ಕೊರೋನಾ ಅಟ್ಟಹಾಸ: ರಾಜ್ಯ ಸರ್ಕಾರಕ್ಕೆ ಒಂದಿಷ್ಟು ಸಲಹೆಗಳನ್ನು ಕೊಟ್ಟ ಸಿದ್ದರಾಮಯ್ಯ

By Suvarna NewsFirst Published Mar 26, 2020, 9:46 PM IST
Highlights

ರಾಜ್ಯದಲ್ಲಿ ಮಾಹಾಮಾರಿ ಕೊರೋನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಯಲು ಬಿಎಸ್‌ವೈ ನೇತೃತ್ವದ ಕರ್ನಾಟಕ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರ ನಡುವೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಹ ತಮ್ಮ ಸಲಹೆಗಳನ್ನು ರಾಜ್ಯ ಸರ್ಕಾರಕ್ಕೆ ನೀಡಿದ್ದಾರೆ.

ಬೆಂಗಳೂರು, (ಮಾ.26): ಮಾಜಿ ಸಚಿವ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಲಾಕ್‌ಡೌನ್ ಕ್ರಮವನ್ನು ಸ್ವಾಗತಿಸಿದ್ದರು. ಇದೀಗ ಕೊರೋನಾ ವಿರುದ್ಧ ಸಮರಕ್ಕೆ ಸಹಾಯವಾಗಬಹುದು ಎಂದು ಸಿದ್ದು ತಮ್ಮ  ಸಲಹೆಗಳನ್ನು ಯಡಿಯೂರಪ್ಪ ಸರ್ಕಾರಕ್ಕೆ ಕೊಟ್ಟಿದ್ದಾರೆ.

ಲಾಕ್‌ಡೌನ್: ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಸಿಎಂ, ಹೊರಗೆ ಬಂದ್ರೆ ಅಷ್ಟೇ ಕಥೆ..!

ಕೊರೊನಾ ಸೋಂಕಿನ‌ ಭೀತಿಯ ಹಿನ್ನೆಲೆಯಲ್ಲಿ ವಿಳಂಬವಾಗಿಯಾದರೂ, ದೇಶದ ಬಡವರು, ರೈತರು ಮತ್ತು ಕೂಲಿಕಾರ್ಮಿಕರಿಗೆ ನೆರವಾಗಲು ಕೇಂದ್ರ ಸರ್ಕಾರ ಪ್ರಕಟಿಸಿರುವ ಯೋಜನೆಗಳನ್ನು ಸ್ವಾಗತಿಸುತ್ತೇನೆ. ಈ ಪ್ಯಾಕೇಜ್  'Too little, Too Late' ಎನ್ನುವ ಹಾಗಾಗಿದೆ ಎಂದು ಹೇಳುತ್ತಾ ರಾಜ್ಯ ಸರ್ಕಾರಕ್ಕೆ ಕೆಲ ಸಲಹೆಗಳನ್ನು ನೀಡಿದ್ದಾರೆ.

ಸಿದ್ದರಾಮಯ್ಯ ಕೊಟ್ಟ  ಸಲಹೆಗಳು
1. ಬಹಳ ಮುಖ್ಯವಾಗಿ ಸಣ್ಣ ವ್ಯಾಪಾರಿಗಳು, ಅಟೋ, ಟ್ಯಾಕ್ಸಿ ಚಾಲಕರು ವಾಹನ ಖರೀದಿಗೆ ಬ್ಯಾಂಕುಗಳಿಂದ ಸಾಲ‌ ಪಡೆದಿದ್ದಾರೆ. ಅವರ ಸಾಲವನ್ನು ಭಾಗಶಃ ಮನ್ನಾ ಮಾಡಿ, ಕನಿಷ್ಠ 3 ತಿಂಗಳ EMI ಪಾವತಿಯನ್ನು ಮುಂದೂಡಬೇಕು.

2. ಅಸಂಘಟಿತ ವಲಯದಲ್ಲಿರುವ ಕಾರ್ಮಿಕರ ಬದುಕು ಕಷ್ಟದಲ್ಲಿದೆ. ಈ ಬಗ್ಗೆ ಕಾರ್ಮಿಕ ಇಲಾಖೆ ತುರ್ತಾಗಿ ಗಮನ ನೀಡಬೇಕು. 

3. ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಚಾಲಕರು ಮತ್ತು ಸಿಬ್ಬಂದಿ‌ ಹಾಗೂ ಹೊಟೇಲ್, ಮಾಲ್, ಚಿತ್ರಮಂದಿರಗಳ ಸಿಬ್ಬಂದಿ, ಡೆಲಿವರಿ ಬಾಯ್‌ಗಳು ಕೆಲಸ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಗಾರ್ಮೆಂಟ್ ಫ್ಯಾಕ್ಟರಿಗಳೂ ಸೇರಿದಂತೆ ಸಣ್ಣ ಕೈಗಾರಿಕೆಗಳು ಮುಚ್ಚಿವೆ. ಇವರೆಲ್ಲರಿಗೂ ಸಂಬಳ ಸಹಿತ ರಜೆ ನೀಡುವಂತೆ ಕಾರ್ಮಿಕ ಇಲಾಖೆ ನಿಗಾ ವಹಿಸಬೇಕು.

4. ಮಹಿಳೆಯರ ಜನಧನ ಖಾತೆಗೆ ಮಾತ್ರ ತಲಾ ರೂ.500ರ ಕಂತುಗಳಲ್ಲಿ 1500 ರೂಪಾಯಿ ಜಮೆ ಮಾಡಿರುವುದಾಗಿ ಕೇಂದ್ರ ಹಣಕಾಸು ಸಚಿವರು  ಹೇಳಿದ್ದಾರೆ. ಈ ಸೌಲಭ್ಯವನ್ನು ಪುರುಷರಿಗೂ ವಿಸ್ತರಿಸಬೇಕು ಮತ್ತು ನೆರವಿನ ಮೊತ್ತವನ್ನು ಕನಿಷ್ಠ ರೂ.3000 ಕ್ಕೆ  ಹೆಚ್ಚಿಸಬೇಕು.

5. ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ಹೆಚ್ಚಿಸಬೇಕೆಂದು ಪ್ರಾರಂಭದಿಂದಲೂ ಹೇಳುತ್ತಾ ಬಂದಿದ್ದೆ. ಹಣಕಾಸು ಸಚಿವರು ಒಟ್ಟು ವಾರ್ಷಿಕ ರೂ.6000 ದಲ್ಲಿ ರೂ.2000 ದ ಒಂದು ಕಂತನ್ನು ಮುಂಗಡವಾಗಿ ಪಾವತಿಸುವುದಾಗಿ ಹೇಳಿದ್ದಾರೆ. ಇದು ಏನೇನೂ ಸಾಲದು. ಒಟ್ಟು ಮೊತ್ತವನ್ನು ಈಗಿನ ರೂ.6000 ದಿಂದ ರೂ.12,000 ಕ್ಕೆ ಏರಿಸಬೇಕು.

6. ಆಹಾರ ಮತ್ತಿತರ ಅವಶ್ಯಕ ಸಾಮಗ್ರಿಗಳ ಮೇಲಿನ GST ಯನ್ನು ಮುಂದಿನ 3 ತಿಂಗಳ ಕಾಲ‌ ಕನಿಷ್ಠ 5% ಕಡಿತಗೊಳಿಸಬೇಕು.

7. ಸಾಕಷ್ಟು ಮಂದಿ ಲಾಕ್ ಡೌನ್‌ಗಿಂತ ಮೊದಲುಊರಿಗೆ ಹೋಗಲಾಗದೆ ಅನಿವಾರ್ಯವಾಗಿ ಬೆಂಗಳೂರು ನಗರ ಮತ್ತು ಜಿಲ್ಲಾ‌ ಕೇಂದ್ರಗಳಲ್ಲಿಯೇ ಉಳಿದುಕೊಂಡಿದ್ದಾರೆ. ಅವರಿಗಾಗಿ ಆಶ್ರಯತಾಣ ನಿರ್ಮಿಸಿ, ಊಟ ವಸತಿ ಕಲ್ಪಿಸಬೇಕು.

8. ಜೀವನಾವಶ್ಯಕ ವಸ್ತುಗಳ ಮಾರಾಟಕ್ಕೆ ನೀಡಬೇಕಾದ ಪಾಸ್‌ಗಳ ಕುರಿತು ಜಿಲ್ಲೆಗಳಲ್ಲಿ‌ ಸ್ಪಷ್ಟತೆ ಇಲ್ಲ. ಬೆಂಗಳೂರಿನಲ್ಲೇ DCP ಕಛೇರಿಯಲ್ಲಿ ಪಾಸ್ ವಿತರಿಸುವ ವ್ಯವಸ್ಥೆ ಇದೆ. ಅಲ್ಲಿಯವರೆಗೆ ಬಡವ್ಯಾಪಾರಿಯೊಬ್ಬ ಹೋಗಲಾಗುವುದೆ? ಕನಿಷ್ಠ ACP ಗೆ ಈ ಅಧಿಕಾರ ವರ್ಗಾಯಿಸಿ.

9. ಸರ್ಕಾರದ ಆದೇಶಕ್ಕಾಗಿ ಕಾಯದೆ ಸ್ವಯಂಪ್ರೇರಿತರಾಗಿ ಸ್ವಯಂದಿಗ್ಭಂಧನಕ್ಕೆ ಒಳಪಡಿಸಿಕೊಳ್ಳುವುದು ಇನ್ನು ಕೆಲವು ದಿನ‌ ಜನತೆಯ ದಿನಚರಿಯಾಗಲಿ. ಆರೋಗ್ಯ ಇಲಾಖೆಯ ಮುನ್ನೆಚ್ಚರಿಕೆ ಕ್ರಮಗಳು ನಮ್ಮ ಜೀವನ ವಿಧಾನವಾಗಲಿ.

click me!