ್ಥಾನ ಪಡೆದಿದ್ದಾರೆ. ಜೊತೆಗೆ, VKSU ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಡಾ. ರೋಹಿಣಿ ಝಾ ಯಾರು?
ಡಾ. ರೋಹಿಣಿ ಝಾ ಅವರು ಬಿಹಾರದ ಸಹರ್ಸಾ ಜಿಲ್ಲೆಯ ಚೈನ್ಪುರ ಗ್ರಾಮದವರು. ಬಂಗಾಂವ್‌ನ ಪರ್ರಿ ಗ್ರಾಮದಲ್ಲಿ ಜನಿಸಿದರು. ಸಹರ್ಸಾ ಮತ್ತು ಪಾಟ್ನಾದಲ್ಲಿ ಶಾಲಾ ಶಿಕ್ಷಣ, ಜೈನ್ ಕಾಲೇಜಿನಲ್ಲಿ ಪದವಿ ಹಾಗೂ ಇದೀಗ ತಾವು ಪ್ರಾಧ್ಯಾಪಕಳಾಗಿ ಆಯ್ಕೆಯಾದ ವೀರ ಕುನ್ವರ್ ಸಿಂಗ್ ವಿಶ್ವವಿದ್ಯಾಲಯದಿಂದ (VKSU) ಕಳೆದ 2018ರಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದ್ದರು. ಪೆಎಚ್‌ಡಿ ನಂತರ ಪಾಟ್ನಾ ವಿಶ್ವವಿದ್ಯಾಲಯದ ಬಿಎನ್ ಕಾಲೇಜಿನಲ್ಲಿ ಅತಿಥಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ವಕೀಲ ರಮೇಶ್ ಝಾ ಅವರನ್ನು ಮದುವೆಯಾಗಿದ್ದಾರೆ.
ಕಾಲೇಜು ಹಂಚಿಕೆಯಾಗಿಲ್ಲ:
ಬಿಹಾರ ರಾಜ್ಯ ವಿಶ್ವವಿದ್ಯಾಲಯ ಸೇವಾ ಆಯೋಗ ನಡೆಸಿದ ನೇಮಕಾತಿ ಪ್ರಕ್ರಿಯೆಯಲ್ಲಿ ಇಂಗ್ಲಿಷ್ ವಿಷಯಕ್ಕೆ 113 ಅಸಿಸ್ಟೆಂಟ್ ಪ್ರೊಫೆಸರ್‌ಗಳನ್ನು ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಡಾ. ರೋಹಿಣಿ ಝಾ ಕೂಡ ಒಬ್ಬರು. ಅವರು ರಾಜ್ಯ ಮಟ್ಟದ ಪಟ್ಟಿಯಲ್ಲಿ 17ನೇ ಸ್ಥಾನ ಪಡೆದಿದ್ದಾರೆ. ಬಿಹಾರದಲ್ಲಿ 253 ಸ್ಥಾನಗಳಿಗೆ ಒಟ್ಟು 209 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಸದ್ಯಕ್ಕೆ ಕಾಲೇಜುಗಳ ಹಂಚಿಕೆ ಬಾಕಿ ಇದೆ. ಈಗ ಡಾ. ರೋಹಿಣಿ VKSU ನ ಯಾವುದಾದರೂ ಕಾಲೇಜಿನಲ್ಲಿ ಇಂಗ್ಲಿಷ್ ಪಾಠ ಮಾಡಲಿದ್ದಾರೆ.
ಬಿಹಾರದ ಸಂಸ್ಕೃತಿ ಶ್ರೇಷ್ಠ:
ಡಾ. ರೋಹಿಣಿ ಝಾ ಬಿಹಾರದ ಸಂಸ್ಕೃತಿಯೊಂದಿಗೆ ಆಳವಾಗಿ ಬೆರೆತಿದ್ದಾರೆ. ಬಿಹಾರದ ವಿಭಿನ್ನ ಸಂಸ್ಕೃತಿಗಳಾದ ಮಿಥಿಲಾ, ಭೋಜ್‌ಪುರಿ ಮತ್ತು ಮಗಧಿ ಭಾರತದ ಶ್ರೇಷ್ಠ ಸಂಸ್ಕೃತಿಗಳಲ್ಲಿ ಒಂದೆಂದು ಅವರು ನಂಬಿದ್ದಾರೆ. 'ಬಿಹಾರದ ವಿವಿಧ ಪ್ರದೇಶಗಳಲ್ಲಿ ವಾಸಿಸುವ ಮತ್ತು ಅಲ್ಲಿನ ಸಂಸ್ಕೃತಿಯನ್ನು ಹತ್ತಿರದಿಂದ ನೋಡುವ ಅವಕಾಶ ನನಗೆ ಸಿಕ್ಕಿತು. ಮಿಥಿಲಾ, ಭೋಜ್‌ಪುರಿ ಮತ್ತು ಮಗಧಿ ಸಂಸ್ಕೃತಿಗಳು ತಮ್ಮದೇ ಆದ ವಿಶಿಷ್ಟ ಗುರುತನ್ನು ಹೊಂದಿವೆ' ಎಂದು ರೋಹಿಣಿ ತಮ್ಮ ರಾಜ್ಯದ ಸಂಸ್ಕೃತಿ ಬಗ್ಗೆ ಹೇಳಿಕೊಂಡಿದ್ದರು.