ಇಂದಿನ ಫಿಟ್ನೆಸ್ ಜಗತ್ತಿನಲ್ಲಿ ಪ್ರೋಟೀನ್ ಸಪ್ಲಿಮೆಂಟ್‌ಗಳ ಕುರಿತಾದ ಜಾಗೃತಿ ಹೆಚ್ಚಾಗಿದ್ದು, "ಹೆಚ್ಚು ಪ್ರೋಟೀನ್ ಹೆಚ್ಚು ಶಕ್ತಿ" ಎಂಬ ತಪ್ಪು ಕಲ್ಪನೆ ಜನಪ್ರಿಯವಾಗಿದೆ. ಆದರೆ, ಮಿತಿಮೀರಿದ ಪ್ರೋಟೀನ್ ಸೇವನೆಯು ಕಿಡ್ನಿ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಹಾನಿಯುಂಟುಮಾಡಬಹುದು.
ಪ್ರೋಟೀನ್ ಮಹತ್ವ ಮತ್ತು ಇಂದಿನ ಫಿಟ್ನೆಸ್ ಜಗತ್ತಿನ ತಪ್ಪು ಕಲ್ಪನೆಗಳು
ಇಂದಿನ ಧಾವಂತದ ಜೀವನಶೈಲಿಯಲ್ಲಿ ಫಿಟ್ನೆಸ್, ಬಾಡಿ ಬಿಲ್ಡಿಂಗ್ ಕುರಿತು ಸಾರ್ವಜನಿಕರಲ್ಲಿ, ವಿಶೇಷವಾಗಿ ಜಿಮ್‌ಗೆ ಹೋಗುವ ಯುವಕರು, ಕ್ರೀಡಾಪಟುಗಳು ಮತ್ತು ತೂಕ ಇಳಿಸಿಕೊಳ್ಳಲು ಬಯಸುವವರಲ್ಲಿ ಭಾರಿ ಜಾಗೃತಿ ಮೂಡಿದೆ. ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಹಾಗೂ ಆಕರ್ಷಕ ಜಾಹೀರಾತುಗಳಿಂದಾಗಿ ಪ್ರೋಟೀನ್ ಸಪ್ಲಿಮೆಂಟ್‌ಗಳ ಜನಪ್ರಿಯತೆ ಹೆಚ್ಚಾಗಿದೆ. ಸ್ನಾಯುಗಳ ಬೆಳವಣಿಗೆ, ಅಂಗಾಂಶ ವೃದ್ಧಿ, ಹಾರ್ಮೋನ್‌ಗಳ ಸಮತೋಲನ ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಪ್ರೋಟೀನ್ ಅತ್ಯಗತ್ಯ. ಆದರೆ, "ಹೆಚ್ಚು ಪ್ರೋಟೀನ್ ಎಂದರೆ ಹೆಚ್ಚು ಶಕ್ತಿ" ಎಂಬ ಸಾರ್ವಜನಿಕರ ನಂಬಿಕೆ ತಪ್ಪು ಎಂದು ತಜ್ಞರು ಹೇಳುತ್ತಾರೆ. ಶರೀರಕ್ಕೆ ಅಗತ್ಯವಿರುವಷ್ಟೇ ಪ್ರೋಟೀನ್ ಬೇಕಾಗಿದ್ದು, ಮಿತಿಮೀರಿದರೆ ಅದು ಆರೋಗ್ಯಕ್ಕೆ ಮಾರಕವಾಗಬಹುದು.
25
ದೈನಂದಿನ ಪ್ರೋಟೀನ್ ಅಗತ್ಯತೆಯ ಲೆಕ್ಕಾಚಾರ ಹೀಗಿದೆ
ಆಹಾರ ತಜ್ಞರ ಪ್ರಕಾರ, ಒಬ್ಬ ವ್ಯಕ್ತಿಗೆ ನಿತ್ಯವೂ ಎಷ್ಟು ಪ್ರೋಟೀನ್ ಅಗತ್ಯವಿದೆ ಎಂಬುದು ಅವರ ವಯಸ್ಸು, ತೂಕ, ದೈಹಿಕ ಶ್ರಮ ಮತ್ತು ಆರೋಗ್ಯದ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಸಾಮಾನ್ಯ ನಿಯಮದಂತೆ, ಒಬ್ಬ ಆರೋಗ್ಯವಂತ ವಯಸ್ಕ ವ್ಯಕ್ತಿಗೆ ಅವರ ಪ್ರತಿ ಕಿಲೋ ತೂಕಕ್ಕೆ ಸುಮಾರು 0.8 ರಿಂದ 1 ಗ್ರಾಂ ಪ್ರೋಟೀನ್ ಅಗತ್ಯವಿರುತ್ತದೆ. ಉದಾಹರಣೆಗೆ, ವ್ಯಕ್ತಿಯ ತೂಕ 60 ಕಿಲೋ ಇದ್ದರೆ, ಅವರಿಗೆ ದಿನಕ್ಕೆ 48 ರಿಂದ 60 ಗ್ರಾಂ ಪ್ರೋಟೀನ್ ಸಾಕಾಗುತ್ತದೆ. ಆದರೆ, ಕಠಿಣ ವ್ಯಾಯಾಮ ಮಾಡುವವರಿಗೆ ಅಥವಾ ಬಾಡಿ ಬಿಲ್ಡರ್‌ಗಳಿಗೆ ಇದಕ್ಕಿಂತ ಹೆಚ್ಚಿನ ಪ್ರೋಟೀನ್ ಬೇಕಾಗಬಹುದು. ಆದರೂ, ವೈದ್ಯರು ಅಥವಾ ನ್ಯೂಟ್ರಿಷನಿಸ್ಟ್ ಸಲಹೆಯಿಲ್ಲದೆ ಯಾವುದೇ ಸಪ್ಲಿಮೆಂಟ್ ತೆಗೆದುಕೊಳ್ಳುವುದು ಅಪಾಯಕಾರಿ.
35
ಮಿತಿಮೀರಿದ ಬಳಕೆಯಿಂದ ಕಿಡ್ನಿ ಮತ್ತು ಜೀರ್ಣಾಂಗಕ್ಕೆ ಅಪಾಯ
"ಹೆಚ್ಚು ಸೇವಿಸಿದರೆ ಹೆಚ್ಚು ಲಾಭ" ಎಂಬ ಆಲೋಚನೆ ಸಂಪೂರ್ಣ ತಪ್ಪು ಎಂದು ತಜ್ಞರು ಎಚ್ಚರಿಸಿದ್ದಾರೆ. ದೇಹವು ಹೆಚ್ಚುವರಿ ಪ್ರೋಟೀನ್‌ಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದಿಲ್ಲ; ಬದಲಿಗೆ ಅದನ್ನು ವಿಘಟನೆಗೊಳಿಸಿ ಹೊರಹಾಕಲು ಪ್ರಯತ್ನಿಸುತ್ತದೆ. ಈ ಪ್ರಕ್ರಿಯೆ ನಿರಂತರವಾಗಿ ಹೆಚ್ಚಾದಾಗ ಮೂತ್ರಪಿಂಡಗಳು ಮತ್ತು ಯಕೃತ್ತಿನ ಮೇಲೆ ತೀವ್ರವಾದ ಒತ್ತಡ ಬೀಳುತ್ತದೆ. ಅತಿಯಾದ ಪ್ರೋಟೀನ್ ಸೇವನೆಯಿಂದ ಕೆಲವರಲ್ಲಿ ಅಪಚನ, ಗ್ಯಾಸ್, ಹೊಟ್ಟೆ ಉಬ್ಬರ, ವಾಕರಿಕೆ, ಮಲಬದ್ಧತೆ ಹಾಗೂ ನಿರ್ಜಲೀಕರಣದ (ಡೀಹೈಡ್ರೇಶನ್) ಅಪಾಯಗಳು ಕಂಡುಬರುತ್ತವೆ. ಸ್ನೇಹಿತರ ಸಲಹೆ ಅಥವಾ ಜಾಹೀರಾತು ನೋಡಿ ಸ್ವಯಂ ನಿರ್ಧಾರದಿಂದ ಸಪ್ಲಿಮೆಂಟ್ ಆರಂಭಿಸುವುದು ಲಾಭದ ಬದಲು ನಷ್ಟವನ್ನೇ ತರುತ್ತದೆ.
ಆಹಾರ ತಜ್ಞರು ಯಾವಾಗಲೂ ನೈಸರ್ಗಿಕ ಆಹಾರ ಪದಾರ್ಥಗಳಿಗೆ ಮೊದಲ ಆದ್ಯತೆ ನೀಡುತ್ತಾರೆ. ಹಾಲು, ಮಜ್ಜಿಗೆ, ಮೊಸರು, ಪನೀರ್, ಬೇಳೆಕಾಳುಗಳು, ಕಡಲೆ, ರಾಜಮಾ, ಸೋಯಾಬೀನ್, ಮೊಟ್ಟೆ, ಮೀನು ಮತ್ತು ಚಿಕನ್‌ಗಳಿಂದ ಅತ್ಯುತ್ತಮ ಗುಣಮಟ್ಟದ ಪ್ರೋಟೀನ್ ಲಭ್ಯವಾಗುತ್ತದೆ. ನೈಸರ್ಗಿಕ ಆಹಾರದಲ್ಲಿ ಪ್ರೋಟೀನ್ ಜೊತೆಗೆ ನಾರಿನಂಶ (Fibre), ವಿಟಮಿನ್ ಮತ್ತು ಮಿನರಲ್ಸ್ ಸಿಗುತ್ತವೆ. ಆದರೆ, ಕೆಲವು ಪ್ರೋಟೀನ್ ಪೌಡರ್‌ಗಳಲ್ಲಿ ಕೇವಲ ಪ್ರೋಟೀನ್ ಮಾತ್ರ ಇರುತ್ತದೆ. ಇದಕ್ಕಿಂತ ಆತಂಕಕಾರಿ ವಿಷಯವೆಂದರೆ, ಮಾರುಕಟ್ಟೆಯಲ್ಲಿ ಸಿಗುವ ಕೆಲವು ಪ್ರೋಟೀನ್ ಪೌಡರ್‌ಗಳಲ್ಲಿ ಅತಿಯಾದ ಸಕ್ಕರೆ, ಕೃತಕ ಫ್ಲೇವರ್‌ಗಳು ಹಾಗೂ ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಆದ್ದರಿಂದ ಗುಣಮಟ್ಟ ಪರಿಶೀಲಿಸದೆ, ಲೇಬಲ್ ಓದದೆ ಸಪ್ಲಿಮೆಂಟ್ ಖರೀದಿಸುವುದು ಅಪಾಯಕಾರಿ.
55
ಮುನ್ನೆಚ್ಚರಿಕೆ ಖಂಡಿತ ಅಗತ್ಯ
ಈಗಾಗಲೇ ಕಿಡ್ನಿ, ಲಿವರ್ ಅಥವಾ ಜೀರ್ಣಕ್ರಿಯೆಗೆ ಸಂಬಂಧಿಸಿದ ಕಾಯಿಲೆ ಇರುವವರು ಯಾವುದೇ ಪ್ರೋಟೀನ್ ಸಪ್ಲಿಮೆಂಟ್ ತೆಗೆದುಕೊಳ್ಳುವ ಮುನ್ನ ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಬೇಕು. ಗರ್ಭಿಣಿಯರು, ಬಾಣಂತಿಯರು, ವೃದ್ಧರು ಹಾಗೂ ಹದಿಹರೆಯದ ಮಕ್ಕಳು ಈ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು. ಕೇವಲ ತೂಕ ಇಳಿಸುವ ಭರದಲ್ಲಿ ಇಡೀ ದಿನ ಬರೀ ಪ್ರೋಟೀನ್ ಆಧಾರಿತ ಡಯಟ್ ಮಾಡುವುದರಿಂದ ದೇಹದಲ್ಲಿ ಇತರ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಕಠಿಣ ಕ್ರೀಡಾಭ್ಯಾಸ ಮಾಡುವವರಿಗೆ ಪ್ರೋಟೀನ್ ಪೌಡರ್ ಪೂರಕವಾಗಿ ಬಳಕೆಯಾಗಬಹುದೇ ಹೊರತು, ಅದು ಎಲ್ಲರಿಗೂ ಅನಿವಾರ್ಯವಲ್ಲ. ದೀರ್ಘಕಾಲೀನ ಆರೋಗ್ಯಕ್ಕಾಗಿ ಫಿಟ್ನೆಸ್ ಹೆಸರಿನಲ್ಲಿ ಅತಿರೇಕದ ನಿರ್ಧಾರಗಳನ್ನು ಕೈಗೊಳ್ಳದೆ, ನೈಸರ್ಗಿಕ ಆಹಾರ ಮತ್ತು ಸಮತೋಲಿತ ಜೀವನಶೈಲಿಗೆ ಒಗ್ಗಿಕೊಳ್ಳುವುದೇ ಅತ್ಯಂತ ಸುರಕ್ಷಿತ ಮಾರ್ಗವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.