1995ರಿಂದಲೂ ಪಿಒಕೆಯಲ್ಲಿ ನೆಲೆಸಿ, 100ಕ್ಕೂ ಹೆಚ್ಚು ಒಳನುಸುಳುವಿಕೆ ಯತ್ನಗಳಲ್ಲಿ ರೂವಾರಿ ಆಗಿದ್ದ ಹಾಗೂ ಉಗ್ರರ ‘ಮಾನವ ಜಿಪಿಎಸ್‌’ ಅಂತಲೇ ಕುಖ್ಯಾತಿ ಪಡೆದಿದ್ದ ಪಾಕಿಸ್ತಾನಿ ಉಗ್ರ ಬಾಗು ಖಾನ್ ಅಲಿಯಾಸ್ ಸಮಂದರ್‌ ಚಾಚಾ ಸೇನೆ ಗುಂಡಿಗೆ ಬಲಿಯಾಗಿದ್ದಾನೆ.

ಶ್ರೀನಗರ: 1995ರಿಂದಲೂ ಪಿಒಕೆಯಲ್ಲಿ ನೆಲೆಸಿ, 100ಕ್ಕೂ ಹೆಚ್ಚು ಒಳನುಸುಳುವಿಕೆ ಯತ್ನಗಳಲ್ಲಿ ರೂವಾರಿ ಆಗಿದ್ದ ಹಾಗೂ ಉಗ್ರರ ‘ಮಾನವ ಜಿಪಿಎಸ್‌’ ಅಂತಲೇ ಕುಖ್ಯಾತಿ ಪಡೆದಿದ್ದ ಪಾಕಿಸ್ತಾನಿ ಉಗ್ರ ಬಾಗು ಖಾನ್ ಅಲಿಯಾಸ್ ಸಮಂದರ್‌ ಚಾಚಾ ಸೇನೆ ಗುಂಡಿಗೆ ಬಲಿಯಾಗಿದ್ದಾನೆ.

ಕಳೆದ ವಾರ ಕಾಶ್ಮೀರದ ಗುರೇಜ್‌ ಸೆಕ್ಟರ್‌ನಲ್ಲಿ ಇಬ್ಬರು ಉಗ್ರರು ಹತ್ಯೆ ಆಗಿದ್ದರು. ಅದರಲ್ಲಿ ಬಾಗು ಕೂಡ ಇದ್ದಾನೆ ಎಂದು ಶನಿವಾರ ದೃಢಪಟ್ಟಿದೆ.

ಬಾಗು ಉಗ್ರ ಗುಂಪಿನಲ್ಲಿಯೇ ಅತ್ಯಂತ ಹಿರಿಯ ಒಳನುಸುಳುಕೋರನಾಗಿದ್ದ. ಗುರೇಜ್ ವಲಯದಲ್ಲಿ ನೌಶೇರಾ ನೌರ್‌ ಪ್ರದೇಶದಿಂದ ಗಡಿ ನಿಯಂತ್ರಣ ರೇಖೆ ಮೂಲಕ ಭಾರತಕ್ಕೆ ಮತ್ತೊಬ್ಬ ಉಗ್ರನ ಜತೆಗೆ ಒಳನುಸುಳಲು ಯತ್ನಿಸುತ್ತಿದ್ದ. ಆಗ ಸೇನೆ ಗುಂಡು ಹಾರಿಸಿತು. ಆಗ ಇಬ್ಬರೂ ಸಾವನ್ನಪ್ಪಿದರು ಎಂದು ಗೊತ್ತಾಗಿದೆ.

100 ನುಸುಳುವಿಕೆ ರೂವಾರಿ:

ಮೂಲಗಳ ಪ್ರಕಾರ 1995ರಿಂದಲೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ವಾಸವಿದ್ದ ಬಾಗು 100ಕ್ಕೂ ಹೆಚ್ಚು ಒಳನುಸುಳುವಿಕೆ ಯತ್ನಗಳಲ್ಲಿ ಭಾಗಿಯಾಗಿದ್ದ. ಮಾತ್ರವಲ್ಲದೇ ಅದರಲ್ಲಿ ಬಹುತೇಕ ಯಶಸ್ಸು ಸಾಧಿಸಿದ್ದ. ಗುರೇಜ್ ವಲಯದ ವಿವಿಧ ಪ್ರದೇಶಗಳಲ್ಲಿನ ಕಠಿಣ ಭೂಪ್ರದೇಶ ಮತ್ತು ರಹಸ್ಯ ಮಾರ್ಗಗಳ ಬಗ್ಗೆ ಅರಿತಿದ್ದ. ಹೀಗಾಗಿಯೇ ಈತನಿಗೆ ‘ಮಾನವ ಜಿಪಿಎಸ್‌’ ಎನ್ನಲಾಗುತ್ತಿತ್ತು. ಇದು ಹಲವು ಭಯೋತ್ಪಾದಕ ಗುಂಪುಗಳ ಗಮನವನ್ನೂ ಸೆಳೆಯುವಂತೆ ಮಾಡಿ ಉಗ್ರ ಸಂಘಟನೆಗಳ ಪಾಲಿನ ವಿಶೇಷ ವ್ಯಕ್ತಿಯಾಗಿದ್ದ.

ಹಿಜ್ಬುಲ್‌ ಕಮಾಂಡರ್‌:

ಮಾನವ ಜಿಪಿಎಲ್‌ನಂತೆ ಕಾರ್ಯ ನಿರ್ವಹಿಸುತ್ತಿದ್ದ ಚಾಚಾ ಹಿಜ್ಬುಲ್‌ ಮುಜಾಹಿದೀನ್‌ ಕಮಾಂಡರ್‌ ಕೂಡ ಆಗಿದ್ದ. ಗುರೇಜ್‌ ಮತ್ತು ಅಕ್ಕಪಕ್ಕದ ವಲಯಗಳಿಂದ ಗಡಿ ನಿಯಂತ್ರಣ ರೇಖೆ ಮೂಲಕ ಒಳನುಸುಳುವಿಕೆ ಯೋಜನೆ ರೂಪಿಸಿ ಅದನ್ನು ಕಾರ್ಯಗತಗೊಳಿಸಲು ಇತರ ಭಯೋತ್ಪಾದಕ ಸಂಘಟನೆಗಳಿಗೂ ಸಹಾಯ ಮಾಡುತ್ತಿದ್ದ.

1995ರ ಬಳಿಕ 100ಕ್ಕೂ ಹೆಚ್ಚು ಪಾಕ್‌ ಉಗ್ರರನ್ನು ಭಾರತದೊಳಗೆ ಅಕ್ರಮವಾಗಿ ನುಸುಳಿಸುವಲ್ಲಿ ಯಶಸ್ವಿ ಆಗಿದ್ದ

ಕಾಶ್ಮೀರದ ಕಠಿಣ ಭೂಪ್ರದೇಶ, ರಹಸ್ಯ ಮಾರ್ಗದ ಬಗ್ಗೆ ಅರಿವಿದ್ದ ಕಾರಣ ಈತನನ್ನು ಮಾನವ ಜಿಪಿಎಸ್‌ ಎನ್ನಲಾಗುತ್ತಿತ್ತು

ಇತ್ತೀಚೆಗೆ ಇನ್ನೊಬ್ಬ ಉಗ್ರನ ಜೊತೆಗೆ ಭಾರತದೊಳಗೆ ನುಸುಳುವ ಯತ್ನದ ವೇಳೆ ಸೇನೆ ಗುಂಡಿಗೆ ಉಗ್ರ ಬಾಗು ಸಾವು

ಮೃತ ಬಾಗು ಧರಿಸಿದ್ದ ಬಟ್ಟೆಯೊಳಗೆ ಆತ ಪಾಕಿಸ್ತಾನಕ್ಕೆ ಸೇರಿದ ವ್ಯಕ್ತಿ ಎಂದು ಸಾಬೀತುಪಡಿಸುವ ಸರ್ಕಾರ ದಾಖಲೆ ಪತ್ತೆ