
ಕೆಲ ದಿನಗಳ ಹಿಂದಷ್ಟೇ ರಾಜಸ್ಥಾನದ ದೇಗುಲವೊಂದರಲ್ಲಿ 500 ಕೆಜಿಗೂ ಅಧಿಕ ಮೊತ್ತದ ಪ್ರಸಾದ ತಯಾರಿಸಲು ಜೆಸಿಬಿ ಬಳಸಿದ ಘಟನೆ ನಡೆದಿತ್ತು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದವು. ಈ ಘಟನೆ ಮಾಸುವ ಮೊದಲೇ ರಾಜಸ್ಥಾನದ ಜೋಧ್‌ಪುರದ ಸಿಹಿ ತಿನ್ನಿಸು ತಯಾರಿಸುವ ಅಂಗಡಿಯೊಂದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸಿಹಿ ತಿನಿಸು ತಯಾರಿಸಲು ಬಳಸುವ ಹಿಟ್ಟನ್ನು ಕಾಲಿನಲ್ಲಿ ತುಳಿದು ಹದಗೊಳಿಸುತ್ತಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಈ ಸಿಹಿ ತಿನಿಸಿದನ ಅಂಗಡಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೋಧ್‌ಪುರದ ಬಾಲಾಜಿ ಮಿಠಾಯ ಭಂಡಾರ ಹೆಸರಿನ ಅಂಗಡಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಆಹಾರ ಸುರಕ್ಷತೆಯ ಬಗ್ಗೆ ಕಳವಳ ಹುಟ್ಟು ಹಾಕಿದೆ. ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಅಧಿಕಾರಿಗಳು ಆ ಸಿಹಿ ತಿನ್ನಿಸಿನ ಅಂಗಡಿಯ ಮೇಲೆ ದಾಳಿ ನಡೆಸಿ, ಸಿಹಿ ತಿನಿಸು ತಯಾರಿಸುವುದಕ್ಕಾಗಿ ಹದ ಮಾಡಿ ಇಟ್ಟಿದ್ದ 200 ಕೇಜಿ ತೂಕದ ಹಿಟ್ಟನ್ನು ನಾಶ ಪಡಿಸಿದ್ದಾರೆ ಎಂದು ವರದಿಯಾಗಿದೆ.
ಭಾರತದ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆಯಡಿಯಲ್ಲಿ (FSSAI) ಪ್ರಕಾರ ಆಹಾರ ಗಟಕಗಳು ಸೂಕ್ತವಾದ ಹಾಗೂ ಕಠಿಣವಾದ ಆಹಾರ ಸ್ವಚ್ಛತೆ ಹಾಗೂ ನೈರ್ಮಲ್ಯ ಮಾನದಂಡಗಳನ್ನು ಪಾಲಿಸಬೇಕು. ಆಹಾರದ ಸುರಕ್ಷತೆಯ ಉಲ್ಲಂಘನೆಯೂ ಭಾರಿ ಪ್ರಮಾಣದ ದಂಡ ಹಾಗೂ ಆಹಾರ ಘಟಕದ ಪರವಾನಗಿ ರದ್ದು ಮಾಡುವುದಕ್ಕೆ ಕಾರಣವಾಗಬಹುದು. ಆಹಾರ ಸುರಕ್ಷತಾ ಅಧಿಕಾರಿಗಳು ಹೀಗೆ ಆಹಾರದ ನೈರ್ಮಲ್ಯದಲ್ಲಿ ಕೊರತೆ ಕಂಡು ಬಂದರೆ ಅಂಥಹಾ ಆಹಾರ ಘಟಕಗಳ ವಿರುದ್ಧ ಹಾಗೂ ಅದನ್ನು ನಿರ್ವಹಿಸುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ.
ಇದನ್ನು ಓದಿ: ನಡುರಸ್ತೆಯಲ್ಲಿ ಸ್ಕೂಟರ್ ನಿಲ್ಲಿಸಿ ಜೋಡಿಯ ಫೋಟೋಶೂಟ್: ಎಚ್ಚರಿಸಿದ ಕಾರು ಚಾಲಕನ ಜೊತೆಗೂ ಗಲಾಟೆ
ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ, ಇದು ಜೋಧ್‌ಪುರದ ಸಿಹಿಯೊಳಗಿರುವ ರಹಸ್ಯ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕೆಲವು ಸೆಲೆಬ್ರಿಟಿಗಳು ವೈನ್‌ಯಾರ್ಡ್‌ಗಳಲ್ಲಿ ಕಾಲಿನಲ್ಲಿ ದ್ರಾಕ್ಷಿಹಣ್ಣನ್ನು ತುಳಿದು ವೈನ್ ಮಾಡಿದರೆ ಅದು ಸಹಜ, ಸಿಹಿ ತಿನಿಸಿನ ಅಂಗಡಿಯವರು ಮಾಡಿದರೆ ಕೊಳಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಒಬ್ಬರು ಹಾಗಿದ್ದರೆ ಅಲ್ಲಿಂದಲೇ ಸಿಹಿ ತಿನಿಸು ಖರೀದಿಸಿ ತಿನ್ನಿ ಎಂದು ಕಾಮೆಂಟ್ ಮಾಡಿದ್ದಾರೆ.
ಹಾಗೆಯೇ ಮತ್ತೊಬ್ಬರು ಹೀಗೆ ಕಾಮೆಂಟ್ ಮಾಡಿದ್ದಾರೆ. ಬಂಗಾಳದಲ್ಲಿ, 'ಪೌರುತಿ' ಎಂದು ಕರೆಯಲ್ಪಡುವ ಬ್ರೆಡ್ ಇದೆ, 50 ವರ್ಷಗಳ ಹಿಂದೆ ಅದನ್ನು ಹೇಗೆ ತಯಾರಿಸುತ್ತಿದ್ದರು ಎಂದು ನಿಮಗೆ ಗೊತ್ತಾ? ಇಂದಿನ ದಿನಗಳಲ್ಲಿ ಸ್ವಯಂಚಾಲಿತ ಯಂತ್ರಗಳಲ್ಲಿ ತಯಾರಿಸುವ ಹಾಗೆ ಅದನ್ನು ತಯಾರಿಸುತ್ತಿರಲಿಲ್ಲ, ಪೌರುತಿ ಎಂಬ ಹೆಸೃ ಹೇಳುವಂತೆ ಪೌ ಎಂದರೆ ಬಂಗಾಳಿಯಲ್ಲಿ ಪಾದಗಳು, ರುತಿ ಎಂದರೆ ಬಂಗಾಳಿಯಲ್ಲಿ ಬ್ರೆಡ್. ಆರಂಭಿಕ ವರ್ಷಗಳಲ್ಲಿ, ಅವುಗಳನ್ನು ತಯಾರಕರು ತಮ್ಮ ಪಾದಗಳಿಂದಲೇ ಹಿಟ್ಟನ್ನು ಹದ ಮಾಡಿ ನಂತರ ಬೇಯಿಸಲಾಗುತ್ತಿತ್ತು. ಹಾಗಾದರೆ, ಆ ಸಮಯದಲ್ಲಿ ಈ ಎಫ್‌ಎಸ್‌ಎಸ್‌ಎಐ ಎಲ್ಲಿತ್ತು? ಗಮನಿಸಬೇಕಾದ ವಿಷಯವೆಂದರೆ ಪೌರುತಿ ಎಂಬ ಹೆಸರು ಇನ್ನೂ ಬಳಕೆಯಲ್ಲಿದೆ, ಆದರೆ FSSAI ಪ್ರಕಾರ ಅದು ತಯಾರಿಯ ವಿಧಾನವಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹೀಗೆ ಸಿಹಿತಿನಿಸಿನ ಅಂಗಡಿಯವರನ್ನು ಕೆಲವರು ಸಮರ್ಥಿಸಿಕೊಂಡಿದ್ದು, ಇದಕ್ಕೂ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: IAS ಅಧಿಕಾರಿಯ ದಿಟ್ಟ ನಿರ್ಧಾರ: ಮಗಳನ್ನು ಫ್ರೀ ಸ್ಕೂಲ್ ಬದಲು ಸರ್ಕಾರಿ ಅಂಗನವಾಡಿಗೆ ಸೇರಿಸಿದ ಪುಲ್ಕಿತ್ ಗಾರ್ಗ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.