ಸೀರಿಯಲ್ಗಳಲ್ಲಿ ಮಿಂಚುವ ಆಸೆನಾ? ಖ್ಯಾತ ನಿರ್ದೇಶಕ ಆರೂರು ಜಗದೀಶ್ರಿಂದ ಆಹ್ವಾನ- ಡಿಟೇಲ್ಸ್ ಇಲ್ಲಿದೆ...
ಹೊಸ ಸೀರಿಯಲ್ನಲ್ಲಿ ನಟಿಸಲು ನಾಯಕ-ನಾಯಕಿ ಮತ್ತು ಪೋಷಕ ಪಾತ್ರಕ್ಕೆ ನಿರ್ದೇಶಕ ಆರೂರು ಜಗದೀಶ್ ಅವರು ಹೊಸ ಮುಖವನ್ನು ಹುಡುಕುತ್ತಿದ್ದಾರೆ. ಇಲ್ಲಿದೆ ಡಿಟೇಲ್ಸ್...

ಕಲೆ ಎನ್ನುವುದು ಎಲ್ಲರಿಗೂ ಒಲಿಯುವುದಿಲ್ಲ. ಕಲೆ ಒಲಿದರೂ ಅದಕ್ಕೊಂದು ವೇದಿಕೆ ಸಿಗದವರೂ ಹಲವರಿದ್ದಾರೆ. ಅದರಲ್ಲಿಯೂ ಅಭಿನಯಕ್ಕೆ ಹಲವು ವೇದಿಕೆಗಳು ತೆರೆದಿದ್ದರೂ, ಅದೃಷ್ಟ ಇದ್ದವರಿಗೆ ಮಾತ್ರ ಅದು ದಕ್ಕುತ್ತದೆ. ಇನ್ನು ಸೀರಿಯಲ್, ಸಿನಿಮಾಗಳಲ್ಲಿ ಮಿಂಚಬೇಕು ಎಂದರೆ ಬರೀ ಅದೃಷ್ಟ ಇದ್ದರೆ ಸಾಲದು, ಗಾಡ್ಫಾದರ್ಗಳು ಬೇಕೇ ಬೇಕು ಎನ್ನುವ ಸ್ಥಿತಿ ಇದೆ. ಅಪ್ಪ-ಅಮ್ಮನೋ ಇಲ್ಲವೇ ಕುಟುಂಬದಲ್ಲಿ ಯಾರಾದರೂ ಸ್ಟಾರ್ ನಟ-ನಟಿಯರಾಗಿದ್ದರೆ ಅವರಿಗೆ ಸುಲಭದಲ್ಲಿ ಅವಕಾಶ ದಕ್ಕುವುದು ಇದೆ. ಯಾವುದೇ ಬ್ಯಾಕ್ಗ್ರೌಂಡ್ ಇಲ್ಲದೆಯೇ ಬಣ್ಣದ ಲೋಕದಲ್ಲಿ ಮಿಂಚುತ್ತಿರುವವರೂ ಇದ್ದರೂ ಅಂಥವರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ನಿಮ್ಮಲ್ಲಿಯೂ ನಟನೆಯ ಟ್ಯಾಲೆಂಟ್ ಇದ್ದು, ಅವಕಾಶ ಇಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿರುವಿರಾ?
ಹಾಗಿದ್ದರೆ ನಿಮಗಿದೋ ಸುವರ್ಣಾವಕಾಶವನ್ನು ಕೊಟ್ಟಿದ್ದಾರೆ ಖ್ಯಾತ ನಿರ್ದೇಶಕ ಆರೂರು ಜಗದೀಶ್. ಪುಟ್ಟಕ್ಕನ ಮಕ್ಕಳು, ಜೊತೆ ಜೊತೆಯಲಿ, ಗುಪ್ತಗಾಮಿನಿ, ಶುಭ ವಿವಾಹ, ಜೋಡಿ ಹಕ್ಕಿ, ಭೂಮಿಗೆ ಬಂದ ಭಗವಂತ ಸೇರಿದಂತೆ ಹಲವಾರು ಸೂಪರ್ ಡೂಪರ್ ಸೀರಿಯಲ್ಗಳನ್ನು ನೀಡಿರುವ ಆರೂರು ಜಗದೀಶ್ ಅವರು ಇದೀಗ ಹೊಸ ಧಾರಾವಾಹಿಯನ್ನು ನಿರ್ದೇಶಿಸಲಿದ್ದು ಅದಕ್ಕಾಗಿ ಹೊಸ ನಟ-ನಟಿಯರು, ಪೋಷಕರ ನಟರಿಗೆ ಆಹ್ವಾನ ಕೊಟ್ಟಿದ್ದಾರೆ. ಹಾಗಿದ್ದರೆ ಅದಕ್ಕಾಗಿ ಅರ್ಹತೆ ಏನೆಲ್ಲಾ ಇರಬೇಕು ಎನ್ನುವ ಬಗ್ಗೆ ಇಲ್ಲಿ ವಿವರ ಕೊಡಲಾಗಿದೆ ನೋಡಿ...
ಈ ಕುರಿತು ಖುದ್ದು ಆರೂರು ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಹೊಸ ಸೀರಿಯಲ್ಗೆ ನಾಯಕ-ನಾಯಕಿ ಮತ್ತು ಪೋಷಕ ಪಾತ್ರಕ್ಕೆ ನಟರು ಬೇಕಾಗಿರುವುದಾಗಿ ಹೇಳಿದ್ದಾರೆ. ಶುದ್ಧ ಕನ್ನಡ ಮಾತನಾಡುವ ಹೊಸ ಮತ್ತು ಅನುಭವಿ ಕಲಾವಿದರಿಗೆ ಅದರಲ್ಲಿಯೂ ರಂಗಭೂಮಿಯಲ್ಲಿ ಪಳಗಿದ್ದವರಿಗೆ ಆದ್ಯತೆ ಎಂದು ಅವರು ಹೇಳಿದ್ದಾರೆ.
ನಾಯಕಿಯಾಗಲು ಅರ್ಹತೆ: 18 ರಿಂದ 24 ವರ್ಷ. ನಾಯಕನಿಗೆ 18 ರಿಂದ 30 ವರ್ಷ ಇರಬೇಕು.ನೋಡಲು ಸುಂದರವಾಗಿರಬೇಕು, ಚಂದದ ಕೈಕಟ್ಟು ಹೊಂದಿರಬೇಕು ಎಂದಿದ್ದಾರೆ. ಪೋಷಕ ಪಾತ್ರಗಳಿಗೆ 16 ರಿಂದ 60 ವರ್ಷ ವಯಸ್ಸಾಗಿರಬೇಕು. ಯುವ ಮತ್ತು ಅನುಭವಿ ರಂಗಭೂಮಿ ಕಲಾವಿದರಿಗೆ ಅದ್ಯತೆ ಎಂದು ಹೇಳಿದ್ದಾರೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದೇ ತಿಂಗಳು 28. ಅರ್ಜಿಯನ್ನು ಸಂಪೂರ್ಣ ಸ್ವವಿವರದ ಜೊತೆಗೆ jsproductions.pm@gmail.comಗೆ ಸಲ್ಲಿಸಬೇಕು. ಹಾಗಿದ್ದರೆ ತಡವೇಕೆ? ನಿಮ್ಮ ಕನಸು ನನಸು ಮಾಡಿಕೊಳ್ಳಲು ಇದೋ ಇಲ್ಲಿದೆ ಅವಕಾಶ.