ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಶೇ.50ರಷ್ಟು ತೆರಿಗೆ ಹಾಕಿದ ಬಳಿಕ ಬೆಂಗಳೂರು ಮೇಲೆ ಕಣ್ಣಿಟ್ಟದ್ದಾರೆ ಎಂದು ವರದಿಯಾಗಿದೆ.
ನವದೆಹಲಿ: ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಶೇ.50ರಷ್ಟು ತೆರಿಗೆ ಹಾಕಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President, Donald Trump) ಅವರ ಕಣ್ಣು ಇದೀಗ ಐಟಿ ಸೇವೆಗಳು (IT Service) ಮತ್ತು ಟೆಕ್ ಕೆಲಸಗಾರರ ಮೇಲೂ ಬಿದ್ದಿದೆ ಎನ್ನಲಾಗುತ್ತಿದೆ. ಈ ಮೂಲಕ ಭಾರತದ ಆರ್ಥಿಕತೆಗೆ (Indian Economy) ಭಾರೀ ಏಟು ನೀಡಲು ಟ್ರಂಪ್ ಹೊರಟಿದ್ದಾರೆ. ಒಂದು ವೇಳೆ ಈ ತೆರಿಗೆ (Tax) ಜಾರಿಯಾಗಿದ್ದೇ ಆದರೆ ಭಾರತದ ಐಟಿ ಹಬ್ ಬೆಂಗಳೂರಿನ (IT Hub Bengaluru) ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಭಾರತ ಪ್ರತಿ ವರ್ಷ ಅಮೆರಿಕಕ್ಕೆ 4.20 ಲಕ್ಷ ಕೋಟಿ ರು. ಮೌಲ್ಯದ ಮಾಹಿತಿ ತಂತ್ರಜ್ಞಾನ ವಲಯದ ಸೇವೆಗಳನ್ನು ಅಮೆರಿಕಕ್ಕೆ ನೀಡುತ್ತಿದೆ. ಈ ಪೈಕಿ ಬಹುಪಾಲು ಐಟಿ ರಾಜಧಾನಿ ಎಂಬ ಹಿರಿಮೆ ಹೊಂದಿರುವ ಕರ್ನಾಟಕದ್ದೇ ಆಗಿದೆ. ಹೀಗಾಗಿ ಐಟಿ, ಬಿಪಿಒ ವಲಯದ ಮೇಲೆ ಟ್ರಂಪ್ ಹೆಚ್ಚಿನ ತೆರಿಗೆ (American Tariffs) ಹಾಕಿದರೆ ಕರ್ನಾಟಕಕ್ಕೆ ಭಾರೀ ಹೊಡೆತ ಬೀಳಲಿದೆ ಎನ್ನಲಾಗಿದೆ.
ವ್ಯಾಪಾರ ಪ್ರಕ್ರಿಯೆಗಳ ಮೇಲೆ ತೆರಿಗೆ ಹಾಕುವ ಪೋಸ್ಟ್
ಜಾಕ್ ಪೊಸೋಬಿಕ್ ಎಂಬುವವರೊಬ್ಬರು, ಹೊರದೇಶಗಳಲ್ಲಿ ಕೂತು ಅಮೆರಿಕಕ್ಕೆ ನೀಡುತ್ತಿರುವ ಸೇವೆಗಳ ಮೇಲೆಯೂ ಸರಕುಗಳ ಮಾದರಿಯಲ್ಲಿ ತೆರಿಗೆ ವಿಧಿಸಬೇಕೆಂಬ ಪೋಸ್ಟ್ ಹಾಕಿದ್ದರು. ಈ ಪೋಸ್ಟ್ ಅನ್ನು ಟ್ರಂಪ್ ಅವರ ವ್ಯಾಪಾರ ಸಲಹೆಗಾರ ಪೀಟರ್ ನವಾರೋ ಹಂಚಿಕೊಂಡಿರುವುದು ಇಂಥ ಚರ್ಚೆ ಮುನ್ನೆಲೆಗೆ ಬರಲು ಕಾರಣವಾಗಿದೆ.ಐಟಿ ಸೇವೆಗಳು, ವಿದೇಶದಲ್ಲಿ ಕೂತು ಕೆಲಸ ಮಾಡುವ ಕೆಲಸಗಾರರು ಮತ್ತು ಹೊರಗುತ್ತಿಗೆ ವ್ಯಾಪಾರ ಪ್ರಕ್ರಿಯೆಗಳ ಮೇಲೆ ತೆರಿಗೆ ಹಾಕಬೇಕೆಂಬುದು ಈ ಬೇಡಿಕೆಯಾಗಿದೆ.
ತೆರಿಗೆ ಹೇರಲು ಟ್ರಂಪ್ ಸರ್ಕಾರ ಪ್ಲಾನ್
ಅದರಂತೆ ಎಚ್-1ಬಿ ವೀಸಾ ವ್ಯವಸೆ, ಗ್ರೀನ್ ಕಾರ್ಡ್ ಹೊಂದಿರುವವರು ಮತ್ತು ತಾತ್ಕಾಲಿಕ ವೀಸಾದಲ್ಲಿರುವ ಕೆಲಸಗಾರರ ಮೇಲೆ ಹೆಚ್ಚಿನ ಶುಲ್ಕ ವಿಧಿಸಿ ಭಾರತದ ಅಭಿವೃದ್ಧಿಯ ಎಂಜಿನ್‌ಗೇ ಹೊಡೆತ ನೀಡುವ ಚಿಂತನ ಟ್ರಂಪ್ ಆಪ್ತವಲಯದಲ್ಲಿ ನಡೆಯುತ್ತಿದೆ. ಇದಲ್ಲದೆ ಅಮೆರಿಕದಲ್ಲಿರುವ ಭಾರತೀಯ ಪ್ರಜೆಗಳು ತವರಿಗೆ ರವಾನಿಸುವ ಹಣದ ಮೇಲೂ ತೆರಿಗೆ ಹೇರಲು ಟ್ರಂಪ್ ಸರ್ಕಾರ ಕಣ್ಣಿಟ್ಟಿದೆ ಎಂದು ವರದಿಗಳು ತಿಳಿಸಿವೆ.
ಬೆಂಗಳೂರಿನ ಐಟಿ ಕಂಪನಿಗಳು
ಒಂದು ವೇಳೆ ಈ ತೆರಿಗೆ ಜಾರಿಯಾಗಿದ್ದೇ ಆದರೆ ಭಾರತದ ಮಾನವ ಸಂಪನ್ಮೂಲ, ಎಂಜಿನಿಯರ್‌ಗಳು, ಕೋಡರ್‌ಗಳು ಮತ್ತು ವಿದ್ಯಾರ್ಥಿಗಳಿಗೆ ಭಾರೀ ನಷ್ಟವಾಗಲಿದೆ. ಇಂಥ ತೆರಿಗೆಯಿಂದ ಅಂತಾರಾಷ್ಟ್ರೀಯ ಹೊರಗುತ್ತಿಗೆ ಉದ್ಯಮದಬುನಾದಿಯೇ ಅಲುಗಾಡಲಿದೆ. ಇನ್ಫೋಸಿಸ್, ಟಿಸಿಎಸ್, ವಿಪ್ರೋ, ಕಾಗ್ನಿಜೆಂಟ್, ಎಚ್ ಸಿಎಲ್‌ನಂಥ ಭಾರತದ ಐಟಿ ಕಂಪನಿಗಳು ಎಚ್-1ಬಿ ವೀಸಾದ ಅತಿದೊಡ್ಡ ಪ್ರಾಯೋಜಕರಾಗಿದ್ದಾರೆ. ಅಮೆರಿಕದಲ್ಲಿ ಅತಿ ಹೆಚ್ಚು ಐಟಿ ಸೇವೆಯನ್ನು ಭಾರತೀಯ ಕಂಪನಿಗಳೇ ನೀಡುತ್ತಿವೆ.
ಇದನ್ನೂ ಓದಿ: ಚೀನಾ, ಉತ್ತರ ಕೊರಿಯಾ ಜೊತೆ ಸೇರಿ ಅಮೆರಿಕ ವಿರುದ್ಧ ರಷ್ಯಾ ಪಿತೂರಿಗೆ ಟ್ರಂಪ್ ಶಾಂತಿ ಮಂತ್ರ!
ಭಾರತದ ಬ್ರಾಹ್ಮಣರಿಗೆ ಭಾರೀ ಲಾಭ : ಟ್ರಂಪ್ ಆಪ್ತ
ರಷ್ಯಾ ತೈಲ ಖರೀದಿ ವಿಚಾರ ಮುಂದಿಟ್ಟುಕೊಂಡು ಅಮೆರಿಕ ಅಧ್ಯಕ್ಷ ಟ್ರಂಪ್‌ರ ವ್ಯಾಪಾರ ನೀತಿ ಸಲಹೆಗಾರ ಪೀಟರ್ ನವರೋ ಅವರು ಮತ್ತೆ ಭಾರತದ ವಿರುದ್ಧ ಹರಿಹಾಯ್ದಿದ್ದಾರೆ. ಈ ಬಾರಿ ಅವರು ರಷ್ಯಾ ತೈಲ ಖರೀದಿಯಿಂದ ಇಡೀ ದೇಶ ನಷ್ಟ ಅನುಭವಿಸುತ್ತಿದ್ದರೆ, ಬ್ರಾಹ್ಮಣ (ಶ್ರೀಮಂತ ವ್ಯಕ್ತಿಗಳಷ್ಟೇ) ರಷ್ಟೇ ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಶಾಂಘೈ ಶೃಂಗದಲ್ಲಿ ಪ್ರಧಾನಿ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ಪುಟಿನ್ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಬೆನ್ನಲ್ಲೇ ಇಂಥದ್ದೊಂದು ಹೇಳಿಕೆ ಹೊರಬಿದ್ದಿದೆ. ಈ ನಡುವೆ ಪೀಟರ್ ಹೇಳಿಕೆಗೆ ಭಾರತದಲ್ಲಿ ಪಕ್ಷಾತೀತ ಖಂಡನೆ ವ್ಯಕ್ತವಾಗಿದೆ.
ಇದನ್ನೂ ಓದಿ: ಅಮೆರಿಕ ತಲುಪಬಲ್ಲ ಅಣ್ವಸ್ತ್ರ ಸಜ್ಜಿತ ಕ್ಷಿಪಣಿ ಪ್ರದರ್ಶಿಸಿದ ಚೀನಾ; 20 ಸಾವಿರ ಕಿ.ಮೀ.ಗೂ ದೂರ ಪ್ರಯಾಣಿಸುತ್ತೆ!
