ನೀವು 90ರ ದಶಕದಲ್ಲಿ ಬಾಲ್ಯ ಕಳೆದಿದ್ದರೆ, ನಿಮ್ಮ ಬಾಲ್ಯದ ಚೆಂದದ ಸಮಯದ ಭಾಗವಾಗಿರಲೇಬೇಕು ಆರ್ ಕೆ ನಾರಾಯಣ ಬರೆದ, ಶಂಕರ್‌ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್.
ಈ ಆಟೋರಾಜ ಶಂಕರ್‌ನಾಗ್‌ಗೆ ಗೌರವ ಸಲ್ಲಿಸುವ ಸಲುವಾಗಿ ಶಿವಮೊಗ್ಗ ಜಿಲ್ಲೆಯ ಅರಸಾಳು ರೈಲು ನಿಲ್ದಾಣವನ್ನು ಕಾಲ್ಪನಿಕ 'ಮಾಲ್ಗುಡಿ' ಹಳ್ಳಿಯಾಗಿ ನಿರ್ಮಿಸಲಾಗಿದೆ.
1.86 ಕೋಟಿ ರೂ. ವೆಚ್ಚದಲ್ಲಿ ನಿಲ್ದಾಣದ ಅಭಿವೃದ್ಧಿಯಾಗಿದ್ದು, ಮಾಲ್ಗುಡಿ ಡೇಸ್‌ನ ಕಾಲ್ಪನಿಕ ಕಟ್ಟಡದ ಜೀರ್ಣೋದ್ಧಾರವಾಗಿದೆ.
ಇದೀಗ ಮಲೆನಾಡಿನ ನಟ್ಟನಡುವೆ ನಿಂತ 'ಮಾಲ್ಗುಡಿ'ಗೆ ನೀವು ಹೋದರೆ, ಅಲ್ಲಿ ಸ್ವಾಮಿ ಆ್ಯಂಡ್ ಫ್ರೆಂಡ್ಸ್ ನಿಮ್ಮನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ.
ಪಕ್ಕದಲ್ಲಿ ಇರುವ ರೈಲಿನ ಸುಂದರ ಬೋಗಿಯೊಳಗೆ ಕುಳಿತು ಚಹಾ ಸವಿಯಬಹುದು. ಮಲೆನಾಡ ತಂಪಾದ ಗಾಳಿ ಚಹಾ ರುಚಿ ಹೆಚ್ಚು ಆಹ್ಲಾದಕರವಾಗಿ ನಿಮ್ಮ ಮನಸಲ್ಲಿಳಿಯುತ್ತದೆ.
ಶಿವಮೊಗ್ಗದಿಂದ 30 ಕಿಲೋಮೀಟರ್ ದೂರದಲ್ಲಿರುವ ಅರಸಾಳು ಎಂಬ ಸುಂದರ ಪುಟ್ಟ ಊರಿನ ರೈಲ್ವೆ ನಿಲ್ದಾಣದಲ್ಲಿ ಈ ಮಾಲ್ಗುಡಿ ಮ್ಯೂಸಿಯಂ ನಿರ್ಮಾಣವಾಗಿದೆ.
ನೀವಿಲ್ಲಿ ಶಿವಮೊಗ್ಗದ ಕಡೆಯಿಂದ ಹೋಗುವಿರಾದರೆ, ಹೋಗುವ ದಾರಿ ಕೂಡಾ ನಿಮ್ಮ ಮನಸ್ಸಿಗೆ ಮುದ ನೀಡುವ ಚೆಂದದ ರಸ್ತೆಯನ್ನೂ, ಇಕ್ಕೆಲಗಳಲ್ಲಿ ದೊಡ್ಡ ಮರಗಳನ್ನೂ ಹೊತ್ತಿದೆ.