ಯುಎಇ ಜೈಲಿನಲ್ಲಿ 18 ತಿಂಗಳಿಂದ ಬಂಧನದಲ್ಲಿರುವ ಸಹೋದರ ವಿಕ್ರಾಂತ್ ಜೇಟ್ಲಿ ಬಿಡುಗಡೆಗೆ ನಟಿ ಸೆಲೀನಾ ಜೇಟ್ಲಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕರಣದ ವಿಚಾರಣೆ ವೇಳೆ ಸೆಲೀನಾ ಮತ್ತು ಅವರ ಅತ್ತಿಗೆ ಚಾರುಲ್ ಜೇಟ್ಲಿ ನಡುವಿನ ಕಲಹ ಬಹಿರಂಗವಾಗಿದೆ.
ವಿಕ್ರಾಂತ್ ಜೇಟ್ಲಿ ಅವರು ಸೋದರಿ ಸೆಲೀನಾ ಜೊತೆ ಮಾತಕತೆ ನಡೆಸಲು ಬಯಸುವುದಿಲ್ಲ
ಕಳೆದ 18 ತಿಂಗಳುಗಳಿಂದ ಯುಎಇ ಜೈಲಿನಲ್ಲಿ ಬಂಧನದಲ್ಲಿರುವ ತಮ್ಮ ಸೋದರ ಬಿಡುಗಡೆಗೆ ಕೋರ್ಟ್ ಮೆಟ್ಟಿಲೇರಿರುವ ನಟಿ ಸೆಲೀನಾ ಜೇಟ್ಲಿ ವಿರುದ್ಧ ಸ್ವತಃ ಅತ್ತಿಗೆಯೇ ಹಲವು ಆರೋಪಗಳನ್ನು ಮಾಡಿದ್ದಾರೆ. ನಟಿ ಸೆಲೀನಾ ಜೇಟ್ಲಿ ಅವರ ಸಹೋದರ ನಿವೃತ್ತ ಮೇಜರ್ ವಿಕ್ರಾಂತ್ ಜೇಟ್ಲಿ ಅವರು ಕಳೆದ 18 ತಿಂಗಳುಗಳಿಂದ ಯುಎಇಯ ಜೈಲಿನಲ್ಲಿ ಬಂಧನದಲ್ಲಿದ್ದಾರೆ ಎಂದು ದೆಹಲಿ ಹೈಕೋರ್ಟ್‌ಗೆ ಸೆಲೀನಾ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯ ನಟಿ ಸೆಲಿನಾ ಜೇಟ್ಲಿ ಅವರ ಸಹೋದರ ವಿಕ್ರಾಂತ್ ಜೇಟ್ಲಿ ಅವರು ಸೋದರಿ ಸೆಲೀನಾ ಜೊತೆ ಮಾತಕತೆ ನಡೆಸಲು ಬಯಸುವುದಿಲ್ಲ ಎಂದು ದೆಹಲಿ ಹೈಕೋರ್ಟ್‌ಗೆ ವಿದೇಶಾಂಗ ಸಚಿವಾಲಯವು ಮಾಹಿತಿ ನೀಡಿದೆ.
ತನ್ನ ಸಹೋದರನನ್ನು ಯುಎಇಯಲ್ಲಿ ಅಕ್ರಮವಾಗಿ ಅಪಹರಿಸಿ ಬಂಧಿಸಲಾಗಿದೆ ಎಂದು ಹೇಳಿಕೊಂಡ ಸೆಲೀನಾ ಜೇಟ್ಲಿಯಿಂದ ಸಂವಹನಕ್ಕಾಗಿ ಅರ್ಜಿಯನ್ನು ನೀಡುವಂತೆ ನ್ಯಾಯಾಲಯವು ಸಚಿವಾಲಯಕ್ಕೆ ಕೇಳಿದ್ದಕ್ಕೆ ಪ್ರತಿಕ್ರಿಯೆಯಾಗಿ ವಿದೇಶಾಂಗ ಸಚಿವಾಲಯವು ಈ ಮಾಹಿತಿ ನೀಡಿದೆ. ಈ ಪ್ರಕರಣದಲ್ಲಿ ವಿಕ್ರಾಂತ್ ಅವರ ಪತ್ನಿ ಚಾರುಲ್ ಜೇಟ್ಲಿ ಅವರ ವಾದವನ್ನು ನ್ಯಾಯಾಲಯ ಆಲಿಸಿತ್ತು. ಅವರು ತನ್ನ ಪತಿ ಹಾಗೂ ಅವರ ಸೋದರಿ ಸೆಲೀನಾ ಜೇಟ್ಲಿ ಮಧ್ಯೆ ಸಂಬಂಧ ಹದಗೆಟ್ಟಿರುವುದಾಗಿ ಹೇಳಿದರು. ಈ ಪ್ರಕರಣದಲ್ಲಿ ಮಾಧ್ಯಮಗಳ ಪ್ರಚಾರಕ್ಕೆ ತಡೆ ನೀಡುವಂತೆ ಈ ಹಿಂದೆ ಸೆಲೀನಾ ಅತ್ತಿಗೆ ಚಾರುಲ್ ಜೇಟ್ಲಿ ಮನವಿ ಮಾಡಿದ್ದರು. ಆದರೆ ಆ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು.
ಈ ಪ್ರಕರಣದ ವಿಚಾರಣೆ ವೇಳೆ ಸೆಲೀನಾ ಜೇಟ್ಲಿ ಹಾಗೂ ಅವರ ಅತ್ತಿಗೆ ಚಾರುಲ್ ಜೇಟ್ಲಿ ನಡುವಣ ಕಲಹ ಬೀದಿಗೆ ಬಂದಿದೆ. ಅತ್ತಿಗೆ ಚಾರುಲ್ ಅಣ್ಣನನ್ನು ಬಿಡಿಸುವುದಕ್ಕೆ ಅಡ್ಡಿಯಾಗಿದ್ದಾರೆ ಎಂದು ಸೆಲೀನಾ ಹೇಳಿದರೆ ಇತ್ತ ಚಾರುಲ್, ಸೆಲೀನಾ ನನ್ನ ಬದುಕನ್ನು ನನ್ನ ಒಪ್ಪಿಗೆ ಇಲ್ಲದೇ ಮೀಡಿಯಾದ ಸರ್ಕಸ್ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು. ಹೀಗಾಗಿ ಸೆಲೀನಾ ಹಾಗೂ ಚಾರುಲ್ ಜೇಟ್ಲಿ ಇಬ್ಬರ ವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಪುರುಷೀಂದ್ರ ಕುಮಾರ್ ಕೌರವ್, ವಿಕ್ರಾಂತ್ ಸಹೋದರಿ ಮತ್ತು ಪತ್ನಿ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ವಿಕ್ರಾಂತ್ ಅವರನ್ನು ಬಿಡುಗಡೆ ಮಾಡಲು ಒಟ್ಟಿಗೆ ಕೆಲಸ ಮಾಡುವಂತೆ ಹೇಳಿದರು.
ವಿದೇಶಾಂಗ ಸಚಿವಾಲಯದ ಪರವಾಗಿ ಹಾಜರಾದ ಸಿಜೆಎಸ್‌ಸಿ ನಿಧಿ ರಾಮನ್
ವಿದೇಶಾಂಗ ಸಚಿವಾಲಯದ (MEA)ಪರವಾಗಿ ಹಾಜರಾದ ಸಿಜೆಎಸ್‌ಸಿ ನಿಧಿ ರಾಮನ್ ಅವರು ನ್ಯಾಯಾಲಯದಲ್ಲಿ ವಿಕ್ರಾಂತ್ ನಿಯಮಿತವಾಗಿ ಸಂವಹನ ನಡೆಸುತ್ತಿದ್ದಾರೆ. ಸೆಲೀನಾ ಜೊತೆ ಮಾತುಕತೆಗೆ ಅವರು ನಿರಾಕರಿಸಿದ್ದು, ಅವರು ತಮ್ಮ ಪತ್ನಿ ಜೊತೆ ಸಂವಹನ ನಡೆಸುತ್ತಿದ್ದಾರೆ. ಮುಂದಿನದು ಫೆಬ್ರವರಿ 13 ರಂದು. ಅವರು ಅವರೊಂದಿಗೆ ಸಂವಹನ ನಡೆಸಲು ನಿರಾಕರಿಸುತ್ತಾರೆ. ಅವರು ಪತ್ನಿಯೊಂದಿಗೆ ಸಂವಹನ ನಡೆಸುತ್ತಾರೆ, ಆದರೆ ಅವರು ಪವರ್ ಆಫ್ ಅಟಾರ್ನಿಗೆ ಸಹಿ ಹಾಕಲು ನಿರಾಕರಿಸಿದ್ದಾರೆ. ಹೀಗಾಗಿ ಸಚಿವಾಲಯವು ನಡುವೆ ಸಿಲುಕಿಕೊಂಡಿದೆ. ನಾವು ಅವರಿಗೆ 4 ಹೆಸರುಗಳನ್ನು ಮತ್ತು ಪತ್ನಿ ಸೂಚಿಸಿದ ಕಾನೂನು ಸಂಸ್ಥೆಗಳನ್ನು ಸೂಚಿಸುತ್ತೇವೆ ಮತ್ತು ಒಂದನ್ನು ಆಯ್ಕೆ ಮಾಡಲು ಕೇಳುತ್ತೇವೆ ಎಂದು ಹೇಳಿದರು.
ತನ್ನ ಮದುವೆ ಮುರಿದು ಬಿದ್ದಿದ್ದರೂ ನ್ಯಾಯಾಲಯದ ಮೊರೆ ಹೋಗಿದ್ದೆ: ಸೆಲೀನಾ ಜೇಟ್ಲಿ
ವಿಕ್ರಾಂತ್ ಅವರ ಪತ್ನಿಯ ವಕೀಲರು ನ್ಯಾಯಾಲಯಕ್ಕೆ ತಿಳಿಸಿರುವಂತೆ, ಚಾರುಲ್ ಅವರು ಸೆಲೀನಾ ಜೊತೆ ಮಾತನಾಡಿದ್ದಾರೆ. ಈ ಮಾತುಕತೆಯಲ್ಲಿ ಈ ಪ್ರಕರಣದಲ್ಲಿ ಯುಎಇಯ ರಾಷ್ಟ್ರೀಯ ಭದ್ರತೆ' ಭಾಗಿಯಾಗಿದೆ ಎಂದು ಅವರಿಗೆ ತಿಳಿಸಲಾಗಿದೆ. ಅವರು ರಾಯಭಾರ ಕಚೇರಿಯಿಂದ ಸಹಾಯ ಪಡೆಯುವ ಬದಲು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ಹೇಳಿದರು.
ನ್ಯಾಯಾಲಯಕ್ಕೆ ಹಾಜರಾದ ಸೆಲೀನಾ ಸ್ವತಃ ನನ್ನ ಮದುವೆ ಮುರಿದು ಬಿದ್ದಿದ್ದರು ತನ್ನ ಸೋದರನ ಬಿಡುಗಡೆಗಾಗಿ ನಾನೇ ಎಲ್ಲವನ್ನೂ ಮಾಡಿದ್ದೇನೆ. ಆದರೆ ಸೋದರನ ಪತ್ನಿಯೇ ಅಡ್ಡಿಯಾಗಿದ್ದಾರೆ. ನಾನು 2025 ರಲ್ಲಿ ನ್ಯಾಯಾಲಯದ ಮುಂದೆ ಬಂದೆ. ವಿಕ್ರಾಂತ್‌ಗೆ ಸಹಾಯ ಬೇಕು ಅಷ್ಟೇ ಎಂದು ಹೇಳಿದರು. ಇತ್ತ ವೀಡಿಯೊ ಕರೆಯ ಮೂಲಕ ಹಾಜರಾದ ಚಾರುಲ್ ಅವರನ್ನು ನ್ಯಾಯಾಧೀಶರು ವಿಕ್ರಾಂತ್‌ನನ್ನು ಜೈಲಿನಿಂದ ಬಿಡುಗಡೆ ಮಾಡಲು ಬಯಸುತ್ತೀರಾ ಎಂದು ಕೇಳಿದಕ್ಕೆ ಅವರು ಒಬ್ಬ ಹೆಂಡತಿಯಾಗಿ ಅದನ್ನು ಬಯಸದಿರಲು ಹೇಗೆ ಸಾಧ್ಯ ಎಂದು ಹೇಳಿದ್ದಾರೆ.
ಇದೇ ವೇಳೆ ವಿಕ್ರಾಂತ್ ಪರವಾಗಿ ಪ್ರತಿನಿಧಿಸಲು ಯುಎಇ ಸಂಸ್ಥೆಗೆ ತಾವು ಪವರ್ ಆಫ್ ಅಟಾರ್ನಿ ಅಧಿಕಾರ ನೀಡದಿರುವ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಚಾರುಲ್ ತಾನು ಎಂಎಇ ಮತ್ತು ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರುವುದಾಗಿ ಹೇಳಿದ್ದಾರೆ. ಹಾಗಿದ್ದರೆ ಈ ವಿಚಾರವಾಗಿ ನೀವು ನಾದಿನಿ ಸೆಲೀನಾ ಜೊತೆಯಾಗಿ ಏಕೆ ಕೆಲಸ ಮಾಡುವುದಿಲ್ಲ ಎಂದು ಪ್ರಶ್ನಿಸಿದಾಗ ಅವರು ನಮ್ಮ ಒಪ್ಪಿಗೆ ಇಲ್ಲದೇ ನಮ್ಮ ಜೀವನ ಹಾಗೂ ಸಂಬಂಧವನ್ನು ಮೀಡಿಯಾ ಸರ್ಕಸ್ ಆಗಿ ಮಾಡಿದ್ದಾರೆ ಎಂದು ಹೇಳಿದರು.
ಆದರೆ ನ್ಯಾಯಾಲಯ ಇದು ಕೌಟುಂಬಿಕ ವಿವಾದವಲ್ಲ ಎಂದು ಹೇಳಿ ವಿದೇಶಾಂಗ ಸಚಿವಾಲಯದ ಸಹಾಯ ಪಡೆಯುವಂತೆ ಕೇಳಿಕೊಂಡಿತು. ಸೆಲೀನಾ ಹಾಗೂ ಅವರ ಸೋದರನ ಮಧ್ಯೆ ಸಂಬಂಧ ಹಳಸಿದ್ದರು, ತಾನು 2024 ರಿಂದಲೂ ಸೆಲೀನಾ ಜೊತೆ ಸಂಪರ್ಕದಲ್ಲಿದ್ದೇನೆ ಎಂದು ಚಾರುಲ್ ಹೇಳಿದ್ದಾರೆ. ವಿಕ್ರಾಂತ್ ಅವರನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಇಬ್ಬರು ಒಟ್ಟಾಗಿ ಕೆಲಸ ಮಾಡಲು ಇಬ್ಬರ ನಡುವಿನ ಸಂಬಂಧವನ್ನು ಮರುಸ್ಥಾಪಿಸುವಂತೆ ನ್ಯಾಯಾಲಯ ಕೇಳಿದೆ.
ಪ್ರಕರಣದ ವರದಿ ಮಾಡುವುದನ್ನು ತಡೆಯಲು ಚಾರುಲ್ ಪರ ವಕೀಲರು ಕೋರಿದಾಗ, ಮಾಧ್ಯಮಗಳ ಮೇಲೆ ನಿಷೇಧ ಹೇರಲು ನ್ಯಾಯಾಲಯ ನಿರಾಕರಿಸಿತು. ಆದರೆ ನ್ಯಾಯಾಲಯದ ಅನುಮತಿಯಿಲ್ಲದೆ ಮಾಧ್ಯಮಗಳೊಂದಿಗೆ ಸಂವಹನ ನಡೆಸಬಾರದು ಎಂದು ಸೆಲೀನಾ ಮತ್ತು ಚಾರುಲ್ ಅವರಿಗೆ ತಿಳಿಸಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.