ನಿಂಬೆ, ಮಾವಿನ ಚಿತ್ರಾನ್ನ ತಿಂದು ಬೇಜಾರಾಗಿದ್ಯಾ, ಈ ಸ್ಪೆಷಲ್‌ ವೀಳ್ಯದೆಲೆ ಚಿತ್ರಾನ್ನ ಟ್ರೈ ಮಾಡಿ

By Vinutha Perla  |  First Published Aug 4, 2023, 12:43 PM IST

ವೀಳ್ಯದೆಲೆಯನ್ನು ಪೂಜೆ, ಪುನಸ್ಕಾರಗಳಿಗೆ, ಊಟ ಆದ ಮೇಲೆ ಅಡಿಕೆ ಜತೆ ಹಾಕಿ ಜಗಿಯುವುದಕ್ಕೆ ಉಪಯೋಗಿಸಲಾಗುತ್ತದೆ. ಇದನ್ನು ಬಿಟ್ಟರೆ ಆಹಾರದ ರೂಪದಲ್ಲಿ ವೀಳ್ಯದೆಲೆಯನ್ನು ಬಳಸುವುದು ಕಡಿಮೆ. ಆದರೆ ವೀಳ್ಯದೆಲೆಯನ್ನು ಚಿತ್ರಾನ್ನ ಮಾಡಲು ಸಹ ಉಪಯೋಗಿಸಬಹುದು ಅನ್ನೋದು ನಿಮ್ಗೆ ಗೊತ್ತಿದ್ಯಾ?


ಚಿತ್ರಾನ್ನ ಅಂದ್ರೆ ತಕ್ಷಣಕ್ಕೆ ನೆನಪಾಗೋದು ಶೇಂಗಾ, ಲೆಮನ್ ಸೇರಿಸಿ ಮಾಡಿದ ಅನ್ನ. ಮಾವಿನಕಾಯಿ, ನೆಲ್ಲಿಕಾಯಿಯನ್ನು ಸೇರಿಸಿ ಸಹ ಚಿತ್ರಾನ್ನವನ್ನು ತಯಾರಿಸ್ತಾರೆ. ನಿಂಬೆಹಣ್ಣಿನಿಂದ ತಯಾರಿಸುವ ಚಿತ್ರಾನ್ನದಂತೆಯೇ ಮಾವಿನಕಾಯಿ ಚಿತ್ರಾನ್ನ, ನೆಲ್ಲಿಕಾಯಿ ಚಿತ್ರಾನ್ನ ಹುಳಿಹುಳಿಯಾಗಿ ಟೇಸ್ಟೀಯಾಗಿರುತ್ತದೆ. ಆದ್ರೆ ಇದೇ ರೀತಿ ವೀಳ್ಯದೆಲೆಯಿಂದಲೂ ಚಿತ್ರಾನ್ನ ತಯಾರಿಸಬಹುದು ಅನ್ನೋದು ನಿಮ್ಗೆ ಗೊತ್ತಿದ್ಯಾ? ಇಲ್ಲಾಂದ್ರೆ ಕೇಳಿ, ವೀಳ್ಯದೆಲೆಯಿಂದಲೂ ತುಂಬಾ ಟೇಸ್ಟಿಯಾಗಿರುವ ಚಿತ್ರಾನ್ನ ಮಾಡಬಹುದು. ಅದಕ್ಕೆ ಏನೆಲ್ಲಾ ಬೇಕು, ಮಾಡೋದು ಹೇಗೆ ತಿಳ್ಕೊಳ್ಳೋಣ.

ಬೇಕಾದ ಪದಾರ್ಥಗಳು
- ಎರಡು ವೀಳ್ಯದೆಲೆ
- 1 ಕಪ್ ಅನ್ನ
- 2 ಹಸಿ ಮೆಣಸಿನಕಾಯಿ
- ತುಪ್ಪ
- ಒಂದು ಹಿಡಿ ಕೊಬ್ಬರಿ ತುರಿ
- ನಾಲ್ಕೈದು ಕೆಂಪು ಒಣ ಮೆಣಸಿನಕಾಯಿ
- ಮೂರು ಟೀ ಸ್ಪೂನ್‌ ಎಣ್ಣೆ
- ಕೊತ್ತಂಬರಿ ಸೊಪ್ಪು ಸ್ವಲ್ಪ 
- ಸ್ವಲ್ಪ ಜೀರಿಗೆ
- ಒಂದು ಟೀ ಸ್ಪೂನ್‌ ಉದ್ದಿನಬೇಳೆ
- ಅರ್ಧ ಟೀ ಸ್ಪೂನ್‌ ಅರಿಶಿಣ ಪುಡಿ
- ನಿಂಬೆ ರಸ

Latest Videos

undefined

ಮಾಡುವ ವಿಧಾನ:
ಅಕ್ಕಿಯನ್ನು ತೊಳೆದು ಹದವಾದ ಪ್ರಮಾಣದಲ್ಲಿ ನೀರನ್ನು ಸೇರಿಸಿ ಅನ್ನವನ್ನು (Rice) ತಯಾರಿಸಿಕೊಳ್ಳಿ. ಅನ್ನ ಹೆಚ್ಚು ಬೇಯದಂತೆ ನೋಡಿಕೊಳ್ಳಿ. ಹೀಗಾದರೆ ಅನ್ನ ಉದುರು ಉದುರಾಗಿ ಇರುವುದಿಲ್ಲ ಮತ್ತು ಚಿತ್ರಾನ್ನಕ್ಕೆ ಟೇಸ್ಟ್ ಬರುವುದಿಲ್ಲ. ಈ ಮಿಕ್ಸಿ ಜಾರ್‌ಗೆ ಎರಡು ವೀಳ್ಯದೆಲೆ, ಎರಡು ಹಸಿ ಮೆಣಸಿನಕಾಯಿ (Green chilli) ಸೇರಿಸಿ ರುಬ್ಬಿ ಪೇಸ್ಟ್ ಮಾಡಿಟ್ಟುಕೊಳ್ಳಿ.

ಖಾಲಿ ಹೊಟ್ಟೆಯಲ್ಲಿ ವೀಳ್ಯದೆಲೆ ತಿಂದ್ನೋಡಿ .. ಇದೆ ಇಷ್ಟೊಂದು ಲಾಭ

ಈಗ ದಪ್ಪ ತಳದ ಪ್ಯಾನ್ ತೆಗೆದುಕೊಂಡು ಎಣ್ಣೆಯನ್ನು ಬಿಸಿ ಮಾಡಿಕೊಂಡು ಇದಕ್ಕೆ  ಸಾಸಿವೆ, ಉದ್ದಿನಬೇಳೆ, ಶೇಂಗಾ ಸೇರಿಸಿ. ಇವಿಷ್ಟು ಕಂದು ಬಣ್ಣಕ್ಕೆ ಬಂದ ನಂತರ ಕತ್ತರಿಸಿದ ಕೆಂಪು ಮೆಣಸಿಕಾಯಿ ಹಾಗೂ ಕರಿಬೇವಿನ ಎಲೆ, ಕತ್ತರಿಸಿದ ತೆಂಗಿನಕಾಯಿ ಚೂರುಗಳನ್ನು ಸೇರಿಸಿ. ಇದಕ್ಕೆ ರುಬ್ಬಿದ ವೀಳ್ಯದೆಲೆ (Betel Leaves) ಮತ್ತು ಹಸಿರು ಮೆಣಸಿನಕಾಯಿ ಪೇಸ್ಟ್ ಸೇರಿಸಿ, ಮೇಲಿನಿಂದ ನಿಂಬೆ ರಸ, ಅರಿಶಿನ, ಉಪ್ಪು ಸೇರಿಸಿ ಹಸಿ ವಾಸನೆ ಹೋಗುವವರೆಗೆ 3-4 ನಿಮಿಷಗಳ ಕಾಲ ಹುರಿಯಿರಿ. ಈಗ ವೀಳ್ಯದೆಲೆಯ ಮಸಾಲಾ ಸಿದ್ಧವಾಗಿದೆ.

ಈಗ ಬಾಣಲೆಗೆ ಬೇಯಿಸಿದ ತಣ್ಣಗಾದ ಅನ್ನವನ್ನು ಸೇರಿಸಿ ನಿಧಾನವಾಗಿ ಮಿಶ್ರಣ ಮಾಡಿ. ಮೇಲಿನಿಂದ ಕೊತ್ತಂಬರಿ ಸೊಪ್ಪು ಉದುರಿಸಿಕೊಳ್ಳಿ. ಈಗ ರುಚಿರುಚಿಯಾದ ವೀಳ್ಯದೆಲೆ ಚಿತ್ರಾನ್ನ ಸವಿಯಲು ಸಿದ್ಧವಾಗಿದೆ. 

ವೀಳ್ಯದೆಲೆಯ ಆರೋಗ್ಯ ಪ್ರಯೋಜನಗಳು
ವೀಳ್ಯದೆಲೆ ಮುಖ್ಯವಾಗಿ ಊಟದ ನಂತರ ಎಲೆ ಅಡಿಕೆಯಂತೆ ತಿನ್ನಲು ನೆರವಾಗುತ್ತದೆ. ಆದರೆ ಇದರ ಹೊರತಾಗಿಯೂ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು (Health benefits) ಹೊಂದಿದೆ. ವೀಳ್ಯದೆಲೆಯನ್ನು ನಿಯಮಿತವಾಗಿ ಸೇವಿಸುವ ಅಭ್ಯಾಸ ಮಲಬದ್ಧತೆಯನ್ನು ನಿವಾರಿಸುತ್ತದೆ ಎಂದು ಆರ್ಯುವೇದ ಹೇಳುತ್ತದೆ. ಮಾತ್ರವಲ್ಲ ವೀಳ್ಯದೆಲೆಯು ಕಾರ್ಮಿನೇಟಿವ್ ಮತ್ತು ಆಂಟಿ ಫ್ಲಾಟ್ಯುಲೆನ್ಸ್‌ನಂತಹ ಗುಣಗಳನ್ನು ಹೊಂದಿದೆ. ಈ ಗುಣಲಕ್ಷಣಗಳು ಜಠರಗರುಳಿನ (Gut) ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಪ್ರಮುಖ ಪೋಷಕಾಂಶಗಳು ಮತ್ತು ಖನಿಜಗಳನ್ನು ಹೀರಿಕೊಳ್ಳಲು ಕರುಳನ್ನು ಉತ್ತೇಜಿಸುತ್ತದೆ ಎಂದು ತಿಳಿದುಬಂದಿದೆ.

Lakshana Serial: ಚಿತ್ರಾನ್ನದ ಮಹತ್ವ ತಿಳಿಸಿಕೊಟ್ಟ ನಕ್ಷತ್ರಾ, ಸಿಂಪಲ್ ಆಗಿ ಮಾಡೋದ್ಹೇಗೆ ?

ವೀಳ್ಯದೆಲೆಯನ್ನು ಉಸಿರಾಟದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ವ್ಯಾಪಕವಾಗಿ ಬಳಸಲಾಗುತ್ತದೆ. ಹಿಂದಿನ ಕಾಲದಲ್ಲಿ ಕೆಮ್ಮು ಮತ್ತು ಶೀತಕ್ಕೆ ಚಿಕಿತ್ಸೆ ನೀಡಲು, ಅಸ್ತಮಾದ ಲಕ್ಷಣಗಳನ್ನು ನಿವಾರಿಸಲು ಇದನ್ನು ಬಳಸುತ್ತಿದ್ದರು. ಅಷ್ಟೇ ಅಲ್ಲ, ವೀಳ್ಯದೆಲೆಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಕೀಲು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮಧುಮೇಹ (Diabetes)ವನ್ನು ಸಹ ವೀಳ್ಯದೆಲೆ ನಿರ್ವಹಿಸುತ್ತದೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ.

click me!