Pakistan Minister Blames India for jaffar express Attacks ಪಾಕಿಸ್ತಾನದ ಶಿಕಾರ್‌ಪುರ ಬಳಿ ಜಾಫರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸ್ಫೋಟ ಸಂಭವಿಸಿ ಏಳು ಮಂದಿ ಗಾಯಗೊಂಡಿದ್ದಾರೆ. ಈ ಸರಣಿ ದಾಳಿಗಳ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನದ ರೈಲ್ವೆ ಸಚಿವರು ಆರೋಪಿಸಿದ್ದಾರೆ.
ನವದೆಹಲಿ (ಅ.8): ಪಾಕಿಸ್ತಾನದ ಶಿಕಾರ್‌ಪುರ ಮತ್ತು ಜಾಕೋಬಾಬಾದ್ ನಡುವಿನ ಸುಲ್ತಾನ್ ಕೋಟ್‌ನಲ್ಲಿ ಮಂಗಳವಾರ ರೈಲ್ವೆ ಹಳಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಜಾಫರ್ ಎಕ್ಸ್‌ಪ್ರೆಸ್‌ನ ನಾಲ್ಕು ಬೋಗಿಗಳು ಹಳಿತಪ್ಪಿದ ನಂತರ ಕನಿಷ್ಠ ಏಳು ಜನರು ಗಾಯಗೊಂಡಿದ್ದಾರೆ. ಇದು ಕಳೆದ ಕೆಲವು ತಿಂಗಳುಗಳಲ್ಲಿ ರೈಲಿನ ಮೇಲೆ ನಡೆದ ಸರಣಿ ದಾಳಿಗಳಲ್ಲಿ ಇತ್ತೀಚಿನ ಪ್ರಕರಣವಾಗಿದೆ.
ಪಾಕಿಸ್ತಾನದ ಪ್ರಮುಖ ಪತ್ರಿಕೆ ಡಾನ್ ವರದಿಯ ಪ್ರಕಾರ, ಜಾಫರ್ ಎಕ್ಸ್‌ಪ್ರೆಸ್ ಮೇಲಿನ ಸರಣಿ ದಾಳಿಗೆ ಭಾರತವೇ ಕಾರಣ ಎಂದು ಪಾಕಿಸ್ತಾನದ ರೈಲ್ವೆ ಸಚಿವ ಹನೀಫ್ ಅಬ್ಬಾಸಿ ಆರೋಪಿಸಿದ್ದಾರೆ. ಈ ದಾಳಿಯಲ್ಲಿ ವಿದೇಶಿ ಕೈವಾಡವಿದೆ ಎಂದು ಅವರು ಶಂಕಿಸಿದ್ದಾರೆ. ಘಟನೆಯ ನಂತರ ರೈಲ್ವೆ ಸೇವೆಗಳನ್ನು ಯಾವುಏ ಕಾರಣಕ್ಕೂ ಸ್ಥಗಿತ ಮಾಡಲಾಗುವುದಿಲ್ಲ ಎಂದಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಶಿಕಾರ್‌ಪುರದ ಉಪ ಆಯುಕ್ತ ಶಕೀಲ್ ಅಹ್ಮದ್ ಅಬ್ರೋ, ಬೆಳಿಗ್ಗೆ 8:15 ರ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಹೇಳಿದ್ದರು. ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಮತ್ತು ಗಾಯಗೊಂಡ ಏಳು ಪ್ರಯಾಣಿಕರನ್ನು ತಕ್ಷಣವೇ ಶಿಕಾರ್‌ಪುರ ನಾಗರಿಕ ಆಸ್ಪತ್ರೆಗೆ ಸಾಗಿಸಲಾಯಿತು ಎಂದಿದ್ದಾರೆ. ಅಧಿಕಾರಿಯ ಪ್ರಕಾರ, ಜಾಫರ್ ಎಕ್ಸ್‌ಪ್ರೆಸ್ ರೈಲು ಜಾಕೋಬಾಬಾದ್ ಮೂಲಕ ಕ್ವೆಟ್ಟಾಗೆ ತೆರಳುತ್ತಿತ್ತು.
ಮಂಗಳವಾರ ನಡೆದ ಸ್ಫೋಟವು 2025 ರಲ್ಲಿ ಜಾಫರ್ ಎಕ್ಸ್‌ಪ್ರೆಸ್ ಮೇಲೆ ನಡೆದ ಏಳನೇ ದಾಳಿಯಾಗಿದೆ ಎಂದು ವರದಿಯಾಗಿದೆ, ಮಾರ್ಚ್‌ನಲ್ಲಿ ಉಗ್ರಗಾಮಿಗಳು ರೈಲನ್ನು ಅಪಹರಿಸಿ 21 ಪ್ರಯಾಣಿಕರನ್ನು ಕೊಂದಿದ್ದರು. ಇದು ರೈಲಿನ ಮೇಲೆ ನಡೆದ ಅತ್ಯಂತ ಮಾರಕ ದಾಳಿಯಾಗಿತ್ತು. ನಂತರದ ತಿಂಗಳುಗಳಲ್ಲಿ, ಇದು ಕನಿಷ್ಠ ಆರು ದಾಳಿಗಳನ್ನು ಎದುರಿಸಿದೆ.
ಆಪರೇಷನ್ ಬನ್ಯನ್ ಅಲ್ ಮರ್ಸೂಸ್ ಸೋಲನ್ನು ಅರಗಿಸಿಕೊಳ್ಳಲು ಭಾರತಕ್ಕೆ ಸಾಧ್ಯವಾಗ್ತಿಲ್ಲ
ಡಾನ್ ಜೊತೆಗಿನ ಮಾತುಕತೆಯ ವೇಳೆ, ಫೆಡರಲ್ ರೈಲ್ವೆ ಸಚಿವ ಹನೀಫ್ ಅಬ್ಬಾಸಿ ಜಾಫರ್ ಎಕ್ಸ್‌ಪ್ರೆಸ್ ಮೇಲಿನ ಪುನರಾವರ್ತಿತ ದಾಳಿಗಳಿಗೆ ಭಾರತವನ್ನು ದೂಷಿಸಿದರು. "ಜಾಫರ್ ಎಕ್ಸ್‌ಪ್ರೆಸ್ ಅನ್ನು ಪದೇ ಪದೇ ಗುರಿಯಾಗಿಸಿಕೊಂಡ ಭಯೋತ್ಪಾದಕರು ವಾಸ್ತವವಾಗಿ, ಆಪರೇಷನ್ ಬನ್ಯನ್ ಅಲ್ ಮರ್ಸೂಸ್ ಸಮಯದಲ್ಲಿ ಎದುರಿಸಿದ ಸೋಲನ್ನು ಅರಗಿಸಿಕೊಳ್ಳಲು ಮತ್ತು ಸಹಿಸಲು ಸಿದ್ಧರಿಲ್ಲದ ಭಾರತದ ಪರ ವ್ಯಕ್ತಿಗಳು" ಎಂದು ಅವರು ಹೇಳಿದರು. "ಈ ಘಟನೆಗಳು ಮೇ ಯುದ್ಧದಲ್ಲಿ ಪಡೆದ ಗಾಯಗಳ ನೋವನ್ನು ಇನ್ನೂ ಅನುಭವಿಸುತ್ತಿರುವ ಭಾರತದ ಹೇಡಿತನದ ಕೃತ್ಯವಾಗಿದೆ" ಎಂದು ಅವರು ಹೇಳಿದರು.
ರೈಲು ದಿನನಿತ್ಯದಂತೆಯೇ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ, ಏಕೆಂದರೆ ನಾವು ಅಂತಹ ದಾಳಿಗಳಿಗೆ ಎಂದಿಗೂ ಹೆದರುವುದಿಲ್ಲ ಎಂದಿದ್ದಾರೆ. ಪಾಕಿಸ್ತಾನ ಭಾರತದ ವಿರುದ್ಧ ಇಂತಹ ಆರೋಪಗಳನ್ನು ಮಾಡುತ್ತಿರುವುದು ಇದೇ ಮೊದಲಲ್ಲ. ಮಾರ್ಚ್‌ನಲ್ಲಿ ಜಾಫರ್ ಎಕ್ಸ್‌ಪ್ರೆಸ್ ಅಪಹರಣ ಘಟನೆಯ ನಂತರ, ಪಾಕಿಸ್ತಾನವು "ಅಫ್ಘಾನಿಸ್ತಾನದ ನಿರ್ವಾಹಕರೊಂದಿಗೆ" ಸಂವಹನ ನಡೆಸುತ್ತಿದ್ದ "ಭಯೋತ್ಪಾದಕರು" ಇದನ್ನು ಮಾಡಿದ್ದಾರೆ ಎಂದು ಹೇಳಿಕೊಂಡಿತು, ಆದರೆ ಭಾರತವು ಇದರ ಹಿಂದಿನ ಮಾಸ್ಟರ್ ಮೈಂಡ್ ಎಂದು ಆರೋಪಿಸಿತು.
ಆರೋಪ ನಿರಾಕರಿಸಿದ ಭಾರತ
ಆರೋಪಗಳನ್ನು ನಿರಾಕರಿಸಿದ ವಿದೇಶಾಂಗ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್, "ಪಾಕಿಸ್ತಾನ ಮಾಡಿದ ಆಧಾರರಹಿತ ಆರೋಪಗಳನ್ನು ನಾವು ತಿರಸ್ಕರಿಸುತ್ತೇವೆ. ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದು ಎಲ್ಲಿದೆ ಎಂದು ಇಡೀ ಜಗತ್ತಿಗೆ ತಿಳಿದಿದೆ. ಪಾಕಿಸ್ತಾನವು ತನ್ನ ಆಂತರಿಕ ಸಮಸ್ಯೆಗಳು ಮತ್ತು ವೈಫಲ್ಯಗಳಿಗೆ ಇತರರನ್ನು ದೂಷಿಸುವ ಬದಲು ತನ್ನೊಳಗೆ ನೋಡಿಕೊಳ್ಳಬೇಕು" ಎಂದು ಹೇಳಿದರು.
