5 ಕೋಟಿ ರು.ವರೆಗೆ ಆಡಿಟ್‌ ಬೇಕಿಲ್ಲ: ಸಣ್ಣ ಕಂಪನಿಗಳಿಗೆ, ವ್ಯಾಪಾರಿಗಳಿಗೆ ರಿಲೀಫ್!

By Kannadaprabha NewsFirst Published Feb 2, 2020, 7:42 AM IST
Highlights

5 ಕೋಟಿ ರು.ವರೆಗೆ ಆಡಿಟ್‌ ಬೇಕಿಲ್ಲ| ಸಣ್ಣ ಕಂಪನಿಗಳಿಗೆ, ವ್ಯಾಪಾರಿಗಳಿಗೆ ತಲೆನೋವಿನಿಂದ ಮುಕ್ತಿ| 1 ಕೋಟಿ ರು. ಇದ್ದ ಮಿತಿ 5 ಕೋಟಿ ರು.ಗೇರಿಕೆ| ಷರತ್ತು: ನಗದು ವ್ಯವಹಾರ ಶೇ.5ಕ್ಕಿಂತ ಕಮ್ಮಿಯಿರಬೇಕು

ನವದೆಹಲಿ[ಜ.02]: ಜಿಎಸ್‌ಟಿ ಜಾರಿಗೆ ಬಂದ ಮೇಲೆ ಸಂಕಷ್ಟಕ್ಕೆ ಸಿಲುಕಿವೆ ಎನ್ನಲಾದ ಸಣ್ಣ ಕಂಪನಿಗಳು ಹಾಗೂ ವ್ಯಾಪಾರಸ್ಥರ ಮೇಲೆ ಸಚಿವೆ ನಿರ್ಮಲಾ ಸೀತಾರಾಮನ್‌ ಕೃಪೆ ತೋರಿದ್ದಾರೆ. ವಾರ್ಷಿಕ 1 ಕೋಟಿ ರು.ಗಿಂತ ಹೆಚ್ಚು ವ್ಯವಹಾರ ನಡೆಸುವ ಮಧ್ಯಮ, ಸಣ್ಣ ಹಾಗೂ ಕಿರು ಉದ್ದಿಮೆಗಳು (ಎಂಎಸ್‌ಎಂಇ) ಅಕೌಂಟೆಂಟ್‌ಗಳಿಂದ ತಮ್ಮ ವ್ಯವಹಾರವನ್ನು ಆಡಿಟ್‌ ಮಾಡಿಸಬೇಕು ಎಂಬ ನಿಯಮವನ್ನು ಬದಲಿಸಿ, ಆ ಮಿತಿಯನ್ನು 5 ಕೋಟಿ ರು.ಗೆ ಏರಿಕೆ ಮಾಡಿದ್ದಾರೆ.

ಚಿಲ್ಲರೆ ವ್ಯಾಪಾರಿಗಳು, ಸಾಮಾನ್ಯ ವ್ಯಾಪಾರಿಗಳು, ಅಂಗಡಿಕಾರರು ಹಾಗೂ ಸಣ್ಣ ಉದ್ಯಮಿಗಳು 1 ಕೋಟಿ ರು.ಗಿಂತ ಹೆಚ್ಚು ಮೊತ್ತದ ವ್ಯವಹಾರ ನಡೆಸಿದ್ದರೆ ತಮ್ಮ ಲೆಕ್ಕದ ಪುಸ್ತಕಗಳನ್ನು ಆಡಿಟ್‌ ಮಾಡಿಸಬೇಕಿತ್ತು. ಇನ್ನುಮುಂದೆ 5 ಕೋಟಿ ರು.ವರೆಗೆ ವಹಿವಾಟು ನಡೆಸಿದರೆ ಆಡಿಟ್‌ ಮಾಡಿಸಬೇಕಿಲ್ಲ. ವ್ಯವಹಾರ 5 ಕೋಟಿ ರು. ದಾಟಿದರೆ ಮಾತ್ರ ಆಡಿಟ್‌ ಮಾಡಿಸಬೇಕು. ಆದರೆ, ಈ ಸೌಲಭ್ಯ ಪಡೆಯಲು ಒಂದು ಷರತ್ತು ವಿಧಿಸಲಾಗಿದೆ. ಇಂತಹ ಉದ್ದಿಮೆದಾರರು ತಮ್ಮ ವ್ಯವಹಾರದಲ್ಲಿ ಶೇ.5ಕ್ಕಿಂತ ಕಡಿಮೆ ವ್ಯವಹಾರವನ್ನು ಮಾತ್ರ ನಗದಿನಲ್ಲಿ ನಡೆಸಿರಬೇಕು. ಇನ್ನುಳಿದ ವ್ಯವಹಾರವನ್ನು ನಗದುರಹಿತವಾಗಿ ನಡೆಸಿರಬೇಕು. ನಗದುರಹಿತ ಆರ್ಥಿಕತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ವಿದ್ಯುತ್‌ ಉತ್ಪಾದನಾ ಕಂಪನಿಗೂ ತೆರಿಗೆ ಕಡಿತ

ದೇಶದಲ್ಲಿ ಉತ್ಪಾದನಾ ವಲಯವನ್ನು ಉತ್ತೇಜಿಸಲು ಕಳೆದ ವರ್ಷ ಹೊಸ ಕಂಪನಿಗಳಿಗೆ ಕಾರ್ಪೊರೇಟ್‌ ತೆರಿಗೆ ಕಡಿತಗೊಳಿಸಲಾಗಿತ್ತು. ಹೊಸತಾಗಿ ಅರಂಭವಾದ ಹಾಗೂ 2023ರ ಮಾಚ್‌ರ್‍ ಒಳಗೆ ಉತ್ಪಾದನೆ ಆರಂಭಿಸುವ ದೇಸೀ ಕಂಪನಿಗಳಿಗೆ ಕಾರ್ಪೊರೇಟ್‌ ತೆರಿಗೆಯನ್ನು ಶೇ.15ಕ್ಕೆ ಇಳಿಕೆ ಮಾಡಲಾಗಿತ್ತು. ಅದನ್ನು ಈ ಬಾರಿಯ ಬಜೆಟ್‌ನಲ್ಲಿ ವಿದ್ಯುತ್‌ ಉತ್ಪಾದನಾ ಕಂಪನಿಗಳಿಗೂ ವಿಸ್ತರಿಸಲಾಗಿದೆ. ಇಂಧನ ಕ್ಷೇತ್ರಕ್ಕೆ ಬಂಡವಾಳ ಆಕರ್ಷಿಸಲು ವಿದ್ಯುತ್‌ ಉತ್ಪಾದಿಸುವ ಹೊಸ ದೇಸೀ ಕಂಪನಿಗಳಿಗೆ ಕಾರ್ಪೊರೇಟ್‌ ತೆರಿಗೆ ದರವನ್ನು ಶೇ.15ಕ್ಕೆ ಇಳಿಕೆ ಮಾಡಿರುವುದಾಗಿ ಬಜೆಟ್‌ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಸ್ಟಾರ್ಟಪ್‌ಗಳಿಗೆ, ಸ್ಟಾರ್ಟಪ್‌ ನೌಕರರಿಗೆ ಲಾಭ

ಸ್ಟಾರ್ಟಪ್‌ ಕಂಪನಿಗಳು ತಮ್ಮ ನೌಕರರಿಗೆ ಸಂಬಳದ ಬದಲು ನೀಡುವ ಷೇರುಗಳಿಗೆ ನೌಕರರು ಪಾವತಿಸಬೇಕಾದ ತೆರಿಗೆಯನ್ನು ತಡವಾಗಿ ಪಾವತಿಸಲು ಬಜೆಟ್‌ನಲ್ಲಿ ಅನುಕೂಲ ಮಾಡಿಕೊಡಲಾಗಿದೆ. ಹಾಗೆಯೇ, ವಾರ್ಷಿಕ 100 ಕೋಟಿ ರು.ವರೆಗೆ ವಹಿವಾಟು ನಡೆಸುವ ಸ್ಟಾರ್ಟಪ್‌ ಕಂಪನಿಗಳು ತಮ್ಮ ಸಂಪೂರ್ಣ ಲಾಭಕ್ಕೆ ತೆರಿಗೆ ವಿನಾಯ್ತಿ ಪಡೆಯಲು ಅನುಮತಿ ನೀಡಲಾಗಿದೆ.

ಸ್ಟಾರ್ಟಪ್‌ಗಳು ತಮ್ಮ ಆರಂಭಿಕ ವರ್ಷದಲ್ಲಿ ಪ್ರತಿಭಾವಂತ ನೌಕರರನ್ನು ಕಂಪನಿಯಲ್ಲೇ ಉಳಿಸಿಕೊಳ್ಳಲು ಎಂಪ್ಲಾಯೀ ಸ್ಟಾಕ್‌ ಆಪ್ಷನ್‌ ಪ್ಲಾನ್‌ (ಇಸೋಪ್‌) ನೀಡುತ್ತವೆ. ನೌಕರರಿಗೆ ನೀಡುವ ಸಂಬಳದ ಪ್ರಮುಖ ಪಾಲು ಈ ಷೇರುಗಳೇ ಆಗಿರುತ್ತವೆ. ಸದ್ಯ ಈ ಷೇರುಗಳಿಗೆ ನೌಕರರು ತೆರಿಗೆ ಪಾವತಿಸಬೇಕಿತ್ತು. ಆದರೆ, ನೌಕರರು ಈ ಷೇರುಗಳನ್ನು ತಕ್ಷಣಕ್ಕೆ ಮಾರಾಟ ಮಾಡದೆ ಇರುವುದರಿಂದ ಅವರಿಗೆ ಇವುಗಳಿಂದ ಆದಾಯ ಬರುತ್ತಿರಲಿಲ್ಲ. ಹೀಗಾಗಿ ಒಟ್ಟಾರೆ ಸ್ಟಾರ್ಟಪ್‌ ಕಂಪನಿಗಳಿಗೆ ಉತ್ತೇಜನ ನೀಡಲು ನೌಕರರ ಬಳಿಯಿರುವ ಆಯಾ ಕಂಪನಿಗಳ ಷೇರುಗಳಿಗೆ ಐದು ವರ್ಷಗಳ ನಂತರ ಒಂದೇ ಸಲ ತೆರಿಗೆ ಪಾವತಿಸಲು ಅಥವಾ ಅವರು ಕಂಪನಿಯನ್ನು ತೊರೆಯುವಾಗ ಅಥವಾ ಷೇರು ಮಾರಾಟ ಮಾಡಿದಾಗ ತೆರಿಗೆ ಪಾವತಿಸಲು ಅನುಮತಿ ನೀಡಲಾಗಿದೆ.

ಇದೇ ವೇಳೆ, ವರ್ಷಕ್ಕೆ 25 ಕೋಟಿ ರು.ಗಿಂತ ಕಡಿಮೆ ವಹಿವಾಟು ನಡೆಸುವ ಸ್ಟಾರ್ಟಪ್‌ಗಳಿಗೆ ಆರಂಭಿಕ ಮೂರು ವರ್ಷಗಳ ಕಾಲ ಲಾಭದ ಮೇಲೆ ಪಾವತಿಸಬೇಕಿದ್ದ ಸಂಪೂರ್ಣ ತೆರಿಗೆ ವಿನಾಯ್ತಿಯನ್ನು ವರ್ಷಕ್ಕೆ 100 ಕೋಟಿ ರು.ವರೆಗೆ ವಹಿವಾಟು ನಡೆಸುವ ಕಂಪನಿಗಳಿಗೂ ವಿಸ್ತರಿಸಲಾಗಿದೆ.

ಸಹಕಾರಿ ಸಂಘಗಳಿಗೆ ತೆರಿಗೆ ಕಡಿತ

ದೇಶದ ಆರ್ಥಿಕತೆಗೆ ಪ್ರಮುಖ ಕೊಡುಗೆ ನೀಡುವ ಸಹಕಾರಿ ಸಂಘಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸಹಕಾರಿ ಸೊಸೈಟಿಗಳಿಗೆ ವಿಧಿಸುತ್ತಿದ್ದ ಶೇ.30ರ ತೆರಿಗೆಯನ್ನು ಶೇ.22ಕ್ಕೆ ಇಳಿಕೆ ಮಾಡಲಾಗಿದೆ. ಅದರೊಂದಿಗೆ, ಸಹಕಾರಿ ಸೊಸೈಟಿಗಳು ಹಾಗೂ ಕಾರ್ಪೊರೇಟ್‌ ಕಂಪನಿಗಳ ನಡುವೆ ಇದ್ದ ತಾರತಮ್ಯ ಕೂಡ ನಿವಾರಣೆಯಾಗಿದೆ.

‘ಜನರಿಗೆ ಸುಲಭವಾಗಿ ಸಾಲ ಸಿಗುವಂತೆ ಮಾಡುವ ಹಾಗೂ ಅವರ ಉತ್ಪನ್ನಗಳಿಗೆ ಮಾರುಕಟ್ಟೆಒದಗಿಸುವ ಮೂಲಕ ಸಹಕಾರಿ ಸಂಘಗಳು ಸಮಾಜಕ್ಕೂ ಆರ್ಥಿಕತೆಗೂ ನೆರವಾಗುತ್ತಿವೆ. ಅವುಗಳಿಗೆ ಇನ್ನುಮುಂದೆ ಶೇ.22ರಷ್ಟುಆದಾಯ ತೆರಿಗೆ, ಶೇ.10 ಮೇಲ್ತೆರಿಗೆ ಮತ್ತು ಶೇ.4ರಷ್ಟುಸೆಸ್‌ ವಿಧಿಸಲಾಗುವುದು. ಈ ತೆರಿಗೆಗೆ ಯಾವುದೇ ವಿನಾಯ್ತಿಗಳು ಅನ್ವಯಿಸುವುದಿಲ್ಲ. ಹಾಗೆಯೇ ಈ ಸಹಕಾರಿ ಸೊಸೈಟಿಗಳಿಗೆ ಆಲ್ಟರ್ನೇಟಿವ್‌ ಮಿನಿಮಮ್‌ ಟ್ಯಾಕ್ಸ್‌ (ಎಎಂಟಿ)ನಿಂದಲೂ ವಿನಾಯ್ತಿ ನೀಡಲಾಗುವುದು’ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಭಾಷಣದಲ್ಲಿ ತಿಳಿಸಿದ್ದಾರೆ.

ಆಧಾರ್‌ ಕೊಟ್ಟರೆ ತಕ್ಷಣ ಹೊಸ ಪ್ಯಾನ್‌

ಪ್ಯಾನ್‌ ಹಾಗೂ ಆಧಾರ್‌ ಸಂಖ್ಯೆಯನ್ನು ಪರಸ್ಪರ ಲಿಂಕ್‌ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಹೊಸತಾಗಿ ಪ್ಯಾನ್‌ ಪಡೆಯುವ ವಿಧಾನವನ್ನು ಸರಳೀಕರಣಗೊಳಿಸಿದೆ. ಪ್ಯಾನ್‌ ಸಂಖ್ಯೆ ಪಡೆಯಬೇಕೆಂದರೆ ಇನ್ನುಮುಂದೆ ದೊಡ್ಡ ಅರ್ಜಿ ಭರ್ತಿ ಮಾಡಿ ಸಲ್ಲಿಸುವ ಅಗತ್ಯವಿಲ್ಲ. ಬದಲಿಗೆ, ಆಧಾರ್‌ ನೀಡಿದರೆ ತಕ್ಷಣ ಆನ್‌ಲೈನ್‌ನಲ್ಲಿ ಪ್ಯಾನ್‌ ಸಂಖ್ಯೆ ನೀಡುವ ಹೊಸ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೆ ತರಲಿದೆ.

ಸದ್ಯ ಪ್ಯಾನ್‌ ಪಡೆಯಲು ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿ, 10-15 ದಿನ ಕಾಯಬೇಕಿದೆ. ಇನ್ನುಮುಂದೆ ಆಧಾರ್‌ ಸಂಖ್ಯೆಯಿದ್ದರೆ ತಕ್ಷಣ ಪ್ಯಾನ್‌ ಸಿಗಲಿದೆ.

click me!