
ಇಂದಿನ ಲೈಫ್ ಸ್ಟೈಲ್ ತುಂಬಾ ಬ್ಯುಸಿಯಾಗಿದೆ. ಬಹುತೇಕರು ಒತ್ತಡದ ಜೀವನ ಮಾಡುತ್ತಿದ್ದಾರೆ. ಊಟ, ನಿದ್ದೆ, ವ್ಯಾಯಾಮ ಎಲ್ಲಾ ಅಸಮತೋಲನ ಆಗಿದೆ. ಇದರ ಪರಿಣಾಮ ಮೊದಲು ನಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟದ ಮೇಲೆ ಬೀಳುತ್ತದೆ. ಡಯಾಬಿಟಿಸ್ ಇರೋರಿಗೆ ಸಕ್ಕರೆ ನಿಯಂತ್ರಣ ಕಷ್ಟ. ಅಂಥವರಿಗೆ 10-10-10 ಫಾರ್ಮುಲಾ ಉಪಯುಕ್ತವಾಗಿದೆ.
ಎಂಡೋಕ್ರೈನಾಲಜಿ ಮತ್ತು ಡಯಾಬಿಟಾಲಜಿ ತಜ್ಞರು ಈ ಫಾರ್ಮುಲಾ ಕೊಟ್ಟಿದ್ದಾರೆ. ಇದು ಕಠಿಣ ಡಯಟ್ ಪ್ಲಾನ್ ಅಲ್ಲ. ಲೈಫ್ ಸ್ಟೈಲ್ ಬದಲಾವಣೆ ಆಗಿದೆ. ನೀವು ದಿನಾಲೂ ಸಿಕ್ಕಿದ್ದನ್ನೆಲ್ಲಾ ತಿನ್ನುವ ಬದಲು ಬುದ್ದಿವಂತಿಕೆಯಿಂದ ತಿನ್ನುವುದನ್ನು ಆಯ್ಕೆ ಮಾಡಿಕೊಳ್ಳಬೇಕು. ಆಗಾಗ ನಡೆಯುವ ಅಥವಾ ಆಕ್ಟೀವ್ ಆಗುವ ಮೂಲಕ ದೇಹವನ್ನು ಚುರುಕುಗೊಳಿಸಬೇಕು. ಈ ಮೂಲಕ ಪ್ರತಿದಿನ ದೇಹದ ಸ್ಥಿತಿ ಅರ್ಥ ಮಾಡಿಕೊಳ್ಳಬೇಕು.
10-10-10 ಫಾರ್ಮುಲಾ ಎಂದರೆ ಇದು ಮೂರು ಭಾಗಗಳನ್ನ ಹೊಂದಿರುವ ಸರಳ ಸಲಹೆಯಾಗಿದೆ.
ಮೊದಲ ಭಾಗ:
ಊಟಕ್ಕೆ 10 ನಿಮಿಷ ಮೊದಲು ದೇಹವನ್ನು ಸಿದ್ಧಪಡಿಸಿಕೊಳ್ಳಬೇಕು. ನೀರು ಕುಡಿಯುವುದು, ಹಾಯಾಗಿ ಉಸಿರಾಡುವುದು, ಅಗತ್ಯವಿದ್ದರೆ ಸಕ್ಕರೆ ಮಟ್ಟ ಪರೀಕ್ಷಿಸುವುದು ಮಾಡಬೇಕು. ಇದರಿಂದ ಮನಸ್ಸು ತಿನ್ನುವ ಕ್ರಿಯೆಯಲ್ಲಿ ಪೂರ್ತಿಯಾಗಿ ತೊಡಗುತ್ತದೆ. ಜೊತೆಗೆ, ಜಾಸ್ತಿ ತಿನ್ನುವುದನ್ನು ತಡೆಯಬಹುದು.
ಎರಡನೇ ಭಾಗ:
ಊಟ ಆದ್ಮೇಲೆ 10 ನಿಮಿಷ ಸಣ್ಣ ನಡಿಗೆ. ಕಷ್ಟದ ವ್ಯಾಯಾಮ ಬೇಡ. ಊಟದ ನಂತರ 10 ನಿಮಿಷ ನಡಿಗೆ ಜೀರ್ಣಕ್ರಿಯೆ ಸುಧಾರಿಸುತ್ತೆ, ರಕ್ತದಲ್ಲಿ ಗ್ಲೂಕೋಸ್ ಮಟ್ಟ ಸಮತೋಲನದಲ್ಲಿ ಇಡುತ್ತೆ ಅಂತ ಸಂಶೋಧನೆ ತೋರಿಸಿದೆ.
ಟೈಪ್ 2 ಡಯಾಬಿಟಿಸ್ ಇರೋರಿಗೆ ಇದು ತುಂಬಾ ಉಪಯುಕ್ತ. ಇನ್ಸುಲಿನ್‌ಗೆ ದೇಹದ ಪ್ರತಿಕ್ರಿಯೆ ಸುಧಾರಿಸಿ ಸಕ್ಕರೆ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.
ಮೂರನೇ ಭಾಗ:
ಪ್ರತಿದಿನ 10 ನಿಮಿಷ ವಿಶ್ಲೇಷಣೆ ಮಾಡುವುದರಿಂದ, ಆರೋಗ್ಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಳ್ಳಬಹುದು. ಯಾವ ಆಹಾರ ತಿಂದ ಮೇಲೆ ಸಕ್ಕರೆ ಜಾಸ್ತಿ ಆಗುತ್ತೆ ಅಂತ ಗೊತ್ತಾಗಿ, ಮುಂದಿನ ದಿನಗಳಲ್ಲಿ ಅದನ್ನು ಕಡಿಮೆ ಮಾಡಬಹುದು. ಮಲ್ಟಿ ಗ್ರೇನ್, ಕಡಿಮೆ ಕಾರ್ಬೋಹೈಡ್ರೇಟ್ ಆಹಾರಕ್ಕೆ ಆದ್ಯತೆ ನೀಡಬಹುದು.
ಈ ಫಾರ್ಮುಲಾ ವಿಶೇಷವೆಂದರೆ ದಿನನಿತ್ಯದ ಜೀವನದಲ್ಲಿ ದೊಡ್ಡ ಬದಲಾವಣೆಗಳ ಅಗತ್ಯವಿಲ್ಲ. ಮೇಲಿನ ಮೂರೂ ಕ್ರಿಯೆಗಳನ್ನು ಮಾಡಲು ಕೇವಲ ತಲಾ 10 ನಿಮಿಷಗಳು ಮಾತ್ರ ಸಾಕು. ಹೀಗಾಗಿ, ಇದಕ್ಕೆ 10-10-10 ಫಾರ್ಮುಲಾ ಎಂದು ಹೇಳಲಾಗುತ್ತದೆ.
ಬೆಳಗ್ಗೆ ಒಂದು ಕಪ್ ನೀರು, ಮಧ್ಯಾಹ್ನ ಊಟದ ನಂತರ ನಡಿಗೆ, ರಾತ್ರಿ ಮಲಗುವ ಮುನ್ನ ಅಭ್ಯಾಸಗಳ ವಿಶ್ಲೇಷಣೆ. ಇವೆಲ್ಲ ಸಾಮಾನ್ಯವಾಗಿ ಎಲ್ಲರೂ ಮಾಡಬಹುದಾದ ಕ್ರಿಯೆಗಳಾಗಿವೆ. ಆದರೆ, ಇವೇ ಆರೋಗ್ಯ ರಕ್ಷಣೆಗೆ ಸಹಾಯ ಮಾಡುತ್ತವೆ.
ಈ 10-10-10 ನಿಯಮಗಳು ಕೇವಲ ಡಯಾಬಿಟಿಸ್ ಇರೋರಿಗೆ ಮಾತ್ರವಲ್ಲ, ಇತರರಿಗೂ ಉಪಯುಕ್ತ ಆಗುತ್ತದೆ. ಏಕೆಂದರೆ ಇದು ಆಹಾರದ ಬಗ್ಗೆ ಶಿಸ್ತು ತರುತ್ತದೆ. ಹಸಿವಿಲ್ಲದಿದ್ದರೂ ತಿನ್ನುವುದು, ಒತ್ತಡದಲ್ಲಿ ತಿನ್ನುವುದು ಇಂಥ ಅಭ್ಯಾಸಗಳನ್ನು ನಿಯಂತ್ರಿಸಬಹುದು.