ಕೊಲೆ ಆರೋಪಿ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರು ಪೊಲೀಸ್‌ ಕಸ್ಟಡಿಯಿಂದ ಆಸ್ಪತ್ರೆಗೆ ಶಿಫ್ಟ್!

By Gowthami K  |  First Published Jun 18, 2024, 5:16 PM IST

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.


ಬೆಂಗಳೂರು (ಜೂ.18): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸರ ಕಸ್ಟಡಿಯಲ್ಲಿದ್ದ ಪವಿತ್ರಾಗೌಡ ಅಸ್ವಸ್ತರಾಗಿದ್ದ ಕಾರಣ ಇಂದು ಮಧ್ಯಾಹ್ನ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ವೈದ್ಯರು ಬಂದಿದ್ದರು. ಪವಿತ್ರಾಗೌಡ ಅಸ್ವಸ್ಥಳಾದ ಹಿನ್ನೆಲೆ ವೈದ್ಯರನ್ನ ಕರೆಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಪವಿತ್ರಾಗೌಡಳನ್ನು ಮಲ್ಲತ್ತಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ  ದಾಖಲು ಮಾಡಲಾಗಿದೆ. ಚಿಕಿತ್ಸೆ ಕೊಡಿಸಿದ ಬಳಿಕ ಮತ್ತೆ ಪೊಲೀಸ್‌ ಠಾಣೆಗೆ ಕರೆದೊಯ್ಯಲಾಗಿದೆ. 

ಕೊಲೆ ಪ್ರಕರಣ ಬಯಲಿಗೆ ಬಂದ ಬಳಿಕ ಪವಿತ್ರಾ ಗೌಡ ಮನೆಗೆ ಶೋಧಕ್ಕೆ ತೆರಳಿದ ವೇಳೆ ಮನೆಯಲ್ಲಿ ಸುಮಾರು 15 ಕೋಟಿ ಮೌಲ್ಯದ ಆಸ್ತಿ ಪತ್ರ ಪತ್ತೆಯಾಗಿದೆ ಎಂದು ತಿಳಿದುಬಂದಿದ್ದು, ಇದರಲ್ಲಿ ರಾಜಕಾರಣಿಗಳ ಕೈವಾಡ ಇದೆ ಎಂದು ತಿಳಿದುಬಂದಿದೆ. ಹೀಗಾಗಿ ಆಸ್ತಿ ಖರೀದಿ ಬಗ್ಗೆ ಪೊಲೀಸರು ತನಿಖೆಯ ಬೆನ್ನು ಬಿದಿದ್ದಾರೆ. ಹಣದ ಮೂಲದ ಬಗ್ಗೆ ಪತ್ತೆ ಮಾಡಲು ಮುಂದಾಗಿದ್ದಾರೆ.

Latest Videos

undefined

ದರ್ಶನ್ ಮನೆ ತೆರವು ಬಗ್ಗೆ ಡಿಕೆಶಿ ಮಾತು, ನೀನು ಸ್ಟೇ ತಂದಿದ್ರು ಮಾಡ್ತಿವಿ, ನಾನು ಸ್ಟೇ ತಂದಿದ್ರೂ ಮಾಡೇ ಮಾಡ್ತಿವಿ

ಎ1-ಪವಿತ್ರಾಗೌಡ (33) ಯಾರು?
ಬೆಂಗಳೂರು ಹೊರವಲಯದ ಕನಕಪುರ ರಸ್ತೆ ತಲಘಟ್ಟಪುರದ ಪವಿತ್ರಾಗೌಡ, ಮಾಡೆಲಿಂಗ್ ಮೂಲಕ ಬಣ್ಣ ಲೋಕಕ್ಕೆ ಪ್ರವೇಶಿಸಿದ್ದಳು. ಬಿಸಿಎ ಪದವೀಧರೆಯಾದ ಪವಿತ್ರಾ, ಮೊದಲಿಗೆ ಚಿನ್ನಾಭರಣ ಮಳಿಗೆಗಳ ಜಾಹೀರಾತುಗಳಲ್ಲಿ ರೂಪದರ್ಶಿಯಾಗಿದ್ದಳು. ಆಕೆಗೆ ‘ಮಿಸ್ ಬೆಂಗಳೂರು’ ಪಟ್ಟ ಮೂಡಿಗೇರಿತ್ತು. ನಿರ್ದೇಶಕ ಉಮೇಶ್‌ಗೌಡರವರ ‘ಅಗಮ್ಯ’ ಚಿತ್ರ ಮೂಲಕ ರಂಗ ಪ್ರವೇಶವಾಯಿತು. ಆದರೆ ಮೊದಲ ಚಿತ್ರದಲ್ಲೇ ಆಕೆಗೆ ಸೋಲು ಎದುರಾಯಿತು. ಆನಂತರ ತಮಿಳಿನ ‘54321’ ಹೆಸರಿನ ಚಿತ್ರದಲ್ಲಿ ನಟಿಸಿದ್ದಳು. ಆನಂತರ ಕನ್ನಡ ಸಿನಿಮಾಗಳಲ್ಲಿ ನಟಿಸಲು ಶುರು ಮಾಡಿದಳು. ನಟ ರಮೇಶ್‌ ಅರವಿಂದ್‌, ಎಸ್‌ ನಾರಾಯಣ್‌ ಹಾಗೂ ಮೋಹನ್‌ ನಟನೆಯ ‘ಛತ್ರಿಗಳು ಸಾರ್‌ ಛತ್ರಿಗಳು’, ಸಾರಾ ಗೋವಿಂದು ಪುತ್ರ ಅನೂಪ್‌ ನಟನೆಯ ‘ಸಾಗುವ ದಾರಿಯಲ್ಲಿ’, ವಿಠಲ್‌ ಭಟ್‌ ನಿರ್ದೇಶನದ ‘ಪ್ರೀತಿ ಕಿತಾಬು’ ಚಿತ್ರಗಳಲ್ಲಿ ನಟಿಸಿದಳು. ಈ ಚಿತ್ರಗಳ ನಂತರ ‘ನಾನು ಮತ್ತು ಗುಂಡ’ ಚಿತ್ರದ ನಿರ್ದೇಶಕ ಶ್ರೀನಿವಾಸ ತಮ್ಮಯ್ಯ ಅವರ ‘ಬತ್ತಾಸು’ ಚಿತ್ರಕ್ಕೆ ನಾಯಕಿಯಾಗಿದ್ದಳು. ಆದರೆ ಆ ಸಿನಿಮಾ ಅದ್ದೂರಿಯಾಗಿ ಮೂಹರ್ತ ಕಂಡರೂ ಸೆಟ್ಟೇರಲಿಲ್ಲ. ಈ ನಡುವೆ ವಸ್ತ್ರ ವಿನ್ಯಾಸಕಿಯಾಗಿಯೂ ಗುರುತಿಸಿಕೊಂಡಿದ್ದ ಪವಿತ್ರಾಗೌಡ, ಉತ್ತರಪ್ರದೇಶ ಮೂಲದ ಸಾಫ್ಟ್‌ವೇರ್‌ ಉದ್ಯೋಗಿ ಸಂಜಯ್‌ ಸಿಂಗ್ ಜತೆ ವಿವಾಹವಾಗಿದ್ದರು. ಈ ದಂಪತಿಗೆ ಹೆಣ್ಣು ಮಗುವಿದೆ. ಆದರೆ ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಮೊದಲ ಪತಿಯಿಂದ ದೂರವಾಗಿದ್ದ ಆಕೆ, ತರುವಾಯ ದರ್ಶನ್‌ ಸಾಂಗತ್ಯಕ್ಕೆ ಬಂದಳು.

ಗಂಡನ ರಕ್ಷಣೆಗೆ ಟೊಂಕ ಕಟ್ಟಿ ನಿಂತ ವಿಜಯಲಕ್ಷ್ಮಿ, ದರ್ಶನ್‌ ಪರ ವಾದಕ್ಕೆ ಹಿರಿಯ ವಕೀಲರ ಭೇಟಿ

ದರ್ಶನ್ ಜತೆ ಪ್ರೇಮಕ್ಕೆ 10 ವರ್ಷಗಳ ತುಂಬಿವೆ ಎಂದು ಆಕೆಯೇ ಹೇಳಿಕೊಂಡಿದ್ದಳು. ಇದೇ ವಿಷಯವಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಜತೆ ಸಾಮಾಜಿಕ ಜಾಲತಾಣಗಲ್ಲಿ ಪೋಸ್ಟ್ ವಾರ್‌ ಸಹ ನಡೆದಿತ್ತು. ರಾಜರಾಜೇಶ್ವರಿ ನಗರದಲ್ಲಿ ಬ್ಯೂಟಿಕ್‌ ನಡೆಸುತ್ತಿರುವ ಆಕೆ, ತನ್ನ ಮಗಳು ಹಾಗೂ ತಾಯಿ ಜತೆ ನೆಲೆಸಿದ್ದಾಳೆ. ದರ್ಶನ್‌ ದಾಂಪತ್ಯದಲ್ಲಿ ಮಧ್ಯ ಪ್ರವೇಶಿಸಿದ್ದಾಳೆ ಎಂದು ಆರೋಪಿಸಿ ಪವಿತ್ರಾಗೌಡ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಅಭಿಮಾನಿಗಳು ಟೀಕಿಸುತ್ತಿದ್ದರು. ಅದೇ ರೀತಿ ಚಿತ್ರದುರ್ಗದ ಅಭಿಮಾನಿ ರೇಣುಕಾಸ್ವಾಮಿ ಸಹ ಒಬ್ಬಾತನಾಗಿದ್ದ. ತಮಗೆ ಇನ್‌ಸ್ಟಾಗ್ರಾಂನಲ್ಲಿ ಅಶ್ಲೀಲ ಪೋಟೋ ಕಳುಹಿಸಿದ್ದ ಆತನ ಬಗ್ಗೆ ದರ್ಶನ್ ಅವರಿಗೆ ಪವಿತ್ರಾ ಹೇಳಿದ್ದಳು. ಈಕೆಯ ಮಾತು ಕೇಳಿ ಕೆರಳಿದ ದರ್ಶನ್‌, ಕೊನೆಗೆ ತಮ್ಮ ಅಭಿಮಾನಿಯ ಪ್ರಾಣವನ್ನು ತೆಗೆದ ಎಂಬ ಆರೋಪಕ್ಕೆ ತುತ್ತಾಗಿದ್ದಾರೆ. ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆಗೆ ಪ್ರಚೋದನೆ ನೀಡಿದ್ದ ಪವಿತ್ರಾ, ಈ ಕೃತ್ಯದಲ್ಲಿ ದರ್ಶನ್ ಹೆಸರು ಬಾರದಂತೆ ಮುಚ್ಚಿಹಾಕಲು ಸಂಚು ರೂಪಿಸಿದ್ದಳು ಎಂಬ ಆರೋಪವಿದೆ.

click me!