US immigration crackdown: ಅಮೆರಿಕಾದಲ್ಲಿ ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ ತೀವ್ರಗೊಂಡಿದ್ದು, ಚಿಕಾಗೋದಲ್ಲಿ ಫುಡ್ ಡೆಲಿವರಿ ಬಾಯ್‌ನನ್ನು ಅಧಿಕಾರಿಗಳು ಬೆನ್ನಟ್ಟಿದ ವೀಡಿಯೋ ವೈರಲ್ ಆಗಿದೆ. ಇದೇ ವೇಳೆ, ಯುನೈಟೆಡ್ ಕಿಂಗ್‌ಡಮ್ (ಯುಕೆ) ಕೂಡ ವಲಸೆ ಕಾನೂನುಗಳನ್ನು ಬಿಗಿಗೊಳಿಸಲು ಮುಂದಾಗಿದೆ.

ವಲಸಿಗರನ್ನು ಬೀದಿಯಲ್ಲಿ ಬೆನ್ನಟ್ಟಿ ಹಿಡಿಯುತ್ತಿರುವ ಯುಎಸ್ ವಲಸೆ ಅಧಿಕಾರಿಗಳು

ನ್ಯೂಯಾರ್ಕ್‌: ಅಮೆರಿಕಾದಲ್ಲಿ ಡೋನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಅಕ್ರಮವಾಗಿ ವಲಸೆ ಬಂದು ದೇಶದಲ್ಲಿ ನೆಲೆಸಿರುವವರ ವಿರುದ್ಧ ಕಾರ್ಯಾಚರಣೆ ತೀವ್ರಗೊಂಡಿದ್ದು, ಅಕ್ರಮ ವಲಸಿಗರನ್ನು ಕಂಡಲ್ಲಿ ಓಡಿಸಿ ಹಿಡಿಯುವಂತಹ ಘಟನೆಗಳು ನಡೆಯುತ್ತಿವೆ. ಟ್ರಂಪ್ ಅಧಿಕಾರಕ್ಕೆ ಬಂದ ಆರಂಭದಲ್ಲೇ ಅನೇಕ ದೇಶಗಳಿಗೆ ಆಯಾ ದೇಶದ ಅಕ್ರಮ ವಲಸಿಗರನ್ನು ಕೈಗೆ ಕೋಳ ತೊಡಿಸಿ ಗಡೀಪಾರು ಮಾಡುವ ಮೂಲಕ ಸಾಕಷ್ಟು ಸುದ್ದಿ ಮಾಡಿದ್ದರು. ಹೀಗಿರುವಾಗ ಅಲ್ಲಿನ ಮತ್ತೊಂದು ವೀಡಿಯೋ ವೈರಲ್ ಆಗಿದೆ. ವೀಡಿಯೋದಲ್ಲಿ ಅಕ್ರಮವಾಗಿ ದೇಶಕ್ಕೆ ವಲಸೆ ಬಂದು ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ ಯುವಕನೋರ್ವನನ್ನು ಅಲ್ಲಿನ ವಲಸೆ ಮತ್ತು ಕಸ್ಟಮ್ಸ್ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೀದಿಯಲ್ಲಿ ಓಡಿಸಿ ಹಿಡಿಯಲು ಯತ್ನಿಸಿರುವ ವೀಡಿಯೋವೊಂದು ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗಿದೆ. 10ಕ್ಕೂ ಹೆಚ್ಚು ವಲಸೆ ಅಧಿಕಾರಿಗಳು ಫುಡ್ ಡೆಲಿವರಿ ಏಜೆಂಟ್‌ನನ್ನು ಬೆನ್ನಟ್ಟುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಚಿಕಾಗೋದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ವೈರಲ್ ಆಗ್ತಿದೆ.

ಗ್ರೇಸ್ಟ್ಯಾಕ್ ಮೀಡಿಯಾದ ಸಹ ಸಂಸ್ಥಾಪಕ ಮತ್ತು ಸಿಇಒ ಕ್ರಿಸ್ಟೋಫರ್ ಸ್ವೆಟ್ ಅವರು ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಶಸ್ತ್ರಸಜ್ಜಿತ ಅಧಿಕಾರಿಗಳು ಆತನನ್ನು ಬೆನ್ನಟ್ಟುವುದನ್ನು ಕಾಣಬಹುದಾಗಿದೆ. ವೀಡಿಯೋ ಶೇರ್ ಮಾಡಿದ ಅವರು ಕ್ಷಣಮಾತ್ರದಲ್ಲಿ ತಪ್ಪಿ ಹೋಯ್ತು ಎಂದು ಬರೆದುಕೊಂಡಿದ್ದಾರೆ.

ವಲಸೆ ಅಧಿಕಾರಿಗಳಿಂದ ತಪ್ಪಿಸಿಕೊಂಡು ಹೋದ ಫುಡ್ ಡೆಲಿವರಿ ಬಾಯ್ ವೀಡಿಯೋ ವೈರಲ್

ಅವರ ಪ್ರಕಾರ, ವಲಸೆ ಅಧಿಕಾರಿಗಳಿಂದ ತಪ್ಪಿಸಿಕೊಂಡು ಹೋದವ ಫುಡ್ ಡೆಲಿವರಿ ಬಾಯ್ ಆತ ಯಾರಿಗೂ ಯಾವುದೇ ದೈಹಿಕ ಹಲ್ಲೆ ಮಾಡಿಲ್ಲ, ಆದರೆ ಮೌಖಿಕವಾದ ವಾಗ್ವಾದ ನಡೆದಿದೆ. ಎಕ್ಸ್‌ನಲ್ಲಿ ಈ ವೀಡಿಯೋ ಪೋಸ್ಟ್ ಮಾಡಿರುವ ಅವರು ವಲಸೆ ಏಜೆಂಟ್‌ಗಳು ಚಿಕಾಗೋದ ಡೌನ್‌ಟೌನ್‌ನಲ್ಲಿ ಒಬ್ಬ ವ್ಯಕ್ತಿಯನ್ನು ಬೆನ್ನಟ್ಟಿದರು, ಏಕೆಂದರೆ ಆತ ನಿಂದನೀಯ ಮಾತಾಡಿದ್ದ ಆದರೆ ದೈಹಿಕ ಹಲ್ಲೆ ನಡೆದಿಲ್ಲ, ಆ ಮನುಷ್ಯ ಇವರಿಂದ ತಪ್ಪಿಸಿಕೊಂಡು ಹೋಗುವಲ್ಲಿ ಯಶಸ್ವಿಯಾದ ಎಂದು ಬರೆದಿದ್ದಾರೆ.

ಅಲ್ಲದೇ ಮತ್ತೊಂದು ಪೋಸ್ಟ್‌ನಲ್ಲಿ ವಲಸೆ ಅಧಿಕಾರಿಗಳ ಕಾರ್ಯಾಚರನೆ ಚಿಕಾಗೋದ ಡೌನ್‌ಟೌನ್‌ನಲ್ಲಿ ನಡೆಯುತ್ತಿದೆ ಎಂದು ಬರೆದಿದ್ದಾರೆ. ಆದರೆ ಬಂಧಿತರಾದವರ ಬಗ್ಗೆ ಇನ್ನಷ್ಟೇ ಖಚಿತವಾಗಬೇಕಿದೆ ಎಂದಿದ್ದಾರೆ. ಹಾಗೆಯೇ ಅಲ್ಲಿನ ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಮಕ್ಕಳನ್ನು ಒಳಗೊಂಡಿರುವರು ಸೇರಿದಂತೆ ಅನೇಕರನ್ನು ಭಾನುವಾರ ಮಧ್ಯಾಹ್ನದ ನಂತರ ಬಂಧಿಸಲಾಗಿದೆ. ಅಮೆರಿಕಾದ ಗಡಿ ಪಟ್ರೋಲ್ ಪಡೆಯ ಹಿರಿಯ ಅಧಿಕಾರಿಯೊಬ್ಬರು ಅಲ್ಲಿನ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದು, ಕೆಲವು ಪ್ರಕರಣಗಳಲ್ಲಿ ಅವರು ನೋಡುವುದಕ್ಕೆ ಹೇಗೆ ಕಾಣಿಸುತ್ತಾರೆ ಎಂಬುದರ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಇದೆ.

ಬ್ರಿಟನ್‌ನಲ್ಲಿಯೂ ವಲಸಿಗರ ವಿರುದ್ಧ ಸ್ಥಳೀಯರ ಆಕ್ರೋಶ

ಮತ್ತೊಂದೆಡೆ ಯುಕೆನಲ್ಲಿಯೂ ವಲಸಿಗರ ವಿರುದ್ಧ ಹೋರಾಟಗಳು ತೀವ್ರ ಸ್ವರೂಪ ಪಡೆಯುತ್ತಿವೆ. ವಲಸಿಗರು ದೇಶದಲ್ಲಿ ಶಾಶ್ವತವಾಗಿ ನೆಲೆಸುವುದಕ್ಕೆ ಸಂಬಂಧಿಸಿ ಕಾನೂನುಗಳನ್ನು ಬಿಗಿಗೊಳಿಸಲು ಯುಕೆ ಚಿಂತಿಸುತ್ತಿದೆ. ಹೆಚ್ಚಿನ ವಲಸಿಗರು ಪ್ರಸ್ತುತ ಬ್ರಿಟನ್‌ನಲ್ಲಿ ಐದು ವರ್ಷಗಳ ಕಾಲ ವಾಸ ಮಾಡಿದ ನಂತರ ಶಾಶ್ವತ ನೆಲೆಗಾಗಿ ಅರ್ಜಿ ಸಲ್ಲಿಸಬಹುದು. ಈ ಸ್ಥಾನಮಾನವು ಅವರಿಗೆ ದೇಶದಲ್ಲಿ ಶಾಶ್ವತವಾಗಿ ವಾಸಿಸುವ ಹಕ್ಕನ್ನು ನೀಡುತ್ತದೆ. ಆದರೆ ವಲಸಿಗರ ಬಗ್ಗೆ ದೇಶದಲ್ಲಿ ಇತ್ತೀಚೆಗೆ ಆಕ್ರೋಶ ಅಸಮಾಧಾನಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಅಲ್ಲಿನ ಆಂತರಿಕ ಸಚಿವೆ ಶಬಾನಾ ಮಹಮೂದ್ ಕೆಲವು ಬದಲಾವಣೆಗಳನ್ನು ಪರಿಚಯಿಸುವ ನಿರೀಕ್ಷೆಯಿದೆ.

ಶಬಾನಾ ಮಹಮೊದ್ ಲೇಬರ್ ಪಕ್ಷದ ಸಮ್ಮೇಳನದಲ್ಲಿ ಮಾಡಿದ ಮೊದಲ ಭಾಷಣದಲ್ಲಿ, ವಲಸಿಗರು ಸಾಮಾಜಿಕ ಭದ್ರತಾ ಕೊಡುಗೆಗಳನ್ನು ಪಾವತಿಸಿದರೆ, ಯಾವುದೇ ಕ್ರಿಮಿನಲ್ ದಾಖಲೆಯನ್ನು ಹೊಂದಿರದಿದ್ದರೆ ಮಾತ್ರ ಜನರು ಈ ಸ್ಥಾನಮಾನಕ್ಕೆ ಅರ್ಹರಾಗುವಂತೆ ಸರ್ಕಾರ ಬದಲಾವಣೆಗಳನ್ನು ಮಾಡುವ ಬಗ್ಗೆ ಪರಿಗಣಿಸುತ್ತಿದೆ ಎಂದು ಮಹಮೂದ್ ಹೇಳಲಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಬ್ರಿಟನ್‌ನಲ್ಲಿ ವಲಸೆ ವಿಚಾರವೂ ಬಹಳ ಹಿಂದಿನಿಂದಲೂ ಚುನಾವಣಾ ವಿಚಾರವಾಗಿದೆ. ಇತ್ತೀಚೆಗೆ ಬಲಪಂಥೀಯ ಕಾರ್ಯಕರ್ತ ಟಾಮಿ ರಾಬಿನ್ಸನ್ ಆಯೋಜಿಸಿದ್ದ ವಲಸೆ ವಿರೋಧಿ ಪ್ರತಿಭಟನೆಯಲ್ಲಿ ಲಕ್ಷಾಂತರ ಜನ ಸೇರಿದ್ದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು.

ಇದನ್ನೂ ಓದಿ: ಸ್ನೇಹಿತೆ, ಇಟಲಿ ಪ್ರಧಾನಿ ಮೆಲೋನಿ ಆಟೋಬಯೋಗ್ರಫಿಗೆ ಮುನ್ನುಡಿ ಬರೆದ ಪ್ರಧಾನಿ ಮೋದಿ
ಇದನ್ನೂ ಓದಿ: 'ವೀರ್ ಹನುಮಾನ್'ನ ಲಕ್ಷ್ಮಣ ಇನ್ನಿಲ್ಲ: ಬೆಂಕಿ ದುರಂತದಲ್ಲಿ ಬಾಲನಟ ವೀರ್ ಶರ್ಮಾ, ಸೋದರ ಶೌರ್ಯ ಶರ್ಮಾ ಸಾವು

Scroll to load tweet…