ವಿಪರೀತ ಸೆಕೆಗೆ ಜನರು ತತ್ತರಿಸಿದ್ದಾರೆ. ಎಷ್ಟೇ ನೀರು ಕುಡಿದ್ರೂ ದೇಹ ತಣ್ಣಗಾಗೋದಿಲ್ಲ. ಉಷ್ಣತೆ ನಾನಾ ಸಮಸ್ಯೆ ಸೃಷ್ಟಿಸುತ್ತಿದೆ. ಇಂಥ ಸಮಯದಲ್ಲಿ ನೀವು ಆಯುರ್ವೇದದ ಪಾನೀಯ ಸೇವನೆ ಮಾಡೋದು ಒಳ್ಳೆಯದು.
ಬೇಸಿಗೆಕಾಲ ಆರಂಭವಾದ್ರೆ ಸಾಕು ಕೋಲ್ಡ್ ಡ್ರಿಂಕ್ಸ್ ಹಾಗೂ ಜ್ಯೂಸ್ಗೆ ಬೇಡಿಕೆ ಹೆಚ್ಚು. ಜ್ಯೂಸ್ ಅಂಗಡಿಗಳ ಮುಂದೆ ಜನರ ಸಾಲನ್ನು ನಾವು ನೋಡ್ಬಹುದು. ವಿಪರೀತ ಸೆಕೆ ನಮ್ಮನ್ನು ಕಾಡ್ತಿದೆ. ಇದ್ರಿಂದಾಗಿ ಶರೀರದಲ್ಲಿ ನೀರಿನ ಪ್ರಮಾಣ ಕಡಿಮೆಯಾಗ್ತಿದ್ದು, ಅನೇಕರು ಅನಾರೋಗ್ಯಕ್ಕೆ ತುತ್ತಾಗ್ತಿದ್ದಾರೆ. ಬಿಸಿಲಿನಿಂದ ಹೆಚ್ಚುವ ಶರೀರದ ಉಷ್ಣತೆ ಡೀಹೈಡ್ರೇಶನ್, ಹೀಟ್ ಸ್ಟ್ರೋಕ್ ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಬಾಯಾರಿಕೆಯಾದಾಗ ಕೋಲ್ಡ್ (Cold) ನೀರು ಅಥವಾ ಜ್ಯೂಸ್ (Juice ) ಸೇವನೆ ಮಾಡ್ಬೇಕು ಅನ್ನಿಸೋದು ಸಾಮಾನ್ಯ. ಬಿಸಿಲ ಧಗೆಗೆ ಅದು ತಂಪೆನ್ನಿಸಿದ್ರೂ ತಂಪು ಪಾನೀಯಗಳು ಶರೀರಕ್ಕೆ ಬಹಳ ಹಾನಿಕರ. ದೇಹದ ತಾಪವನ್ನು ಹೆಚ್ಚಿಸುವ ಕೆಲಸವನ್ನು ಈ ಕೋಲ್ಡ್ ಡ್ರಿಂಕ್ಸ್, ಕೋಲ್ಡ್ ವಾಟರ್ ಮಾಡುತ್ತದೆ.
ವಾತಾವರಣದಲ್ಲಿ ಉಷ್ಣತೆ ಹೆಚ್ಚಿಗೆ ಇರುವಾಗ ಶರೀರವನ್ನು ತಂಪಾಗಿರಿಸಿಕೊಳ್ಳಲು ರಾಸಾಯನಿಕ ಮಿಶ್ರಿತ ತಂಪು ಪಾನೀಯಗಳನ್ನು ಕುಡಿಯುವ ಬದಲು ಆಯುರ್ವೇದ (Ayurveda) ದ ಜ್ಯೂಸ್ ಅನ್ನು ಸೇವಿಸಿದರೆ ದೇಹ ತಂಪಾಗುತ್ತದೆ. ಶರೀರದ ಉಷ್ಣತೆ ಕಡಿಮೆಯಾದಾಗ ವ್ಯಕ್ತಿಗೆ ತಂಪಿನ ಅನುಭವವಾಗುತ್ತದೆ. ನಾವಿಂದು ಶರೀರವನ್ನು ತಂಪುಗೊಳಿಸುವ ಡ್ರಿಂಕ್ಸ್ ಒಂದರ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ. ಶರೀರವನ್ನು ತಂಪಾಗಿರಿಸುತ್ತೆ ಈ ಆಯುರ್ವೇದಿಕ್ ಡ್ರಿಂಕ್ : ಮಾರುಕಟ್ಟೆಯಲ್ಲಿ ಸಿಗುವ ತರಹೇವಾರಿ ಕೃತಕ ಪಾನೀಯಗಳ ಬದಲಾಗಿ ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿಕೊಂಡು ನೀವು ಈ ಪಾನೀಯ ತಯಾರಿಸಬಹುದು. ಇದನ್ನು ತಯಾರಿಸುವುದು ಸುಲಭ ಮಾತ್ರವಲ್ಲ ರುಚಿಯೂ ಹೆಚ್ಚಿರುತ್ತದೆ.
ಬೇಸಿಗೆಯಲ್ಲಿ ಕೂಲ್ ಆಗಿರ್ಬೇಕು ಅಂದ್ರೆ ಈ ಮ್ಯಾಂಗೋ ರೆಸಿಪಿ ಮಾಡಿ ಸವಿಯಿರಿ
ಇಂದಿನ ಆಯುರ್ವೇದ ಪಾನೀಯ ಖರ್ಜೂರಾದಿ ಮಂಥಾ ಕೋಲ್ಡ್ ಡ್ರಿಂಕ್ :
ಈ ಪಾನೀಯವನ್ನು ತಯಾರಿಸಲು ಬೇಕಾಗುವ ಸಾಮಗ್ರಿ:
• 100 ಗ್ರಾಂ ಬೀಜವನ್ನು ಬೇರ್ಪಡಿಸಿದ ಖರ್ಜೂರ
• 100 ಗ್ರಾಂ ಒಣದ್ರಾಕ್ಷಿ
• 100 ಗ್ರಾಂ ಒಣಗಿದ ಅಂಜೂರ
• 500 ಎಂಎಲ್ ನೀರು
• 1 ಚಮಚ ಬೆಲ್ಲ (ಬೇಡವಾದಲ್ಲಿ ಬಿಡಬಹುದು)
ಖರ್ಜೂರಾದಿ ಮಂಥಾ ಮಾಡುವ ವಿಧಾನ
• ಮೊದಲು ಖರ್ಜೂರ, ಒಣದ್ರಾಕ್ಷಿ, ಅಂಜೂರ, ಬೆಲ್ಲ ಎಲ್ಲವನ್ನೂ ಬ್ಲೆಂಡರ್ ಗೆ ಹಾಕಿ.
• ಜಾರ್ ಗೆ ಎಲ್ಲವನ್ನು ಹಾಕಿದ ಮೇಲೆ ಅದನ್ನು ಚೆನ್ನಾಗಿ ಬ್ಲೆಂಡ್ ಮಾಡಿ.
• ಎಲ್ಲವೂ ಚೆನ್ನಾಗಿ ಪೇಸ್ಟ್ ಆದಮೇಲೆ ಅದನ್ನು ಒಂದು ಗ್ಲಾಸ್ ಗೆ ಹಾಕಿ.
• ಈ ಜ್ಯೂಸ್ ಅನ್ನು ಹೆಚ್ಚು ಬಿಸಿಲು ಇರುವ ಸಮಯದಲ್ಲಿ ಕುಡಿಯಿರಿ.
ಬೇಸಿಗೆಯಲ್ಲಿ ತಾಳೆ ಹಣ್ಣು ತಿನ್ನಲೇಬೇಕು, ಯಾಕೆ ಗೊತ್ತಾ?
ಖರ್ಜೂರಾದಿ ಮಂಥಾದಿಂದ ಉಂಟಾಗುವ ಪ್ರಯೋಜನಗಳು :
• ದೇಹ ನೈಸರ್ಗಿಕವಾಗಿ ತಂಪಾಗುತ್ತದೆ ಮತ್ತು ತಾಜಾತನ ಸಿಗುತ್ತದೆ.
• ಕಬ್ಬಿಣಾಂಶ ಸಿಗುತ್ತದೆ ಹಾಗೂ ಶಕ್ತಿ ದೊರಕುತ್ತದೆ.
• ಅಂಗಾಂಶಗಳಿಗೆ ಹೆಚ್ಚಿನ ಪೋಷಣೆ ಸಿಗುತ್ತದೆ.
• ಮದ್ಯಪಾನದ ನಶೆಯನ್ನು ಇಳಿಸಲು ಇದು ಒಳ್ಳೆಯ ಮನೆಮದ್ದಾಗಿದೆ.
ಈ ತೊಂದರೆ ಹೊಂದಿರುವವರಿಗೆ ಖರ್ಜೂರಾದಿ ಮಂಥಾ ಒಳ್ಳೆಯದಲ್ಲ : ಈ ಆಯುರ್ವೇದಿಕ್ ಜ್ಯೂಸ್ ನಲ್ಲಿರುವ ಖರ್ಜೂರ, ದ್ರಾಕ್ಷಿ, ಅಂಜೂರ ಮುಂತಾದವು ಮನುಷ್ಯನ ಶರೀರಕ್ಕೆ ಬಹಳ ಪ್ರಯೋಜನಕಾರಿ. ಯಾವುದೇ ಆಹಾರ ಶರೀರಕ್ಕೆ ಎಷ್ಟೇ ಒಳ್ಳೆಯದಾದರೂ ಕೂಡ ನಮ್ಮ ಆರೋಗ್ಯ, ಅನಾರೋಗ್ಯವನ್ನು ಲಕ್ಷ್ಯದಲ್ಲಿ ಇಟ್ಟುಕೊಂಡು ಆಹಾರವನ್ನು ಸೇವಿಸಬೇಕು. ಹಾಗೆಯೇ ಈ ಜ್ಯೂಸ್ ಕೂಡ ಶರೀರದಲ್ಲಿ ಕೆಲವು ತೊಂದರೆ ಹೊಂದಿರುವವರಿಗೆ ತೊಂದರೆ ಉಂಟುಮಾಡಬಹುದು. ಆ ಕಾರಣಕ್ಕಾಗಿ ಶೀತ, ಕೆಮ್ಮು, ಮಧುಮೇಹ, ಸೈನಸ್ ತೊಂದರೆ, ಅಲರ್ಜಿ, ಜ್ವರ ಮುಂತಾದ ತೊಂದರೆಯಿಂದ ಬಳಲುತ್ತಿರುವವರು ಈ ಜ್ಯೂಸ್ ನಿಂದ ದೂರವಿರಬೇಕು ಅಥವಾ ಸೂಕ್ತ ತಜ್ಞರ ಸಲಹೆ ಪಡೆದುಕೊಂಡು ನಂತರ ಜ್ಯೂಸ್ ಸೇವನೆ ಮಾಡಬಹುದು.