ವಾರೆ ವ್ಹಾ..ಇನ್ಮುಂದೆ ಡ್ರೋನ್‌ ಮೂಲಕ ಮನೆ ಬಾಗಿಲಿಗೆ ಬರಲಿದೆ ಪಿಜ್ಜಾ, ವಿಡಿಯೋ ವೈರಲ್

By Vinutha Perla  |  First Published Aug 3, 2023, 3:46 PM IST

ಕಾಲಕ್ಕೆ ಚಕ್ರ ಕಟ್ಟಿಕೊಂಡು ಓಡುವ ಧಾವಂತದ ಬದುಕಿನಲ್ಲಿ ನಾವಿದ್ದೇವೆ. ಎಲ್ಲಾ ಕೆಲಸಗಳೂ ಚಿಟಿಕೆ ಹೊಡೆದಂತೆ ಥಟ್ಟಂತ ಆಗಿಬಿಡಬೇಕೆಂದು ಎಲ್ಲರೂ ಅಂದುಕೊಳ್ಳುತ್ತಾರೆ. ಅದಕ್ಕಾಗಿ ಹೊಸ ಹೊಸ ವಸ್ತುಗಳನ್ನು ಆವಿಷ್ಕರಿಸುತ್ತಲೇ ಇರುತ್ತಾರೆ. ಸದ್ಯ ಅದಕ್ಕೀಗ ಹೊಸ ಸೇರ್ಪಡೆ ಆಹಾರ ವಿತರಿಸುವ ಡ್ರೋನ್‌. 


ಸ್ವಭಾತಹಃ ಮನುಷ್ಯ ಸೋಮಾರಿ. ಹೀಗಾಗಿ ಅನುಕೂಲಕರ ಜೀವನಕ್ಕಾಗಿ ಏನೆಲ್ಲಾ ಮಾಡಬಹುದಾ ಅದನ್ನೆಲ್ಲಾ ಆವಿಷ್ಕರಿಸುತ್ತಲೇ ಇರುತ್ತಾನೆ. ಅದಲ್ಲದೆ ಕಾಲಕ್ಕೆ ಚಕ್ರ ಕಟ್ಟಿಕೊಂಡು ಓಡುವ ಧಾವಂತದ ಬದುಕಿನಲ್ಲಿ ನಾವಿದ್ದೇವೆ. ಎಲ್ಲಾ ಕೆಲಸಗಳೂ ಚಿಟಿಕೆ ಹೊಡೆದಂತೆ ಥಟ್ಟಂತ ಆಗಿಬಿಡಬೇಕೆಂದು ಎಲ್ಲರೂ ಅಂದುಕೊಳ್ಳುತ್ತಾರೆ. ಹೀಗಾಗಿ ಹೊಸ ಹೊಸ ವಸ್ತುಗಳನ್ನು ಆವಿಷ್ಕರಿಸುತ್ತಲೇ ಇರುತ್ತಾರೆ. ಬಟ್ಟೆ ಒಗೆಯುವ ಮೆಷಿನ್‌, ಪಾತ್ರೆ ತೊಳೆಯುವ ಮೆಷಿನ್, ಕಸ ಗುಡಿಸುವ, ನೆಲ ಒರೆಸುವ ಮೆಷಿನ್‌..ಒಂದಾ ಎರಡಾ..ಎಲ್ಲವೂ ಮನುಷ್ಯ ಶ್ರಮ ವಹಿಸದೆ ಆರಾಮವಾಗಿ ಕೆಲಸ ಮಾಡಲು ನೆರವಾಗುತ್ತಿರುವ ತಂತ್ರಜ್ಞಾನಗಳು. ಸದ್ಯ ಅದಕ್ಕೀಗ ಹೊಸ ಸೇರ್ಪಡೆ ಆಹಾರ ವಿತರಿಸುವ ಡ್ರೋನ್‌. 

ಝೊಮೆಟೋ ಡೆಲಿವರಿ ಬಾಯ್ಸ್‌ ಜೀವನ (Life) ಅದೆಷ್ಟು ಕಷ್ಟಕರವಾಗಿರುತ್ತದೆ ಎಂಬ ವಿಡಿಯೋಗಳು ಅದೆಷ್ಟೋ ಬಾರಿ ವೈರಲ್ ಆಗಿವೆ. ಹೊತ್ತಿಗೆ ಸರಿಯಾಗಿ ಆಹಾರ ತಿನ್ನದೆ ಫುಡ್ ಡೆಲಿವರಿ ಮಾಡಲು ಹೋಗುತ್ತಾರೆ. ಸರಿಯಾದ ಅಡ್ರೆಸ್ ಸಿಗದೆ ಗಲ್ಲಿ ಗಲ್ಲಿಗಳಲ್ಲಿ ಸುತ್ತುತ್ತಾರೆ. ಕಷ್ಟಪಟ್ಟು ಅಡ್ರೆಸ್ ಹುಡುಕಿ ಮನೆ ಬಾಗಿಲಿಗೆ ಆಹಾರ ತಲುಪಿಸಿದರೆ ಲೇಟಾಗಿ ಬಂದಿದ್ದಕ್ಕೆ ಮನೆಯವರಿಂದ ಬೈಯಿಸಿಕೊಳ್ಳುತ್ತಾರೆ. ಮಳೆ ಬಂದರಂತೂ, ಟ್ರಾಫಿಕ್ ಜಾಮ್ ಆದರಂತೂ ಹೇಳುವುದೇ ಬೇಡ. ಸರಿಯಾದ ಸಮಯಕ್ಕೆ ಫುಡ್ ತಲುಪಿಸಲು ಸಾಧ್ಯವಾಗದೆ ಒದ್ದಾಡುವಂತಾಗುತ್ತದೆ. ಇಂಥವರ ಕಷ್ಟವನ್ನು ಮನಗಂಡು ಸೋಹನ್ ರೈ ಎಂಬವರು ಆಹಾರ ವಿತರಿಸುವ (Food delivery) ಡ್ರೋನ್‌ನ್ನು ಕಂಡು ಹಿಡಿದಿದ್ದಾರೆ. 

Tap to resize

Latest Videos

undefined

ಸೇಡಿಗಾಗಿ ಎಕ್ಸ್‌ ಬಾಯ್‌ಫ್ರೆಂಡ್‌ಗೆ ಕ್ಯಾಶ್ ಆನ್ ಡೆಲಿವರಿ ಫುಡ್ ಆರ್ಡರ್ ಮಾಡಿದ ಅಂಕಿತಾ!

ಮನೆ ಬಾಗಿಲಿಗೆ ಪಿಜ್ಜಾ ತಂದು ಇಳಿಸಿದ ಡ್ರೋನ್‌, ವಿಡಿಯೋ ವೈರಲ್
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಸೋಹನ್‌ ರೈ ತಾವು ಡ್ರೋನ್ ಅನ್ನು ನಿರ್ಮಿಸುವ ಪ್ರಕ್ರಿಯೆಯನ್ನು ಪ್ರದರ್ಶಿಸಿದರು ಮಾತ್ರವಲ್ಲ ಇಂಥಾ ಡ್ರೋನ್ ತಯಾರಿಸಲು ತಮಗೆ ಸಿಕ್ಕಿದ ಪ್ರೇರಣೆಯನ್ನು ಉತ್ಸಾಹದಿಂದ ಹೇಳಿಕೊಂಡರು. ಝೊಮೆಟೋ ಡೆಲಿವರಿ ಬಾಯ್ಸ್ ಫುಡ್‌ ವಿತರಿಸಲು ಕಷ್ಟಪಡುವುದನ್ನು ನೋಡಿ ಡ್ರೋನ್ ತಯಾರಿಸಲು ಮುಂದಾಗಿದ್ದಾಗಿ ಹೇಳಿದರು.

ಇನ್‌ಸ್ಟಾಗ್ರಾಂನಲ್ಲಿ ಸೋಹನ್ ರೈ ಪೋಸ್ಟ್ ಮಾಡಿದ ವೀಡಿಯೊ ಡ್ರೋನ್‌ ತಯಾರಿಸುವ ಹಲವು ಹಂತಗಳನ್ನು ವಿವರಿಸುತ್ತದೆ. ರೈ ಅವರ ಕೌಶಲ್ಯ ಮತ್ತು ಸೃಜನಶೀಲತೆಯನ್ನು ಅತ್ಯುತ್ತಮವಾಗಿ ಪ್ರದರ್ಶಿಸುತ್ತದೆ. ಪ್ರತಿ ಹಂತವನ್ನು ಸೂಕ್ಷ್ಮವಾಗಿ ದಾಖಲಿಸಲಾಗಿದೆ, ಅಗತ್ಯ ಘಟಕಗಳನ್ನು ಸಂಗ್ರಹಿಸುವುದರಿಂದ ಹಿಡಿದು ಎಲ್ಲವನ್ನೂ ನಿಖರವಾಗಿ ಜೋಡಿಸುವುದು ಮತ್ತು ಅಂತಿಮವಾಗಿ, ಮಹತ್ವದ ಪರೀಕ್ಷಾ ಹಾರಾಟವನ್ನು (Test flying) ಸಹ ವಿಡಿಯೋದಲ್ಲಿ ವಿವರಿಸಲಾಗಿದೆ. ಡ್ರೋನ್ ಯಾರ ಸಹಾಯವೂ ಇಲ್ಲದೆ ಮನೆಯೊಂದರ ಮೇಲೆ ಪಿಜ್ಜಾ ತಂದು ಇಳಿಸುವುದನ್ನು ವಿಡಿಯೋದಲ್ಲಿ ನೋಡಬಹುದು.

ಪುಟ್ಟ ಮಗು ಎದೆಗೆ ಕಟ್ಟಿಕೊಂಡು ಝೊಮೆಟೋದಲ್ಲಿ ಫುಡ್ ಡೆಲಿವರಿ, ಮಹಿಳೆಯ ಕೆಲಸಕ್ಕೆ ಜನರ ಶಹಬ್ಬಾಸ್

ಸೋಹನ್ ರೈ ಎಂಬವರಿಂದ ಡ್ರೋನ್ ತಯಾರಿ
'ಭಾರತದಲ್ಲಿ ಡ್ರೋನ್‌ ಮೂಲಕ ಆಹಾರವನ್ನು ವಿತರಿಸುವ ಟೆಕ್ನಾಲಜಿ ಹಲವು ಸಮಯಗಳಿಂದ ಸುದ್ದಿಯಲ್ಲಿದೆ. ಆದರೆ ಅದು ಇನ್ನೂ ಬಳಕೆಯಲ್ಲಿಲ್ಲ. ಹೀಗಾಗಿ ಡ್ರೋನ್‌ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದ ನಾನು ಹಲವು ಜುಗಾಡ್ ಬಳಸಿ ಪೈಲಟ್‌ ಇಲ್ಲದೆ ಕೆಲಸ ಮಾಡುವ ಈ ಫುಡ್ ಡೆಲಿವರಿ ಮಾಡೋ ಡ್ರೋನ್ ತಯಾರಿಸಿದ್ದೇನೆ. ಇದು ಕಮರ್ಷಿಯಲ್ ಬಳಕೆಗೆ ಸೂಕ್ತವಾದರೆ ತುಂಬಾ ಉತ್ತಮ. ಇದು ಕೇವಲ ಪ್ರಯೋಗವಾಗಿದ್ದು, ಹಲವು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಮಾಡಲಾಗಿದೆ' ಎಂದು ಸೋಹನ್ ರೈ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

ಸೋಹನ್‌ ರೈ ಪ್ರಯತ್ನವು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ. ಆಹಾರ ವಿತರಿಸುವ ವಿಶಿಷ್ಟ ಡ್ರೋನ್‌ನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋ  8.8 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರು ವಿಡಿಯೋ ನೋಡಿ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಹಲವರು ಫುಡ್ ಡೆಲಿವರಿ ಮಾಡುವ ಡ್ರೋನ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು 'ಇದು ತುಂಬಾ ಕೂಲ್ ಐಡಿಯಾ, ಹಲವು ಜನರಿಗೆ ಪ್ರಯೋಜನವಾಗಬಹುದು' ಎಂದಿದ್ದಾರೆ. ಮತ್ತೆ ಕೆಲವರು, 'ನಾನು ನಿಮ್ಮ ಕ್ರಿಯೇಟಿವಿಟಿಯನ್ನು ಮೆಚ್ಚುತ್ತೇನೆ' ಎಂದು ಕಮೆಂಟಿಸಿದ್ದಾರೆ. 

ಮತ್ತೊಬ್ಬ ಬಳಕೆದಾರರು, 'ಯಾರಾದರೂ ಕ್ಯಾಶ್‌ ಆನ್‌ ಡೆಲಿವರಿ ಮಾಡುತ್ತಾರದರೆ ಹಣ ಹೇಗೆ ಪಡೆದುಕೊಳ್ಳುವುದು' ಎಂದು ತಮಾಷೆಯಾಗಿ ಪ್ರಶ್ನಿಸಿದ್ದಾರೆ. 'ಈ ರೀತಿ ಮಾಡಿದರೆ ಭಾರತೀಯರು ಪಿಜ್ಜಾ ತೆಗೆದುಕೊಳ್ಳುವ ಬದಲು ಡ್ರೋನ್ ತೆಗೆದುಕೊಳ್ಳುವುದು ಖಂಡಿತ' ಎಂದು ಇನ್ನೊಬ್ಬರು ಹೇಳಿದ್ದಾರೆ. ಮತ್ತೊಬ್ಬ ವ್ಯಕ್ತಿ,'ಜನರು ಫ್ರೀ ಪಿಜ್ಜಾ ಪಡೆಯಲು ಡ್ರೋನ್‌ಗೆ ಕಲ್ಲೆಸೆದರೆ ಏನು ಮಾಡುವುದು' ಎಂದು ಪ್ರಶ್ನಿಸಿದ್ದಾರೆ. 'ಝೊಮೆಟೋ ಡೆಲಿವರಿ ಬಾಯ್ಸ್ ತುಂಬಾ ಕಷ್ಟಪಟ್ಟು ಕೆಲಸ ಮಾಡ್ತಾರೆ. ಈ ಡ್ರೋನ್‌ನ ಮೂಲಕ  ಅವರ ಕೆಲಸವನ್ನು ಕಿತ್ತುಕೊಳ್ಳುವುದು ಬೇಡ' ಎಂದು ಇನ್ನೊಬ್ಬರು ಅನುಕಂಪ ವ್ಯಕ್ತಪಡಿಸಿದ್ದಾರೆ. ಒಟ್ನಲ್ಲಿ ಆಹಾರ ವಿತರಿಸೋ ಡ್ರೋನ್ ಇಂಟರ್‌ನೆಟ್‌ನಲ್ಲಿ ಸಖತ್ ಸುದ್ದಿ ಮಾಡ್ತಿರೋದಂತೂ ನಿಜ.

click me!