ಚೆನ್ನೈನಲ್ಲಿ ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ

By Anusha KbFirst Published May 25, 2022, 5:13 PM IST
Highlights

ಚೆನ್ನೈನಲ್ಲಿ ಗುಂಪೊಂದು ಮಾರಾಕಾಸ್ತ್ರಗಳಿಂದ ದಾಳಿ ನಡೆಸಿ ಬಿಜೆಪಿ ಮುಖಂಡನನ್ನು ಬರ್ಬರವಾಗಿ ಹತ್ಯೆ ಮಾಡಿದೆ.
 

ಚೆನ್ನೈ: ತಮಿಳುನಾಡಿನ ಚೆನ್ನೈನಲ್ಲಿ ಭಾರತೀಯ ಜನತಾ ಪಕ್ಷದ ನಾಯಕನನ್ನು ಗುಂಪೊಂದು ಬರ್ಬರವಾಗಿ ಹತ್ಯೆ ಮಾಡಿದೆ. ಮೃತರನ್ನು ಬಾಲಚಂದರ್ (30) ಎಂದು ಗುರುತಿಸಲಾಗಿದ್ದು, ಇವರು ಭಾರತೀಯ ಜನತಾ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಚೆನ್ನೈ ಸೆಂಟ್ರಲ್ ಜಿಲ್ಲಾ ಕಾರ್ಯದರ್ಶಿಯಾಗಿದ್ದರು. ಸ್ಥಳೀಯ ವರದಿಗಳ ಪ್ರಕಾರ, ಚಿಂತಾದ್ರಿಪೇಟೆಯಲ್ಲಿ (Chintadripet) ಬಾಲಚಂದರ್ (Balachander) ಅಂಗಡಿಯಲ್ಲಿದ್ದಾಗ ಅಪರಿಚಿತ ಗುಂಪೊಂದು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದೆ. ಸಂಜೆ 7:30 ರ ಸುಮಾರಿಗೆ ಈ ಘಟನೆ ನಡೆದಿದೆ. 

ಹಲ್ಲೆಯ ವೇಳೆ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕಾಗಮಿಸಿ ಗಾಯಗೊಂಡ ಬಾಲಚಂದರ್ ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಕೊಲೆ ನಡೆದ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಫೋರೆನ್ಸಿಕ್ ತಂಡ ಸ್ಥಳಕ್ಕಾಗಮಿಸಿ ಸಾಕ್ಷ್ಯ ಸಂಗ್ರಹಿಸಲು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಈ ಘಟನೆಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ (K Annamalai) ಅವರು  ಖಂಡನೆ ವ್ಯಕ್ತಪಡಿಸಿದ್ದಾರೆ. ತಮಿಳುನಾಡು ರಾಜ್ಯದಲ್ಲಿ ಯಾರೂ ಸುರಕ್ಷಿತವಾಗಿಲ್ಲ. ಹತ್ಯೆಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು ಎಂದು ಅವರು ಚೆನ್ನೈ ಪೊಲೀಸರನ್ನು ಟ್ವಿಟ್ಟರ್‌ ಮೂಲಕ ಒತ್ತಾಯಿಸಿದ್ದಾರೆ.

ಬಿಜೆಪಿ ನಾಯಕನ ಹತ್ಯೆಯ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಬಿಜೆಪಿ ಕಾರ್ಯಕರ್ತರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಇರಿಸಲಾಗಿರುವ ಆಸ್ಪತ್ರೆಯ ಮುಂದೆ ಧರಣಿ ನಡೆಸಿದರು. ವಿನೋಜ್ ಪಿ ಸೆಲ್ವಂ (Vinoj P Selvam) ಮತ್ತು ಕರು ನಾಗರಾಜನ್ (Karu Nagarajan) ಸೇರಿದಂತೆ ಹಲವಾರು ತಮಿಳುನಾಡು ಬಿಜೆಪಿ ಪದಾಧಿಕಾರಿಗಳು ಸಂತ್ರಸ್ತನ ಕುಟುಂಬವನ್ನು ಭೇಟಿ ಮಾಡಿ ಅವರಿಗೆ ಸಾಂತ್ವಾನ ಹೇಳಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ನಾಗರಾಜನ್, ಚೆನ್ನೈ ತಮಿಳುನಾಡಿನ ರಾಜಧಾನಿಯೋ ಅಥವಾ ಕೊಲೆಯ ರಾಜಧಾನಿಯೋ ಎಂದು ಪ್ರಶ್ನಿಸಿದರು.

ತಮಿಳುನಾಡು ರಾಜ್ಯದಾದ್ಯಂತ ಪ್ರತಿದಿನ ಇಂತಹ ಘಟನೆ ನಡೆಯುತ್ತಲೇ ಇದೆ. ಇದು ದ್ರಾವಿಡ ಮಾದರಿಯೇ? (Dravidian model) ಮುಖ್ಯರಸ್ತೆಯಲ್ಲಿ ಸಾರ್ವಜನಿಕರ ಕಣ್ಣೆದುರೇ ಕೊಲೆ ನಡೆಯುತ್ತಿದೆ. ಇಲ್ಲಿ ಸಾಮಾನ್ಯ ಮನುಷ್ಯನಿಗೆ ಯಾವ ರೀತಿಯ ಸುರಕ್ಷತೆ ಇದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು ಬಾಲಚಂದರ್ ಅವರು ಬಿಜೆಪಿಯ ಯುವ, ಕ್ರಿಯಾಶೀಲ ನಾಯಕರಾಗಿದ್ದರು. ಅವರು ಈ ಪ್ರದೇಶದಲ್ಲಿನ ಅವ್ಯವಹಾರಗಳನ್ನು ಪ್ರಶ್ನಿಸಿದರು. ತನ್ನ ಸಹೋದರ ಸೇರಿದಂತೆ ಅಂಗಡಿಗಳಲ್ಲಿ ಮಾಮೂಲಿ ಹಣ ಸಂಗ್ರಹಿಸಿದ ಕೆಲವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದಾರೆ. ಅವರ ದೂರಿನ ಮೇರೆಗೆ ಪೊಲೀಸರು ಕ್ರಮಕೈಗೊಂಡಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ ಎಂದೂ ಅವರು ನಾಗರಾಜನ್ (Nagarajan) ಹೇಳಿದ್ದಾರೆ.

ಅಪರಾಧಕ್ಕೆ ಕಾರಣರಾದ ಎಲ್ಲರನ್ನೂ ಬಂಧಿಸಿ ಅತ್ಯುನ್ನತ ಶಿಕ್ಷೆ ನೀಡಬೇಕು ಎಂದು ಬಿಜೆಪಿ ನಾಯಕ ಹೇಳಿದರು. ಚೆನ್ನೈನಲ್ಲಿ ಕಳೆದ 20 ದಿನಗಳಲ್ಲಿ ಸುಮಾರು 18 ಕೊಲೆಗಳು ನಡೆದಿವೆ ಮತ್ತು ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂಬ ವರದಿಗಳನ್ನು ಚೆನ್ನೈ ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ (Shankar Jiwal) ತಳ್ಳಿ ಹಾಕಿದರು. ಕೊಲೆ ಪ್ರಕರಣಗಳಲ್ಲಿ ಶೇಕಡಾ 25 ರಷ್ಟು ಇಳಿಕೆಯಾಗಿದೆ ಎಂದು ಜಿವಾಲ್ ಹೇಳಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ ಕೆಲವು ಘಟನೆಗಳು ನಡೆದಿವೆ. ನಾವು ವಿಚಾರಣೆ ನಡೆಸುತ್ತಿದ್ದು, ಅಧಿಕಾರಿಗಳ ತಪ್ಪು ಕಂಡು ಬಂದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಎಫ್‌ಐಆರ್ ಹೊರ ಬರಲಿ, ಈ ಕುರಿತು ಹೆಚ್ಚಿನ ವಿವರಗಳನ್ನು ಪಡೆಯುತ್ತೇವೆ ಎಂದು ಅವರು ಹೇಳಿದರು. ಬಿಜೆಪಿ ಕಾರ್ಯಕರ್ತನ ಹತ್ಯೆ ಪ್ರಕರಣದ ತನಿಖೆಗೆ ಪೊಲೀಸರು ಏಳು ವಿಶೇಷ ತಂಡಗಳನ್ನು ನಿಯೋಜಿಸಿದ್ದಾರೆ. ಹತ್ಯೆಗೆ ಸಂಬಂಧಿಸಿದಂತೆ ಇತರ ಕೋನಗಳಲ್ಲೂ ತನಿಖೆ ನಡೆಸುತ್ತಿದ್ದಾರೆ. ಹಿಂದಿನ ದ್ವೇಷದಿಂದ ಈ ಘಟನೆ ನಡೆದಿರಬಹುದು ಮತ್ತು ಸಂತ್ರಸ್ತನ ಕುಟುಂಬದಲ್ಲಿಯೂ ಸಮಸ್ಯೆಗಳಿದ್ದವು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
 

click me!