ಅಣ್ಣ-ತಂಗಿಯರ ಪವಿತ್ರ ರಕ್ಷಾ ಬಂಧನ: ಚೀನಾ ರಾಖಿಗಳಿಂದ ದೂರವಿರಿ!

By Kannadaprabha NewsFirst Published Aug 22, 2021, 11:57 AM IST
Highlights

* ಜಗತ್ತಿನಲ್ಲಿ ಸ್ವಾರ್ಥ ರಹಿತವಾದ ಸಂಬಂಧವಿದ್ದರೆ ಅದು ಅಣ್ಣ-ತಂಗಿಯ ಪ್ರೀತಿಯ ಸಂಬಂಧ ಮಾತ್ರ

* ರಕ್ಷಾ ಬಂಧನದ ದಿನ ಸೋದರಿಯರು ತಮ್ಮ ಸೋದರರಿಗೆ ರಾಖಿ ಕಟ್ಟುವುದಕ್ಕೆ ಬಹಳ ಮಹತ್ವ

* ಈ ದಿನ ನೂಲು ಧರಿಸುವುದಕ್ಕೂ ಧಾರ್ಮಿಕ ಮಹತ್ವವಿದೆ

* ಪುರಾಣದ ಪ್ರಕಾರ ಇಂದ್ರನಿಗೆ ಇಂದ್ರಾಣಿ, ಕೃಷ್ಣನಿಗೆ ದ್ರೌಪದಿ ರಕ್ಷೆಯ ಸೂತ್ರ ಕಟ್ಟಿದ ದಿನವಿದು

-ಗಣೇಶ ಭಟ್ಟ ನೆಲ್ಲಿಕೇರಿ, ಕುಮಟಾ

* ಇಂದು ರಕ್ಷಾಬಂಧನ

ಭಾರತೀಯ ಪ್ರಾಚೀನ ಋುಷಿ-ಮಹರ್ಷಿಗಳು ಮನುಷ್ಯನ ಜೀವನದಲ್ಲಿ ಸುಖ-ಶಾಂತಿ ನೆಲೆಸಲು, ಉತ್ಕೃಷ್ಟಚಿಂತನೆ ನಡೆಸಿ, ಧರ್ಮಾಚರಣೆಯ ವಿಧಿವಿಧಾನಗಳನ್ನು ಸೂಚಿಸಿದರು. ಅದರ ಒಂದು ಭಾಗವಾಗಿ ಹಬ್ಬ-ಹರಿದಿನಗಳ ‘ಆಚರಣೆ’ ನಡೆದು ಬಂದಿದೆ. ಶ್ರಾವಣ ಮಾಸ ಹಬ್ಬಗಳ ಆಗರವಾಗಿದ್ದು, ಹಿಂದೂ ಪಂಚಾಂಗದ ಪ್ರಕಾರ ಶ್ರಾವಣ ಮಾಸದ ಹುಣ್ಣಿಮೆಯನ್ನು ‘ನೂಲುಹುಣ್ಣಿಮೆ’, ‘ರಕ್ಷಾಬಂಧನ’, ‘ಉಪಾಕರ್ಮ’ ಮುಂತಾದ ಹೆಸರಿನಿಂದ ಹಬ್ಬವಾಗಿ ಆಚರಿಸುತ್ತಾ ಬಂದಿದ್ದೇವೆ.

ಆದಿಮಾನವ ಆಧುನಿಕ ಮಾನವನಾಗುವಲ್ಲಿ ಮಹತ್ವದ ಕೊಡುಗೆಯನ್ನು ನೀಡಿದ್ದು ನೂಲು. ನೂಲನ್ನು ತೊಟ್ಟುಕೊಳ್ಳುವುದು ನಮ್ಮ ಸಂಸ್ಕೃತಿಯ ಸಂಸ್ಕಾರದ ಒಂದು ಅಂಗ. ವಸ್ತ್ರಸಂಸ್ಕೃತಿಯ ಮೂಲವಾದ ನೂಲಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವಾಗಿ ‘ನೂಲುಹುಣ್ಣಿಮೆ’ ಬಂದಿದೆ. ‘ನನ್ನ ಸಹೋದರನಿಗೆ ಕಷ್ಟ-ನಷ್ಟಗಳಿಂದ, ಕೆಟ್ಟಜನರಿಂದ, ರೋಗಗಳಿಂದ, ರಕ್ಷಣೆ ಉಂಟಾಗಲಿ ಹಾಗೂ ನನ್ನ ರಕ್ಷಣೆಯ ಭಾರ ನಿನ್ನದು’ ಎಂದು ಸಹೋದರಿಯು ಸಹೋದರನಿಗೆ ರಕ್ಷಾಸೂತ್ರ ಅಥವಾ ರಾಖಿಯನ್ನು ಕಟ್ಟುವಳು. ಸೂತ್ರ ಬಂಧನದ ಹಿಂದೆ ರಕ್ಷಣೆಯ ಭಾರವಿರುವುದರಿಂದ ‘ರಕ್ಷಾಬಂಧನ’ ಎಂಬ ಹೆಸರು ಬಂದಿದೆ. ಇದು ಸಹೋದರ-ಸಹೋದರಿಯರ ನಿರ್ಮಲ ಪ್ರೀತಿಯ ಪ್ರತೀಕದ ಹಬ್ಬವಾಗಿ ಬೆಳೆದು ಬಂದಿದೆ. ತಾಯಿ-ಮಗ, ಪತಿ-ಪತ್ನಿ, ಗುರು-ಶಿಷ್ಯ ಇವೇ ಮುಂತಾದ ಪ್ರೀತಿಯ ಸಂಬಂಧಗಳು ಬಹುತೇಕ ಸ್ವಾರ್ಥದಿಂದ ಕೂಡಿರುತ್ತವೆ. ಆದರೆ ಈ ಜಗತ್ತಿನಲ್ಲಿ ಸ್ವಾರ್ಥರಹಿತವಾದ ಸಂಬಂಧವಿದ್ದರೆ ಅದು ಅಣ್ಣ-ತಂಗಿಯ ಪ್ರೀತಿಯ ಸಂಬಂಧ ಮಾತ್ರ.

ಜನಿವಾರ ಧಾರಣೆಯ ಮಹತ್ವ

ಸಂಪ್ರಾಪ್ತೇ ಶ್ರಾವಣಸ್ಯಾಂತೇ, ಪೌರ್ಣಮಾಸ್ಯಾಂ ದಿನೋದಯೇ

ಉಪಾಕರ್ಮಣೆ ಕರ್ತವ್ಯಮೃಷೀಣಾಂ ಚೈವ ಪೂಜನಮ್‌

ತತೋಪರಾಹ್ಣ ಸಮಯೇ ರಕ್ಷಾಪೇಟಲಿಕಾಂ ಶುಭಾಮ್‌

ಎಂಬ ನಿರ್ಣಯ ಸಿಂಧುವಿನ ವಚನದಂತೆ, ಶ್ರಾವಣ ಪೂರ್ಣಿಮೆಯಂದು ‘ದ್ವಿಜರು’ ಶ್ರದ್ಧಾ-ಮೇಧಾ-ಪ್ರಜ್ಞಾವರ್ಧನೆಗೆ, ಶ್ರುತಿ-ಸ್ಮೃತಿಯಲ್ಲಿ ಹೇಳಿದ ಕರ್ಮಾಂಗಗಳ ಯೋಗ್ಯತಾ ಪ್ರಾಪ್ತಿಗೆ, ಯಜ್ಞೋಪವೀತಕ್ಕೆ ಓಂಕಾರ ಅಗ್ನಿ ಮುಂತಾದ ನವತಂತು ದೇವತೆ ಹಾಗೂ ತ್ರಿಮೂರ್ತಿಗಳನ್ನು ಆಹ್ವಾನಿಸಿ, ಪೂಜಿಸಿ, ಗಾಯತ್ರಿಯಿಂದ ಅಭಿಮಂತ್ರಿಸಿ, ಅಗ್ನಿಗೂ ಸಮರ್ಪಿಸಿ, ಗುರುಹಿರಿಯರಿಗೆ ವಿತರಿಸಿ ಉಪಾಕರ್ಮ ಹೋಮದ ಸಮ್ಮುಖದಲ್ಲಿ ಯಜ್ಞೋಪವಿತಧಾರಣೆ ಮಾಡುವರು. ಈ ದಿನ ದೇವರಿಗೂ ಯಜ್ಞೋಪವಿತ ತೊಡಿಸಿ ಪೂಜಿಸುವರು. ನಮ್ಮ ಬದುಕಿಗೆ ಚೆಲುವನ್ನು ತುಂಬುವ ದೇವ-ಋುಷಿ-ಪಿತೃಗಳ ತರ್ಪಣದ ಮೂಲಕ ಅವರನ್ನು ಸ್ಮರಿಸಿ, ವೇದ-ವೇದಾಂಗಗಳ ಅಧ್ಯಯನ ಕೈಗೊಂಡು ಅನುಗ್ರಹವನ್ನು ಬೇಡುವವರು.

ಪೌರಾಣಿಕ-ಐತಿಹಾಸಿಕ ಹಿನ್ನೆಲೆ

ಭವಿಷ್ಯ ಪುರಾಣದ ಪ್ರಕಾರ ಹಿಂದೆ ದೇವ-ದಾನದವರಿಗೆ ಹನ್ನೆರಡು ವರ್ಷಗಳ ಕಾಲ ನಿರಂತರ ಯುದ್ಧ ನಡೆಯಿತು. ರಾಕ್ಷಸರು ದೇವತೆಗಳನ್ನು ಸೋಲಿಸಿ, ದೇವಲೋಕವನ್ನು ಆಕ್ರಮಿಸಿ ದೇವತೆಗಳನ್ನು ಅಲ್ಲಿಂದ ಹೊರದಬ್ಬಿದರು. ಮೂರು ಲೋಕದ ಆಡಳಿತವನ್ನು ಕೈವಶ ಮಾಡಿಕೂಂಡ ದಾನವರು, ಮನುಷ್ಯರು ಯಾವುದೇ ಯಜ್ಞ-ಯಾಗಾದಿಗಳನ್ನು ಮಾಡಬಾರದೆಂದು ತಮ್ಮನ್ನೇ ಪೂಜಿಸಬೇಕೆಂದರು. ಇದರ ಪರಿಣಾಮ ವೇದಪಠಣ-ಯಜ್ಞ- ಉತ್ಸವಾದಿಗಳು ನಿಂತವು. ಧರ್ಮನಾಶವಾಗಿ ದೇವತೆಗಳು ಕ್ಷೀಣಬಲರಾದಾಗ ದೇವರಾಜ ಇಂದ್ರನು, ಗುರು ಬ್ರಹಸ್ಪತಿ ಆಚಾರ್ಯರಲ್ಲಿ ವಿನೀತನಾಗಿ ಹೀಗೆ ಪ್ರಾರ್ಥಿಸಿದ - ‘ಗುರುವರ, ಈ ಪರಿಸ್ಥಿತಿಯಲ್ಲಿ ಯುದ್ಧ ಮಾಡಲಾರೆ, ಮಾಡದೇ ಇರಲಾರೆ. ಏನು ಮಾಡಬೇಕೆಂದು ಅರಿಯದವನಾಗಿದ್ದೇನೆ. ಯಾವುದಾದರೂ ಉಪಾಯ ಸೂಚಿಸಿ’ ಎಂದಾಗ ದೇವೇಂದ್ರನ ವೇದನೆ ಅರಿತು ವಿಜಯ ಪ್ರಾಪ್ತಿಯಾಗಲು, ಶ್ರಾವಣ ಪೂರ್ಣಿಮೆ ದಿನ ರಕ್ಷಾವಿಧಾನವನ್ನು ಮಾಡಲು ಸೂಚಿಸಿದರು. ಅದರಂತೆ ಇಂದ್ರಾಣಿ ಶ್ರಾವಣ ಪೂರ್ಣಿಮೆ ದಿನ ಇಂದ್ರನಿಗೆ ರಕ್ಷಾಸೂತ್ರ ಕಟ್ಟಿದಳು. ಈ ರಕ್ಷಾಬಂಧನದ ರಕ್ಷೆಯೊಂದಿಗೆ, ಯುದ್ಧಭೂಮಿಗೆ ಹೋದ ದೇವೇಂದ್ರನು ದಾನವರನ್ನು ಸದೆಬಡೆದು ವಿಜಯದೊಂದಿಗೆ ಹಿಂತಿರುಗಿ ಅಮರಾವತಿಯಲ್ಲಿ ಪುನಃ ಪ್ರತಿಷ್ಠಾಪನೆಗೊಂಡ. ಅಲ್ಲಿಂದ ಮೊದಲುಗೊಂಡು ನಮ್ಮ ಸಂಸ್ಕೃತಿಯಲ್ಲಿ ರಕ್ಷಾಬಂಧನ ಪದ್ಧತಿ ಬೆಳೆದು ಬಂತು.

ಕೃಷ್ಣ-ದ್ರೌಪದಿಯ ಸೋದರತೆ

ಮತ್ತೊಂದು ಪುರಾಣ ಕಥೆಯ ಪ್ರಕಾರ ವಾಮನನು ರಾಜಾ ಬಲಿಗೆ ಈ ದಿನವೇ ರಕ್ಷಾಸೂತ್ರ ಕಟ್ಟಿದಕ್ಷಿಣೆ ಬೇಡಿದ್ದ. ಇನ್ನು ಮಹಾಭಾರತದಲ್ಲಿ ಶ್ರಾವಣ ಪೂರ್ಣಿಮೆಯಂದು ನಡೆದ ಈ ಸಂದರ್ಭ ಸುಪ್ರಸಿದ್ಧವಾದುದು. ಕೃಷ್ಣನು ಶಿಶುಪಾಲನನ್ನು ವಧಿ​ಸುವಾಗ ಕೃಷ್ಣನ ಬಲಗೈ ತೋರುಬೆರಳಿಗೆ ಗಾಯವಾಯಿತು. ಅಲ್ಲೇ ಇದ್ದ ದ್ರೌಪದಿ ಕೂಡಲೇ ತನ್ನ ಸೀರೆಯ ಸೆರಗನ್ನು ಹರಿದು, ಕೃಷ್ಣನ ತೋರುಬೆರಳಿಗೆ ಕಟ್ಟುವಳು. ನಂತರ ದ್ರೌಪದಿಯ ವಸ್ತಾ್ರಪಹರಣದ ಸಂದರ್ಭದಲ್ಲಿ ಶ್ರೀಕೃಷ್ಣ ಅಕ್ಷಯಂಬರವನ್ನು ಇತ್ತು ಆಕೆಯನ್ನು ರಕ್ಷಿಸಿದ. ದ್ರೌಪದಿ ಕಟ್ಟಿದ ಕಟ್ಟು ಆಕೆಯ ರಕ್ಷಣೆಗೆ ಕಾರಣವಾಯಿತು.

ಪುರಾಣ ಕಾಲದಿಂದ ಇತಿಹಾಸಕಾಲಕ್ಕೆ ಇಣುಕಿದಾಗ, ಕ್ಷತ್ರಿಯ ಪುರುಷರು ಯುದ್ಧಕ್ಕೆ ತೆರಳುವಾಗ ಮಹಿಳೆಯರು ರಕ್ಷಾಸೂತ್ರವನ್ನು ಅವರ ಬಲಗೈಗೆ ಕಟ್ಟಿಹಣೆಗೆ ಮಂಗಳದ ತಿಲಕವನ್ನಿಟ್ಟು ‘ನಮ್ಮ ರಾಜ್ಯದ ರಕ್ಷಣೆಯ ಭಾರ ನಿಮ್ಮದು. ವಿಜಯವಾರ್ತೆಯೊಂದಿಗೆ ಮರಳಿ ಬನ್ನಿ’ ಎಂದು ಹಾರೈಸಿ ಕಳುಹಿಸುತ್ತಿದ್ದರು. ಒಮ್ಮೆ ಮೇವಾಡದ ರಾಣಿ ಕರ್ಮಾವತಿ, ತನ್ನ ರಾಜ್ಯದ ಮೇಲೆ ದಾಳಿ ಮಾಡುವ ಶತ್ರುವಿನಿಂದ ರಕ್ಷಣೆ ನೀಡುವಂತೆ ಮೊಗಲ್‌ ದೊರೆ ಹುಮಾಯೂನ್‌ಗೆ ರಾಖಿಯೊಂದಿಗೆ ಸಂದೇಶ ಕಳುಹಿಸಿದಾಗ, ಮುಸಲ್ಮಾನನಾಗಿಯೂ ರಾಖಿಯ ಬಗ್ಗೆ ಗೌರವ ಹೊಂದಿದವನಾಗಿ, ಅದನ್ನು ಸ್ವೀಕರಿಸಿ ಮೇವಾಡ ತಲುಪಿ, ಕರ್ಮಾವತಿಯ ರಾಜ್ಯವನ್ನು ರಕ್ಷಿಸಿದ ಪ್ರಸಂಗ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ರಕ್ಷಾಬಂಧನ ಪರ್ವವು ಪರಸ್ಪರ ಏಕತೆಯನ್ನು ಸಾರುವ ಹಬ್ಬವಾಗಿ ಹೊರಹೊಮ್ಮಿತ್ತು.

ಈ ದಿನ ಸಮುದ್ರ ತೀರದ ವಾಸಿಗಳು ಸಮುದ್ರ ತೀರಕ್ಕೆ ತೆರಳಿ ಸಮುದ್ರ ರಾಜನನ್ನು ಉದ್ದೇಶಿಸಿ ಕ್ಷೀರಾಭಿಷೇಕ ಮಾಡಿ ಪೂಜಿಸಿ, ಯಜ್ಞೋಪವೀತ ಹಾಗೂ ತೆಂಗಿನಕಾಯಿ ಫಲ ಸಮರ್ಪಿಸಿ ಶುಭವನ್ನು ಪ್ರಾರ್ಥಿಸುವರು. ಅಂತೆಯೇ ಈ ದಿನ ಬಾಲಕ-ಬಾಲಕಿಯರು ನಮ್ಮನ್ನಾಳುವ ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ, ರಾಷ್ಟ್ರಪತಿಗಳ ಕೈಗೆ ರಾಖಿಯನ್ನು ಕಟ್ಟಿಶುಭ ಕೋರುವರು.

ಚೀನಾ ರಾಖಿಗಳಿಂದ ದೂರವಿರಿ

ಹಿಂದೆಲ್ಲಾ ರಕ್ಷಾ ಬಂಧನದ ದಿನ ಕೇಸರಿ-ಕೆಂಪು-ಹಳದಿ ಬಣ್ಣಗಳಿಂದ ಕೂಡಿದ ರೇಷ್ಮೆಯ ನೂಲನ್ನು ರಾಖಿಯನ್ನಾಗಿ ಕಟ್ಟಿಕೊಳ್ಳುತ್ತಿದ್ದೆವು. ಇಂದಿಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಖಿ ವೈಶಿಷ್ಟ್ಯಪೂರ್ಣವಾದುದು. ಯಾವಾಗ ಚೀನಾದ ರಾಖಿಗಳು ಮಾರುಕಟ್ಟೆಗೆ ಕಾಲಿಟ್ಟಿತೋ ಆಗ ರಾಖಿಯ ಸ್ವರೂಪವೇ ಬದಲಾಗಿ ಹೋಯಿತು. ಚಿನ್ನ-ಬೆಳ್ಳಿಯಿಂದ ಮಾಡಿದ ರಾಖಿಯಿಂದ ಹಿಡಿದು, ಕೆಂಪು-ಕಪ್ಪು-ಹಳದಿ ಮುಂತಾದ ದಾರಗಳಿಂದ ಕೂಡಿದ, ವಿವಿಧ ಪ್ಲಾಸ್ಟಿಕ್‌ ಮಣಿಯಿಂದ ಅಲಂಕರಿಸಲ್ಪಟ್ಟಚೀನಿ ರಾಖಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಚೀನಾ ರಾಖಿಗಳನ್ನು ಬಹಿಷ್ಕರಿಸುವ ಸಮಯ ಬಂದಿದೆ. ಚೀನಿ ರಾಖಿಗಳ ಸ್ಥಾನದಲ್ಲಿ ನಮ್ಮ ನೆಲದಲ್ಲೇ ತಯಾರಾದ, ನಮ್ಮದೇ ರಾಖಿ ಕಟ್ಟುವ ಅಭಿಯಾನ ಮುನ್ನೆಲೆಗೆ ಬರಬೇಕಾಗಿದೆ. ನಮ್ಮದೇ ರಕ್ಷೆಯ ಹಿಂದೆ ನಮ್ಮ ದೇಶದ ಸುರಕ್ಷತೆ ಅಡಗಿದೆ ಎಂಬುದನ್ನು ನಾವು ಮರೆಯಬಾರದು.

click me!