Steam Cooking: ಫಿಟ್ನೆಸ್ ಮೆಂಟೇನ್ ಮಾಡ್ಬೇಕಾ? ಹೀಗ್ ಅಡುಗೆ ಮಾಡ್ಬೇಕು

By Suvarna NewsFirst Published Dec 30, 2021, 6:54 PM IST
Highlights

ಕೆಲವೊಂದು ಪ್ರಾಂತ್ಯದ ಜನರು ನೋಡಲು ತೆಳ್ಳಗೆ,ಆರೋಗ್ಯವಂತಾಗಿರ್ತಾರೆ. ಏನು ತಿಂತಾರೋ? ಎಷ್ಟು ಸುಂದರವಾಗಿರ್ತಾರೆ ಇಲ್ಲಿನ ಜನ, ಅಂತಾ ನಾವು ಮಾತನಾಡಿಕೊಳ್ತೇವೆ. ನೀವು ತಿನ್ನುವ ಆಹಾರವನ್ನೇ ಅವರು ತಿನ್ನಬಹುದು. ಆದ್ರೆ ಆಹಾರ ತಯಾರಿಸುವ ವಿಧಾನ ಬೇರೆಯಿರಬಹುದು. 

ಪ್ರತಿ ದೇಶವೂ ತನ್ನದೇ ಆದ ಆಹಾರ (Food )ಮತ್ತು ಅಡುಗೆ (Cooking )ವಿಧಾನವನ್ನು ಹೊಂದಿದೆ. ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ,ಪ್ರಾಂತ್ಯಗಳಲ್ಲಿ ಭಿನ್ನ ಅಡುಗೆ ವಿಧಾನವನ್ನು ಅನುಸರಿಸಲಾಗುತ್ತದೆ. ಅಕ್ಕಪಕ್ಕದ ಮನೆಯವರು ಮಾಡುವ ಅಡುಗೆ ರೀತಿಯೇ ಬೇರೆಯಾಗಿರುತ್ತದೆ. ಕೆಲವೆಡೆ ಸಾಸಿವೆ ಎಣ್ಣೆ (Mustard oil)ಯನ್ನು ಅಡುಗೆಗೆ ಬಳಸುತ್ತಾರೆ. ಮತ್ತೆ ಕೆಲವು ಕಡೆ ತೆಂಗಿನ ಎಣ್ಣೆ (Coconut oil)ಯನ್ನು ಬಳಸುತ್ತಾರೆ. ಆಹಾರಕ್ಕೆ ಬಳಸುವ ಪದಾರ್ಥದಿಂದ ಹಿಡಿದು ಮಾಡುವ ವಿಧಾನದವರೆಗೆ ಎಲ್ಲವೂ ಬೇರೆಯಾಗಿರುತ್ತದೆ. ಪ್ರಪಂಚದಾದ್ಯಂತ ಅನೇಕ ಸ್ಥಳಗಳಲ್ಲಿ ಹಬೆಯಲ್ಲಿ ಬೇಯಿಸಿದ ಆಹಾರಕ್ಕೆ ಆದ್ಯತೆ ನೀಡಲಾಗುತ್ತದೆ. ಇನ್ನು ಕೆಲವು ಕಡೆ ಆಹಾರವನ್ನು ನೀರಿನಲ್ಲಿ ಬೇಯಿಸುತ್ತಾರೆ. 
ಭಾರತ (India)ದಲ್ಲಿ ಈಗ್ಲೂ ಹಳೆಯ ಪಾಕ ಪದ್ಧತಿ ಜಾರಿಯಲ್ಲಿದೆ. ಭಾರತದ ಅನೇಕ ಭಾಗಗಳಲ್ಲಿ ಈಗ್ಲೂ ಆಹಾರಗಳನ್ನು ಹಬೆ (Steam)ಯಲ್ಲಿ ಬೇಯಿಸಲಾಗುತ್ತದೆ. ಭಾರತದ ಆಹಾರದ ವಿಶೇಷತೆ ಮಸಾಲೆ. ಹಬೆಯಲ್ಲಿ ಆಹಾರ ಬೇಯಿಸುವಾಗ ಮಸಾಲೆಗೆ ಆದ್ಯತೆ ಸಿಗುವುದಿಲ್ಲ. ಮಸಾಲೆ ಆಹಾರವನ್ನು ನೀರಿನಲ್ಲಿ ಬೇಯಿಸಲಾಗುತ್ತದೆ. ಆದ್ರೆ ಹಬೆಯಲ್ಲಿ ಮಾಡಿದ ಮೊಮೊಸ್ (Momos), ಇಡ್ಲಿಯಂತಹ ಖಾದ್ಯಗಳು ಎಲ್ಲರಿಗೂ ಇಷ್ಟವಾಗುತ್ತವೆ. ಆಹಾರ ತಯಾರಿಸುವ ವೇಳೆ ಹಬೆಯಲ್ಲಿ ಬೇಯಿಸಿದ ಆಹಾರ ಅಥವಾ ನೀರಿನಲ್ಲಿ ಬೇಯಿಸಿದ ಆಹಾರ ಇದರಲ್ಲಿ ಯಾವುದು ಬೆಸ್ಟ್ ಎಂಬ ಪ್ರಶ್ನೆ ಮೂಡುತ್ತದೆ. ಹಬೆಯಲ್ಲಿ ಬೇಯಿಸಿದ ಆಹಾರ ಹೆಚ್ಚು ಪ್ರಯೋಜನಕಾರಿ ಎಂದು ತಜ್ಞರು ಕೂಡ ಅಭಿಪ್ರಾಯಪಟ್ಟಿದ್ದಾರೆ. 

ಹಬೆಯಲ್ಲಿ ಬೇಯಿಸಿದ ಆಹಾರದ ಪ್ರಯೋಜನಗಳು :
ಉಗಿಯಲ್ಲಿ ಬೇಯಿಸಿದ ಆಹಾರದ ದೊಡ್ಡ ವೈಶಿಷ್ಟ್ಯವೆಂದರೆ ಎಣ್ಣೆ ಮತ್ತು ಮಸಾಲೆಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸುವುದಾಗಿದೆ. ಸಾಮಾನ್ಯವಾಗಿ ಹಬೆಯಲ್ಲಿ ಬೇಯಿಸುವ ಭಕ್ಷ್ಯಗಳು ಸರಳವಾಗಿರುತ್ತವೆ. ಮೊಮೊಸ್‌ ಒಳಗಡೆ ಹಾಕುವ ಸ್ಟಫಿಂಗ್‌ಗೆ ಮಸಾಲೆಗಳನ್ನು ಕಡಿಮೆ ಪ್ರಮಾಣದಲ್ಲಿ ಸೇರಿಸಲಾಗುತ್ತದೆ. ಇದರಿಂದಾಗಿ ಆಹಾರವು ಹಗುರವಾಗಿರುತ್ತದೆ. ಉಗಿ ಅಡುಗೆಯಿಂದಾಗಿ, ತರಕಾರಿಗಳು, ಧಾನ್ಯಗಳು ಇತ್ಯಾದಿಗಳಲ್ಲಿ ಇರುವ ಫೈಬರ್ ಗಳು ಮೃದುವಾಗುತ್ತವೆ. ಇದರಿಂದಾಗಿ ಅವು ಸುಲಭವಾಗಿ ಜೀರ್ಣವಾಗುತ್ತವೆ. ಆಹಾರ ಮೃದುವಾದಷ್ಟೂ ಅದನ್ನು ಜೀರ್ಣಿಸಿಕೊಳ್ಳುವುದು ಸುಲಭ. ದೇಹ ಜೀರ್ಣಕ್ರಿಯೆಗಾಗಿ ಹೆಚ್ಚು ಶ್ರಮ ಹಾಕಬೇಕಾಗಿಲ್ಲ. ಹಬೆಯಲ್ಲಿ ಬೇಯಿಸಿದ ಆಹಾರ ಸೇವನೆ ಮಾಡುವುದ್ರಿಂದ ಎಲ್ಲಾ ಪೋಷಕಾಂಶಗಳು ದೇಹಕ್ಕೆ ಸರಿಯಾಗಿ ಲಭ್ಯವಾಗುತ್ತದೆ ಎಂಬುದು ಸತ್ಯ.

ಎಷ್ಟು ತಿಂದರೂ ಕೆಲವರಿಗೆ ಹಸಿವು ಇಂಗೋಲ್ಲವೇಕೆ?

ಕೊಲೆಸ್ಟ್ರಾಲ್ ಅಪಾಯ ಕಡಿಮೆ : ಹಬೆಯಲ್ಲಿ ಬೇಯಿಸುವ ಆಹಾರಕ್ಕೆ ಮೊದಲೇ ಹೇಳಿದಂತೆ ಕಡಿಮೆ ಎಣ್ಣೆ-ತುಪ್ಪ, ಮಸಾಲೆಗಳನ್ನು ಬಳಸುತ್ತೇವೆ. ಇದ್ರಿಂದ ಕೊಲೆಸ್ಟ್ರಾಲ್  ಅಪಾಯ ಕಡಿಮೆಯಿರುತ್ತದೆ. ಹೃದಯ ಸಮಸ್ಯೆ,ಸಕ್ಕರೆ ಅಸಮತೋಲನ ಕಾಡುವ ಸಾಧ್ಯತೆಯೂ ಕಡಿಮೆಯಿರುತ್ತದೆ. ಉಗಿಯಲ್ಲಿ ಬೇಯಿಸಿದ ಆಹಾರವನ್ನು ಹೆಚ್ಚು ಸೇವನೆ ಮಾಡುವ ಜನರು ಫಿಟ್ ಹಾಗೂ ಆರೋಗ್ಯಕರವಾಗಿರುತ್ತಾರೆ.  

ಇದಲ್ಲದೆ ಆವಿಯಲ್ಲಿ ಬೇಯಿಸಿದ ಆಹಾರ (ಕೋಳಿ ಅಥವಾ ಮೀನಿನಂತಹ ಮಾಂಸ)ದಲ್ಲಿರುವ ಕೊಬ್ಬಿನ ಮಟ್ಟ ಕಡಿಮೆಯಾಗುತ್ತದೆ.  ಕಡಿಮೆ ಕೊಬ್ಬಿನೊಂದಿಗೆ  ಮಾಂಸಾಹಾರ ಸೇವನೆ ಮಾಡಬಹುದು. 
ನೀರಿನಲ್ಲಿ ಬೇಯಿಸಿದಾಗ ತರಕಾರಿಗಳು ಅಥವಾ ಇತರ ಆಹಾರದ ಜೀವಸತ್ವಗಳು, ಖನಿಜಗಳು ಮತ್ತು ಇತರ ಪೋಷಕಾಂಶಗಳು ಹೆಚ್ಚಾಗಿ  ನಾಶವಾಗುತ್ತವೆ. ಹಬೆಯಲ್ಲಿ ಆಹಾರವನ್ನು ಬೇಯಿಸುವಾಗ, ಪೋಷಕಾಂಶಗಳು ಆಹಾರದಲ್ಲಿಯೇ ಉಳಿಯುತ್ತವೆ. 

ಕೊರೊನಾದಿಂದಾಗಿ, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ತೂಕವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಮತ್ತು ಫಿಟ್ ಆಗಿರಲು ಹೆಚ್ಚು ಗಮನ ಹರಿಸುತ್ತಿದ್ದಾರೆ. ಹೆಚ್ಚಿನ ಜನರು ತೂಕ ನಷ್ಟಕ್ಕೆ ಅಥವಾ ಆರೋಗ್ಯದ ಪ್ರಕಾರ ಹೆಚ್ಚು ತರಕಾರಿಗಳು ಅಥವಾ ಸಲಾಡ್‌ಗಳನ್ನು ತಿನ್ನಲು ಪ್ರಯತ್ನಿಸುತ್ತಾರೆ. ಇದು ಒಳ್ಳೆಯ ಅಭ್ಯಾಸ. ಆದರೆ ಹಸಿ ತರಕಾರಿಗಳು ಅಥವಾ ಸಲಾಡ್‌ಗಳು ಕೆಲವೊಮ್ಮೆ ಹೊಟ್ಟೆ ಸಮಸ್ಯೆಗೆ ಕಾರಣವಾಗುತ್ತದೆ. ಅವುಗಳನ್ನು ಸ್ವಲ್ಪ ಸಮಯದವರೆಗೆ ಆವಿಯಲ್ಲಿ ಬೇಯಿಸಿ ತಿಂದರೆ ಪ್ರಯೋಜನಗಳು ಬಹುಪಟ್ಟು ಹೆಚ್ಚಾಗಬಹುದು. ಜೀರ್ಣಕ್ರಿಯೆ ಸುಲಭವಾಗುತ್ತದೆ ಹಾಗೂ ಹಾನಿಕಾರಕ ಪದಾರ್ಥ ಹೊರಗೆ ಹೋಗುತ್ತದೆ.  

click me!