ಸರ್ಕಾರದ ಈ ನಿರ್ಧಾರದಿಂದ ಜನರಿಗೆ ಹೊರೆ ಹೆಚ್ಚಾಗುತ್ತದೆ ಎಂಬ ವಾದಗಳಿವೆ. ಉದಾಹರಣೆಗೆ, 20 ಲಕ್ಷ ರೂ.ಗೆ ಕಾರನ್ನು ಖರೀದಿಸಿದ ವ್ಯಕ್ತಿ ಕೆಲವು ವರ್ಷಗಳ ನಂತರ 4 ಲಕ್ಷ ರೂ.ಗೆ ಮಾರಾಟ ಮಾಡಿದರೆ, 16 ಲಕ್ಷ ರೂ. ನಷ್ಟವಾಗುತ್ತದೆ. ಈ 16 ಲಕ್ಷ ರೂ. ಮೇಲೆ 18% ಜಿಎಸ್‌ಟಿ ಅಂದರೆ 2.88 ಲಕ್ಷ ರೂ. ತೆರಿಗೆ ಕಟ್ಟಬೇಕಾಗುತ್ತದೆ. ಹಾಗಾಗಿ, ಕಾರನ್ನು ಉಚಿತವಾಗಿ ಕೊಡುವುದೇ ಲೇಸು ಅಥವಾ ಮನೆಯಲ್ಲೇ ಇಟ್ಟುಕೊಳ್ಳುವುದೇ ಒಳ್ಳೆಯದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳು ಹರಿದಾಡುತ್ತಿವೆ. ಹೀಗೆ ಹೇಳುವವರಲ್ಲಿ ಉನ್ನತ ವ್ಯಾಸಂಗ ಮಾಡಿರುವವರೂ ಇದ್ದಾರೆ ಎಂಬುದು ಆಶ್ಚರ್ಯಕರ. ವಾಸ್ತವವಾಗಿ, ಇದು ತಪ್ಪು ಮಾಹಿತಿಯ ಪ್ರಚಾರ.
ವಾಸ್ತವವೇನು?
1. ಇಬ್ಬರು ವ್ಯಕ್ತಿಗಳ ನಡುವೆ ನೇರವಾಗಿ ನಡೆಯುವ ಕಾರು ಖರೀದಿ-ಮಾರಾಟಕ್ಕೆ ಜಿಎಸ್‌ಟಿ ವಿನಾಯಿತಿ ಇದೆ.
2. ಬಳಸಿದ ಕಾರುಗಳನ್ನು ಮಾರಾಟ ಮಾಡುವ ಡೀಲರ್‌ಗಳು ಮಾತ್ರ 18% ಜಿಎಸ್‌ಟಿ ಕಟ್ಟಬೇಕು. ಅದೂ ಕೂಡ ಒಟ್ಟು ಮಾರಾಟ ಮೊತ್ತದ ಮೇಲೆ ಅಲ್ಲ, ಲಾಭದ ಮೇಲೆ ಮಾತ್ರ. ಉದಾಹರಣೆಗೆ, ಡೀಲರ್ 8 ಲಕ್ಷ ರೂ.ಗೆ ವಿದ್ಯುತ್ ಕಾರನ್ನು ಖರೀದಿಸಿ, 9 ಲಕ್ಷ ರೂ.ಗೆ ಮಾರಾಟ ಮಾಡಿದರೆ, 1 ಲಕ್ಷ ರೂ. ಲಾಭದ ಮೇಲೆ 18% ಜಿಎಸ್‌ಟಿ ಕಟ್ಟಬೇಕು.
ಬಳಸಿದ ಪೆಟ್ರೋಲ್, ಡೀಸೆಲ್, ವಿದ್ಯುತ್ ವಾಹನಗಳ ತೆರಿಗೆ ವಿಧಾನವನ್ನು ಏಕರೂಪಗೊಳಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಎಸ್‌ಟಿ ಕೌನ್ಸಿಲ್ ಸ್ಪಷ್ಟಪಡಿಸಿದೆ. ಆದರೆ, ಈ ನಿರ್ಧಾರ ಬಳಸಿದ ಕಾರುಗಳ ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿದೆ. ತೆರಿಗೆ ಹೊರೆ ಹೆಚ್ಚಾದರೆ, ಅಂತಿಮವಾಗಿ ಗ್ರಾಹಕರೇ ಹೊರಬೇಕಾಗುತ್ತದೆ. ಇದರಿಂದ ಬಳಸಿದ ಕಾರುಗಳ ಮಾರಾಟ ಕುಂಠಿತವಾಗಬಹುದು ಎಂಬ ಆತಂಕವಿದೆ.
ನನ್ನ ಅಭಿಪ್ರಾಯ:
ನಮ್ಮ ದೇಶದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಜಿಎಸ್‌ಟಿ ತೆರಿಗೆ ವಿಧಾನ, ಸ್ಲ್ಯಾಬ್‌ಗಳು ಸರಿಯಿಲ್ಲ. ಹೊಸ ಜಿಎಸ್‌ಟಿ ನೋಂದಣಿಗೆ ಲಂಚ ಕೊಡಬೇಕಾಗುತ್ತದೆ, ನೋಂದಣಿಗಾಗಿ ತಿಂಗಳುಗಟ್ಟಲೆ ಕಾಯಬೇಕಾಗುತ್ತದೆ. ಹೊಸ ವ್ಯಾಪಾರ ಆರಂಭಿಸುವವರಿಗೆ ಇದು ಶಾಪವಾಗಿದೆ. 2014ರಲ್ಲಿ 142ನೇ ಸ್ಥಾನದಲ್ಲಿದ್ದ ಈಸ್ ಆಫ್ ಡೂಯಿಂಗ್ ಬಿಸಿನೆಸ್ 2021ರಲ್ಲಿ 63ಕ್ಕೆ ಬಂದಿದೆ ಎಂದು ಹೇಳುತ್ತಿದ್ದರೂ, ವಾಸ್ತವದಲ್ಲಿ ಪರಿಸ್ಥಿತಿ ಇನ್ನೂ ಹೀನಾಯವಾಗಿದೆ ಎಂಬುದು ನನ್ನ ಅನುಭವ.
ಒಂದೇ ದೇಶ, ಒಂದೇ ತೆರಿಗೆ ಎಂಬ ಘೋಷಣೆಯೊಂದಿಗೆ ಜಾರಿಗೆ ಬಂದ ಜಿಎಸ್‌ಟಿ ವ್ಯಾಪ್ತಿಗೆ ಇನ್ನೂ ಮದ್ಯ, ಪೆಟ್ರೋಲಿಯಂ ಉತ್ಪನ್ನಗಳು ಬಂದಿಲ್ಲ. ಇದಕ್ಕೆ ರಾಜ್ಯಗಳೇ ಅಡ್ಡಿ ಎಂಬ ನೆಪ ಹೇಳಲಾಗುತ್ತಿದೆ. ಇದರಿಂದ ಜನರಿಂದ ತೆರಿಗೆ ರೂಪದಲ್ಲಿ ಹಣ ದೋಚುವ ಉದ್ದೇಶ ಸ್ಪಷ್ಟವಾಗುತ್ತದೆ. ಮೋದಿ ಸರ್ಕಾರ ನಾಲ್ಕನೇ ಬಾರಿ ಅಧಿಕಾರಕ್ಕೆ ಬರಬೇಕಾದರೆ, ಜನರಲ್ಲಿ ಅಪಖ್ಯಾತಿ ಗಳಿಸಿರುವ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರನ್ನು ಬದಲಾಯಿಸಬೇಕು. ಜಿಎಸ್‌ಟಿ, ಆದಾಯ ತೆರಿಗೆಯನ್ನು ಸರಳಗೊಳಿಸಿ ಮಧ್ಯಮ ವರ್ಗಕ್ಕೆ ಪರಿಹಾರ ನೀಡಬೇಕು.
ನಾಗಾರ್ಜುನ ಮುನ್ನೂರು ಅವರ ಫೇಸ್‌ಬುಕ್ ಪೋಸ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ.