ಹಣ್ಣು (Fruits)ಗಳನ್ನು ಬಳಸಿ ಜ್ಯೂಸ್, ಮಿಲ್ಕ್‌ಶೇಕ್ ಮಾಡೋದು ನೋಡಿರ್ತೀರಾ. ಅಷ್ಟೇ ಯಾಕೆ, ಕೇಕ್, ಹಲ್ವಾಗಳನ್ನು ಹಣ್ಣಿನಿಂದ ತಯಾರಿಸ್ತಾರೆ. ಆದ್ರೆ ಹಣ್ಣಿಂದ ಟೀ (Tea) ಮಾಡಿದ್ರೆ ಹೇಗಿರುತ್ತೆ. ಅರೆ ಏನ್ ಹೇಳ್ತಿದ್ದೀರಾ ಅಂತ ಬೆಚ್ಚಿಬೀಳ್ಬೇಡಿ. ಗುಜರಾತಿನಲ್ಲೊಬ್ಬ ಚಾಯ್ವಾಲ ಫ್ರುಟ್ಸ್ ಟೀ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ (Viral) ಆಗ್ತಿದೆ
ಪ್ರಪಂಚದ ಅತ್ಯಂತ ಜನಪ್ರಿಯ ಪಾನೀಯಗಳಲ್ಲಿ ಒಂದಾದ ಚಹಾ (Tea)ವು ನೀರಿನ ನಂತರ ಜನರು ಅತಿ ಹೆಚ್ಚು ಸೇವಿಸುವ ಪಾನೀಯವಾಗಿದೆ. ಚಹಾ ಅನೇಕ ಆರೋಗ್ಯ (Health) ಪ್ರಯೋಜನಗಳಿಂದ ಕೂಡಿದೆ. ವಿವಿಧ ರೀತಿಯ ಚಹಾ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಒಂದು ಕಪ್ ಚಹಾದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸುವುದು ಮತ್ತು ಕೊನೆಗೊಳಿಸುವುದು ತುಂಬಾ ಉತ್ತಮವಾಗಿದೆ.
ಚಹಾದಲ್ಲಿ ಹಲವು ವಿಧಗಳಿವೆ. ಬ್ಲ್ಯಾಕ್ ಟೀ, ಮಿಲ್ಕ್ ಟೀ, ಜಿಂಜರ್ ಟೀ, ತುಳಸಿ ಟೀ, ಮಸಾಲ ಟೀ ಹೀಗೆ ವಿವಿಧ ರೀತಿಯ ಚಹಾವನ್ನು ತಯಾರಿಸಿ ಕುಡಿಯುತ್ತಾರೆ. ಮಾತ್ರವಲ್ಲ ಪರಿಮಳಭರಿತವಾದ ಹೂವಿನ ಚಹಾವನ್ನು ಮಾಡಿ ಸವಿಯುವವರೂ ಇದ್ದಾರೆ. ಆದ್ರೆ ಹಣ್ಣುಗಳಿಂದಲೂ ಚಹಾವನ್ನು ತಯಾರಿಸುತ್ತಾರೆ ಅನ್ನೋದು ನಿಮ್ಗೆ ಗೊತ್ತಾ ?
ಕೆಲವರಿಗೆ ಟೀ, ಕಾಫಿ ಇಲ್ಲವೆಂದರೆ ಕೈ-ಕಾಲೇ ಆಡುವುದಿಲ್ಲ. ಆದರೆ, ಈ ಫ್ರೂಟ್ ಟೀ (Fruit Tea) ಕುಡಿಯಲು ನಿಮಗೆ ಸ್ವಲ್ಪ ಹೆಚ್ಚೇ ಧೈರ್ಯ ಬೇಕು. ನೀವು ಚಹಾ ಪ್ರಿಯರಾಗಿದ್ದರೆ ನೀವು ವಿಡಿಯೋವನ್ನು ನೋಡಲೇಬೇಕು. ವೈರಲ್ ಆಗಿರುವ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಹಣ್ಣಿನಿಂದ ಚಹಾ ಮಾಡುತ್ತಿದ್ದುದನ್ನು ಕಾಣಬಹುದು. ಹೌದು, ನೀವು ಸೇಬು (Apple), ಸಪೋಟ, ಬಾಳೆಹಣ್ಣಿನ ಚಹಾ ಎಂದಾದರೂ ಕುಡಿದಿದ್ದೀರಾ? ಹಣ್ಣುಗಳಿಂದ ಹೀಗೂ ಟೀ ಮಾಡಬಹುದಾ ಎಂದು ನಿಮಗೆ ಆಶ್ಚರ್ಯವಾಗಬಹುದು. ಆದ್ರೆ ವೈರಲ್ ಆಗಿರುವ ವೀಡಿಯೋವೊಂದರಲ್ಲಿ ವ್ಯಾಪಾರಿ ಹಣ್ಣುಗಳಿಂದ ಟೀ ತಯಾರಿಸುವುದನ್ನು ನೋಡಬಹುದು.
Viral Video: ಗುಜರಾತಿಯಲ್ಲಿ ಫುಡ್ ಆರ್ಡರ್ ಮಾಡಿದ ಅಮೇರಿಕನ್ ಯೂಟ್ಯೂಬರ್ !
ನಮ್ಮಲ್ಲಿ ಆಹಾರ (Food)ದಲ್ಲಿ ಹೊಸ ಪ್ರಯೋಗಗಳು ಹೊಸದೇನೂ ಅಲ್ಲ. ಈ ಹಿಂದೆಯೂ ಹಲವರು ವಿಚಿತ್ರ ಆಹಾರಗಳನ್ನು ತಯಾರಿಸಿ ನೆಟ್ಟಿಗರು ಹುಬ್ಬೇರುವಂತೆ ಮಾಡಿದ್ದಾರೆ. ಐಸ್‌ಕ್ರೀಂ ಮಸಾಲೆ ದೋಸೆ, ಮ್ಯಾಗಿ ಮಿಲ್ಕ್ ಶೇಕ್ ಹೀಗೆ ಹಲವು ಆಹಾರಗಳು ಈ ಹಿಂದೆಯೂ ವೈರಲ್ (Viral) ಆಗಿದ್ದವು. ಸದ್ಯ ಈ ಫ್ರುಟ್ ಟೀ ಎಲ್ಲರ ಹುಬ್ಬೇರುವಂತೆ ಮಾಡ್ತಿದೆ. ಗುಜರಾತ್‌ನ ಸೂರತ್‌ನ ರಸ್ತೆ ಬದಿ ವ್ಯಾಪಾರಿಯೊಬ್ಬರು ಬಾಳೆಹಣ್ಣು, ಸಪೋಟ ಮತ್ತು ಸೇಬು ಹಣ್ಣು ಸೇರಿಸಿ ಚಹಾ ಮಾಡಿದ್ದಾರೆ. foodie_incarnate ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಆಹಾರ ಬ್ಲಾಗರ್ ಅಮರ್ ಸಿರೋಹಿ ಇದನ್ನು ಪೋಸ್ಟ್ ಮಾಡಿದ್ದಾರೆ.
ವೈರಲ್ ಆಗಿರುವ ವೀಡಿಯೋದಲ್ಲಿ ವ್ಯಾಪಾರಿ ಟೀ ಪಾತ್ರೆಯಲ್ಲಿದ್ದ ಹಾಲಿಗೆ ಕತ್ತರಿಸಿದ ಬಾಳೆ ಹಣ್ಣು, ಟೀ ಪುಡಿ, ಸಪೋಟ ಮತ್ತು ಸೇಬು ಹಣ್ಣನ್ನು ಸೇರಿಸುತ್ತಾರೆ. ನಂತರ ಇದಕ್ಕೆ ಟೀ ಪುಡಿಯನ್ನು ಸೇರಿಸುವುದನ್ನು ನೋಡಬಹುದಾಗಿದೆ. ನಂತರ ಆ ಹಣ್ಣುಗಳ ಜೊತೆ ಶುಂಠಿಯನ್ನು ತುರಿದು, ಚಹಾವನ್ನು ಕುದಿಸಲಾಗುತ್ತದೆ. ಹೀಗೆ ತಯಾರಾದ ಟೀಯನ್ನು ಸೋಸಿ ಗ್ರಾಹಕರಿಗೆ ನೀಡಲಾಗುತ್ತದೆ. ಇಷ್ಟು ಹಣ್ಣು ಸೇರಿಸಿದ ನಂತರವೂ ಇದು ಸಾಮಾನ್ಯ ಚಹಾದಂತೆ ಕಾಣುತ್ತದೆ.
ಇವರು ಕಾಫಿ ಜತೆ ಮಿಕ್ಸ್ ಮಾಡೋದು ಹಾಲಲ್ಲ, ಆಲ್ಕೋಹಾಲ್!
ಸದ್ಯ ಈ ವಿಡಿಯೋ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಒಂದಷ್ಟು ಮಂದಿ ಬಲು ಅಚ್ಚರಿ ಮತ್ತು ಕುತೂಹಲದಿಂದ ಈ ಪ್ರಯೋಗವನ್ನು ನೋಡಿದರೆ, ಸಾಕಷ್ಟು ಮಂದಿ ಈ ಪ್ರಯೋಗದ ಬಗ್ಗೆ ಕಿಡಿಕಾರಿದ್ದಾರೆ. ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು 9 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಕೆಲವೊಬ್ಬರು ಅವನು ಜ್ಯೂಸ್ ಮಾಡುತ್ತಿದ್ದಾನಾ ಅಥವಾ ಚಹಾ ಮಾಡುತ್ತಿದ್ದಾನಾ ಎಂದು ಕಮೆಂಟ್ (Comment) ಮಾಡಿದ್ದಾರೆ. ಇನ್ನು ಕೆಲವೊಬ್ಬರು ಇದನ್ನು ನೋಡಿದರೆ ಟೀ ಕುಡಿಯುವುದೇ ಬೇಡ ಎನಿಸುತ್ತಿದೆ ಎಂದು ಕಾಮೆಂಟಿಸಿದ್ದಾರೆ.