ವಾವ್ಹ್‌..ಸ್ವರ್ಗವೇ ಧರೆಗಿಳಿದಂತೆ..ಮಂಜು ಹೊದ್ದು ಮಲಗಿದ ಸುಂದರ ಕಾಶ್ಮೀರ

First Published | Jan 31, 2023, 4:50 PM IST

ಕಣ್ಣು ಹಾಯಿಸಿದಷ್ಟು ದೂರದ ವರೆಗೂ ಬಿಳಿಯ ಚಾದರ ಹೊದ್ದು ಮಲಗಿದಂತೆ ಕಾಣುತ್ತಿರುವ ಭೂಮಿ.ಮೇಲಿನಿಂದ ಜಾದೂಗಾರನ ಮಂತ್ರದಂಡದಿಂದ ಉದುರಿದಂತೆ ನಿಲ್ಲದೇ ಸುರಿಯುತ್ತಿರುವ ಹಿಮ. ಜಮ್ಮುಕಾಶ್ಮೀರದಲ್ಲಿ ನಿಸರ್ಗದ ಸೊಬಗಿಗೆ ಮನಸೋಲದವರಿಲ್ಲ. ಮಂಜಿನಲ್ಲಿ ಮಿಂದೆದ್ದ ಕಾಶ್ಮೀರದ ಫೋಟೋ ಎಲ್ಲೆಡೆ ವೈರಲ್ ಆಗ್ತಿದೆ.

ಚಳಿಗಾಲ ಶುರುವಾಗಿದೆ. ಹಿತವಾಗಿ ಬೀಳುವ ಮಂಜು ಮೈ ಕೊರೆಯುವ ಚಳಿಯಲ್ಲೂ ಮನಸ್ಸಿಗೆ ಮುದ ನೀಡುತ್ತದೆ. ಅದರಲ್ಲೂ ಕಾಶ್ಮೀರದಲ್ಲಿ ಮಂಜಿನ ವಾತಾವರಣ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದೆ. ಕಾಶ್ಮೀರದ ಕುಪ್ವಾರದಲ್ಲಿ ತಾಜಾ ಹಿಮಪಾತದೊಂದಿಗೆ ಪ್ರವಾಸಿಗರಿಗೆ ದೃಶ್ಯ ಆನಂದವಾಗಿದೆ. ನೆಟಿಜನ್‌ಗಳು ಇದನ್ನು 'ವಿಂಟರ್ ಕಾರ್ನಿವಲ್ ಎಂದು ಕರೆಯುತ್ತಿದ್ದಾರೆ.

ಚಳಿಗಾಲದಲ್ಲಿ ಕಾಶ್ಮೀರಕ್ಕಿಂತ ಹೆಚ್ಚು ಸೊಗಸಾಗಿ ಬೇರ್ಯಾವ ಪ್ರದೇಶವೂ ಇರಲು ಸಾಧ್ಯವಿಲ್ಲ. ಸದ್ಯ ಕಾಶ್ಮೀರ ಕಣಿವೆಯ ಕೆಲವು ಭಾಗಗಳು ಶೀತದ ಅಲೆಗಳ ತೀವ್ರತೆಯನ್ನು ಅನುಭವಿಸುತ್ತಿವೆ. ಗುಲ್ಮಾರ್ಗ್, ಶ್ರೀನಗರ, ಪಹಲ್ಗಾಮ್, ಕುಪ್ವಾರ ಮುಂತಾದ ಸ್ಥಳಗಳಲ್ಲಿ ಶೂನ್ಯಕ್ಕಿಂತ ಕಡಿಮೆ ತಾಪಮಾನವು ದಾಖಲಾಗಿದೆ. ಚಳಿಗಾಲವು ಅಕ್ಟೋಬರ್‌ನಿಂದ ಮಾರ್ಚ್ ಆರಂಭದವರೆಗೆ ಇರುತ್ತದೆ ಮತ್ತು ಈ ಸಮಯದಲ್ಲಿ ನೀವು ಹಿಮಭರಿತ ಕಾಶ್ಮೀರದ ಶಿಖರವನ್ನು ನೋಡಬಹುದು. 

Tap to resize

ಕಾಶ್ಮೀರದಲ್ಲಿ ಹಿಮದಿಂದ ಆವೃತವಾದ ಪರ್ವತಗಳು ಮತ್ತು ಹಿಮಪಾತದ ಅದ್ಭುತವಾದ ಅದ್ಭುತ ನೋಟವು ಸಾವಿರಾರು ಪ್ರವಾಸಿಗರನ್ನು ಸೆಳೆದಿದೆ. ನಿವಾಸಿಗಳು ಮತ್ತು ಸಂದರ್ಶಕರು ಜಮ್ಮುಕಾಶ್ಮೀರದ ಅದ್ಭುತ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಮಂಜಿನಲ್ಲಿ ಮಿಂದೆದ್ದ ಕಾಶ್ಮೀರದ ನಗರ, ದೇವಾಲಯ, ರಸ್ತೆಗಳ ಫೋಟೋ ಎಲ್ಲೆಡೆ ವೈರಲ್ ಆಗ್ತಿದೆ.

ಹಿಮಪಾತದ ನಂತರ ಕೇದಾರನಾಥ ದೇವಾಲಯ ಮಂಜಿನ ಹೊದಿಕೆ ಹೊದ್ದಂತೆ ಕಾಣಿಸುತ್ತದೆ. ಕೇದಾರನಾಥದಲ್ಲಿ ಹಲವು ರಾತ್ರಿಗಳಿಂದ ನಿರಂತರ ಹಿಮಪಾತವಾಗುತ್ತಿದೆ. ಪ್ರದೇಶದಲ್ಲಿ 4 ಅಡಿಯಷ್ಟು ಹಿಮ ಶೇಖರಣೆಯಾಗಿದೆ. ಧಾಮ್ ಆವರಣ ಮತ್ತು ಸುತ್ತಮುತ್ತಲಿನ ಬೆಟ್ಟಗಳ ಮೇಲೆ ಭಾರೀ ಹಿಮ ಕಾಣುತ್ತಿದೆ. ರಾಜ್ಯದ ಉತ್ತರಕಾಶಿ ಪೊಲೀಸರು ನಾಗರಿಕರಿಗೆ ಸಲಹೆಯನ್ನು ನೀಡಿದ್ದು, ವಿವಿಧ ಹೆದ್ದಾರಿಗಳ ಮೂಲಕ ಎಚ್ಚರಿಕೆಯಿಂದ ಪ್ರಯಾಣಿಸುವಂತೆ ಎಚ್ಚರಿಸಿದ್ದಾರೆ.

ಕೇದಾರನಾಥ ಧಾಮದ ಬಾಗಿಲುಗಳು ಏಪ್ರಿಲ್ 26ರಂದು ಮತ್ತು ಗಂಗೋತ್ರಿ ಮತ್ತು ಯಮುನೋತ್ರಿಯ ಬಾಗಿಲುಗಳು ಚಳಿಗಾಲದ ವಿರಾಮದ ನಂತರ ಏಪ್ರಿಲ್ 22 ರಂದು ತೆರೆಯಲಿವೆ ಎಂದು ದೇವಾಲಯದ ಸಮಿತಿಯು ಜನವರಿ 27ರಂದು ತಿಳಿಸಿದೆ. ಶ್ರೀ ಬದರಿನಾಥ ಧಾಮದ ಬಾಗಿಲು ಏಪ್ರಿಲ್ 27 ರಂದು ತೆರೆಯುತ್ತದೆ.

ಕೇದಾರನಾಥ, ಯಮುನೋತ್ರಿ ಮತ್ತು ಗಂಗೋತ್ರಿಯ ಬಾಗಿಲು ತೆರೆಯುವ ದಿನಾಂಕ ನಿಗದಿಯಾದ ಕೂಡಲೇ ಚಾರ್ ಧಾಮ್ ಯಾತ್ರೆಗೆ ಸಿದ್ಧತೆಯೂ ಆರಂಭವಾಗಿದೆ. ಯಮುನೋತ್ರಿ, ಗಂಗೋತ್ರಿ ಮತ್ತು ಬದರಿನಾಥವನ್ನು ಒಳಗೊಂಡಿರುವ 'ಚಾರ್ ಧಾಮ್' ಎಂದು ಕರೆಯಲ್ಪಡುವ ನಾಲ್ಕು ಪುರಾತನ ಯಾತ್ರಾ ಸ್ಥಳಗಳಲ್ಲಿ ಈ ದೇವಾಲಯವೂ ಒಂದಾಗಿದೆ.

ರೈಲ್ವೆ ಸಚಿವಾಲಯವು ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಮದಿಂದ ಆವೃತವಾದ ಹಳಿಗಳ ಮೂಲಕ ಚಲಿಸುವ ರೈಲಿನ ಮೋಡಿಮಾಡುವ ವೀಡಿಯೊವನ್ನು ಹಂಚಿಕೊಂಡಿದೆ. ಕ್ಲಿಪ್‌ನಲ್ಲಿ, ಎಲ್ಲವೂ ಹಿಮದ ಬಿಳಿ ಹೊದಿಕೆಯಿಂದ ಆವೃತವಾಗಿದೆ ಮತ್ತು ಕಾಶ್ಮೀರದ ಕಣಿವೆಯ ಮೂಲಕ ರೈಲು ಹಾದು ಹೋಗುತ್ತಿರುವುದು ಕಂಡುಬರುತ್ತದೆ.

Latest Videos

click me!