ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಈ ತಿಂಗಳು ಕೂಡ ಇಳಿಕೆ ಮಾಡಲಾಗಿದೆ. 19 ರೂ. ಬೆಲೆ ಕಡಿತ ಮಾಡಲಾಗಿದೆ.
ನವದೆಹಲಿ (ಮೇ 1): ಪ್ರತಿ ತಿಂಗಳ ಮೊದಲ ದಿನ ಎಲ್ ಪಿಜಿ ಸಿಲಿಂಡರ್ ದರದಲ್ಲಿ ಬದಲಾವಣೆ ಮಾಡಲಾಗುತ್ತದೆ. ಅದರಂತೆ ಮೇ ತಿಂಗಳ ಮೊದಲ ದಿನವಾದ ಇಂದು ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿಇಳಿಕೆ ಮಾಡಲಾಗಿದೆ. 2024ನೇ ಸಾಲಿನ ಲೋಕಸಭಾ ಚುನಾವಣೆ ಪ್ರಕ್ರಿಯೆಗಳು ನಡೆಯುತ್ತಿರುವ ಮಧ್ಯದಲ್ಲೇ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಬುಧವಾರ ವಾಣಿಜ್ಯ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಪರಿಷ್ಕರಣೆ ಮಾಡಿವೆ. ಇತ್ತೀಚಿನ ಬೆಲೆ ಪರಿಷ್ಕರಣೆ ಪ್ರಕಾರ 19 ಕೆಜಿ ತೂಕದ ವಾಣಿಜ್ಯ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಮೇ 1ರಿಂದ ಜಾರಿಗೆ ಬರುವಂತೆ 19 ರೂ. ಕಡಿತ ಮಾಡಲಾಗಿದೆ. ಕಳೆದ ತಿಂಗಳು ಕೂಡ 19 ಕೆಜಿ ತೂಕದ ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 30.50ರೂ. ಇಳಿಕೆ ಮಾಡಲಾಗಿತ್ತು. ಹಾಗೆಯೇ 5ಕೆಜಿ ಎಫ್ಟಿಎಲ್ ಸಿಲಿಂಡರ್ ಬೆಲೆಯಲ್ಲಿ 7.50 ರೂ. ಇಳಿಕೆ ಮಾಡಲಾಗಿತ್ತು.
ವಾಣಿಜ್ಯ ಸಿಲಿಂಡರ್ ಬೆಲೆಯನ್ನು 19 ರೂಪಾಯಿ ಇಳಿಕೆ ಮಾಡಿದ ಬಳಿಕ ರಾಷ್ಟ್ರ ರಾಜ್ಯಧಾನಿ ದೆಹಲಿಯಲ್ಲಿ 1745.50 ರೂ. ಈ ಹಿಂದೆ ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ 1764.50 ರೂ. ಇತ್ತು. ಇನ್ನು ಬೆಲೆ ಇಳಿಕೆ ಬಳಿಕ ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1859 ರೂ. ಮುಂಬೈನಲ್ಲಿ 1698.50 ರೂ.ಗೆ ಮತ್ತು ಚೆನ್ನೈನಲ್ಲಿ 1911 ರೂ.ಗೆ ಲಭಿಸಲಿದೆ.
ಬಂಗಾರದ ಬೆಲೆ ಗಗನಕ್ಕೇರಿದರೂ ಭಾರತದಲ್ಲಿ ತಗ್ಗದ ಖರೀದಿ; ಚಿನ್ನದ ಬೇಡಿಕೆಯಲ್ಲಿ ಶೇ.8ರಷ್ಟು ಏರಿಕೆ
ಗೃಹ ಸಿಲಿಂಡರ್ ಬೆಲೆ ಸ್ಥಿರ
ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಲಾಗಿದ್ದರೂ ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಕಳೆದ ವರ್ಷದ ಆಗಸ್ಟ್ ಬಳಿಕ ಯಾವುದೇ ಪರಿಷ್ಕರಣೆ ಮಾಡಿಲ್ಲ. 2023ರ ಆಗಸ್ಟ್ 30ರಂದು ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ 200ರೂ. ಕಡಿತ ಮಾಡಲಾಗಿತ್ತು. ಸದ್ಯ ಬೆಲೆ ಅಷ್ಟೇ ಇದ್ದು, ವ್ಯತ್ಯಾಸವಾಗಿಲ್ಲ. ಹೀಗಾಗಿ ಗೃಹಿಣಿಯರಿಗೆ ಕೆಲವು ತಿಂಗಳಿಂದ ನಿರಾಳತೆ ಸಿಕ್ಕಿದೆ.
ಮಾರ್ಚ್ 1ರಂದು 19 ಕೆಜಿ ತೂಕದ ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 25ರೂ. ಏರಿಕೆ ಮಾಡಲಾಗಿತ್ತು. ಇನ್ನು ಫೆಬ್ರವರಿ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 14ರೂ. ಹೆಚ್ಚಳ ಮಾಡಲಾಗಿತ್ತು. ಇದಕ್ಕೂ ಮುನ್ನ ಅಂದರೆ 2024ರ ಪ್ರಾರಂಭದಲ್ಲಿ ಹೊಸ ವರ್ಷದ ಪ್ರಯುಕ್ತ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 39.50ರೂ. ಇಳಿಕೆ ಮಾಡಲಾಗಿತ್ತು.
ಪ್ರತಿ ತಿಂಗಳ ಆರಂಭದಲ್ಲಿ ಸರ್ಕಾರಿ ಸ್ವಾಮ್ಯದ ಭಾರತೀಯ ತೈಲ ನಿಗಮ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್, ಹಿಂದೂಸ್ಥಾನ ಪೆಟ್ರೋಲಿಯಂ ಕಾರ್ಪೋರೇಶನ್ ಎಲ್‌ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆ ಮಾಡುತ್ತದೆ. ಕಳೆದ ತಿಂಗಳ ಅಂತಾರಾಷ್ಟ್ರೀಯ ಬೆಲೆಯ ಅಂದಾಜನ್ನು ಆಧರಿಸಿ ಪ್ರತಿ ತಿಂಗಳ ಮೊದಲ ದಿನ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಏರಿಕೆ ಮಾಡಲಾಗುತ್ತದೆ.
ಅಕ್ಷಯ ತೃತೀಯದಂದು ಚಿನ್ನ – ಬೆಳ್ಳಿಯಲ್ಲಿ ಯಾವುದು ಕೊಳ್ಳೋದು ಬೆಸ್ಟ್ ?
ನವೆಂಬರ್, ಡಿಸೆಂಬರ್ ಹಾಗೂ ಜನವರಿ ಸತತ ಮೂರು ತಿಂಗಳು ಇಳಿಕೆ ಹಾದಿಯಲ್ಲಿದ್ದ ವಾಣಿಜ್ಯ ಸಿಲಿಂಡರ್ ಬೆಲೆ ಫೆಬ್ರವರಿಯಿಂದ ಏರಿಕೆ ಕಾಣಲು ಪ್ರಾರಂಭಿಸಿತ್ತು. ಆದರೆ, ಮಾರ್ಚ್ ಹಾಗೂ ಏಪ್ರಿಲ್ ನಲ್ಲಿ ಇಳಿಕೆ ಮಾಡಲಾಗಿದೆ. ಆದರೆ, ಈ ಇಳಿಕೆಗೆ ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಿಲ್ಲ. ದೇಶದಲ್ಲಿ ಲೋಕಸಭಾ ಚುನಾವಣಾ ಪ್ರಕ್ರಿಯೆಗಳು ನಡೆಯುತ್ತಿರುವ ಬೆನ್ನಲ್ಲೇ ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆ ಗ್ರಾಹಕರಿಗೆ ಖುಷಿ ನೀಡಿದೆ. ಹೋಟೆಲ್ ಉದ್ಯಮಿಗಳು ಹಾಗೂ ವಾಣಿಜ್ಯ ಸಿಲಿಂಡರ್ ಬಳಕೆ ಮಾಡುವ ಗ್ರಾಹಕರಿಗೆ ಸರ್ಕಾರದ ಈ ಕ್ರಮ ಖುಷಿ ನೀಡಿದೆ.