Woman Health: ಸುಖಾ ಸುಮ್ಮನೆ ಸುಸ್ತಾಗುತ್ತಿದ್ಯಾ? ಇಲ್ಲಿದೆ ಪರಿಹಾರ

By Suvarna News  |  First Published Dec 29, 2021, 4:37 PM IST

ಮಹಿಳೆಯರಿಗೆ ಸುಸ್ತು ಕಾಡುವುದು ಸಹಜ. ಕಬ್ಬಿಣಾಂಶದ ಕೊರತೆಯಿಂದ ಅನೀಮಿಯಾ ಸಮಸ್ಯೆ ಕಂಡುಬರುತ್ತದೆ. ನಿರ್ದಿಷ್ಟ ವಯಸ್ಸಾದ ಬಳಿಕ, ಗರ್ಭ ಧರಿಸಿದಾಗ, ಮೆನೋಪಾಸ್ ಮುಂತಾದ ಕಾರಣಗಳಿಂದ ಅನೀಮಿಯಾ ಉಂಟಾಗುತ್ತದೆ. ಕಬ್ಬಿಣಾಂಶದ ಕೊರತೆಯನ್ನು ಕೆಲವು ಆಹಾರಗಳನ್ನು ಸೇವನೆ ಮಾಡುವ ಮೂಲಕ ನಿವಾರಿಸಿಕೊಳ್ಳಬಹುದು. 
 


ಕಾಲುಗಳಲ್ಲಿ ಸೆಳೆತ, ಸೊಂಟ ನೋವು(Pain), ಸುಸ್ತು (Fatigue) ...ಇವು ಮಹಿಳೆಯರನ್ನು ಬಿಟ್ಟೂ ಬಿಡದೆ ಕಾಡಿಸುತ್ತವೆ. ಇದಕ್ಕೆ ಪ್ರಮುಖ ಕಾರಣ ಕಬ್ಬಿಣಾಂಶ(Iron) ದ ಕೊರತೆ (Deficiency). ಪ್ರತಿ ತಿಂಗಳ ಋತುಸ್ರಾವ, ಗರ್ಭ ಧರಿಸುವುದು, ಮೆನೋಪಾಸ್ ಮುಂತಾದ ಕಾರಣಗಳಿಂದ ಕಬ್ಬಿಣಾಂಶದ ಕೊರತೆ ಕಾಡುತ್ತದೆ. ಇದರಿಂದ ಅನೀಮಿಯಾ (Anemia) ಉಂಟಾಗುತ್ತದೆ. ಈ ಸಮಸ್ಯೆ ನಮ್ಮ ದೇಶದಲ್ಲಂತೂ ಎಷ್ಟು ಗಂಭೀರವಾಗಿದೆ ಎಂದರೆ, ಜಾಗತಿಕ (World) ಮಟ್ಟಕ್ಕಿಂತ ಭಾರತದ ಮಹಿಳೆಯರಲ್ಲಿ ಈ ಸಮಸ್ಯೆ 20 ಪಟ್ಟು ಹೆಚ್ಚಿದೆ. ವಿಶ್ವದಲ್ಲಿ ಮೂರು ಮಹಿಳೆಯರಲ್ಲಿ ಒಬ್ಬರಿಗೆ ಈ ತೊಂದರೆ ಇದ್ದರೆ, ಭಾರತ(India)ದಲ್ಲಿ ಇಬ್ಬರಲ್ಲಿ ಒಬ್ಬರಿಗೆ ಅನೀಮಿಯಾ ಅತಿ ಸಾಮಾನ್ಯ. 
ಇತ್ತೀಚೆಗೆ ಬಿಡುಗಡೆಯಾಗಿರುವ ರಾಷ್ಟ್ರೀಯ ಆರೋಗ್ಯ ಸಮೀಕ್ಷೆ-5ರ (National Health Survey-5) ಪ್ರಕಾರ ದೇಶದ 13 ರಾಜ್ಯಗಳ ಅರ್ಧದಷ್ಟು ಮಹಿಳೆರಲ್ಲಿ ಅನೀಮಿಯಾ ಸಮಸ್ಯೆ ಇದೆ. ಗರ್ಭಿಣಿಯರಲ್ಲಿ ಅನೀಮಿಯಾ ಮೊದಲಿಗಿಂತ ಹೆಚ್ಚಾಗಿದೆ. ಕಬ್ಬಿಣಾಂಶದ ಕೊರತೆ ಉಂಟಾಗಿದೆ ಎಂದರೆ ಆಹಾರದಲ್ಲಿ ಕಬ್ಬಿಣದ ಅಂಶ ಕಡಿಮೆಯಾಗಿದೆ ಎಂದರ್ಥ. ರಕ್ತದಲ್ಲಿ ಕೆಂಪುರಕ್ತಕಣಗಳ (Hemoglobin)  ಸಂಖ್ಯೆ ಚೆನ್ನಾಗಿದ್ದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಕೆಲವು ಆಹಾರ ಪದಾರ್ಥಗಳಲ್ಲಿ ಕಬ್ಬಿಣಾಂಶ ಅಧಿಕ ಮಟ್ಟದಲ್ಲಿರುತ್ತದೆ. ಅವುಗಳನ್ನು ನಿಯಮಿತವಾಗಿ ಸೇವನೆ ಮಾಡುತ್ತ ಬಂದರೆ ರಕ್ತದಲ್ಲಿ ಹಿಮೋಗ್ಲೊಬಿನ್ ಮಟ್ಟ ಹೆಚ್ಚಾಗಿ ಸುಸ್ತು ದೂರವಾಗುತ್ತದೆ. 

ಅಲಸಂದೆ (Black Eyed Peas)
ಅಲಸಂದೆ ಅತ್ಯುತ್ತಮ ಕಬ್ಬಿಣಾಂಶಭರಿತ ದ್ವಿದಳ ಧಾನ್ಯ. ದೇಹಕ್ಕೆ ಬೇಕಾದ ಸರಿಸುಮಾರು ಶೇ.26-29ರಷ್ಟು ಕಬ್ಬಿಣಾಂಶ ಕೇವಲ ಅರ್ಧ ಲೋಟ ಅಲಸಂದೆಯಿಂದ ಸಿಗುತ್ತದೆ. ವಾರಕ್ಕೆರಡು ದಿನದಂತೆ ಅಲಸಂದೆಯನ್ನು ಸೇವಿಸುತ್ತ ಬಂದರೆ ಕಬ್ಬಿಣದ ಕೊರತೆ ನೀಗುತ್ತದೆ. 

ಆರ್ಗನ್ ಮೀಟ್ (Organ Meat)
ವಿವಿಧ ಪ್ರಾಣಿಗಳ ಅಂಗಾಂಗಗಳಲ್ಲಿ ಉತ್ತಮ ಕಬ್ಬಿಣಾಂಶ ಇರುತ್ತದೆ. ಬೆಳೆಯುವ ಮಕ್ಕಳಿಗೆ ಕಾಲುಸೂಪು ನೀಡುವ ಪದ್ಧತಿ ಹಲವೆಡೆ ಇದೆ. ಅದರಲ್ಲಿ ಮೂಳೆಯನ್ನು ಬಲಪಡಿಸುವ ಕಬ್ಬಿಣ ಸೇರಿದಂತೆ ವಿವಿಧ ಅಂಶಗಳಿರುವುದರಿಂದ ಹಾಗೆ ಮಾಡಲಾಗುತ್ತದೆ. ಹಾಗೆಯೇ, ಕಿಡ್ನಿ. ಲಿವರ್, ಮಿದುಳು ಮತ್ತು ಹೃದಯಗಳಲ್ಲೂ ಉತ್ತಮ ಕಬ್ಬಿಣಾಂಶ ಇರುತ್ತದೆ. 

ಯೋನಿ ಬಳಿಯ ಕೀವಿನ ಗುಳ್ಳೆಗೆ ಇಲ್ಲಿದೆ ಪರಿಹಾರ

ಬೆಲ್ಲ (Jaggery)
ಬೆಲ್ಲವು ಅತ್ಯಂತ ನೈಸರ್ಗಿಕ ಕಬ್ಬಿಣಾಂಶದ ಮೂಲ. ಯಾವುದೇ ರಾಸಾಯನಿಕ ಬೆರೆಸದ ತಾಜಾ ಬೆಲ್ಲವನ್ನು ದಿನವೂ ಸೇವನೆ ಮಾಡುವ ಮೂಲಕ ಎಂಥದ್ದೇ ಕಬ್ಬಿಣಾಂಶದ ಕೊರತೆಯನ್ನು ಸಹ ನೀಗಿಸಬಹುದು. ದಿನವೂ ಬೆಳಗ್ಗೆ ಅಥವಾ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಬೆಲ್ಲ ತಿಂದು ನೀರು ಕುಡಿದರೆ ಸಾಕು.
 
ನೆಲ್ಲಿಕಾಯಿ (Amla)
ಬೆಟ್ಟದ ನೆಲ್ಲಿಕಾಯಿಯಲ್ಲಿ ಆರೋಗ್ಯಕ್ಕೆ ಬೇಕಾದ ಹಲವಾರು ಅಂಶಗಳಿರುತ್ತವೆ. ನೆಲ್ಲಿಕಾಯಿ ವಿಟಮಿನ್ ಸಿ, ಕಬ್ಬಿಣ ಮತ್ತು ಕ್ಯಾಲ್ಸಿಯಂ ಅನ್ನು ಹೇರಳವಾಗಿ ಒಳಗೊಂಡಿರುತ್ತದೆ. ಕಬ್ಬಿಣಾಂಶದ ಕೊರತೆ ಇರುವವರು ನಿಯಮಿತವಾಗಿ ನೆಲ್ಲಿಕಾಯಿ ಹಾಗೂ ಅದರ ವಿವಿಧ ಉತ್ಪನ್ನಗಳನ್ನು ಸೇವಿಸಿದರೆ ಕೊರತೆ ಮಾಯವಾಗುತ್ತದೆ. ನೆಲ್ಲಿಕಾಯಿಯ ಜಾಮ್, ಮುರಬ್ಬ ಯಾವುದಾದರೂ ಸರಿ, ಆಹಾರದಲ್ಲಿ ಬಳಕೆ ಮಾಡಬೇಕು. ಹಸಿ ನೆಲ್ಲಿಕಾಯಿ ಸಿಗುವ ಸಮಯದಲ್ಲಿ ತಂಬುಳಿ ಮಾಡಬಹುದು, ಹುಣಸೆಹಣ್ಣಿನ ಬದಲು ನೆಲ್ಲಿಕಾಯಿಯನ್ನೇ ಸಾಂಬಾರಿಗೆ ಬಳಕೆ ಮಾಡಬಹುದು. ಕೆಂಪು ರಕ್ತಕಣಗಳ ವರ್ಧನೆಗೂ ಇದು ಸಹಕಾರಿ.

ಒಣಹಣ್ಣುಗಳು (Dry Fruits)
ಬಹುತೇಕ ಎಲ್ಲ ಒಣಹಣ್ಣುಗಳು ಕಬ್ಬಿಣಾಂಶವನ್ನು ಉತ್ತಮ ಪ್ರಮಾಣದಲ್ಲಿ ಹೊಂದಿರುತ್ತವೆ. ವಿಟಮಿನ್ ಮತ್ತು ತಾಮ್ರದಂಶವನ್ನೂ ಹೊಂದಿರುತ್ತವೆ. ಒಣದ್ರಾಕ್ಷಿ (Raisin) ಮತ್ತು ಅಂಜೂರ (Fig) ಇವುಗಳಲ್ಲಿ ಅತ್ಯುತ್ತಮವಾಗಿದ್ದು, ರಾತ್ರಿ ನೀರಿನಲ್ಲಿ ನೆನೆ ಹಾಕಿ ಮಾರನೆಯ ದಿನ ಬೆಳಗ್ಗೆ ತಿನ್ನಬೇಕು. 

ಗರ್ಭಧಾರಣೆಯಲ್ಲಿ ಪದೆ ಪದೇ ಮೂತ್ರ ವಿಸರ್ಜನೆಯಾಗುವುದೇಕೆ?

ಬಸಳೆ ಸೊಪ್ಪು (Spinach)
ಎಲ್ಲ ಸೊಪ್ಪಿನಲ್ಲೂ ಕಬ್ಬಿಣಾಂಶದ ಮಟ್ಟ ಚೆನ್ನಾಗಿಯೇ ಇರುತ್ತದೆ. ಬಸಳೆ ಸೊಪ್ಪಿನಲ್ಲಿ ಇನ್ನಷ್ಟು ಅಧಿಕವಾಗಿರುತ್ತದೆ. ಮಾಂಸಖಂಡಗಳು ಮತ್ತು ಒಟ್ಟಾರೆ ಆರೋಗ್ಯ ವ್ಯವಸ್ಥೆಯ ಮೇಲೆ ಬಸಳೆ ಸೊಪ್ಪು ತುಂಬ ಪರಿಣಾಮಕಾರಿ. ವಾರಕ್ಕೆ ಎರಡು ಬಾರಿಯಾದರೂ ಸೇವನೆ ಮಾಡುವುದು ಒಳ್ಳೆಯದು.

click me!