ಅಲೆಯನ್ಸ್ ವಿವಿ ವಿಶ್ರಾಂತ ಕುಲಪತಿ ಹತ್ಯೆ| ರಾತ್ರಿ ವೇಳೆ ವಾಯು ವಿಹಾರ ಮಾಡುತ್ತಿದ್ದಾಗ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ| ತಪ್ಪಿಸಿಕೊಳ್ಳಲು ಯತ್ನಿಸಿದರೂ ಅಟ್ಟಾಡಿಸಿ ಹತ್ಯೆ| ಪಕ್ಕಾ ಮಾಹಿತಿ ಸಂಗ್ರಹಿಸಿ ಹತ್ಯೆಗೈದಿರುವ ಶಂಕೆ
ಬೆಂಗಳೂರು[ಅ.17]: ಆನೇಕಲ್ ತಾಲೂಕಿನ ವಿವಾದಾತ್ಮಕ ಅಲೆಯನ್ಸ್ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಡಾ.ಅಯ್ಯಪ್ಪ ರಾಮಪ್ಪ ದೊರೆ (53) ಅವರ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಆರ್.ಟಿ.ನಗರ ಸಮೀಪ ನಡೆದಿದೆ.
ಎಂಎಲ್‌ಎ ಲೇಔಟ್‌ನಲ್ಲಿ ನೆಲೆಸಿದ್ದ ಅಯ್ಯಪ್ಪ ಅವರು, ತಮ್ಮ ಮನೆ ಸಮೀಪದ ಎಚ್‌ಎಂಟಿ ಮೈದಾನದ ಉದ್ಯಾನದಲ್ಲಿ ಮಂಗಳವಾರ ರಾತ್ರಿ 11.30ರಲ್ಲಿ ವಾಯು ವಿಹಾರ ಮಾಡುತ್ತಿದ್ದರು. ಆ ವೇಳೆ ಅವರ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಮೃತರ ಪರಿಚಯಸ್ಥರ ಕೈವಾಡವಿರುವ ಬಗ್ಗೆ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
undefined
ಪ್ರತಿದಿನ ರಾತ್ರಿ ಊಟದ ನಂತರ ಅಯ್ಯಪ್ಪ ಅವರು ಮನೆ ಹತ್ತಿರದ ಪಾರ್ಕ್ನಲ್ಲಿ ಸ್ಪಲ್ಪ ಹೊತ್ತು ವಾಯು ವಿಹಾರ ನಡೆಸಿ ಮರಳುತ್ತಿದ್ದರು. ಅದರಂತೆ ಮಂಗಳವಾರ ರಾತ್ರಿ ಸಹ ಊಟ ಮುಗಿಸಿದ ಅವರು, ಮುಂಬಾಗಿಲನ್ನು ಹೊರಗಿನಿಂದ ಬಂದ್ ಮಾಡಿ ವಿಹಾರಕ್ಕೆ ತೆರಳಿದ್ದರು. ಇತ್ತ ಊಟ ಮುಗಿಸಿ ಅವರ ಪತ್ನಿ ಪಾವನಾ ಮಲಗಿದ್ದರು. ಏಕಾಂಗಿಯಾಗಿ ವಾಯು ವಿಹಾರ ಮಾಡುತ್ತಿದ್ದ ಅಯ್ಯಪ್ಪ ಮೇಲೆ ಹಂತಕರ ಪಡೆ ಎರಗಿದೆ. ಒಂದು ಹಂತದಲ್ಲಿ ತಪ್ಪಿಸಿಕೊಳ್ಳಲು ಅವರು ಯತ್ನಿಸಿದರೂ ಬಿಡದೆ ಬೆನ್ನಹತ್ತಿ ಬಂದು ಆರೋಪಿಗಳು ದಾಳಿ ನಡೆಸಿದ್ದಾರೆ.
ಕೆಲ ಹೊತ್ತಿನ ಬಳಿಕ ನಿದ್ರೆಯಿಂದ ಎಚ್ಚರಗೊಂಡ ಮೃತರ ಪತ್ನಿ ಪಾವನ, ಪತಿ ಕಾಣದೆ ಹೋದಾಗ ಆತಂಕಗೊಂಡಿದ್ದಾರೆ. ತಕ್ಷಣವೇ ಮನೆಯಿಂದ ಹೊರ ಬಂದು ಅಕ್ಕಪಕ್ಕ ಹುಡುಕಾಡಿದಾಗ ರಕ್ತದ ಮಡುವಿನಲ್ಲಿ ಅಯ್ಯಪ್ಪ ಬಿದ್ದಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ಆಗ ಪಾವನಾ ಅವರ ಚೀರಾಟ ಕೇಳಿ ಸಾರ್ವಜನಿಕರು ಜಮಾಯಿಸಿದರು. ಆನಂತರ ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆ ಸಾಗಿಸಿದ್ದಾರೆ. ಸಾದಂರ್ಭಿಕ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಅಯ್ಯಪ್ಪ ಅವರ ಚಲನವಲನ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿ ಪಕ್ಕಾ ಯೋಜಿಸಿ ಕೃತ್ಯ ಎಸಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತ ಉಮೇಶ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಆರ್.ಟಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುದ್ದೇಬಿಹಾಳದ ಅಯ್ಯಪ್ಪ
ಮೃತ ಅಯ್ಯಪ್ಪ ಅವರು ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರು ಗ್ರಾಮದವರಾಗಿದ್ದು, ಮೂರು ದಶಕಗಳ ಹಿಂದೆ ನಗರಕ್ಕೆ ಬಂದಿದ್ದರು. ಕಳೆದ 17 ವರ್ಷಗಳಿಂದ ಆರ್.ಟಿ.ನಗರದಲ್ಲಿ ಅವರು, ತಮ್ಮ ಪತ್ನಿ ಪಾವನಾ ಮತ್ತು ಮೂವರು ಮಕ್ಕಳ ಜತೆ ನೆಲೆಸಿದ್ದರು. ಗ್ರಾಮೀಣಾಭಿವೃದ್ಧಿ, ಗ್ರಂಥಾಲಯ ಮಾಹಿತಿ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಅವರು, ವ್ಯವಹಾರ ನಿರ್ವಹಣೆಯಲ್ಲಿ ಡಾಕ್ಟರೇಟ್ ಪದವಿ ಗಳಿಸಿದ್ದರು.
ಶಿಕ್ಷಣ ತಜ್ಞರಾಗಿ ಗುರುತಿಸಿಕೊಂಡಿದ್ದ ಅವರು, ಆನೇಕಲ್ ತಾಲೂಕಿನ ಅಲೆಯನ್ಸ್ ವಿವಿಯಲ್ಲಿ ನಾಲ್ಕು ವರ್ಷಗಳು ಉಪ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. ಇದೇ ವಿವಿಯಲ್ಲಿ ಅವರ ಪತ್ನಿ ಅಧ್ಯಾಪಕಿಯಾಗಿದ್ದರು. ಬಳಿಕ ವಿವಿಯಲ್ಲಿ ಅವ್ಯವಹಾರದ ಆರೋಪಕ್ಕೆ ತುತ್ತಾದ ಅವರು ಕುಲಪತಿ ಸ್ಥಾನ ಕಳೆದುಕೊಂಡಿದ್ದರು. ಅಲೆಯನ್ಸ್ ವಿವಿ ಒಡೆತನದ ವಿಚಾರವಾಗಿ ಆ ವಿವಿಯ ಮಾಲಿಕರ ಸೋದರರ ಮಧ್ಯೆ ವಿವಾದ ಉಂಟಾಗಿ ಗಲಾಟೆಗಳು ನಡೆದಿದ್ದವು. ಬೆಂಗಳೂರು ವಿವಿಯ ಸಿಂಡಿಕೇಟ್ ಸದಸ್ಯರಾಗಿ ಸಹ ಅವರು ಕೆಲಸ ಮಾಡಿದ್ದರು.
ಕುಲಪತಿ ಹುದ್ದೆಯಿಂದ ವಜಾಗೊಂಡ ಬಳಿಕ ಅವರು, ರಾಜಕೀಯ ಮತ್ತು ಸಾಮಾಜಿಕ ಸೇವೆಯಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದರು. ಕಳಸಾ ಬಂಡೂರಿ ಹಾಗೂ ಪ್ರತ್ಯೇಕ ಲಿಂಗಾಯಿತ ಧರ್ಮ ಸ್ಥಾಪನೆ ಹೋರಾಟದಲ್ಲಿ ಪಾಲ್ಗೊಂಡಿದ್ದ ಅಯ್ಯಪ್ಪ, ಕಳೆದ ವಿಧಾನಸಭಾ ಚುನಾವಣೆ ವೇಳೆ ‘ಜನ ಸಾಮಾನ್ಯ’ ಹೆಸರಿನ ಪ್ರಾದೇಶಿಕ ಪಕ್ಷ ಸ್ಥಾಪಿಸಿ ತವರು ಕ್ಷೇತ್ರ ಮುದ್ದೇಬಿಹಾಳದಲ್ಲಿ ಸ್ಪರ್ಧಿಸಿ ಪರಾಜಿತರಾಗಿದ್ದರು. ಅರ್ಕಾವತಿ ಬಡಾವಣೆ ಡಿ ನೋಟಿಫಿಕೇಷನ್ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಎಸಿಬಿಗೆ ದೂರು ಕೊಟ್ಟಿದ್ದರು. ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸುವ ಮೂಲಕ ಸದ್ದು ಮಾಡಿದ್ದರು.