ಇಂಡೋನೇಷ್ಯಾದಿಂದ ಆಸ್ಟ್ರೇಲಿಯಾಗೆ ಹೊರಟಿದ್ದ ವಿಮಾನದಲ್ಲಿ ಶೌಚಾಲಯಗಳು ಮಧ್ಯಆಗಸದಲ್ಲಿ ಕೆಟ್ಟುಹೋಗಿ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಒಳಗಾದ ಘಟನೆ ನಡೆದಿದೆ.

ವಿಮಾನ ಟೇಕಾಫ್ ಆದ ನಂತರ ವಿಮಾನದಲ್ಲಿದ್ದ ಟಾಯ್ಲೆಟ್ ಕೆಲಸ ಮಾಡುವುದು ಸ್ಥಗಿತಗೊಂಡ ಹಿನ್ನೆಲೆ ವಿಮಾನ ಪ್ರಯಾಣವೂ ಪ್ರಯಾಣಿಕರಿಗೆ ದುಸ್ವಪ್ನದಂತೆ ಕಾಡಿದ ಘಟನೆ ಇಂಡೋನೇಷ್ಯಾದ ಬಾಲಿಯಿಂದ ಆಸ್ಟ್ರೇಲಿಯಾದ ಬ್ರಿಸ್ಬೇನ್‌ಗೆ ಹೊರಟಿದ್ದ ವಿಮಾನದಲ್ಲಿ ನಡೆದಿದೆ. ಇಂಡೋನೇಷ್ಯಾದ ಡೆನ್‌ಸಪರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗುವುದಕ್ಕೂ ಮೊದಲೇ ಈ ವರ್ಜಿನ್ ಆಸ್ಟ್ರೇಲಿಯಾ ವಿಮಾನ ಬೋಯಿಂಗ್ 737 MAX 8 ನಲ್ಲಿ ತೊಂದರೆಗಳು ಕಾಣಿಸಿಕೊಂಡಿದ್ದವು. ಇದರಿಂದಾಗಾಗಿ ಮೂತ್ರವನ್ನು ಕಟ್ಟಿಕೊಳ್ಳಲಾಗದ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧೆಯೊಬ್ಬರು ಮಧ್ಯ ಆಗಸದಲ್ಲಿ ತೀವ್ರ ಕಷ್ಟ ಹಾಗೂ ಅವಮಾನಕ್ಕೆ ಒಳಗಾದರು ಎಂದು ವರದಿಯಾಗಿದೆ.

ವಿಮಾನದಲ್ಲಿ ಮೂತ್ರ ವಿಸರ್ಜನೆಗೆ ಬಾಟಲ್ ನೀಡಿದ ಏರ್‌ಲೈನ್ಸ್‌:

ಆಸ್ಟ್ರೇಲಿಯನ್ ಮಾಧ್ಯಮ ದಿ ಸನ್ ವರದಿಯ ಪ್ರಕಾರ, ವಿಮಾನ ಬಾಲಿಯಿಂದ ಹೊರಡುವ ಮೊದಲೇ ವಿಮಾನದ ಹಿಂಭಾಗದ ಶೌಚಾಲಯಗಳಲ್ಲಿ ಒಂದು ಕೆಲಸ ಮಾಡುತ್ತಿರಲಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಬಾಲಿಯಲ್ಲಿ ಯಾವುದೇ ಎಂಜಿನಿಯರಿಂಗ್ ಬೆಂಬಲ ಲಭ್ಯವಿಲ್ಲದ ಕಾರಣ ವಿಮಾನವು ನಿಗದಿತ ವೇಳಾಪಟ್ಟಿಯಂತೆ ಟೇಕಾಫ್ ಆಗಿದೆ. ಒಟ್ಟು ಆರು ಗಂಟೆಯ ಪ್ರಯಾಣ ಇದಾಗಿತ್ತು. ಆದರೆ ಪ್ರಯಾಣದ ಕೊನೆಯ 3 ಗಂಟೆಗಳ ಅವಧಿಯಲ್ಲಿ ಕಾರ್ಯನಿರ್ವಹಿಸುವ ಶೌಚಾಲಯಗಳಿಗೆ ಪ್ರವೇಶವಿಲ್ಲದ ಕಾರಣ, ಪ್ರಯಾಣಿಕರಿಗೆ ಮೂತ್ರವನ್ನು ತಡೆದುಕೊಳ್ಳುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ. ಮೂತ್ರವನ್ನು ಕಟ್ಟಿಕೊಳ್ಳುವ ಸಾಮರ್ಥ್ಯ ಇದ್ದವರು ಕ್ವೀನ್ಸ್‌ಲ್ಯಾಂಡ್‌ನಲ್ಲಿ ವಿಮಾನ ಅಂತಿಮವಾಗಿ ಲ್ಯಾಂಡ್ ಆಗುವುದಕ್ಕೆ ಕಾಯುತ್ತಿದ್ದರು. ಆದರೆ ವಿಮಾನದಲ್ಲಿದ್ದ ಓರ್ವ ವೃದ್ಧ ಮಹಿಳೆ ಮೂತ್ರವನ್ನು ನಿಯಂತ್ರಿಸಿಕೊಳ್ಳಲಾಗದ ಸಮಸ್ಯೆ ಎದುರಿಸುತ್ತಿದ್ದರು. ಹೀಗಾಗಿ ವಿಮಾನದ ಸಿಬ್ಬಂದಿ ಮೂತ್ರ ವಿಸರ್ಜನೆಗೆ ಅವರಿಗೆ ಬಾಟಲ್ ನೀಡಿದರು. ಆದರೆ ಅದರಲ್ಲಿ ಮೂತ್ರ ಮಾಡಲಾಗದೇ ಅವರ ಬಟ್ಟೆ ಮೂತ್ರದಿಂದ ತೊಯ್ದು ಹೋಗಿ ಅವರು ಮುಜುಗರ ಅನುಭವಿಸಿದರು ಎಂದು ವರದಿಯಾಗಿದೆ.

ಮೂತ್ರ ವಾಸನೆಯಿಂದ ನರಕಯಾತನೆ ಅನುಭವಿಸಿದ ಪ್ರಯಾಣಿಕರು:

ವಿಮಾನ ಪ್ರಯಾಣದ ಮಧ್ಯದಲ್ಲೇ ವಿಮಾನದ ಮತ್ತೊಂದು ಶೌಚಾಲಯವೂ ಕೆಲಸ ಮಾಡುವುದನ್ನು ನಿಲ್ಲಿಸಿತು ಎಂದು ಪ್ರಯಾಣಿಕರೊಬ್ಬರು ಆಸ್ಟ್ರೇಲಿಯನ್ ಮಾಧ್ಯಮಕ್ಕೆ ದೂರಿದ್ದಾರೆ. ಉಳಿದ ಮೂರು ಗಂಟೆಗಳ ಕಾಲ ಪ್ರಯಾಣಿಕರು ಈ ಸಂಕಷ್ಟವನ್ನು ಸಹಿಸಿಕೊಂಡರು ಆದರೆ ಮೂತ್ರವು ನೆಲಕ್ಕೆ ಸೋರಿಕೆಯಾಗುತ್ತಿದ್ದಂತೆ ಕ್ಯಾಬಿನ್‌ನಲ್ಲಿ ಅತಿಯಾದ ಮೂತ್ರದ ವಾಸನೆ ಹರಡಿ ಪ್ರಯಾಣ ನರಕಯಾತನೆ ಎನಿಸಿತು ಎಂದು ಕೆಲವರು ಹೇಳಿಕೊಂಡಿದ್ದಾರೆ.

ಪ್ರಯಾಣಿಕರು ವಿಮಾನದಲ್ಲಿ ಟಾಯ್ಲೆಟ್ ಸ್ಥಗಿತಗೊಂಡಿದ್ದರಿಂದ ಬಹಳ ಸಂಕಷ್ಟ ಅನುಭವಿಸಿದೆವು, ಅದರೊಳಗಿನ ವಾತಾವರಣವೂ ಅನಾನುಕೂಲ ಅಗೌರವದಿಂದ ಕೂಡಿತ್ತು, ನಾವು ಬಾಟಲಿಗಳಲ್ಲಿ ಮೂತ್ರ ಮಾಡುವಂತೆ ಕ್ಯಾಬಿನ್ ಸಿಬ್ಬಂದಿ ನಮಗೆ ತಿಳಿಸಿದರು, ಇದು ವಿಶೇಷವಾಗಿ ವಯಸ್ಸಾದ ಪ್ರಯಾಣಿಕರಿಗೆ ಅವಮಾನಕರ ಮತ್ತು ದುಃಖಕರವಾಗಿತ್ತು ಎಂದು ಪ್ರಯಾಣಿಕರೊಬ್ಬರು ಹೇಳಿದರು.

ಕ್ಷಮೆಯಾಚಿಸಿದ ಏರ್‌ಲೈನ್ಸ್:

ತನ್ನ ವಿಮಾನದಲ್ಲಾದ ಈ ಅನಾನುಕೂಲಕರ ಘಟನೆಗೆ ನಂತರದಲ್ಲಿ ವರ್ಜಿನ್ ಆಸ್ಟ್ರೇಲಿಯಾ ಏರ್‌ಲೈನ್ಸ್ ಕ್ಷಮೆ ಕೇಳಿದೆ. ಘಟನೆ ನಡೆದಿರುವುದು ನಿಜ ತೊಂದರೆಗೊಳಗಾದ ಪ್ರಯಾಣಿಕರಿಗೆ ಕ್ಷಮೆಯಾಚಿಸುತ್ತೇವೆ. ಗುರುವಾರ ಸಂಜೆ ಡೆನ್‌ಸಪರ್‌ ನಿಂದ ಬ್ರಿಸ್ಬೇನ್‌ಗೆ ಹೊರಟಿದ್ದ ವರ್ಜಿನ್ ಆಸ್ಟ್ರೇಲಿಯಾ ವಿಮಾನವು ಹಾರಾಟದ ಸಮಯದಲ್ಲಿ ಸಮಸ್ಯೆಯೊಂದನ್ನು ಅನುಭವಿಸಿತು, ಇದು ಶೌಚಾಲಯಗಳ ಸೇವಾ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿತು. ನಮ್ಮ ಅತಿಥಿಗಳಿಗೆ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ ಮತ್ತು ವಿಮಾನದಲ್ಲಿ ಸವಾಲಿನ ಪರಿಸ್ಥಿತಿಯನ್ನು ನಿರ್ವಹಿಸಿದ್ದಕ್ಕಾಗಿ ನಮ್ಮ ಸಿಬ್ಬಂದಿಗೆ ಧನ್ಯವಾದ ಹೇಳುತ್ತೇವೆ ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಲ್ಲದೇ ಈ ಪ್ರಯಾಣದ ಸಮಯದಲ್ಲಿ ತೊಂದರೆಗೊಳಗಾದವರಿಗೆ ವಿಮಾನ ವೆಚ್ಚದ ಕ್ರೆಡಿಟ್ ನೀಡಲಾಗುವುದು ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

ಇದನ್ನೂ ಓದಿ: ಜೋರಾಗಿ ಮಳೆ, ಕೈಗೆ ಸಿಗದ ಉಬರ್ ಓಲಾ: ಮನೆಗೆ ಹೋಗಲು ಮಿನಿ ಟ್ರಕ್ ಬುಕ್ ಮಾಡಿದ ಉದ್ಯೋಗಿಗಳು

ಇದನ್ನೂ ಓದಿ: 9 ವರ್ಷಗಳ ನಂತರ ಶಿಲ್ಪಾ ಶೆಟ್ಟಿ ರಸ್ಟೋರೆಂಟ್‌ ಬಾಸ್ಟಿಯನ್ ಬಾಂದ್ರಾಗೆ ಬೀಗ: ನಾಳೆ ಕೊನೆದಿನ