ಗಳಗನಾಥದ ಗಳಗೇಶ್ವರ ದೇವಸ್ಥಾನ
ಹಾವೇರಿ ತಾಲೂಕಿನ ಗಳಗನಾಥ ವರದಾ ಹಾಗೂ ತುಂಗಭದ್ರಾ ನದಿಗಳ ಸಂಗಮ ಸ್ಥಳವಾಗಿದೆ. ನದಿಯ ದಂಡೆಯ ಶ್ರೀ ಗಳಗನಾಥೇಶ್ವರ ದೇವಸ್ಥಾನ ವಿಶಾಲವಾಗಿದ್ದು, ಸುಂದರ ಶಿಲಾ ವೈಭವದಿಂದ ಕೂಡಿದೆ. ನದಿಯ ಮಹಾಪೂರದಿಂದ ಹಾನಿಯಾಗದಂತೆ ಗಳಗೇಶ್ವರ ದೇವಸ್ಥಾನದಲ್ಲಿ ಎತ್ತರವಾದ ಅಧಿಷ್ಟಾನವನ್ನು ನಿರ್ಮಿಸಲಾಗಿದೆ. ಅಧಿಷ್ಟಾನವು ನಕ್ಷತ್ರಾಕಾರವಾಗಿದ್ದು ತಳಹದಿಯಲ್ಲಿ ವಿಶಾಲವಾಗಿದ್ದು ಮೇಲಕ್ಕೆ ಹೊದಂತೆ ಕಿರಿದಾಗುತ್ತಾ ಹೋಗಿದೆ. ಗರ್ಭಗುಡಿಯ ಭಾಗಿಲವಾಡವು 12 ಅಡಿ ಎತ್ತರವಾಗಿದ್ದು, ಸುಂದರವಾದ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದೆ. ಒಳಗೆ ಎತ್ತರವಾದ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ನವರಂಗದ ಮಧ್ಯದಲ್ಲಿ ನಾಲ್ಕು ಭಾರಿ ಗಾತ್ರದ ಚಾಲುಕ್ಯ ಕಂಬಗಳಿದ್ದು ಇವುಗಳ ನಡುವೆ ಬೃಹದಾಕಾರದ ನಂದಿಯ ಶಿಲಾಮೂರ್ತಿ ಇದೆ. ಗಳಗನಾಥ ನವಗ್ರಾಮದಿಂದ ಸುಮಾರು ಒಂದು ಕಿಮೀ ದೂರದಲ್ಲಿ ನದಿಯ ನಡುಗಡ್ಡೆಯಲ್ಲಿ ಪಂಚಲಿಂಗೇಶ್ವರ ದೇವಸ್ಥಾನವಿದ್ದು, ಒಂದೇ ಪೀಠದ ಮೇಲೆ ಐದು ಲಿಂಗಗಳಿವೆ. ಮಕರ ಸಂಕ್ರಾಂತಿಗೆ ಗಳಗೇಶ್ವರ ಹಾಗೂ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆಯೂ ನಡೆಯುತ್ತದೆ. ಹಾವೇರಿಯಿಂದ 40 ಕಿಮೀ ದೂರದಲ್ಲಿದ್ದು, ಹಾವೇರಿ ಮತ್ತು ಗುತ್ತಲದಿಂದ ಬಸ್ ಸೌಲಭ್ಯವಿದೆ.