ಯಾಕೆ ಈ ಅತೃಪ್ತಿ?
1. ಕೆಲಸದ ಒತ್ತಡ. ಇಬ್ಬರೂ ಉದ್ಯೋಗಕ್ಕೆ ಹೋಗುವವರಾದರೆ, ಇಬ್ಬರಿಗೂ ಕೆಲಸದ ವೇಳೆ ಬೇರೆ ಬೇರೆಯಾಗಿದ್ದರೆ ಗಂಡ-ಹೆಂಡ್ತಿ ಭೇಟಿಯಾಗುವುದೇ ಅಪರೂಪವಾಗುತ್ತದೆ. ನವವಿವಾಹಿತರು ಈ ಹಿಂದೆ ಪ್ರತಿದಿನ ಒಟ್ಟಿಗೆ ಕುಳಿತು ಕಾಲ ಕಳೆಯುತ್ತಿದ್ದರು. ಈ ಸಮಯವು ಇಬ್ಬರ ನಡುವಿನ ಸಾಮರಸ್ಯ, ಪರಿಚಯವನ್ನು ಗಾಢವಾಗಿಸುತ್ತಿತ್ತು. ಆದರೀಗ ಕೂರುವುದಿರಲಿ, ಒಟ್ಟಿಗೆ ಮಲಗುವುದೇ ಕಡಿಮೆಯಾಗುತ್ತಿದೆ. ನವವಿವಾಹಿತರೂ ವಾರಕ್ಕೊಮ್ಮೆ ಅಥವಾ ವಾರಕ್ಕೆ ಕೇವಲ ಎರಡು ಬಾರಿ ಸೇರುತ್ತಾರಷ್ಟೇ. ಅಷ್ಟೊಂದು ಕೆಲಸದ ಒತ್ತಡ ಕಾಡುತ್ತಿದೆ. ಬೆಡ್‌ರೂಮಿನ ಒಳಗೂ ಕಾಲಿಡುತ್ತಿರುವ ಉದ್ಯೋಗದ ಒತ್ತಡದಿಂದ ಸರಸ ಸಲ್ಲಾಪದಲ್ಲಿ ಮನಸ್ಸು ಮತ್ತು ದೇಹ ತೊಡಗುವುದೇ ಅಸಾಧ್ಯವಾಗುತ್ತಿದೆ.
ಪರಿಹಾರ ಕ್ರಮಗಳು: ಕೆಲಸದ ನಡುವೆ ಬಿಡುವು ಮಾಡಿಕೊಳ್ಳಬೇಕು. ಇನ್ನು ಕೆಲಸ ಮಾಡುವ ಕಚೇರಿಗಳು ಮನೆಗೆ ಹತ್ತಿರವಿದ್ದರೊಳಿತು. ಇಬ್ಬರೂ ಕೆಲಸದಿಂದಾಚೆಗೆ ವಿಭಿನ್ನ ಹವ್ಯಾಸಗಳಿಗೆ, ಇಬ್ಬರ ಅಭಿರುಚಿಗಳನ್ನು ಪೋಷಿಸುವ ಕಡೆಗೆ ಗಮನ ಹರಿಸಬೇಕು. ಇಬ್ಬರೂ ಜೊತೆಗೂಡಿ ಅಡುಗೆ ಮಾಡಿ, ಇದರಿಂದಲೂ ಸಾಂಗತ್ಯ ಬೆಳೆಯುತ್ತದೆ.