ನೀವು ಒನ್ ಪ್ಲಸ್ ಗ್ರಾಹಕರೇ?: ಅಲ್ಲದಿದ್ದರೂ ಈ ಸ್ಟೋರಿ ಓದಿ!

First Published Jul 15, 2018, 4:17 PM IST
Highlights

ಇದು ತುರಣರಿಬ್ಬರ ಸ್ಪೂರ್ತಿಧಾಯಕ ಕಥೆ

ಒನ್ ಪ್ಲಸ್ ಕಂಪನಿ ಹಿಂದಿದೆ ರೋಚಕ ಕಥೆ

ಕಂಪನಿ ಆರಂಭಿಸಲು ಹೊಳೆದ ಐಡಿಯಾ ಏನು?

ಒನ್ ಪ್ಲಸ್ ಜಾಗತಿಕ ಯಶಸ್ಸಿನ ಗುಟ್ಟೇನು?

ಬೆಂಗಳೂರು(ಜು.15): ನಾಲ್ಕು ವರ್ಷಗಳ ಹಿಂದಿನ ಮಾತು. ಒನ್ ಪ್ಲಸ್ ಕಂಪೆನಿ ಆರಂಭವಾಗಿ ಐದಾರು ತಿಂಗಳಾಗಿದ್ದವಷ್ಟೇ. ಜನ ಈ ಹೊಸ ಕಂಪೆನಿ ಮೊಬೈಲ್‌ಅನ್ನು ಕುತೂಹಲ, ಅಚ್ಚರಿಯಿಂದ ಖರೀದಿಸುತ್ತಿದ್ದರು. ಕಂಪೆನಿ ಉತ್ಪಾದಿಸಿದ್ದ ಸುಮಾರು 30 ಸಾವಿರ ಒನ್ ಪ್ಲಸ್ ಒನ್ ಸ್ಮಾರ್ಟ್ ಫೋನ್‌ಗಳು ಕೆಲವೇ ಸಮಯದಲ್ಲಿ ಖಾಲಿಯಾಯ್ತು. ಆದರೆ ಈ ಮಟ್ಟದ ಖರೀದಿಯ ನಿರೀಕ್ಷೆಯೇ ಇಲ್ಲದ ಆ ಇಬ್ಬರು ತರುಣರಿಗೆ ಸಣ್ಣ ಶಾಕ್. ಈ ಸಂದರ್ಭ ಲಂಡನ್ ಮೂಲದ ಐಬಿಟಿ ಟೈಮ್ಸ್ ಪತ್ರಿಕೆ ಒನ್ ಪ್ಲಸ್‌ನ ಸಹ ಸಂಸ್ಥಾಪಕ ಕಾರ್ಲ್ ಅವರನ್ನು ಸಂದರ್ಶಿಸಿತು.

ಕಂಪೆನಿಯ ಈ ಯಶಸ್ಸು ನಿಮಗೆ ಸರ್‌ಪ್ರೈಸ್ ಆಗಿರಬೇಕಲ್ವಾ? ಅಂತ ಸಂದರ್ಶಕ ಕೇಳಿದಾಗ ತುಸು ಆತಂಕದಲ್ಲೇ ಕಾರ್ಲ್ ಉತ್ತರಿಸಿದ,‘ಈ ಮಟ್ಟದ ಬೇಡಿಕೆಯನ್ನೆದೆರಿಸಲು ನಾವು ಇನ್ನೂ ಸಿದ್ದರಾಗಿಲ್ಲ. ನಮಗಿದು ಆತಂಕ ಬೆರೆತ ಖುಷಿಯ ಸರ್ಪೈಸ್.’ ಪ್ರಶ್ನೆ ಮುಂದುವರಿಯಿತು.‘ಹೊಸ ಕಂಪೆನಿಗಳು ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿರುವ ನಿಮ್ಮ ಹೆಜ್ಜೆಗಳನ್ನು ಅನುಸರಿಸುವುದು ನಿಮಗಿಷ್ಟವಾಗುತ್ತದಾ?’. ‘ಅದು ಹಾಗಲ್ಲ. ಈಗಿನ ಗ್ರಾಹಕ ಸಖತ್ ಸ್ಮಾರ್ಟ್. ಈ ಇಂಡಸ್ಟ್ರಿಯೂ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತದೆ. ಹಾಗಿರುವಾಗ ಒಂದು ಹಂತದ ಗೆಲುವು ಸಾಧಿಸಿರುವ ಆರು ತಿಂಗಳ ಶಿಶು ಕಂಪೆನಿಯನ್ನು ಆದರ್ಶವೆಂದು ಸ್ವೀಕರಿಸಿದರೆ ಅವರಿಗೇ ಸಮಸ್ಯೆ’ ಕಾರ್ಲ್ ಅವರದು ನೇರ ಉತ್ತರ.

ಆದರೆ ಸ್ಮಾರ್ಟ್ ಗ್ರಾಹಕನ ನಾಡಿಮಿಡಿತ, ಹೊಸತನದ ತುಡಿತ, ಕಡಿಮೆ ಬೆಲೆಯಲ್ಲಿ ಹೆಚ್ಚಿನ ಸವಲತ್ತು ಬಯಸುವ ಮನಸ್ಥಿತಿಯ ಅರಿವು ಕಾರ್ಲ್ ಹಾಗೂ ಪೀಟ್‌ಗಿತ್ತು. ಇವರ ಬ್ಯುಸಿನೆಸ್‌ಗೆ ಬೇಸ್ ಒದಗಿಸಿದ್ದೇ ಗ್ರಾಹಕರ ಜೊತೆಗಿನ ನೇರ ಸಂಪರ್ಕ. ಅಷ್ಟಕ್ಕೂ ಒನ್‌ಪ್ಲಸ್ ಕಂಪೆನಿ ಹೇಗೆ ಶುರುವಾಯ್ತು ಎಂಬ ಕುತೂಹಲ ಎಲ್ಲರಿಗೂ ಇರುವುದೇ.

ಒನ್ ಪ್ಲಸ್ ಕಂಪೆನಿ ಆರಂಭಕ್ಕೂ ಮುನ್ನ:

ಪೀಟ್ ಲೌ ಮತ್ತು ಕಾರ್ಲ್ ಒನ್ ಪ್ಲಸ್ ಸ್ಮಾರ್ಟ್‌ಫೋನ್ ಆರಂಭಿಸುವುದಕ್ಕೂ ಮೊದಲು ಬೇರೆ ಉದ್ಯೋಗದಲ್ಲಿದ್ದರು. ಪೀಟ್ ಲೌ ‘ಒಪ್ಪೋ’ ಮೊಬೈಲ್‌ನಲ್ಲಿ ಉನ್ನತ ಅಧಿಕಾರಿಯಾಗಿದ್ದ. ಹಾಡ್ ವೇರ್ರ್ ಇಂಜಿನಿಯರ್ ಆಗಿ ಕಂಪೆನಿಗೆ ಎಂಟ್ರೀಕೊಟ್ಟಿದ್ದ ಈತ ಮುಂದೆ ಇದೇ ಕಂಪೆನಿಯಲ್ಲಿ ಉಪಾಧ್ಯಕ್ಷ ಹುದ್ದೆಯನ್ನೂ ಅಲಂಕರಿಸಿದ. ಇನ್ನೊಬ್ಬ ಕಾರ್ಲ್‌ಗೆ ಆಗಿನ್ನೂ ಇಪ್ಪತೈದರ ಹರೆಯ. ಆತನಿಗೆ ಮೊಬೈಲ್ ಬಗ್ಗೆ ಇದ್ದ ಕ್ರೇಜ್ ಅಷ್ಟಿಷ್ಟಲ್ಲ. ಅದಕ್ಕೋಸ್ಕರ ತನ್ನ ಓದನ್ನೇ ನಿಲ್ಲಿಸಿ ಮೊಬೈಲ್ ಬಗ್ಗೆ ಕಲಿಯಲಾರಂಭಿಸಿದ. ೨೦೧೦ರಲ್ಲಿ ನೋಕಿಯಾ ಕಂಪೆನಿ ಸೇರಿದ ಕಾರ್ಲ್ ಸ್ವಲ್ಪ ದಿನಕ್ಕೇ ಆ ಕೆಲಸವೂ ಬೋರ್ ಎನಿಸಿ ಛಿಜ್ಢ್ಠಿ ಮೊಬೈಲ್ ಕಂಪೆನಿಗೆ ಹಾರಿದ.

ಅಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿ ನೇರ ಬಂದಿದ್ದು ‘ಒಪ್ಪೋ’ಗೆ. ಅಲ್ಲಿ ಈತನ ಮೊಬೈಲ್ ಕ್ರೇಜ್‌ಗೆ ಜೊತೆಯಾದದ್ದು ಪೀಟ್ ಲೌ. ಹಾಗೆ ನೋಡಿದರೆ ಪೀಟ್ ಬಾಸ್, ಕಾರ್ಲ್ ಆತನ ಕೆಳಗೆ ದುಡಿಯುವ ನೌಕರ. ಆದರೆ ಮೊಬೈಲ್ ಪ್ರೀತಿ ಅವರಿಬ್ಬರನ್ನೂ ಒಟ್ಟು ಸೇರಿಸಿತು. ಇಬ್ಬರ ಫ್ರೆಂಡ್‌ಶಿಪ್ ಹೆಚ್ಚು ಆತ್ಮೀಯವಾಗುತ್ತ ಹೋದಾಗ ತಾವೇ ಹೊಸ ಮೊಬೈಲ್ ಒಂದನ್ನು ಮಾರುಕಟ್ಟೆಗೆ ತರುವ ಐಡಿಯಾ ಬಂತು. ಕ್ರಮೇಣ ಅದರ ವಿನ್ಯಾಸ ಕುರಿತೇ ಅವರ ಹೆಚ್ಚಿನ ಮಾತುಕತೆ ಇರುತ್ತಿತ್ತು.

ಹುಂಬ ಧೈರ್ಯ ಅದು 2013ರ ಡಿಸೆಂಬರ್ ತಿಂಗಳು. ಒನ್ ಪ್ಲಸ್ ಕಂಪೆನಿ ಆರಂಭವಾಯಿತು. ಕೆಲವು ತಿಂಗಳ ಹಿಂದೆಯೇ ಪೀಟ್ ಲೌ ಮತ್ತು ಕಾರ್ಲ್ ಒಪ್ಪೊದಿಂದ ಹೊರಬಂದಿದ್ದರು. ಹೊಸ ಮೊಬೈಲ್ ಬಗ್ಗೆ ತಲೆ ತುಂಬ ಐಡಿಯಾಗಳಿದ್ದವು. ಆ್ಯಪಲ್ ಅನ್ನು ಮೀರಿಸುವ ಸ್ಮಾರ್ಟ್ ಫೋನ್ ತಯಾರಿಸುತ್ತೇವೆ ಎಂದು ಎಲ್ಲ ಕಡೆ ಹೇಳುತ್ತಿದ್ದರು. ಕೆಲವು ಮೀಡಿಯಾಗಳೂ ಈ ಬಗ್ಗೆ ವರದಿ ಪ್ರಕಟಿಸಿದವು. ಆದರೆ ಇಷ್ಟೆಲ್ಲ ಆಗುವಾಗ ಮೊಬೈಲ್‌ನ ಶೇ.1 ಭಾಗವೂ ಸಿದ್ಧವಾಗಿರಲಿಲ್ಲ. ಹೇಳೋದೇನೋ ಹೇಳಿ ಆಯ್ತು. ಆದರೆ ಕಡಿಮೆ ಮೊತ್ತದಲ್ಲಿ ಆ್ಯಪಲ್ ಮೀರಿಸುವ ಫೋನ್ ತಯಾರಿಸುವುದಾದರೂ ಹೇಗೆ? ಅದು ಸಾಧ್ಯನಾ? ಪ್ರಾಕ್ಟಿಕಲ್ ಸಂಗತಿಗಳು ಬೇರೆಯೇ ಇವೆ ಅನ್ನೋದು ಕೆಲಸಕ್ಕಿಳಿದ ಮೇಲೆಯೇ ತಿಳಿದದ್ದು. ಆಗ ಗಾಬರಿಯಾಯ್ತು.

ಹಾಗೆಂದು ಆ ತರುಣರು ಟೆಕ್ನಾಲಜಿಯಲ್ಲಿ ಕ್ರಿಯೇಟಿವಿಟಿಗೆ ಮತ್ತೊಂದು ಹೆಸರಿನ ಹಾಗಿದ್ದವರು. ಮತ್ತೊಂದು ಐಡಿಯಾ ಬಂತು. ಗ್ರಾಹಕರಿಂದಲೇ ಅಭಿಪ್ರಾಯ ಸಂಗ್ರಹ ನಿಮ್ಮಿಷ್ಟದ ಫೋನ್ ಹೇಗಿರಬೇಕು, ಅದರಲ್ಲಿ ಏನೆಲ್ಲ ಅಂಶಗಳಿರಬೇಕು ಮೊದಲಾದ ವಿಷಯವನ್ನು ನೇರ ಗ್ರಾಹಕರಲ್ಲೇ ಕೇಳಿದರೆ ಬೆಸ್ಟ್ ಅನಿಸಿತು. ಇದಕ್ಕೆಂದೇ ಇಂಟರ್‌ನೆಟ್‌ನಲ್ಲಿ ಒಂದು ಕಮ್ಯುನಿಟಿ ತೆರೆದರು. ನಿಮ್ಮಿಷ್ಟದ ಸ್ಮಾರ್ಟ್ ಫೋನ್‌ನಲ್ಲಿ ಏನು ಇರಬೇಕು? ಏನು ಇರಬಾರದು? ಬೆಲೆ ಎಷ್ಟಿದ್ದರೆ ಉತ್ತಮ? ಫೀಚರ್ ಗಳು ಹೇಗಿರಬೇಕು? ಫೋನ್‌ನ ವಿಶೇಷತೆ ಏನಿತ್ತು?

5.5 ಇಂಚಿನ 1083 ಮೆಗಾಫಿಕ್ಸಲ್ ಡಿಸ್ಪ್ಲೇ, 3 ಜಿಬಿ ರ‌್ಯಾಮ್,62 ಜಿಬಿ ಇಂಟರ್‌ನಲ್ ಸ್ಟೋರೇಜ್, 5 ಎಂಪಿ ಪ್ರೈಮರಿ ಕ್ಯಾಮರಾ, 13 ಎಂಪಿ ಕ್ಯಾಮರಾ ಮೊದಲಾದ ಫೀಚರ್‌ಗಳಿದ್ದ ಸ್ಮಾರ್ಟ್‌ಫೋನ್. ಬೆಲೆ 11,690 ರಿಂದ ಆರಂಭ. ನಾಲ್ಕು ವರ್ಷಗಳ ಹಿಂದೆ ಇಷ್ಟು ಕಡಿಮೆ ಬೆಲೆಗೆ ಐಫೋನ್ ಗುಣಮಟ್ಟದ ಫೋನ್‌ಅನ್ನು ಕೊಡುವುದು ಸುಲಭದ ಮಾತಲ್ಲ. ಆದರೆ ಉತ್ಸಾಹಿ ತರುಣರಿಂದ ಇದು ಸಾಧ್ಯವಾಯಿತು. ಈ ಫೋನ್ ಬಗ್ಗೆ ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಯಾಯ್ತು. ವಿಶ್ವಾದ್ಯಂತ ಅಗಾಧ ಬೇಡಿಕೆ ಬಂತು. ಆದರೆ ಈ ತರುಣರಿಗೇ ತಮ್ಮ ಫೋನ್‌ಗೆ ಈ ಮಟ್ಟಿನ ಜನಪ್ರಿಯತೆ, ಬೇಡಿಕೆ ಬರುವ ಬಗ್ಗೆ ಸಣ್ಣ ನಿರೀಕ್ಷೆಯೂ ಇರಲಿಲ್ಲ. ತಾವು ತಯಾರಿಸಿದ 30 ಸಾವಿರ ಮೊಬೈಲ್ ಫೋನ್‌ಗಳಲ್ಲಿ 15 ಸಾವಿರ ಸೇಲಾಗಿದ್ದರೂ ಅದು ಅವರ ಮಟ್ಟಿಗೆ ಬಹಳ ದೊಡ್ಡ ಸಾಧನೆಯಾಗುತ್ತಿತ್ತು.

ಆದರೆ ನಿರೀಕ್ಷೆ ಹುಸಿಯಾಗಿ 30 ಸಾವಿರ ಒನ್ ಪ್ಲಸ್ ಒನ್ ಸ್ಮಾರ್ಟ್‌ಫೋನ್‌ಗಳೂ ಮಾರಾಟವಾದವು. ಅತ್ಯಧಿಕ ಸಂಖ್ಯೆಯ ಫೋನ್‌ಗಳಿಗೆ ಬೇಡಿಕೆ ಬಂತು. ಬಳಿಕ ತಯಾರಾದ ಸುಮಾರು 15 ಲಕ್ಷ ಮೊಬೈಲ್‌ಗಳೂ ಸೋಲ್ಡ್ ಔಟ್ ಆದವು. ಇದು ಒನ್ ಪ್ಲಸ್ ಕಂಪನಿ ಕಟ್ಟಿದ ತರುಣರ ಸ್ಫೂರ್ತಿ ಕಥೆ

click me!