London Protests: ಲಂಡನ್‌ನಲ್ಲಿ ನಡೆದ ಬೃಹತ್ ವಲಸೆ ವಿರೋಧಿ ಪ್ರತಿಭಟನೆಯಲ್ಲಿ ಎಲಾನ್ ಮಸ್ಕ್ ಭಾಗವಹಿಸಿ ಮೂಲನಿವಾಸಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ಅವರು ಲಂಡನ್ ಮೂಲ ನಿವಾಸಿಗಳಿಗೆ ಹೇಳಿದ್ದೇನು ಇಲ್ಲಿದೆ ಡಿಟೇಲ್!
ಲಂಡನ್: ಪ್ರಪಂಚದ ಹಲವು ದೇಶಗಳು ವಲಸಿಗರ ಹಾವಳಿಯಿಂದ ಬಳಲುತ್ತಿವೆ. ಅದರಲ್ಲೂ ವಿಶೇಷವಾಗಿ ಮಧ್ಯಪ್ರಾಚ್ಯದ ಮುಸ್ಲಿಂ ಹಾಗೂ ಏಷ್ಯಾದ ಜನರ ವಲಸೆಯಿಂದಾಗಿ ಲಂಡನ್‌ನಲ್ಲಿ ಸ್ವತಃ ಅಲ್ಲಿನ ಜನರಿಗೆ ಅಭದ್ರತೆ ಉಂಟಾಗಿದೆ. ಹಲವು ವರ್ಷಗಳಿಂದ ಈ ವಲಸಿಗರ ವಿರುದ್ಧ ಉರಿಯುತ್ತಿದ್ದ ಈ ಆಕ್ರೋಶ ಮೂರ್ತ ಸ್ವರೂಪ ಪಡೆದುಕೊಂಡಿದ್ದು, ಶನಿವಾರ ಲಂಡನ್‌ನ ರಾಷ್ಟ್ರೀಯವಾದಿ, ಬಲಪಂಥೀಯ ನಾಯಕ ಟಾಮಿ ರಾಬಿನ್ಸನ್ ಆಯೋಜಿಸಿದ ಪ್ರತಿಭಟನೆಗೆ ನಿರೀಕ್ಷೆಗೂ ಮೀರಿ ಜನ ಸೇರಿದ್ದು, ಇವರನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ಸಾಹಸವಾಗಿತ್ತು.
ಲಂಡನ್ ವಲಸೆ ವಿರೋಧಿ ಪ್ರತಿಭಟನೆಯಲ್ಲಿ ಎಲಾನ್ ಮಸ್ಕ್ ಹೇಳಿದ್ದೇನು?
London Protests: ಈ ಘಟನೆಗೆ ಸಂಬಂಧಿಸಿದಂತೆ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಸ್ಪೇಸ್ ಎಕ್ಸ್ ಮಾಲೀಕ ಎಲಾನ್ ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ. ವೀಡಿಯೋ ಲಿಂಕ್ ಮೂಲಕ ಈ ಭಾಷಣದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಎಲಾನ್ ಮಸ್ಕ್, ನೀವು ಇಲ್ಲಿ ಮೂಲಭೂತ ಪರಿಸ್ಥಿತಿಯಲ್ಲಿದ್ದೀರಿ, ಎಡಪಂಥೀಯರು ಕೊಲೆ ಮಾಡುವ ಪಕ್ಷವಾಗಿದ್ದು ಮತ್ತು ಕೊಲೆಯನ್ನು ಆಚರಿಸುತ್ತಿದ್ದಾರೆ. ನೀವು ಹಿಂಸೆಯನ್ನು ಆಯ್ಕೆ ಮಾಡುತ್ತಿರೋ ಇಲ್ಲವೋ ಆದರೆ ಅದಂತು ನಿಮ್ಮ ಬಳಿ ಬರುತ್ತಿದೆ. ಒಂದೋ ನೀವು ಇದರ ವಿರುದ್ಧ ಹೋರಾಡಬೇಕು ಅಥವಾ ನೀವು ಸಾಯಬೇಕು ಎರಡಲ್ಲಿ ಒಂದು ಆಯ್ಕೆ ನೀವು ಮಾಡಬೇಕು ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
ಯುನೈಟ್ ದಿ ಕಿಂಗ್‌ಡಮ್ ಎಂಬ ಹೆಸರಿನಲ್ಲಿ ಆಯೋಜಿಸಿದ ಈ ಪ್ರತಿಭಟನೆಗೆ ಸೇರಿದ ಜನರ ಸಂಖ್ಯೆ ಲಕ್ಷವನ್ನು ಮೀರಿತ್ತು, ಹೀಗಾಗಿ ಇದು ಬ್ರಿಟನ್‌ನಲ್ಲಿ ಇದುವರೆಗೆ ನಡೆದಿರುವ ಬಲಪಂಥೀಯ ಪ್ರತಿಭಟನೆಯಲ್ಲಿ ಇಷ್ಟು ಜನ ಸೇರಿದ ಅತ್ಯಂತ ದೊಡ್ಡ ಪ್ರತಿಭಟನಾ ಸಮಾವೇಶ ಎನಿಸಿತು. ಬ್ರಿಟಿಷ್ ವಲಸೆ ವಿರೋಧಿ ಕಾರ್ಯಕರ್ತ ಸ್ಟೀಫನ್ ಯಾಕ್ಸ್ಲೆ-ಲೆನ್ನನ್ ಅಲಿಯಾಸ್ ಟಾಮಿ ರಾಬಿನ್ಸನ್ ಆಯೋಜಿಸಿದ್ದ ವಲಸೆ ವಿರೋಧಿ ಸಮಾವೇಶದಲ್ಲಿ ಪ್ರತಿಭಟನಾಕಾರರು ವೆಸ್ಟ್‌ಮಿನಿಸ್ಟರ್ ಸೇತುವೆಯ ಉದ್ದಕ್ಕೂ ಮೆರವಣಿಗೆ ನಡೆಸಿದರು.
ಅಮೆರಿಕಾದಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ರಾಷ್ಟ್ರೀಯವಾದಿ ಚಾರ್ಲಿ ಕಿರ್ಕ್ ಅವರ ಫೋಟೋವನ್ನು ಈ ಸಮಾವೇಶದಲ್ಲಿ ಪ್ರತಿಭಟನಾಕಾರರು ಹಿಡಿದುಕೊಂಡು ಸಾಗಿದರು. ಜೊತೆಗೆ ನಮಗೆ ನಮ್ಮ ದೇಶ ಮರಳಿ ಸಿಗಬೇಕು ಎಂದು ಬರೆದಿದ್ದ ಫ್ಲೇಕಾರ್ಡ್‌ಗಳನ್ನು ಪ್ರತಿಭಟನಾಕಾರು ಹಿಡಿದಿದ್ದರು. ಈ ಪ್ರತಿಭಟನೆಯ ವೇಳೆ ಜನರು ಹಾಗೂ ಪೊಲೀಸರ ಮಧ್ಯೆ ಚಕಮಕಿ ನಡೆದು 25ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಹಲವು ಪೊಲೀಸರಿಗೆ ಗಾಯಗಳಾಗಿವೆ.
ಟಾಮಿ ರಾಬಿನ್ಸನ್ ಆಯೋಜಿಸಿದ ಈ ಸಮಾವೇಶದಲ್ಲಿ ಫ್ರೆಂಚ್ ಬಲಪಂಥೀಯ ಪರ ರಾಜಕೀಯ ನಾಯಕ ಎರಿಕ್ ಜೆಮ್ಮೌರ್ ಮತ್ತು ವಲಸೆ ವಿರೋಧಿ ಆಲ್ಟರ್ನೇಟಿವ್ ಫಾರ್ ಜರ್ಮನಿ (ಎಎಫ್‌ಡಿ) ಪಕ್ಷದ ಪೆಟ್ರ್ ಬೈಸ್ಟ್ರಾನ್ ಕೂಡ ಆಗಮಿಸಿದ್ದರು. ಬಿಳಿಯರಲ್ಲದ ವಲಸಿಗರು ಬಿಳಿಯ ಯುರೋಪಿಯನ್ನರನ್ನು ಉದ್ದೇಶಪೂರ್ವಕವಾಗಿ ಬದಲಾಯಿಸುತ್ತಿದ್ದಾರೆ. ಮಹಾ ಬದಲಿ ಪಿತೂರಿ ಸಿದ್ಧಾಂತ ಇದರ ಹಿಂದಿದೆ ಎಂದು ಎರಿಕ್ ಜೆಮ್ಮೌರ್ ಹೇಳಿದರು. ನಮ್ಮ ಯುರೋಪಿಯನ್ ಜನರನ್ನು ದಕ್ಷಿಣದಿಂದ ಬರುವ ಜನರು ಮತ್ತು ಮುಸ್ಲಿಂ ಸಂಸ್ಕೃತಿಯಿಂದ ಬದಲಾಯಿಸುವ ದೊಡ್ಡ ಪ್ರಕ್ರಿಯೆಗೆ ನಾವು ಒಳಪಟ್ಟಿದ್ದೇವೆ, ನೀವು ಮತ್ತು ನಾವು ನಮ್ಮ ಹಿಂದಿನ ವಸಾಹತುಗಳಿಂದ ವಸಾಹತುಶಾಹಿಯಾಗುತ್ತಿದ್ದೇವೆ ಎಂದು ತೀವ್ರ ಬಲಪಂಥೀಯ ಫ್ರೆಂಚ್ ರಾಜಕಾರಣಿ ಎರಿಕ್ ಜೆಮ್ಮೌರ್ ಈ ಸಮಾವೇಶದಲ್ಲಿ ಹೇಳಿದ್ದರು.
ಮಾರ್ಚ್ ಆಗನಿಸ್ಟ್ ಫ್ಯಾಸಿಸಂ ವಿರುದ್ಧ ನಡೆದ ಪ್ರತಿಭಟನೆ
ಇದಕ್ಕೂ ಮೊದಲು ಸ್ಟ್ಯಾಂಡ್ ಅಪ್ ಟು ರೇಸಿಸಂ ಆಯೋಜಿಸಿದ್ದ ಮಾರ್ಚ್ ಆಗನಿಸ್ಟ್ ಫ್ಯಾಸಿಸಂ ಪ್ರತಿಭಟನೆಯಲ್ಲಿ 5 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು ಇದಕ್ಕೆ ಪ್ರತಿಯಾಗಿ ಯುನೈಟೆಡ್ ದಿ ಕಿಂಗ್‌ಡಮ್ ಪ್ರತಿಭಟನೆ ನಡೆದಿದೆ. ಈ ಪ್ರತಿಭಟನೆಯಲ್ಲಿ ಹೀಗೆ ಲಕ್ಷಕ್ಕೂ ಹೆಚ್ಚು ಜನ ಸೇರಬಹುದು ಎಂಬ ನಿರೀಕ್ಷೆಯೂ ಪೊಲೀಸರಿಗೆ ಇರಲಿಲ್ಲ, ಪರಿಣಾಮ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಸಂಘರ್ಷ ನಡೆದು 25ಕ್ಕೂ ಹೆಚ್ಚು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದರು. ಇಷ್ಟೊಂದು ಜನರಿಗೆ ಕೇವಲ ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು.
ಈ ಪ್ರತಿಭಟನೆ ಆಯೋಜಿಸಿದ ಟಾಮಿ ರಾಬಿನ್ಸನ್ ಬ್ರಿಟನ್‌ನ ಅತ್ಯಂತ ಪ್ರಭಾವಶಾಲಿ ಬಲಪಂಥೀಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಈತ ರಾಷ್ಟ್ರೀಯವಾದಿಯಾಗಿದ್ದು, ಇಸ್ಲಾಂ ವಿರೋಧಿ ಇಂಗ್ಲಿಷ್ ಡಿಫೆನ್ಸ್ ಲೀಗ್ ಅನ್ನು ಸ್ಥಾಪಿಸಿದ್ದ. ಈ ಸಮಾವೇಶದಲ್ಲಿ ಐರೋಪ್ಯದ ಬಲಪಂಥೀಯ ನಾಯಕರು ಪಾಲ್ಗೊಂಡಿದ್ದು, ವಲಸೆಯಿಂದ ಮೂಲ ನಿವಾಸಿಗಳಿಗಾಗುತ್ತಿರುವ ಹಾನಿಯ ಬಗ್ಗೆ ಆಕ್ರೋಶ ಹೊರಹಾಕಿದ್ದರು.
ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ಭಯಾನಕ ಘಟನೆ : ನಿದ್ರಿಸುತ್ತಿದ್ದ ಮಕ್ಕಳ ಕಣ್ಣಿಗೆ ಪೆವಿಕ್ವಿಕ್ ಹಾಕಿದ ಸಹಪಾಠಿ : 8 ಮಕ್ಕಳ ಕಣ್ಣಿಗೆ ಹಾನಿ
ಇದನ್ನೂ ಓದಿ: ಜಗತ್ತನ್ನು ತೊರೆಯುತ್ತಿದ್ದೇವೆ ಕ್ಷಮಿಸಿಬಿಡಿ... ಮಾನಸಿಕ ಅಸ್ವಸ್ಥ ಮಗನೊಂದಿಗೆ 13ನೇ ಮಹಡಿಯಿಂದ ಕೆಳಗೆ ಹಾರಿದ ತಾಯಿ
