ರಾಜ್ಯದಲ್ಲಿ 5-6 ಕೈಗಾರಿಕಾ ಟೌನ್‌ಶಿಪ್‌ ಸ್ಥಾಪನೆ

By Kannadaprabha NewsFirst Published Jan 20, 2021, 9:21 AM IST
Highlights

ಟೌನ್‌ಶಿಪ್ ರಚನೆ ಮಾಡುವ ಸಂಬಂಧ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿದ್ದಾರೆ. ಕೈಗಾರಿಕಾ ಪ್ರದೇಶದಲ್ಲಿ ಟೌನ್‌ಶಿಪ್‌ ನಿರ್ಮಾಣ ಸಂಬಂಧ ಸಂಪುಟ ಒಪ್ಪಿಗೆ ಪಡೆಯಲಾಗುವುದು ಎಂದು ಹೇಳಿದ್ದಾರೆ. 

ಬೆಂಗಳೂರು (ಜ.20):  ಕೈಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯದಲ್ಲಿ 5-6 ಕೈಗಾರಿಕಾ ಟೌನ್‌ಶಿಪ್‌ ಸ್ಥಾಪನೆ ಮಾಡುವ ಸಂಬಂಧ ಶೀಘ್ರದಲ್ಲಿಯೇ ಸಚಿವ ಸಂಪುಟದ ಒಪ್ಪಿಗೆ ಪಡೆದುಕೊಳ್ಳಲಾಗುವುದು ಎಂದು ಬೃಹತ್‌ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

 ನಗರದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಕೈಗಾರಿಕಾ ನೀತಿ 2020-25’ ಕೈಪಿಡಿ ಬಿಡುಗಡೆ ಮಾಡಿ ಉದ್ಯಮಿಗಳಿಗೆ ನೂತನ ಕೈಗಾರಿಕಾ ನೀತಿಯ ಪ್ರಯೋಜನ ಕುರಿತು ಮಾಹಿತಿ ನೀಡಿದರು.

ಉದ್ಯಮಿಗಳ ಬೇಡಿಕೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು, ರಾಜ್ಯದ ವಿವಿಧೆಡೆ ಟೌನ್‌ಶಿಪ್‌ ಆರಂಭಕ್ಕೆ ಉದ್ಯಮಿಗಳು ಬಹುದಿನಗಳಿಂದ ಬೇಡಿಕೆ ಸಲ್ಲಿಸುತ್ತಿದ್ದಾರೆ. ರಾಜ್ಯದಲ್ಲಿ 5-6 ಕೈಗಾರಿಕಾ ಟೌನ್‌ಶಿಪ್‌ ಅಭಿವೃದ್ಧಿ ಪಡಿಸುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ ಶೀಘ್ರದಲ್ಲಿಯೇ ಸಚಿವ ಸಂಪುಟ ಸಭೆಯ ಒಪ್ಪಿಗೆ ಪಡೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

1000 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಟೌನ್‌ಶಿಪ್‌ ಸ್ಥಾಪನೆಗೆ ನಿರ್ಧಾರ: ಸಚಿವ ಶೆಟ್ಟರ್‌

ಆರ್ಥಿಕತೆ ಮತ್ತು ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸುವುದು ರಾಜ್ಯ ಸರ್ಕಾರದ ಮೊದಲ ಆದ್ಯತೆಯಾಗಿದೆ. ಕೋವಿಡ್‌-19 ನಡುವೆಯೂ ಆರ್ಥಿಕ ಚಟುವಟಿಕೆಗಳನ್ನು ಬೆಂಬಲಸುವ ಮೂಲಕ ಆರ್ಥಿಕ ಪುನಶ್ಚೇತನಗೊಳಿಸಲು ರಾಜ್ಯ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಹೀಗಾಗಿ ಉದ್ಯಮಸ್ನೇಹಿ ವಾತಾವರಣ ಸೃಷ್ಟಿಯಾಗಿದ್ದು, ಹೂಡಿಕೆಯ ಪ್ರಸ್ತಾಪಗಳು ವೃದ್ಧಿಸಿವೆ ಎಂದರು.

ರಾಜ್ಯದಲ್ಲಿ 2020ರ ಜನವರಿಯಿಂದ ಅಕ್ಟೋಬರ್‌ವರೆಗಿನ ಅವಧಿಯಲ್ಲಿ 1,54,937 ಕೋಟಿ ರು. ಮೊತ್ತದ 95 ಹೂಡಿಕೆ ಪ್ರಸ್ತಾವನೆಗಳು ನೋಂದಣಿಯಾಗುವ ಮೂಲಕ ದೇಶದಲ್ಲಿಯೇ ರಾಜ್ಯ ಪ್ರಥಮ ಸ್ಥಾನ ಪಡೆದಿದೆ. 2019ರ ಆಗಸ್ಟ್‌ನಿಂದ 2020ರ ಡಿಸೆಂಬರ್‌ವರೆಗೆ ರಾಜ್ಯ ಸರ್ಕಾರದ ರಾಜ್ಯ ಉನ್ನತಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಒಟ್ಟು 410 ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. ಈ ಯೋಜನೆಗಳಿಂದ 82,015 ಕೋಟಿ ರು. ಬಂಡವಾಳ ಆಕರ್ಷಿಸಲಾಗಿದ್ದು, 2,27,147 ಮಂದಿಗೆ ಉದ್ಯೋಗ ಅವಕಾಶ ಲಭ್ಯವಾಗಲಿದೆ. 2019ರ ಅಕ್ಟೋಬರ್‌ನಿಂದ 2020ರ ಸೆಪ್ಟೆಂಬರ್‌ ಅವಧಿಯಲ್ಲಿ 58,204 ಕೋಟಿ ರು. ವಿದೇಶಿ ನೇರ ಬಂಡವಾಳ ಆಕರ್ಷಿಸಿ ರಾಜ್ಯ ಮೂರನೇ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದರು.

‘ಕೈಗಾರಿಕಾ ನೀತಿ 2020-25’ ರಾಜ್ಯದಲ್ಲಿ ಸುಲಲಿತ ವ್ಯವಹಾರಕ್ಕೆ (ಈಸ್‌ ಆಫ್‌ ಡೂಯಿಂಗ್‌) ಹೆಚ್ಚಿನ ಆದ್ಯತೆ ನೀಡಲಿದೆ. ಈ ನಿಟ್ಟಿನಲ್ಲಿ ಅಫಿಡವಿಟ್‌ ಬೇಸ್ಡ್‌ ಕ್ಲಿಯರೆನ್ಸ್‌(ಎಬಿಸಿ) ಯೊಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಸ್ವಯಂ ಘೋಷಣೆ ಪತ್ರ ಮೂಲಕ ಕೈಗಾರಿಕೆಗಳ ಸ್ಥಾಪನೆ ಪ್ರಕ್ರಿಯೆಯನ್ನು ಸರಳೀಕೃತಗೊಳಿಸುವ ಯೋಜನೆ ಇದಾಗಿದೆ. ವಿವಿಧ ಇಲಾಖೆಗಳ ಆಯ್ದ 15 ಉದ್ಯಮ ಸೇವೆಗಳು ಇದರ ವ್ಯಾಪ್ತಿಗೆ ಬರಲಿದೆ. ಎಸ್‌ಸಿ/ಎಸ್‌ಟಿ ಉದ್ದಿಮೆದಾರರಿಗೆ ಆದ್ಯತೆ ನೀಡಲಾಗಿದೆ. ಕೆಐಎಡಿಬಿಯಿಂದ ಕೈಗಾರಿಕೆ ನಿವೇಶನಕ್ಕೆ ಶೇ.75ರಷ್ಟುರಿಯಾಯಿತಿ ನೀಡಲು ಸರ್ಕಾರ ಮುಂದಾಗಿದೆ ಎಂದು ವಿವರಿಸಿದರು.

ಕನ್ನಡಿಗರಿಗೆ ಆದ್ಯತೆ:

ನೂತನ ಕೈಗಾರಿಕಾ ನೀತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಲಾಗಿದೆ. ಕೈಗಾರಿಕಾ ಬಂಡವಾಳ ಹೂಡಿಕೆ ಯೋಜನೆಗಳ ಒಟ್ಟಾರೆ ಆಧಾರದ ಮೇಲೆ ‘ಸಿ’ ಗ್ರೂಪ್‌ನಲ್ಲಿ ಶೇ.70ರಷ್ಟುಮತ್ತು ಗ್ರೂಪ್‌‘ಡಿ’ ನಲ್ಲಿ ಶೇ.100ರಷ್ಟುಕನ್ನಡಿಗರಿಗೆ ಉದ್ಯೋಗ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಕರ್ನಾಟಕವನ್ನು ವಿಶ್ವ ದರ್ಜೆಯ ಕೈಗಾರಿಕೋದ್ಯಮ ಜಾಲವಾಗಿ ಅಭಿವೃದ್ಧಿ ಪಡಿಸಲು ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ನ ಭಾಗವಾಗಿ ತುಮಕೂರಿನಲ್ಲಿ ಕೈಗಾರಿಕಾ ಕಾರಿಡಾರ್‌ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 1,701.81 ಕೋಟಿ ರು. ಮೀಸಲಿರಿಸಿದೆ. ಇದರಿಂದ ಅಂದಾಜು 88,500 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಬೆಂಗಳೂರು ಹೊರತು ಪಡಿಸಿದ ನಗರಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್‌, ಹುಬ್ಬಳ್ಳಿ-ಧಾರವಾಡದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್‌, ಯಾದಗಿರಿ ಜಿಲ್ಲೆಯಲ್ಲಿ ಫಾರ್ಮಾ ಕ್ಲಸ್ಟರ್‌ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.

 ಕೈಗಾರಿಕೆಗಳ ತ್ವರಿತ ಅಭಿವೃದ್ಧಿಯನ್ನು ಖಾತರಿಪಡಿಸಲು ಸರ್ಕಾರ ಕ್ಲಸ್ಟರ್‌ಗಳ ಅಭಿವೃದ್ಧಿ ಪ್ರಕ್ರಿಯೆಗೆ ಒತ್ತು ನೀಡಲಿದೆ. ಬಂಡವಾಳ ಆಕರ್ಷಿಸಲು ವಲಯ ನಿರ್ದಿಷ್ಟಕ್ಲಸ್ಟರ್‌ಗಳನ್ನು ರೂಪಿಸಿದ ಮೊದಲ ರಾಜ್ಯ ಕರ್ನಾಟಕ. ಆಟಿಕೆ, ಜವಳಿ ಮತ್ತು ಇಎಸ್‌ಡಿಎಂ ಕ್ಲಸ್ಟರ್‌ಗಳಿಗೆ ಈಗಾಗಲೇ ಪ್ರತ್ಯೇಕ ನೀತಿ ರೂಪಿಸಲಾಗಿದ್ದು, ಕೃಷಿ ಉಪಕರಣಗಳು, ಎಫ್‌ಎಂಸಿಜಿ ಮತ್ತು ವೆಲ್ನೆಸ್‌ ಕ್ಲಸ್ಟರ್‌ಗಳ ನೀತಿ ಹೊರತರುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.

- ಗೌರವ್‌ ಗುಪ್ತ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕೈಗಾರಿಕೆ ಇಲಾಖೆ

ಇಂಟಿಗ್ರೇಟೆಡ್‌ ಇಂಡಸ್ಟ್ರಿಯಲ್‌ ಪಾರ್ಕ್, ವಲಯ ನಿರ್ದಿಷ್ಟಪಾರ್ಕ್, ಲಾಜಿಸ್ಟಿಕ್‌ ಪಾರ್ಕ್, ಫ್ಲಾಂಟೆಡ್‌ ಫ್ಯಾಕ್ಟರಿಗಳ ಸ್ಥಾಪನೆಗೆ ಉತ್ತೇಜನ ನೀಡಲಾಗುತ್ತಿದೆ. ಕೈಗಾರಿಕಾ ಉತ್ಪಾದನೆಗೆ ಅಡಚಣೆಯಾಗದಂತೆ ಕೈಗಾರಿಕೆಗಳು ತಮ್ಮ ಆವರಣದಲ್ಲಿಯೇ ನೀರಿನ ಕೊಯ್ಲು ಸೇರಿದಂತೆ ಉಳಿತಾಯ ಕ್ರಮಗಳನ್ನು ಅಳವಡಿಸಲು ಪ್ರೋತ್ಸಾಹಕವಾಗಿ ಆರ್ಥಿಕ ಉತ್ತೇಜನವನ್ನೂ ನೀಡಲಾಗುವುದು.

- ಗುಂಜನ್‌ ಕೃಷ್ಣ, ಆಯುಕ್ತೆ, ಕೈಗಾರಿಕೆ ಇಲಾಖೆ
 
ಹೊಸ ಕೈಗಾರಿಕಾ ನೀತಿ ಮುಖ್ಯಾಂಶಗಳು

* ಮುಂದಿನ 5 ವರ್ಷದಲ್ಲಿ 5 ಲಕ್ಷ ಕೋಟಿ ರು. ಬಂಡವಾಳ ಆಕರ್ಷಣೆ

* 20 ಲಕ್ಷ ಜನರಿಗೆ ಉದ್ಯೋಗಾವಕಾಶ

* ವಾರ್ಷಿಕ ಶೇ.10ರಷ್ಟುಕೈಗಾರಿಕಾ ಬೆಳವಣಿಗೆ ದರ

* ಮುಂದಿನ 5 ವರ್ಷದಲ್ಲಿ ವಾಣಿಜ್ಯರಫ್ತು ವ್ಯವಹಾರದಲ್ಲಿ ತೃತೀಯ ಸ್ಥಾನದ ಗುರಿ

* ಕೈಗಾರಿಕಾಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಆದ್ಯತೆ

* ಬೆಂಗಳೂರು ಹೊರತುಪಡಿಸಿ ರಾಜ್ಯದ ಇತರೆ ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತು

* ಎಂಎಸ್‌ಎಂಇಗಳ ಅಭಿವೃದ್ಧಿ/ ಉತ್ತೇಜನ

* ಎಂಎಸ್‌ಎಂಇಗಳಿಗೆ ಶ್ರೇಷ್ಠತಾ ಕೇಂದ್ರ ಸ್ಥಾಪನೆ. ಕಚ್ಚಾವಸ್ತು ಪೂರೈಕೆದಾರರು, ಮಾರುಕಟ್ಟೆಪ್ರವೇಶಾವಕಾಶ, ಗುಣಮಟ್ಟದ ನಿಯಂತ್ರಣ ಮತ್ತು ಪ್ರಮಾಣೀಕರಣಕ್ಕಾಗಿ ಆನ್‌ಲೈನ್‌ ತಂತ್ರಜ್ಞಾನ ವೇದಿಕೆಯನ್ನು ವಿನ್ಯಾಸಗೊಳಿಸುವುದು, ಸಾಲದ ಬಳಕೆ ಹೆಚ್ಚಿಸುವುದು.

* ತಂತ್ರಜ್ಞಾನ ಅಳವಡಿಕೆ ಮತ್ತು ನವೋನ್ವೇಷಣೆಗೆ ಪೂರಕ ಪರಿಸರವನ್ನು ನಿರ್ಮಾಣ ಮಾಡುವುದು

* ಆಟೋಮೊಬೈಲ್ಸ್‌ ಮತ್ತು ಆಟೋ ಕಾಂಪೋನೆಂಟ್ಸ್‌, ಫಾರ್ಮಾಸ್ಯೂಟಿಕಲ್‌ ಮತ್ತು ಮೆಡಿಕಲ್‌ ಡಿವೈಸಸ್‌, ಎಂಜಿನಿಯರಿಂಗ್‌ ಮತ್ತು ಮೆಷಿನ್‌ ಟೂಲ್ಸ್‌, ನಾಲೆಡ್ಜ್‌ ಬೇಸ್ಡ್‌ ಇಂಡಸ್ಟ್ರೀಸ್‌, ಲಾಜಿಸ್ಟಿಕ್ಸ್‌, ರಿನಿವೇಬಲ್‌ ಎನರ್ಜಿ, ಏರೋಸ್ಪೆಸ್‌, ಡಿಫೆನ್ಸ್‌ ಮತ್ತು ಎಲೆಕ್ಟ್ರಿಕ್‌ ವೆಹಿಕಲ್ಸ್‌ ಕ್ಷೇತ್ರಕ್ಕೆ ನೀತಿಯಲ್ಲಿ ಆದ್ಯತೆ.

* ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಆದ್ಯತೆ. ಸಿ ಗ್ರೂಪ್‌ನಲ್ಲಿ ಶೇ.70ರಷ್ಟುಮತ್ತು ಗ್ರೂಪ್‌ ಡಿ ನಲ್ಲಿ ಶೇ.100ರಷ್ಟುಕನ್ನಡಿಗರಿಗೆ ಉದ್ಯೋಗ ಕಡ್ಡಾಯ

* ಸುಲಲಿತ ವ್ಯವಹಾರಕ್ಕೆ (ಈಸ್‌ ಆಫ್‌ ಡೂಯಿಂಗ್‌) ಹೆಚ್ಚಿನ ಆದ್ಯತೆ

click me!