ನ. 9 ರಿಂದ ಸುಮ್ಮನಹಳ್ಳಿ ಮೇಲ್ಸೇತುವೆ ಗುಂಡಿ ಮುಚ್ಚುವ ಕಾರ್ಯ

Published : Nov 08, 2019, 08:27 AM ISTUpdated : Nov 12, 2019, 01:34 PM IST
ನ. 9 ರಿಂದ ಸುಮ್ಮನಹಳ್ಳಿ ಮೇಲ್ಸೇತುವೆ ಗುಂಡಿ ಮುಚ್ಚುವ ಕಾರ್ಯ

ಸಾರಾಂಶ

ಸುಮ್ಮನಹಳ್ಳಿ ಮೇಲ್ಸೇತುವೆ ಮೇಲೆ ಬಿದ್ದ ಗುಂಡಿ ಮುಚ್ಚುವ ಕಾರ್ಯ ಶನಿವಾರದಿಂದ ಆರಂಭ|ಗುಂಡಿ ಸುತ್ತ ಕತ್ತರಿಸಿದ ಕಾಂಕ್ರಿಟ್‌ ಸ್ಲ್ಯಾಬ್ ಅನ್ನು ವಿದೇಶದಿಂದ ತರಿಸಲಾಗಿದೆ| ದೊಡ್ಡ ಗುಂಡಿ ಸೃಷ್ಟಿಗೆ ಕಾರಣ ಹಾಗೂ ಅದರ ದುರಸ್ತಿ ಕುರಿತು ಅಧ್ಯಯನ ನಡೆಸಿದ ಸಿವಿಎಲ್-ಎಡ್ ಟೆಕ್ನೋಕ್ಲಿನಿಕ್ ಸಂಸ್ಥೆಯ ತಜ್ಞರ ತಂಡ|

ಬೆಂಗಳೂರು[ನ.8]: ಸುಮ್ಮನಹಳ್ಳಿ ಮೇಲ್ಸೇತುವೆ ಮೇಲೆ ಬಿದ್ದ ಗುಂಡಿ ಮುಚ್ಚುವ ಕಾರ್ಯ ಶನಿವಾರದಿಂದ ಆರಂಭವಾಗಲಿದ್ದು, ಗುಂಡಿ ಸುತ್ತ ಕತ್ತರಿಸಿದ ಕಾಂಕ್ರಿಟ್‌ ಸ್ಲ್ಯಾಬ್ ಅನ್ನು ವಿದೇಶದಿಂದ ತರಿಸಲಾದ ವಿಶೇಷ ಸಿಮೆಂಟ್‌ನಿಂದ ಮರುಭರ್ತಿ ಮಾಡುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ. 

ನಗರದ ರಿಂಗ್ ರಸ್ತೆಯ ಸುಮ್ಮನಹಳ್ಳಿಯ ಮೇಲ್ಸೇತುವೆ ಮೇಲ್ಭಾಗದಲ್ಲಿ ದೊಡ್ಡ ಗುಂಡಿ ಸೃಷ್ಟಿಗೆ ಕಾರಣ ಹಾಗೂ ಅದರ ದುರಸ್ತಿ ಕುರಿತು ಅಧ್ಯಯನ ನಡೆಸಿದ ಸಿವಿಎಲ್-ಎಡ್ ಟೆಕ್ನೋಕ್ಲಿನಿಕ್ ಸಂಸ್ಥೆಯ ತಜ್ಞರ ತಂಡ ಗುರುವಾರ ಮಧ್ಯಂತರ ವರದಿಯನ್ನು ಬಿಬಿಎಂಪಿಗೆ ಸಲ್ಲಿಸಿದ್ದು, ಇದರ ಆಧಾರದ ಮೇಲೆ ಕಾಮಗಾರಿ ಶನಿವಾರ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸೋಮವಾರದಿಂದ ಸಿವಿಲ್-ಎಡ್ ಸಂಸ್ಥೆಯ ತಜ್ಞರ ತಂಡ ಸುಮ್ಮನಹಳ್ಳಿಯ ಮೇಲ್ಸೇತುವೆಯನ್ನು ತಪಾಸಣೆ ನಡೆಸುತ್ತಿದ್ದು, ಗುರುವಾರ ನೀಡಿದ ಮಧ್ಯಂತರ ವರದಿಯಲ್ಲಿ ಮೇಲ್ಸೇತುವೆಯಲ್ಲಿ ಗುಂಡಿ ಬಿದ್ದ ಭಾಗದಲ್ಲಿ ಹೇಗೆ ಕಾಮಗಾರಿ ನಡೆಸಬೇಕು ಎಂಬ ಕುರಿತ ನಕ್ಷೆ ನೀಡಿದೆ. ಅಲ್ಲದೆ, ವಿದೇಶಿ ಸಿಮೆಂಟ್‌ನಿಂದ ಗುಂಡಿ ಭರ್ತಿ ಕಾಮಗಾರಿ ನಡೆಸಬೇಕು. ಗುಂಡಿ ಬಿದ್ದ ಸ್ಥಳದಲ್ಲಿ ಹಾಳಾಗಿರುವ ಮತ್ತು ತುಕ್ಕು ಹಿಡಿದಿರುವ ಕಬ್ಬಿಣದ ಸರಳುಗಳನ್ನು ಮಾತ್ರ ಬದಲಾವಣೆ ಮಾಡಬೇಕು ಎಂದು ಶಿಫಾರಸು ಮಾಡಿದೆ. ಒಂದು ಬಾರಿ ಮೇಲ್ಸೆತುವೆ ದುರಸ್ತಿ ಕಾಮಗಾರಿ ಪೂರ್ಣಗೊಳಿಸಿದ ನಂತರ ಮೊದಲ 48 ಗಂಟೆಗಳವರೆಗೆ ಯಾವ ವಾಹನಕ್ಕೂ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ. ಈ ಅವಧಿ ನಂತರ ವಾಹನ ಸಂಚಾರಕ್ಕೆ ಅವಕಾಶ ನೀಡುವ ಕುರಿತು ತಜ್ಞರು ತಪಾಸಣೆ ನಡೆಸಿ ಅನಂತರ ತೀರ್ಮಾನ ಕೈಗೊಳ್ಳಲಿದ್ದಾರೆ. 

ಪೂರ್ಣ ವರದಿಗೆ 20 ದಿನಬೇಕಿದೆ: 

ಈ ತಜ್ಞರ ಸಮಿತಿಯು ಸುಮ್ಮನಹಳ್ಳಿ ಮೇಲ್ಸೇತುವೆಯ ಗುಂಡಿ ಸೃಷ್ಟಿಗೆ ಕಾರಣ ಮಾತ್ರವಲ್ಲದೇ ಇಡೀ ಮೇಲ್ಸೇತುವೆಯನ್ನು ಗುಣಮಟ್ಟ ಪರಿಶೀಲಿಸಿ ವರದಿ ನೀಡಲಿದೆ. ಇದಕ್ಕಾಗಿ ಸಿವಿಲ್-ಎಡ್ ಸಂಸ್ಥೆಯ ತಜ್ಞರು ಡ್ರೋಣ್‌ ಸೇರಿದಂತೆ ಅತ್ಯಾಧುನಿಕ ಉಪಕರಣಗಳನ್ನು ಬಳಸಿಕೊಂಡು ಸದ್ಯಗುಂಡಿ ಬಿದ್ದಿರುವ ನಾಗರಬಾವಿಯಿಂದ ಗೊರಗುಂಟೆ ಪಾಳ್ಯಮಾರ್ಗದಲ್ಲಿ ಮಾದರಿ ಸಂಗ್ರಹ ಮತ್ತು ತಪಾಸಣೆ ನಡೆಸುತ್ತಿದೆ. ಬಳಿಕ ಗೊರಗುಂಟೆಪಾಳ್ಯದಿಂದ ನಾಗರಬಾವಿ ಕಡೆ ಸಾಗುವ ಮೇಲ್ಸೇತುವೆಯ ಮತ್ತೊಂದು ಪಥವನ್ನು ತಪಾಸಣೆ ಮಾಡಿ ಮಾದರಿ ಸಂಗ್ರಹಿಸಲಾಗುವುದು. ತದ ನಂತರ ಸಮಗ್ರ ವರದಿಯನ್ನು ಸಿದ್ಧಪಡಿಸಿದ ಪಾಲಿಕೆಗೆ ಸಲ್ಲಿಸಲಾಗುವುದು. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳುವುದಕ್ಕೆ ಸುಮಾರು 20 ದಿನ ಬೇಕಾಗಲಿದೆ ಎಂದು ಸಿವಿಲ್-ಎಡ್ ಸಂಸ್ಥೆಯ ಮುಖ್ಯಸ್ಥ ಹಾಗೂ ತಜ್ಞ ಮೋಹನ್‌ಕುಮಾರ್ ಮಾಹಿತಿ ನೀಡಿದ್ದಾರೆ. 
 

PREV
click me!

Recommended Stories

ಕೋರಮಂಗಲ್ಲಿ ಜನಸಾಗರದಿಂದ ಸಾರ್ವಜನಿಕ ಪ್ರವೇಶ ಬಂದ್, ಕಿರಿಕ್ ಮಾಡಿದಾತ ಪೊಲೀಸ್ ವಶಕ್ಕೆ
ಬೆಂಗಳೂರು: ಎಂಜಿ ರೋಡ್ ರಷ್‌ನಲ್ಲಿ ಪತ್ನಿ ನಾಪತ್ತೆ; ಆಘಾತ ತಾಳಲಾರದೆ ಪತಿಗೆ ಪಿಟ್ಸ್!