ಕರ್ನಾಟಕದ ನೂತನ ಕೈಗಾರಿಕಾ ನೀತಿ ಬಿಡುಗಡೆ: 20 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ
ಮುಂದಿನ 5 ವರ್ಷಗಳಲ್ಲಿ ರಾಜ್ಯದ ಕೈಗಾರಿಕಾ ಬೆಳವಣಿಗೆ ಹಾಗೂ ಆರ್ಥಿಕ ಅಭಿವೃದ್ಧಿಗೆ ಮಹತ್ತರ ಗುರಿಯನ್ನೊಳಗೊಂಡ ನೂತನ ಕೈಗಾರಿಕಾ ನೀತಿಯನ್ನು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಅನಾವರಣಗೊಳಿಸಲಾಯಿತು.

ಬೆಂಗಳೂರು(ಫೆ.12): ಕೈಗಾರಿಕೆ ಬೆಳವಣಿಗೆಯಲ್ಲಿ ಹಿಂದುಳಿದಿರುವ ಜಿಲ್ಲೆ ಮತ್ತು ತಾಲೂಕುಗಳಿಗೆ ಬಂಡವಾಳ ಹೂಡಿಕೆ ಹೆಚ್ಚಿಸುವ ಹಾಗೂ ಮುಂದಿನ 5 ವರ್ಷಗಳಲ್ಲಿ 7.50 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆ ಆಕರ್ಷಿಸುವ ಮತ್ತು 20 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿಯನ್ನೊಳಗೊಂಡ 2025-30ನೇ ಸಾಲಿನ ನೂತನ ಕೈಗಾರಿಕಾ ನೀತಿಯನ್ನು ''ಇನ್ವೆಸ್ಟ್ ಕರ್ನಾಟಕ"ದಲ್ಲಿ ಬಿಡುಗಡೆ ಮಾಡಲಾಯಿತು.
ಮುಂದಿನ 5 ವರ್ಷಗಳಲ್ಲಿ ರಾಜ್ಯದ ಕೈಗಾರಿಕಾ ಬೆಳವಣಿಗೆ ಹಾಗೂ ಆರ್ಥಿಕ ಅಭಿವೃದ್ಧಿಗೆ ಮಹತ್ತರ ಗುರಿಯನ್ನೊಳಗೊಂಡ ನೂತನ ಕೈಗಾರಿಕಾ ನೀತಿಯನ್ನು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಅನಾವರಣಗೊಳಿಸಲಾಯಿತು.
ಜಿಮ್: ಮೊದಲ ದಿನವೇ 5.36 ಲಕ್ಷ ಕೋಟಿ ರೂ. ಒಪ್ಪಂದ
ನೀತಿಯಲ್ಲಿ ಪ್ರಮುಖವಾಗಿ ಮುಂದಿನ 5 ವರ್ಷಗಳಲ್ಲಿ ರಾಜ್ಯಕ್ಕೆ 7.50 ಲಕ್ಷ ಕೋಟಿ ರು. ಬಂಡಾವಳ ತರುವಂಥ ಕ್ರಮಗಳನ್ನು ಕೈಗೊಳ್ಳುವುದು ಹಾಗೂ 20 ಲಕ್ಷ ಉದ್ಯೋಗ ಸೃಷ್ಟಿಸುವುದು, ಸನ್‌ರೈಸ್ ವಲಯದಲ್ಲಿ ರಾಜ್ಯವನ್ನು ದೇಶಕ್ಕೆ ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ.
ನಂಜುಂಡಪ್ಪ ವರದಿ ಆಧರಿಸಿ ಬೆಳವಣಿಗೆ: ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರ ನಗರಗಳಲ್ಲಿ, ಹಿಂದುಳಿದ, ಅತೀ ಹಿಂದುಳಿದ ಜಿಲ್ಲೆ-ತಾಲೂಕುಗಳಲ್ಲಿ ಹೆಚ್ಚಿನ ಹೂಡಿಕೆಗೆ ಒತ್ತು, ಅದಕ್ಕಾಗಿ ಕೈಗಾರಿಕಾ ಬೆಳವಣಿಗೆ ಆಧರಿಸಿ ಪ್ರದೇಶವಾರು ಪ್ರೋತ್ಸಾಹಕ ಭತ್ಯೆಗಳನ್ನು ನೀಡುವುದಾಗಿ ನೂತನ ಕೈಗಾರಿಕಾ ನೀತಿಯಲ್ಲಿ ತಿಳಿಸಿದೆ.
ಅದರಲ್ಲೂ ಡಿ.ಎಂ.ನಂಜುಂಡಪ್ಪ ವರದಿ ಆಧರಿಸಿ ಕೈಗಾರಿಕಾ ಬೆಳವಣಿಗೆಯಲ್ಲಿ ಹಿಂದುಳಿದಿರುವ ಜಿಲ್ಲೆ-ತಾಲೂಕುಗಳನ್ನು ವಲಯ 1 ಮತ್ತು 2ರ ಅಡಿ ತರಲಾಗಿದೆ. ಅದೇ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ವಲಯ 3 ಎಂದು ಗುರುತಿಸಲಾಗಿದೆ. ಆ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿ, ಎಲ್ಲ ಪ್ರದೇಶಗಳಲ್ಲೂ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುತ್ತಿದೆ.
ಎಂಎಸ್‌ಎಂಇಗೆ ಹೆಚ್ಚಿನ ಒತ್ತು
ನೂತನ ನೀತಿಯಲ್ಲಿ ಕೆಐಎಡಿಬಿ ಮೂಲಕ ನೀಡಲಾಗುವ ಭೂಮಿಯಲ್ಲಿ ಶೇ.30ರಷ್ಟನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಮೀಸಲಿಡಲು ನಿರ್ಧರಿಸಲಾಗಿದೆ. ಜತೆಗೆ ತಂತ್ರಜ್ಞಾನ ಉನ್ನತೀಕರಣ, ಕೌಶಲ್ಯಾಭಿವೃದ್ಧಿ, ಕ್ಲಸ್ಟರ್ಸ್ ಅಭಿವೃದ್ಧಿ, ವಿಶೇಷ ಪ್ರೋತ್ಸಾಹನಾ ಭತ್ಯೆ, ರಿಯಾಯಿತಿಗಳನ್ನು ನೀಡುವ ಗಮನಹರಿಸಲಾಗಿದೆ. ಕೆಲ ಪ್ರದೇಶಗಳನ್ನು ವಿಶೇಷ ಹೂಡಿಕೆ ಪ್ರದೇಶಗಳನ್ನಾಗಿ ಘೋಷಿಸುವುದಾಗಿ ತಿಳಿಸಲಾಗಿದೆ. ಯಾವುದೇ ಸಂಸ್ಥೆ ತನ್ನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ ಮತ್ತು ಉತ್ಪಾದನಾ ಘಟಕಗಳು ಒಂದೇ ಕಡೆ ಆರಂಭಿಸಿದರೆ, ವಿಶೇಷ ಉತ್ಪಾದನೆ ಆಧಾರಿತ ಪ್ರೋತ್ಸಾಹನಾ ಭತ್ಯೆ ಮತ್ತು ಕೆಪೆಕ್ಸ್ ಸಬ್ಸಿಡಿ ನೀಡುವ ಬಗ್ಗೆ ತಿಳಿಸಲಾಗಿದೆ.
ಕರ್ನಾಟಕದಲ್ಲಿ ಹೂಡಿಕೆ ದೇಶಕ್ಕೆ ಲಾಭ: ರಕ್ಷಣಾ ಸಚಿವ ರಾಜನಾಥ್ ಸಿಂಗ್
ನೂತನ ಏಕಗವಾಕ್ಷಿ ತಂತ್ರಾಂಶಕ್ಕೆ ಚಾಲನೆ
ಇನ್ವೆಸ್ಟ್ ಕರ್ನಾಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ನೂತನ ಏಕಗವಾಕ್ಷಿ ತಂತ್ರಾಂಶಕ್ಕೆ ಚಾಲನೆ ನೀಡಲಾಯಿತು. ಅದರಲ್ಲಿ 30ಕ್ಕೂ ಹೆಚ್ಚಿನ ಇಲಾಖೆಗಳ 150 ಸೇವೆಗಳು ದೊರೆಯುವಂತೆ ಮಾಡಲಾ ಗಿದ್ದು, ಕೈಗಾರಿಕಾ ಯೋಜನೆಗಳಿಗೆ ತ್ವರಿತ ಅನುಮೋದನೆ ನೀಡಲಾಗುತ್ತದೆ. ಮೈಕ್ರೋಸಾಫ್ಟ್ ಸಂಸ್ಥೆ ಸಹಯೋಗದಲ್ಲಿ ನೂತನ ಏಕಗವಾಕ್ಷಿ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಕೃತಕ ಬುದ್ಧಿಮತ್ತೆ ಆಧರಿಸಿ ವಿನ್ಯಾಸಗೊಳಿಸಿರುವ ಚಾಟ್-ಬಾಟ್ ಸೌಲಭ್ಯದಲ್ಲಿ ಉದ್ಯಮಿಗಳು ತಮಗೆ ಬೇಕಾದ ಸೇವೆ, ಮಾಹಿತಿಯನ್ನು ತಮ್ಮ ಭಾಷೆಯಲ್ಲಿ ಪಡೆಯುವಂಥ ವ್ಯವಸ್ಥೆ ಮಾಡಲಾಗಿದೆ.
ಖಾಸಗಿ ಕೈಗಾರಿಕಾ ಪ್ರದೇಶಗಳಿಗೆ ಅವಕಾಶ
ಖಾಸಗಿ ಸಂಸ್ಥೆ ಅಥವಾ ವ್ಯಕ್ತಿಗಳಿಂದ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಅವಕಾಶ ನೀಡಲಾಗುತ್ತದೆ. ಅದರಂತೆ ಸಮಗ್ರ ಕೈಗಾರಿಕಾ ಪಾರ್ಕ್, ವಲಯವಾರು ಪಾರ್ಕ್, ಲಾಜಿಸ್ಟಿಕ್ಸ್ ಪಾರ್ಕ್‌ಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಕೈಗಾರಿಕಾ ಪ್ರದೇಶಗಳ ಗರಿಷ್ಠ ಪ್ರಯೋಜನ ಪಡೆಯಲು ಈಗಿರುವ ನಿರ್ಬಂಧ ತೆಗೆದು ಹಾಕಿ, ನೇರ ಉದ್ಯೋಗ ಸೃಷ್ಟಿಗೆ ನೀತಿಯಲ್ಲಿ ಒತ್ತು ನೀಡಲಾಗುತ್ತಿದೆ.