ಚೀನಾದಲ್ಲಿ ಮಹಿಳೆಯೊಬ್ಬರು ತಮ್ಮ ಮಕ್ಕಳು ತಮ್ಮನ್ನು ನೋಡಿಕೊಳ್ಳದ ಕಾರಣ ಬಹುಕೋಟಿ ಆಸ್ತಿಯನ್ನು ತಮ್ಮ ಸಾಕುಪ್ರಾಣಿಗಳಿಗೆ ಬರೆದಿದ್ದಾರೆ. ತಮ್ಮ ಆರೈಕೆ ಮಾಡದ ಮಕ್ಕಳಿಗೆ ಪಾಠ ಕಲಿಸಲು ಈ ನಿರ್ಧಾರ ಕೈಗೊಂಡಿದ್ದಾರೆ.

ಚೀನಾ ಭಾರತ ಸೇರಿದಂತೆ ಬಹುತೇಕ ಏಷ್ಯಾ ದೇಶಗಳಲ್ಲಿ ಮಕ್ಕಳು ವೃದ್ಧಾಪ್ಯದಲ್ಲಿ ಪೋಷಕರನ್ನು ನೋಡಿಕೊಳ್ಳಬೇಕು ಎಂಬ ನಿಯಮವಿದೆ. ಇದರ ಜೊತೆಗೆ ಪೋಷಕರು ಮಾಡಿದ ಆಸ್ತಿಯನ್ನು ಪೋಷಕರು ತಮ್ಮ ಮಕ್ಕಳಿಗೇ ನೀಡುತ್ತಾರೆ. ಆದರೆ ಕೆಲವು ಮಕ್ಕಳು ವೃದ್ಧಾಪ್ಯದಲ್ಲಿ ತಮ್ಮ ಪೋಷಕರನ್ನು ಬಿಟ್ಟು ಹೋಗುತ್ತಾರೆ. ಕೆಲವರು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ತಮ್ಮನ್ನು ಬಾಲ್ಯದಲ್ಲಿ ಎಷ್ಟೇ ಚೆನ್ನಾಗಿ ಆರೈಕೆ ಮಾಡಿದರು ಬೆಳೆದು ತಮ್ಮದೇ ಹೊಸ ಬದುಕು ಆರಂಭವಾಗುತ್ತಿದ್ದಂತೆ ಮಕ್ಕಳು ಪೋಷಕರನ್ನು ಮರೆತು ಬಿಡುತ್ತಾರೆ. ಹೀಗಿದ್ದರೂ ಪೋಷಕರು ಮಾತ್ರ ತಮ್ಮ ಮಕ್ಕಳ ನೆನಪಿನಲ್ಲೇ ದಿನ ಕಳೆಯುತ್ತಾರೆ. ತಮ್ಮನ್ನು ತಮ್ಮ ಮಕ್ಕಳು ಚೆನ್ನಾಗಿ ನೋಡಿಕೊಳ್ಳದೇ ಹೋದರೂ ತಾವು ಮಾಡಿದ ಆಸ್ತಿಯನ್ನು ತಮ್ಮ ಮಕ್ಕಳ ಹೊರತಾಗಿ ಬೇರೆ ಯಾರಿಗೂ ಕೊಡುವುದಕ್ಕೆ ಮುಂದಾಗುವುದಿಲ್ಲ. ಆದರೆ ಇಲ್ಲೊಂದು ಕಡೆ ತಾಯಿಯೊಬ್ಬರು ವೃದ್ಧಾಪ್ಯದಲ್ಲಿ ತನ್ನನ್ನು ಆರೈಕೆ ಮಾಡದೇ ತೊರೆದು ಹೋದ ಮಕ್ಕಳಿಗೆ ಬುದ್ಧಿ ಕಲಿಸಿದ್ದಾರೆ. ತಾವು ಮಾಡಿದ್ದ ಆಸ್ತಿಯನ್ನು ಮಕ್ಕಳ ಬದಲಿಗೆ ಸಾಕುಪ್ರಾಣಿಗಳ ಹೆಸರಿಗೆ ಬರೆದು ಹೋಗಿದ್ದಾರೆ.

ಮಕ್ಕಳ ಬದಲು ಪ್ರಾಣಿಗಳ ಹೆಸರಿಗೆ ಆಸ್ತಿ ಬರೆದ ವೃದ್ಧೆ:

ಅಂದಹಾಗೆ ಚೀನಾದಲ್ಲಿ ಈ ಘಟನೆ ನಡೆದಿದೆ. ಚೀನಾದ ಮಹಿಳೆಯೊಬ್ಬರು ತಮ್ಮ ಬಹು ಮಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನು ಮಕ್ಕಳ ಬದಲು ಸಾಕುಪ್ರಾಣಿಗಳಾದ ಬೆಕ್ಕು ಹಾಗೂ ನಾಯಿಯ ಆರೈಕೆಗೆ ಬಳಸುವಂತೆ ಬರೆದಿಟ್ಟಿದ್ದಾರೆ.ಲಿಯು ಎಂಬ ಮಹಿಳೆ ತನ್ನ ಬೆಕ್ಕುಗಳು ಮತ್ತು ನಾಯಿಗಳ ಜೀವಿತಾವಧಿಯ ಆರೈಕೆಯನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ತನ್ನ 2.8 ಮಿಲಿಯನ್ ಡಾಲರ್‌ ಸಂಪತ್ತನ್ನು ಅವುಗಳ ಹೆಸರಿಗೆ ಬರೆದಿದ್ದಾರೆ. 

ಮಕ್ಕಳ ನಿರ್ಲಕ್ಷಿದಿಂದಾಗಿ ದುಃಖಿತರಾಗಿದ್ದ ವೃದ್ಧೆ:

ವರದಿಗಳ ಪ್ರಕಾರ, ಮಹಿಳೆ ಲಿಯು ತನ್ನ ಮೂವರು ಮಕ್ಕಳು ತನ್ನನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಭಾರಿ ಅಸಮಾಧಾನ ಹೊಂದಿದ್ದರು. ಆಕೆಗೆ ಅನಾರೋಗ್ಯವಾದ ಸಮಯದಲ್ಲಿ ಸರಿಯಾಗಿ ಆರೈಕೆ ಮಾಡುತ್ತಿರಲಿಲ್ಲ, ಹುಷಾರಿಲ್ಲ ಎಂಬುದರ ಅರಿವಿದ್ದರೂ ಅಪರೂಪಕ್ಕೊಮ್ಮೆ ಭೇಟಿಯಾಗಿ ಅವರ ಆರೋಗ್ಯವನ್ನು ನಿರ್ಲಕ್ಷಿಸಿದ್ದಾರೆ. ಆದರೆ ಮಕ್ಕಳು ಬರದೇ ಹೋದರೂ ಆಕೆ ಸಾಕಿದ್ದ ಸಾಕುಪ್ರಾಣಿಗಳು ಸದಾಕಾಲ ಆಕೆಯ ಜೊತೆಗೆ ಉಳಿದು ಆಕೆಯ ಮುದ್ದಿನ ಒಡನಾಡಿಗಳಾದವು ಜೊತೆಗೆ ಆಕೆಗೆ ಸಾಂತ್ವನ ನೀಡುವ ಜೊತೆಗೆ ಭಾವನಾತ್ಮಕ ಬೆಂಬಲ ಒದಗಿಸಿದವು. ಹೀಗಾಗಿ ಲಿಯು ಸದಾಕಾಲ ತನ್ನ ಜೊತೆಗಿದ್ದ ಸಾಕುಪ್ರಾಣಿಗಳ ಜೀವಿತಾವಧಿ ತನ್ನ ಅಗಲಿಕೆಯ ನಂತರವೂ ಚೆನ್ನಾಗಿರಬೇಕು ಎಂಬ ಉದ್ದೇಶದಿಂದ ತಮ್ಮ ಈ ಬಹುಕೋಟಿ ಮೊತ್ತದ ಆಸ್ತಿಯನ್ನು ಅವುಗಳಿಗೆ ಬರೆದಿದ್ದಾರೆ.

ಚೀನೀ ಕಾನೂನುಗಳ ಪ್ರಕಾರ ಪ್ರಾಣಿಗಳು ನೇರವಾಗಿ ಸಂಪತ್ತಿಗೆ ಆನುವಂಶಿಕ ಹಕ್ಕುದಾರರಾಗಲು ಅವಕಾಶವಿಲ್ಲದ ಕಾರಣ ಲಿಯು ತನ್ನ ಎಸ್ಟೇಟ್‌ನ ಕಾನೂನು ನಿರ್ವಾಹಕರಾಗಿ ಕಾರ್ಯನಿರ್ವಹಿಸಲು ಸ್ಥಳೀಯ ಪಶುವೈದ್ಯಕೀಯ ಚಿಕಿತ್ಸಾಲಯವನ್ನು ಆಯ್ಕೆ ಮಾಡಿದರು. ಹೀಗಾಗಿ ಲಿಯು ಅವರ ಇಚ್ಛೆಯಂತೆ ಕಾನೂನು ನಿಯಮಗಳ ಅಡಿಯಲ್ಲಿ, ಈ ಪಶು ಕ್ಲಿನಿಕ್ ಲಿಯು ಅವರ ಸಾಕುಪ್ರಾಣಿಗಳಿಗೆ ಅವರ ಜೀವನದುದ್ದಕ್ಕೂ ಆಹಾರ, ಆಶ್ರಯ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲು ಹಣವನ್ನು ಒದಗಿಸುವ ಜವಾಬ್ದಾರಿ ಹೊಂದಿದೆ.

ಲಿಯು ಅವರ ಈ ಅಸಾಮಾನ್ಯ ನಿರ್ಧಾರವು ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅಲ್ಲಿನ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕುಟುಂಬದ ಜವಾಬ್ದಾರಿ, ವೃದ್ಧರ ನಿರ್ಲಕ್ಷ್ಯ ಮತ್ತು ಆಧುನಿಕ ಮನೆಗಳಲ್ಲಿ ಸಾಕುಪ್ರಾಣಿಗಳ ಹೆಚ್ಚುತ್ತಿರುವ ಪ್ರಾಮುಖ್ಯತೆಯ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಅನೇಕರು ಲಿಯು ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದರು, ಮಕ್ಕಳು ತೋರಿದ ನಿರ್ಲಕ್ಷದಿಂದಲೇ ಲಿಯು ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ಅಂತಹ ದೊಡ್ಡ ಮೊತ್ತವನ್ನು ಮೂರನೇ ವ್ಯಕ್ತಿಗೆ ವಹಿಸಿಕೊಡುವುದರಿಂದ ಪ್ರಾಣಿಗಳಿಗೆ ನಿಜವಾಗಿಯೂ ಪ್ರಯೋಜನವಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಗಂಡನಿಗೆ ಲಿವರ್ ನೀಡಿದ ಹೆಂಡತಿ: ಅಂಗಾಂಗ ಕಸಿ ಬಳಿಕ ಇಬ್ಬರೂ ಸಾವು: ಆಸ್ಪತ್ರೆಗೆ ನೊಟೀಸ್

ಇದನ್ನೂ ಓದಿ: ಪತ್ನಿಯ ಕೊನೆಯಾಸೆ ಈಡೇರಿಸಲು 40 ವರ್ಷ ಕಳೆದ ಗಂಡ: ಗಿಟಾರ್ ಆಕಾರದ ಕಾಡನ್ನೇ ನಿರ್ಮಿಸಿದ