ಸಾಮಾನ್ಯವಾಗಿ ಇಂದಿನ ಮಧ್ಯಮ ವರ್ಗದ ಪೋಷಕರು ಮಕ್ಕಳಿಗೆ ಕಷ್ಟವೇ ಬಾರದಂತೆ ಹಣ ವ್ಯಯಿಸಿ ಬೆಳೆಸುತ್ತಾರೆ. ಆದರೆ, ಈ ಅಪಾರ ಶ್ರೀಮಂತರು ಹಾಗಲ್ಲ, ಮಕ್ಕಳಿಗೆ ಕಷ್ಟ ಗೊತ್ತಾಗಬೇಕು ಎನ್ನುತ್ತಾರೆ.
ಆಸ್ಟ್ರೇಲಿಯಾದ 200 ಶ್ರೀಮಂತ ವ್ಯಕ್ತಿಗಳ ವಾರ್ಷಿಕ ಸಮೀಕ್ಷೆಯಾದ ದಿ ಎಎಫ್‌ಆರ್ ರಿಚ್ ಲಿಸ್ಟ್ 2024 ಬಿಡುಗಡೆಯಾಗಿದೆ. ಇದರಲ್ಲಿ ಹೆಸರು ಗಳಿಸಿದ 6 ಅಗಾಧ ಶ್ರೀಮಂತರು ತಮ್ಮ ಮಕ್ಕಳಿಗೆ ಮನಿ ಪಾಠ ಹೇಳಿಕೊಟ್ಟ ಬಗೆ ಹಂಚಿಕೊಂಡಿದ್ದಾರೆ.
ಇವರೆಲ್ಲರೂ ಸಾಮಾನ್ಯವಾಗಿ ಬಯಸುವುದೆಂದರೆ ತಮ್ಮ ಶ್ರೀಮಂತಿಕೆ ಹೊರತಾಗಿಯೂ ಮಕ್ಕಳ ಕಾಲು ಯಾವಾಗಲೂ ಭೂಮಿ ಮೇಲಿರಬೇಕು ಎಂದು. ಅಂದರೆ, ಅವರೆಂದಿಗೂ ಪೋಷಕರ ದುಡ್ಡಿನಲ್ಲಿ ಮೆರೆಯಬಾರದು, ಅಹಂಕಾರಿಗಳಾಗಬಾರದು. ಅವರು ಕೂಡಾ ಕಷ್ಟ ಪಟ್ಟು ಕೆಲಸ ಮಾಡಬೇಕು, ಹಣದ ಮೌಲ್ಯ ಅರಿಯಬೇಕು.
$790 ಮಿಲಿಯನ್ ಮೌಲ್ಯ ಆಸ್ತಿ ಹೊಂದಿರುವ ಕಾರು ಮಾರಾಟಗಾರ ಟೋನಿ ಡೆನ್ನಿ ಹೇಳುವಂತೆ, ಅವರು ಮಕ್ಕಳಿಗೆ ತುಂಬಾ ಕಡಿಮೆ ಪಾಕೆಟ್ ಮನಿ ಕೊಡುತ್ತಿದ್ದರಂತೆ. ಅದಕ್ಕಿಂತ ಹೆಚ್ಚಿನ ಹಣ ಮಕ್ಕಳು ಪಡೆಯಬೇಕೆಂದರೆ ಅವರು ಮನೆಗೆಲಸ ಮಾಡಿ ಅದನ್ನು ಗಳಿಸಬಹುದಿತ್ತು. ಈ ಮೂಲಕ ಅವರ ಮಕ್ಕಳು ಮನೆಗೆಲಸವನ್ನೂ ಕಲಿಯುತ್ತಿದ್ದರು. ಜೊತೆಗೆ, ಕಡಿಮೆ ಹಣ ವ್ಯಯಿಸುವ ಅಭ್ಯಾಸವನ್ನೂ ಬೆಳೆಸಿಕೊಂಡರು.
ಹಂಗ್ರಿ ಜ್ಯಾಕ್‌ನ ಸಂಸ್ಥಾಪಕ ಮತ್ತು ಡೊಮಿನೊಸ್ ಪಿಜ್ಜಾದ ಪ್ರಮುಖ ಷೇರುದಾರರಾದ ಜ್ಯಾಕ್ ಕೋವಿನ್ ಅವರು ತಮ್ಮ ನಾಲ್ಕು ಮಕ್ಕಳು ಚಿಕ್ಕವರಿದ್ದಾಗ ಬರ್ಗರ್ ಫ್ರ್ಯಾಂಚೈಸ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ಕೆಲಸ ಮಾಡುವುದು ಅವರಿಗೆ ಹಣದ ಮೌಲ್ಯ ಮತ್ತು ಶಿಸ್ತಿನ ಪ್ರಜ್ಞೆಯನ್ನು ನೀಡುತ್ತದೆ. ಹಾಗಾಗಿ, ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಕೆಲಸಗಳನ್ನು ಕಲಿಸಬೇಕು. ಹಣ ಗಳಿಸುವುದು ಎಷ್ಟು ಕಷ್ಟ ಎಂದು ಅರ್ಥ ಮಾಡಿಸಬೇಕು ಎನ್ನುತ್ತಾರೆ.
ಮಾಜಿ NRL ಆಟಗಾರ ಮತ್ತು ಮಾಸ್ ಗ್ರೂಪ್ ಹೋಲ್ಡಿಂಗ್ಸ್‌ನ ಸಂಸ್ಥಾಪಕ ವೆಸ್ ಮಾಸ್ ಅವರು ತಮ್ಮ ಮಕ್ಕಳಿಗೆ ಎಲ್ಲವನ್ನೂ ನೀಡಲು ಯೋಜಿಸುವುದಿಲ್ಲ ಎಂದಿದ್ದಾರೆ. ಮಕ್ಕಳೂ ತಮ್ಮಂತೆ ಹಸಿವಿನಿಂದ ಇರಬೇಕು. ಇದು ಅವರ ಜೀವನದಲ್ಲಿ ಹೆಚ್ಚಿನ ಸಾಧನೆಯ ಪ್ರಜ್ಞೆಗೆ ಕಾರಣವಾಗುತ್ತದೆ ಎಂದವರು ಹೇಳಿದ್ದಾರೆ.
ರಾಬರ್ಟ್ ವೈಟ್, ವೃತ್ತಿಪರ ಹೂಡಿಕೆದಾರ ಅವರು ವ್ಯಾಪಾರ ಜಗತ್ತಿನಲ್ಲಿ ಯಾರೊಂದಿಗೆ ವ್ಯವಹರಿಸುತ್ತಾರೆ ಮತ್ತು ತಮ್ಮನ್ನು ಸುತ್ತುವರೆದಿರುವವರ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕೆಂದು ತಮ್ಮ ಮಕ್ಕಳಿಗೆ ಎಚ್ಚರಿಸಿದ್ದಾರಂತೆ.
ಡಯಲ್-ಎ-ಡಂಪ್ ತ್ಯಾಜ್ಯ ನಿರ್ವಹಣಾ ವ್ಯವಹಾರದ ಸಂಸ್ಥಾಪಕ ಇಯಾನ್ ಮಲೌಫ್ 'ನಾನು ನನ್ನ ಮಕ್ಕಳಿಗೆ ಹೇಳುತ್ತೇನೆ, ನನ್ನ ಹಣವು ನಿಮ್ಮ ಸ್ವಾತಂತ್ರ್ಯವಲ್ಲ. ನಿಮ್ಮ ಹಣಕ್ಕಾಗಿ ನೀವು ಕೆಲಸ ಮಾಡಿ, ಆಗ ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಎನಿಸುತ್ತದೆ ಎಂದು' ಎಂದಿದ್ದಾರೆ.