ಅರ್ಜುನ ಸಂಕಟ ಪಡದಿದ್ದರೆ ಭಗವದ್ಗೀತೆ ಹುಟ್ಟುತ್ತಿತ್ತೇ!

By Suvarna NewsFirst Published Jan 20, 2020, 10:03 AM IST
Highlights

‘ನೋವೆಂಬುದು ಅತ್ಯಂತ ಶ್ರೇಷ್ಠ ಗುರು. ಆದರೆ ಯಾರೂ ಅವನ ಶಿಷ್ಯನಾಗಲು ಇಷ್ಟಪಡುವುದಿಲ್ಲ’ ಎನ್ನುತ್ತದೆ ತಾವೋ ಸಿದ್ಧಾಂತ. ಕಾಡುತ್ತಿರುವ ನೋವಿನ ಮೇಲೆ ಎಲ್ಲಾ ಭಾರ ಹೊರಿಸುವುದನ್ನ ಬಿಟ್ಟು, ಅದು ತಿಳಿಸಿಕೊಡಲು ಬಯಸುತ್ತಿರುವ ಪಾಠದ ಕಡೆ ಗಮನಕೊಟ್ಟರೆ ಜೀವನ ಸಾರ್ಥಕ.

ಬಿ. ಆರ್‌. ಸುವರ್ಣ ಶರ್ಮ

ಆಧ್ಯಾತ್ಮ ಎಂದ ತಕ್ಷಣ ಎಲ್ಲಾ ನೋವುಗಳಿಂದ ದೂರಾಗಿ, ಅನಂತತೆಯ ಕಡೆಗಿನ ಪಯಣ ಎಂದು ಎಲ್ಲರೂ ಹೇಳುವುದು ಸತ್ಯವೇ ಆದರೂ, ಇದರ ನಡುವೆ ನಾವು ನಮಗಾಗುತ್ತಿರುವ ನೋವನ್ನು ಕಡೆಗಣಿಸಿಬಿಡುತ್ತೇವೆ, ಕೆಲವೊಮ್ಮೆ ಸುಕಾಸುಮ್ಮನೆ ಬೇರೆ ಏನೋ ಆಲೋಚನೆಯಲ್ಲಿ ತೊಡಗಿದವರಂತೆ ನೋವಿನಿಂದ ನಮ್ಮ ಮನಸ್ಸನ್ನು ಬೇರೆಡೆಗೆ ತಿರುಗಿಸಿ, ಸರಿಯಾದ ಅರಿವಿಲ್ಲದೆ, ಚಿಕಿತ್ಸೆ ಇಲ್ಲದೆ, ಸಣ್ಣ ಗಾಯವು ಕ್ಯಾನ್ಸರ್‌ ಆಗಲು ನಾವೇ ಕಾರಣರಾಗಿರುತ್ತೇವೆ.

ಭಗವದ್ಗೀತೆಯ 18 ಅಧ್ಯಾಯಗಳಲ್ಲಿ ಕೃಷ್ಣ ಹೇಳಿದ್ದೇನು?

ಹಾಗೆ ನೋಡಿದ್ರೆ, ನಮ್ಮ ಹುಟ್ಟು ಎನ್ನುವುದೇ ತಾಯಿಯು ಭಾರಿಸಿದ ನೋವಿನಿಂದ ಶುರುವಾದದ್ದು. ಪ್ರತೀ ಹುಟ್ಟಿನ ಮೂಲ ನೋವು. ಅಲ್ಲಲ್ಲ, ನೋವನ್ನು ಭರಿಸುವ ಶಕ್ತಿ. ಆಧ್ಯಾತ್ಮ ಸಾಧನೆಯ ಸಾಧನೆಯ ಮೂಲ ಧ್ಯೇಯ ಜೀವನದ ಅತ್ಯಂತ ಎತ್ತರದ ಆನಂದವನ್ನು, ಮೋಕ್ಷವನ್ನು ಪಡೆಯುವುದಾಗಿದೆ. ಈ ಮಾರ್ಗದಲ್ಲಿ ಎದುರಾಗುವ ಹಲವಾರು ನೋವು,ಸಂಕಟಗಳೆಂಬ ಬಿರುಗಾಳಿಗಳೆಲ್ಲವೂ ಅರಿವು ಮೂಡಿಸುವುದಕ್ಕೇ ಆಗಿದೆ. ಜಗತ್ತಿನಲ್ಲಿ ನೋವು ಕಲಿಸಿಕೊಟ್ಟಪಾಠವನ್ನು ಯಾವ ಗುರುವೂ ಸಹ ಕಲಿಸಲಾಗುವುದಿಲ್ಲ.

ಒಬ್ಬ ನಿಜವಾದ ಆಧ್ಯಾತ್ಮ ಸಾಧಕ, ತನಗೆ ಬೀಳುವ ಪ್ರತೀ ನೋವಿನ ಛಡಿಯೇಟುಗಳನ್ನು ಸೂಕ್ಷ್ಮತೆಯಿಂದ ಗ್ರಹಿಸಿ ಅದರಿಂದ ಹೊಸ ಪಾಠಗಳನ್ನು ಕಲಿಯುತ್ತಾನೆ. ಅದರ ಒಳ

ಅರ್ಥಗಳನ್ನು ತಿಳಿದು ಹೊಸ ಬೆಳಕನ್ನು ಕಾಣುತ್ತಾನೆ. ಕತ್ತಲೆ ಇಲ್ಲದಿದ್ದರೆ ಬೆಳಕಿನ ಪ್ರಾಮುಖ್ಯತೆ ತಿಳಿಯುತ್ತಿರಲಿಲ್ಲ. ನೋವೇ ಇರದಿದ್ದರೆ ನಲಿವಿನ ಮೌಲ್ಯ ತಿಳಿಯುತ್ತಿರಲಿಲ್ಲ. ಸಂಕಟದಲ್ಲಿರುವ ಅರ್ಜುನ ಇರದಿದ್ದರೆ, ಕೃಷ್ಣನ ಜೀವನದ ಪಾಠಗಳೇ ನಮಗೆ ಸಿಗುತ್ತಿರಲಿಲ್ಲ.

ಈ ಸುಖ ದುಃಖ, ನೋವು ನಲಿವು ಇವೆಲ್ಲಕ್ಕಿಂತ ಎತ್ತರದ ಅನುಭೂತಿ ಇದೆ ಎಂದು ಆಧ್ಯಾತ್ಮ ಸಾರವು ಸಾರುತ್ತಲೇ ಇದೆ. ಜಗತ್ತಿನ ಪ್ರತಿ ಅಣು-ಕಣವೂ ಗುರುವೇ ಎಂಬುದು ಎಷ್ಟುಸತ್ಯವೋ, ಕೆಲವರಿಗೆ ನೋವು ಎಂಬ ಮಹಾ ಗುರುವಿನ ಅಗತ್ಯವಿದೆ ಎಂಬುದು ಅಷ್ಟೇ ಸತ್ಯ.

ಹೃದಯ ಸೀಳುವಾಗ ಹುಟ್ಟುವ ವೇದನೆಯು ವೈರಾಗ್ಯವಾಗಿ ಬದಲಾಗಬೇಕು, ವೈರಾಗ್ಯವು ನೆಮ್ಮದಿಯ ದೀಪವೊಂದನ್ನು ಹಚ್ಚಿ ಬದುಕು ಬೆಳಕಾಗಬೇಕು.

ಯಾವುದೇ ನೋವುಗಳಿಗೆ ಹೆದರದೆ ಅದರ ಆಳಕ್ಕಿಳಿದು ಪೂರ್ತಿ ತಲ್ಲೀನತೆಯಿಂದ ಗಮನಿಸಬೇಕು. ನಂತರ ಅದನ್ನ ಪಾರಾಗಿಬಂದ ವ್ಯಕ್ತಿಯ ನೆಮ್ಮದಿ, ಆಹ್ಲಾದವೇ ಬೇರೆಯತರದ್ದು, ಅವನ ಜ್ಞಾನ ಎಂದಿಗೂ ಬರಿದಾಗುವುದಿಲ್ಲ.

Fact Check: ಅರೇಬಿಕ್‌ ‘ಭಗವದ್ಗೀತೆ’ಯನ್ನು ಪ್ರಕಟಿಸಿತಾ ಸೌದಿ ಸರ್ಕಾರ?

‘ನೋವು- ನಲಿವುಗಳನ್ನು ಸಮಚಿತ್ತದಿಂದ ನಿಭಾಯಿಸದ ವ್ಯಕ್ತಿಗೆ ಮೋಕ್ಷ ದೊರೆಯುವುದಿಲ್ಲ’ ಎಂದು ಭಗವದ್ಗೀತೆಯ ಉಲ್ಲೇಖವಿದೆ. ‘ನೋವೆಂಬುದು ಅತ್ಯಂತ ಶ್ರೇಷ್ಠ ಗುರು. ಆದರೆ ಯಾರೂ ಅವನ ಶಿಷ್ಯನಾಗಲು ಇಷ್ಟಪಡುವುದಿಲ್ಲ’ ಎನ್ನುತ್ತದೆ ತಾವೋ ಸಿದ್ಧಾಂತ.

ನಮಗೆ ಕಾಡುತ್ತಿರುವ ನೋವಿನ ಮೇಲೆಯೇ ಎಲ್ಲಾ ಭಾರವನ್ನೂ ಹೊರಿಸುವುದನ್ನ ಬಿಟ್ಟು, ಅದು ತಿಳಿಸಿಕೊಡಲು ಬಯಸುತ್ತಿರುವ ಪಾಠದ ಕಡೆ ಗಮನಕೊಟ್ಟರೆ ಜೀವನ

ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ಹೃದಯ ಹಗುರಾಗುತ್ತದೆ. ನೆಮ್ಮದಿಯನೆಂಬ ಊರು ಸೇರಬೇಕಾದರೆ, ನೋವೆಂಬ ಕಡಲನ್ನ ದಾಟಿಯೇ ಹೋಗಬೇಕು. ಕೇವಲ ಸಮುದ್ರದೆಡೆಗೆ ಭಯದಿಂದಲೋ, ದುಃಖದಿಂದಲೋ ನೋಡುತ್ತಲೇ ಇದ್ದಾರೆ ಎಂದಿಗೂ ಕಡಲನ್ನು ದಾಟಲಾಗದು.

ನೋವನ್ನು ನಲಿವಾಗಿ ಪರಿವರ್ತಿಸಿಕೊಂಡು ಕಾದ ಕುಲುಮೆಯಿಂದ ಶುದ್ಧ ಅಪರಂಜಿಯಂತೆ ಮೇಲೇಳಬೇಕಿದೆ. ನೋವೆಂಬ ಗುರುವಿಗೆ ಕೈಮುಗಿದು, ಏನು ಕಲಿಸುವೆಯೋ ಕಳಿಸು ನಾನು ಸಿದ್ಧ ಎಂದು ಧೈರ್ಯದಿಂದ ಹೇಳಬೇಕಿದೆ.

ಕೇವಲ ಪೆಟ್ಟುಗಳನ್ನೇ ತಿಂದ ಕಗ್ಗಲ್ಲು, ಜಗತ್ತೇ ಪೂಜಿಸುವ ಮೂರ್ತಿಯಾಗಬೇಕಿದೆ. ನಮ್ಮ ಆಲೋಚನೆಗಳು ಬದಲಾಗಬೇಕಿದೆ! ಏನಂತೀರಿ!

click me!