ಅಮೆರಿಕದ ಸ್ನೇಹ ಗಟ್ಟಿಗೊಳಿಸಲು ಹವಣಿಸುತ್ತಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಮತ್ತು ಸೇನಾ ಮುಖ್ಯಸ್ಥ ಅಸೀಮ್‌ ಮುನೀರ್‌, ತಮ್ಮ ಇತ್ತೀಚಿನ ಅಮೆರಿಕ ಭೇಟಿ ವೇಳೆ ಅಧ್ಯಕ್ಷ ಟ್ರಂಪ್‌ಗೆ ತಮ್ಮ ದೇಶದಲ್ಲಿ ಸಿಗುವ ಅಪರೂಪದ ಖನಿಜಗಳನ್ನು ತೋರಿಸಿದ್ದಾರೆ.

ವಾಷಿಂಗ್ಟನ್‌: ಅಮೆರಿಕದ ಸ್ನೇಹ ಗಟ್ಟಿಗೊಳಿಸಲು ಹವಣಿಸುತ್ತಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್‌ ಮತ್ತು ಸೇನಾ ಮುಖ್ಯಸ್ಥ ಅಸೀಮ್‌ ಮುನೀರ್‌, ತಮ್ಮ ಇತ್ತೀಚಿನ ಅಮೆರಿಕ ಭೇಟಿ ವೇಳೆ ಅಧ್ಯಕ್ಷ ಟ್ರಂಪ್‌ಗೆ ತಮ್ಮ ದೇಶದಲ್ಲಿ ಸಿಗುವ ಅಪರೂಪದ ಖನಿಜಗಳನ್ನು ತೋರಿಸಿದ್ದಾರೆ.

ವಾಹನ, ಕಂಪ್ಯೂಟರ್‌, ಚಿಪ್ ಸೇರಿ ತಂತ್ರಜ್ಞಾನ ವಲಯದಲ್ಲಿ ಬಹುವಾಗಿ ಬೇಕಿರುವ ಅಪರೂಪದ ಲೋಹಗಳಿಗೆ ಅಮೆರಿಕ ಬಹುವಾಗಿ ಚೀನಾ ಅವಲಂಬಿಸಿದೆ. ಆದರೆ ಅಮೆರಿಕಕ್ಕೆ ಏಟು ನೀಡಲು ಇಂಥ ವಸ್ತುಗಳ ರಫ್ತಿನ ಮೇಲೆ ಚೀನಾ ಕಡಿವಾಣ ಹಾಕಿದೆ. ಹೀಗಾಗಿ ತನ್ನ ದೇಶದಲ್ಲಿ ಲಭ್ಯವಿರುವ ಅದೇ ಖನಿಜಗಳ ಮಾದರಿಯನ್ನು ಪಾಕ್‌ ನಾಯಕರು, ಬ್ರೀಫ್‌ಕೇಸ್‌ನಲ್ಲಿ ಇಟ್ಟು ಟ್ರಂಪ್‌ಗೆ ತೋರಿಸಿದ್ದಾರೆ.

ಈ ಮೂಲಕ ಪಾಕ್‌ನಲ್ಲಿ ಅಮೆರಿಕದ ಹೂಡಿಕೆ ಹೆಚ್ಚಿಸುವ, ಅಮೆರಿಕದ ಜೊತೆಗೆ ವ್ಯಾಪಾರ ವೃದ್ಧಿಸುವ ಕೆಲಸ ಮಾಡಿದ್ದಾರೆ.

ಯುನೆಸ್ಕೋ ಜೀವಗೋಳ ಪಟ್ಟಿಗೆ ಹಿಮಾಚಲದ ಶೀತ ಮರುಭೂಮಿ ಆಯ್ಕೆ

ನವದೆಹಲಿ: ಹಿಮಾಚಲ ಪ್ರದೇಶದ ಶೀತ ಮರುಭೂಮಿಗೆ ಜೀವಗೋಳ (ಬಯೋಸ್ಪಿಯರ್) ರಿಸರ್ವ್‌ ಎಂಬ ಯುನೆಸ್ಕೋ ಮಾನ್ಯತೆ ಲಭಿಸಿದೆ. ಹೀಗಾಗಿ ಇನ್ನು ಮುಂದೆ ಇದರ ರಕ್ಷಣೆ ಹೊಣೆಯನ್ನು ಯುನೆಸ್ಕೋ ಹೊರಲಿದೆ. ಇದರಿಂದಾಗಿ ಭಾರತದಲ್ಲಿ 13 ಬಯೋಸ್ಪಿರ್‌ ತಾಣಗಳು ಯುನೆಸ್ಕೋ ಪಟ್ಟಿಗೆ ಸೇರಿದಂತಾಗಿವೆ. ಲಾಹುಲ್‌-ಸ್ಪಿಟಿ ಜಿಲ್ಲೆಗಳ ನಡುವೆ 7770 ಚದರ ಕಿ.ಮೀ. ವಿಸ್ತೀರ್ಣ ಹೊಂದಿರುವ ಈ ಪ್ರದೇಶವು ಹಿಮದ ಮರುಭೂಮಿ, ನೀರ್ಗಲ್ಲು ಮತ್ತು ಹಿಮಪರ್ವತಗಳಿಂದ ಕೂಡಿದೆ. ಇಲ್ಲಿ ಹಿಮಬೆಕ್ಕು ಸೇರಿ ಹಲವು ಬಗೆಯ ಜೀವಿಗಳು ನೆಲೆಸಿವೆ. ಯುನೆಸ್ಕೋ ಮಾನ್ಯತೆಯಿಂದಾಗಿ ಇಲ್ಲಿ ಪ್ರವಾಸೋದ್ಯಮ ಮತ್ತು ಸಂಶೋಧನೆ ಹೆಚ್ಚಲಿವೆ.

ಐ ಲವ್‌ ಮೊಹಮ್ಮದ್‌ ಅಭಿಯಾನದಲ್ಲಿ ತಪ್ಪು ಏನು: ಕಾಂಗ್ರೆಸ್‌ ಪ್ರಶ್ನೆ

ನವದೆಹಲಿ: ಕರ್ನಾಟಕ ಸೇರಿ ದೇಶದ 5ಕ್ಕೂ ಹೆಚ್ಚು ರಾಜ್ಯಗಳಲ್ಲಿ ವ್ಯಾಪಿಸಿರುವ ‘ಐ ಲವ್‌ ಮೊಹಮ್ಮದ್‌’ ಅಭಿಯಾನವನ್ನು ಕಾಂಗ್ರೆಸ್‌ ಸಮರ್ಥಿಸಿಕೊಂಡಿದೆ. ಜನರು ‘ತಮ್ಮ ದೇವರಾದ ಮೊಹಮದ್‌ರ ಪ್ರತಿ ಪ್ರೀತಿ ತೋರಿಸಿಕೊಳ್ಳುವುದರಲ್ಲಿ ತಪ್ಪೇನು?’ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ. ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೆರಾ ಮಾತನಾಡಿ, ‘ಮೀರಾ ಬಾಯಿ, ಸೂಫಿ ಸಂತರು ಬಾಳಿದ ಸಾಮರಸ್ಯದ ನಾಡಿನಲ್ಲಿ, ಅನ್ಯಕೋಮಿಗೆ ಸೇರಿದ(ಮುಸಲ್ಮಾನ) 7 ವರ್ಷದ ಹುಡುಗನನ್ನು ಹಿಂದೂಗಳು ಬಲಿ ಕೊಟ್ಟಿದ್ದಾರೆ. ಆತನಿಂದ ತೊಂದರೆಯೇನಾಗಿತ್ತು? ಅತ್ತ ಯಾರಾದರೂ ತಮಗೆ ದೇವರ ಮೇಲೆ ಪ್ರೀತಿಯಿದೆ ಎಂದರೂ ನಿಮಗೆ ತೊಂದರೆಯಾಗುತ್ತದೆ’ ಎಂದು ತಿವಿದಿದ್ದಾರೆ. ಐ ಲವ್‌ ಅಭಿಯಾನ ಹಲವು ರಾಜ್ಯಗಳಲ್ಲಿ ಹಿಂದೂ ಮುಸ್ಲಿಂ ಕೋಮುಗಲಭೆಗೆ ಕಾರಣವಾಗಿತ್ತು.