Banned dog breed kills child: ಕಾನೂನುಬದ್ಧವಾಗಿ ಸಾಕುತ್ತಿದ್ದ ನಿಷೇಧಿತ ಎಕ್ಸ್ ಎಲ್ ಬುಲ್ಲಿ ತಳಿಯ ನಾಯಿಯೊಂದು 10 ವರ್ಷದ ಬಾಲಕಿಯ ಮೇಲೆ ದಾಳಿ ಮಾಡಿ ಸಾಯಿಸಿದೆ. ಯಾವುದೇ ಆಕ್ರಮಣಕಾರಿ ಲಕ್ಷಣಗಳನ್ನು ತೋರದಿದ್ದ ಈ ಶ್ವಾನವು, ತಾಯಿ ಮನೆಯಲ್ಲಿ ಇಲ್ಲದಿದ್ದಾಗ ಮಗುವನ್ನು ಬಲಿ ಪಡೆದಿದೆ.

ನಿಷೇಧಿಸಲ್ಪಟ್ಟಿದ ಶ್ವಾನ ಸಾಕ್ತಿದ್ದ ಪೋಷಕರು

ಸರ್ಕಾರ ನಿಷೇಧಿಸಲ್ಪಟ್ಟಿದ್ದ ನಾಯಿಯೊಂದನ್ನು ಆ ದಂಪತಿ ಸಾಕುತ್ತಿದ್ದರು. ಆದರೆ ಆ ನಾಯಿಯೇ ಕೊನೆಗೆ ಅವರ 10 ವರ್ಷದ ಮಗಳ ಬಲಿ ಪಡೆದಿದೆ. ಇಂಗ್ಲೆಂಡ್‌ನ ಯಾರ್ಕ್‌ಶೈರ್‌ನಲ್ಲಿ ಈ ದುರಂತ ಘಟನೆ ನಡೆದಿದೆ. ಎಕ್ಸ್ ಎಲ್ ಬುಲ್ಲಿ ಹೆಸರಿನ ಶ್ವಾನವನ್ನು ಅಲ್ಲಿನ ಸರ್ಕಾರ ನಿಷೇಧ ಮಾಡಿತ್ತು. ಆದರೆ ಕೆಲ ನಿಯಮಗಳ ನಡುವೆ ಈ ದಂಪತಿ ಆ ಶ್ವಾನವನ್ನು ಸಾಕುತ್ತಿದ್ದರು. ಆದರೆ ಅದೇನಾಯ್ತೋ ಏನೋ ಶ್ವಾನ ಮಗಳನ್ನೇ ಬಲಿ ಪಡೆದಿದೆ. ಇಂಗ್ಲೆಂಡ್‌ನ ನಾರ್ತ್‌ ಯಾರ್ಕ್‌ಶೈರ್‌ನ ಪೂರ್ವ ಹೆಸ್ಲೆರ್ಟನ್‌ ಪ್ರದೇಶದಲ್ಲಿ ಘಟನೆ ನಡೆದಿದೆ.

ಸಾಕುನಾಯಿ ದಾಳಿಗೆ ಬಲಿಯಾದ 10ರ ಬಾಲಕಿ

ದಿ ಮೆಟ್ರೋ ವರದಿಯ ಪ್ರಕಾರ, ಉತ್ತರ ಯಾರ್ಕ್‌ಷೈರ್‌ನ ಪೂರ್ವ ಹೆಸ್ಲರ್ಟನ್‌ನಲ್ಲಿರುವ ಅವರ ಮನೆಯಲ್ಲಿ ಸವನ್ನಾ ಬೆಂಥಮ್ ಎಂಬ 10 ವರ್ಷದ ಬಾಲಕಿ ತನ್ನ ಕುಟುಂಬದ ನಾಯಿ ಎಕ್ಸ್ ಎಲ್ ಬುಲ್ಲಿಯಿಂದಲೇ ದಾಳಿಗೊಳಗಾಗಿ ಸಾವನ್ನಪ್ಪಿದ್ದಾಳೆ. ಕಳೆದ ವರ್ಷ ನವೆಂಬರ್‌ನಲ್ಲಿ ಈ ಘಟನೆ ನಡೆದಿದೆ. ತಾಯಿ ಮಗುವನ್ನು ಶ್ವಾನದೊಂದಿಗೆ ಬಿಟ್ಟು ಮನೆಯ ಕೆಲ ಕೆಲಸಕ್ಕಾಗಿ ಹೊರಗೆ ಹೋಗಿದ್ದಾಗ ಈ ದುರಂತ ಸಂಭವಿಸಿದೆ. ಘಟನೆ ನಡೆದ ವೇಳೆ ಆ ಮಗುವಿನ ತಂದೆ ಕೆಲಸಕ್ಕೆ ಹೋಗಿದ್ದರು ಎಂದು ತಿಳಿದು ಬಂದಿದೆ.

ನಾಯಿ ಹಾಗೂ ಮಗು ಇಬ್ಬರೇ ಇದ್ದಾಗ ಘಟನೆ

ಕೆಲಸ ಮುಗಿಸಿ ತಾಯಿ ಮನೆಗೆ ಬಂದಾಗ 10 ವರ್ಷದ ಮಗಳು ಸವನ್ನಾ ನೆಲದ ಮೇಲೆ ಗಂಭೀರ ಗಾಯಗಳೊಂದಿಗೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಶಾಕ್ ಆಗಿದ್ದಳು. ಕೂಡಲೇ ತುರ್ತು ಸೇವೆಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿದರು. ಆದರೆ ದುಃಖಕರವೆಂದರೆ, ಬಾಲಕಿ ಸವನ್ನಾ ಕುತ್ತಿಗೆಗೆ ಗಾಯಗಳಾಗಿದ್ದರಿಂದ ಕೆಲ ಸಮಯದಲ್ಲೇಆಕೆ ಸಾವನ್ನಪ್ಪಿದ್ದರು ಎಂದು ಸುದ್ದಿ ಪೋರ್ಟಲ್ ವರದಿ ಮಾಡಿದೆ.

ಈ ಪುಟ್ಟ ಬಾಲಕಿಯ ಸಾವಿನ ಬಗ್ಗೆ ಇತ್ತೀಚೆಗೆ ವಿಚಾರಣೆ ನಡೆಸಲಾಗಿತ್ತು. ಆದರೆ ಪತ್ತೇದಾರಿ ಮುಖ್ಯ ನಿರೀಕ್ಷಕ ಮ್ಯಾಥ್ಯೂ ವಿಲ್ಕಿನ್ಸನ್ ಅವರ ಪ್ರಕಾರ, ಆ ನಾಯಿಯಲ್ಲಿ ಆಕ್ರಮಣಕಾರಿಯಾದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಮತ್ತು ಅದನ್ನು ಶಾಂತ ಮತ್ತು ಸೋಮಾರಿಯಾದ ಸಾಕುಪ್ರಾಣಿ ಎಂದು ವಿವರಿಸಿದ್ದಾರೆ. ಆದರೆ ಯುಕೆಯ ಅಪಾಯಕಾರಿ ನಾಯಿ ಕಾನೂನುಗಳ ಅಡಿಯಲ್ಲಿ XL ಬುಲ್ಲಿ ನಾಯಿಗಳನ್ನು ನಿಷೇಧಿಸಲಾಗಿದೆ. ಆದರೆ ಬಾಲಕಿ ಸವನ್ನಾ, ಕುಟುಂಬವು ಕಾನೂನುಬದ್ಧವಾಗಿ ವಿನಾಯಿತಿ ನಿಯಮಗಳ ಅಡಿಯಲ್ಲಿಈ ಬಿಗ್ಗಿ ಹೆಸರಿನ ಶ್ವಾನವನ್ನು ಮನೆಯಲ್ಲಿ ಸಾಕುತಿತ್ತು. ನಾಯಿಯನ್ನು ನೋಂದಾಯಿಸುವುದು, ಸಂತಾನಹರಣ ಮಾಡುವುದು, ಮೈಕ್ರೋಚಿಪ್ ಅಳವಡಿಸಿರುವುದು ಸೇರಿದಂತೆ ಸಾರ್ವಜನಿಕವಾಗಿ ಕಾರೆದೊಯ್ದಾಗ ಬಾಯಿಗೆ ಕವಚ ಅಳವಡಿಸುವುದು ಸೇರಿದಂತೆ ಎಲ್ಲಾ ಕಾನೂನು ಅವಶ್ಯಕತೆಗಳನ್ನು ಅವರು ಪೂರೈಸಿದ್ದರು. ಆದರೂ ಈ ರೀತಿಯ ಆಘಾತಕಾರಿ ಘಟನೆ ನಡೆದಿದ್ದು, ಆರು ವರ್ಷದ ನಾಯಿಯ ದಾಳಿಗೆ 10 ವರ್ಷದ ಮಗಳು ಬಲಿಯಾಗಿದ್ದಾಳೆ.

ಸವನ್ನಾ ಪೋಷಕರು ಎಲ್ಲಾ ಮುನ್ನೆಚ್ಚರಿಕೆಗಳನ್ನು ಕೈಗೊಂಡರು ಕೂಡ ನಾಯಿ ದಾಳಿಯಿಂದ ಅವರ ಮಗಳನ್ನು ಅರಿಗೆ ಕಾಪಾಡಲು ಸಾಧ್ಯವಾಗಲಿಲ್ಲ. ನಂತರ ಆ ನಾಯಿಯನ್ನು ಸಾಯಿಸಲಾಗಿದೆ. ನಾಯಿಯ ಮರಣೋತ್ತರ ಪರೀಕ್ಷೆಯ ವೇಳೆ ಹಠಾತ್ ಆಕ್ರಮಣಕ್ಕೆ ಕಾರಣವಾಗಬಹುದಾದ ಯಾವುದೇ ಆರೋಗ್ಯ ಸಮಸ್ಯೆಗಳು ಅಥವಾ ದೈಹಿಕ ಸ್ಥಿತಿಗಳು ಆ ನಾಯಿಯಲ್ಲಿ ಕಂಡು ಬಂದಿಲ್ಲ ಎಂದು ತಪಾಸಣೆ ನಡೆಸಿದ ಪಶುವೈದ್ಯರು ಹೇಳಿದ್ದಾರೆ.

ಉತ್ತರ ಯಾರ್ಕ್‌ಷೈರ್‌ನ ಹಿರಿಯ ಕರೋನರ್ ಜಾನ್ ಹೀತ್, ಸವನ್ನಾ ಸಾಕು ನಾಯಿಯಿಂದ ಉಂಟಾದ ಗಾಯಗಳ ಪರಿಣಾಮವಾಗಿ ಸಾವನ್ನಪ್ಪಿದೆ ಎಂದು ತೀರ್ಮಾನಿಸಿದ್ದಾರೆ. ಸವನ್ನಾಗೆ ಏನಾಯಿತು ಎಂದು ತಿಳಿದ ನಂತರ ನಾವು ಸಂಪೂರ್ಣವಾಗಿ ಆಘಾತಕ್ಕೊಳಗಾಗಿದ್ದೇವೆ ಮತ್ತು ನಾವು ತುಂಬಾ ಪ್ರೀತಿಸುವ ನಮ್ಮ ಅದ್ಭುತ ಹುಡುಗಿಯನ್ನು ಕಳೆದುಕೊಂಡಿದ್ದೇವೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಸವನ್ನಾ ಅವರ ಕುಟುಂಬವು ಉತ್ತರ ಯಾರ್ಕ್‌ಷೈರ್ ಪೊಲೀಸರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: 26 ಜನರ ಬಲಿ ಪಡೆದ ಪಹಲ್ಗಾಮ್ ದಾಳಿಕೋರರಿಗೆ ನೆರವು ನೀಡಿದವ ಕಾಶ್ಮೀರದ ಶಿಕ್ಷಕ!

ಇದನ್ನೂ ಓದಿ: ಭಾರತದ ಜೊತೆಗೆ ತೆರಿಗೆ ಮುನಿಸು: ಭಾರತದ ಶತ್ರು ಪಾಕಿಸ್ತಾನವನ್ನು ಅಪ್ಪಿ ಮುದ್ದಾಡ್ತಿರುವ ಟ್ರಂಪ್