ಔರಂಗಜೇಬ್ ಕಾಲದಲ್ಲಿ ಮಾತ್ರ ಭಾರತ ಒಗ್ಗಟ್ಟಾಗಿತ್ತು, ಪಾಕ್ ರಕ್ಷಣಾ ಸಚಿವನ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಹರಿದು ಹಂಚಿಹೋಗಿದ್ದ ಭಾರತವನ್ನು ಔರಂಗಜೇಬ್ ಬಂದು ಸರಿ ಮಾಡಿದ್ದ ಎಂದಿದ್ದಾರೆ. ಈ ಹೇಳಿಕೆ ನೀಡಲು ಒಂದು ಮಹತ್ವದ ಕಾರಣವಿದೆ.
ಇಸ್ಲಾಮಾಬಾದ್ (ಅ.08) ಉಗ್ರರ ನುಸುಳಿಸಿ ದಾಳಿ, ಗಡಿಯಲ್ಲಿ ಅಪ್ರಚೋದಿತ ದಾಳಿ, ವಿಶ್ವ ಸಂಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತಕ್ಕೆ ಮಸಿ ಬಳಿಯುವ ಪ್ರಯತ್ನ, ಅಮೆರಿಕ ಜೊತೆ ಭಾರತಕ್ಕೆ ಪಾಠ ಕಲಿಸುವ ಎಚ್ಚರಿಕೆ, ಸ್ಲೀಪರ್ ಸೆಲ್ ಮೂಲಕ ಭಾರತ ಬೆದರಿಸುವ ತಂತ್ರ ಸೇರಿದಂತೆ ಹಲವು ಪ್ರಯತ್ನ ನಡೆಸುತ್ತಿರುವ ಪಾಕಿಸ್ತಾನಕ್ಕೆ ಭಾರತದಲ್ಲಿ ಕೋಲಾಹಲ ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ. ಇದೀಗ ಭಾರತೀಯರನ್ನು ತಮ್ಮೊಳಗೆ ಎತ್ತಿಕಟ್ಟಿ, ಸಮುದಾಯಗಳ ನಡುವೆ ಕೋಲಾಹಲ ಸೃಷ್ಟಿಸಲು ಪಾಕಿಸ್ತಾನ ಹೊಸ ದಾಳ ಉರುಳಿಸಿದೆ. ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸೀಫ್ ಹೇಳಿಕೆ ವಿವಾದವಾಗಿದ್ದು ಮಾತ್ರವಲ್ಲ, ತೀವ್ರ ಟೀಕೆಗೆ ಗುರಿಯಾಗಿದೆ. ಭಾರತ ಒಗ್ಗಟ್ಟಾಗಿದ್ದು, ಮೊಘಲ್ ದಾಳಿಕೋರ ಔರಂಗಜೇಬ್ ಆಡಳಿತದಲ್ಲಿ ಮಾತ್ರ ಭಾರತ ಒಗ್ಗಟ್ಟಾಗಿತ್ತು. ಇನ್ನುಳಿದ ಎಲ್ಲಾ ಸಮಯದಲ್ಲಿ ಭಾರತ ಹರಿದು ಹಂಚಿಹೋಗಿತ್ತು ಎಂದು ಹೇಳಿಕೆ ನೀಡಿದ್ದಾರೆ.
ಟಿವಿ ಸಂದರ್ಶನದಲ್ಲಿ ಭಾರತದ ಇತಿಹಾಸ ಹೇಳಿ ನಗೆಪಾಟಲಿಗೀಡಾದ ಸಚಿವ
ಪಾಕಿಸ್ತಾನ ರಕ್ಷಣಾ ಸಚಿವ ತನ್ನ ದೇಶದ ರಕ್ಷಣೆ, ಭಯೋತ್ಪಾದನೆ ನಿಗ್ರಹ ಸೇರಿದಂತೆ ಇತರ ಜ್ವಲಂತ ಸಮಸ್ಯೆಗಳ ಕುರಿತು ಇದುವರೆಗೆ ಒಂದೇ ಒಂದು ಹೇಳಿಕೆ, ಕ್ರಮ ಕೈಗೊಂಡಿಲ್ಲ. ಆದರೆ ಪದೇ ಪದೇ ಭಾರತಕ್ಕೆ ಎಚ್ಚರಿಕೆ ನೀಡಲು, ಭಾರತದ ವಿರುದ್ದ ಸುಳ್ಳು ಹೇಳಿಕೆ ನೀಡಲು ಮುಂದಿದ್ದಾರೆ. ಇದೀಗ ಟಿವಿ ಸಂದರ್ಶನದಲ್ಲಿ ಭಾರತದ ಇತಿಹಾಸದ ಪ್ರಕಾರ, ಔರಂಗಜೇಬ್ ಆಡಳಿತದಲ್ಲಿ ಭಾರತ ಒಗ್ಗಟ್ಟಾಗಿತ್ತು. ಆದರೆ ಪಾಕಿಸ್ತಾನ ಹಾಗಲ್ಲ, ಕಾರಣ ಪಾಕಿಸ್ತಾನ ಅಲ್ಲಾಹು ಸೃಷ್ಟಿಸಿದ ದೇಶ. ಮನೆಯಲ್ಲಿ, ನಾವು ವಾಗ್ವಾದ, ಚರ್ಚೆ, ಆರೋಪ, ಪ್ರತ್ಯಾರೋಪ ಮಾಡುತ್ತೇವೆ. ಆದರೆ ಭಾರತ ವಿಚಾರ ಬಂದಾಗ ನಾವು ಒಗ್ಗಟ್ಟಾಗಿ ಹೋರಾಡುತ್ತೇವೆ ಎಂದು ಖವಾಜಾ ಆಸೀಫ್ ಹೇಳಿದ್ದರೆ.
ಭಾರತ ವಿರುದ್ಧ ಯುದ್ಧ ನಿಜ
ಭಾರತ ವಿರುದ್ಧ ಯುದ್ದ ನಡೆಯುತ್ತಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಖವಾಜಾ ಆಸೀಫ್, ನಾನು ಹೇಳಿಕೆ ನೀಡಿ ತೀವ್ರಗೊಳಿಸಲು ಹೋಗುವುದಿಲ್ಲ. ಆದರೆ ಭಾರತದ ವಿರುದ್ಧ ವಾರ್ ಈಸ್ ರಿಯಲ್ ಎಂದಿದ್ದಾರೆ. ಭಾರತ ವಿರುದ್ದ ಯುದ್ಧ ನಿಜ, ಭಾರತದ ವಿರುದ್ಧ ಸವಾಲು ಇರುವುದು ನಿಜ. ಈಗ ಯುದ್ದ ನಡೆದರೆ ಅಲ್ಲಾಹು ಇಚ್ಚೆಯಂತೆ ನಾವು ಉತ್ತಮ ಫಲಿತಾಂಶ ಪಡೆಯುತ್ತೇವೆ ಎಂದು ಖವಾಜಾ ಆಸೀಫ್ ಹೇಳಿದ್ದಾರೆ.
ಭಾರತದ ಎಚ್ಚರಿಕೆ ಬೆನ್ನಲ್ಲೇ ಪಾಕಿಸ್ತಾನದ ಕುತಂತ್ರ
ಭಾರತ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಪ್ರಮುಖ ಸೇನಾ ಮುಖ್ಯಸ್ಥರು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದರು. ಪಾಕಿಸ್ತಾನ ಭಯೋತ್ಪಾದನೆ ನಿಲ್ಲಿಸಿದರೆ ಉತ್ತಮ, ಇಲ್ಲದಿದ್ದರೆ, ನಕ್ಷೆಯಲ್ಲೂ ಪಾಕಿಸ್ತಾನದ ಕುರುಹು ಇರುವುದಿಲ್ಲ ಎಂದು ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆಯಿಂದ ಪಾಕಿಸ್ತಾನ ಬೆಚ್ಚಿ ಬಿದ್ದಿತ್ತು. ವಿಶ್ವಸಂಸ್ಥೆಯಲ್ಲಿ ಭಾರತ ವಿರುದ್ದ ದೂರು ನೀಡುವ ಪ್ರಯತ್ನಕ್ಕೂ ಹಿನ್ನಡೆಯಾಗಿತ್ತು. ಹೀಗಾಗಿ ಹೊಸ ರಣತಂತ್ರ ಹೆಣೆದು ಹರಿಬಿಡಲಾಗಿದೆ
ಔರಂಗಜೇಬ್ ಹೇಳಿಕೆ ನೀಡಿದ್ದು ಯಾಕೆ
ಪಾಕಿಸ್ತಾನ ರಕ್ಷಣಾ ಸಚಿವ ಔರಂಗಜೇಬ್ ಎಳೆದುತಂದಿದ್ದು ಯಾಕೆ ಅನ್ನೋದು ಗೌಪ್ಯವಾಗಿ ಉಳಿದಿಲ್ಲ. ಪ್ರಮುಖವಾಗಿ, ಔರಂಗಜೇಬ್‌ಗೆ ಭಾರತದಲ್ಲಿ ಪರ ವಿರೋಧಗಳಿವೆ. ಔರಂಗಜೇಬ್ ಎಳೆದುತಂದರೆ ಭಾರತದಲ್ಲೇ ಔರಂಗಜೇಬ್ ವಿಚಾರವಾಗಿ ಚರ್ಚೆಗಳು, ದಾಳಿಗಳು, ಗಲಭೆಗಳು ನಡೆಯಲಿದೆ. ಇದರಿಂದ ಭಾರತದೊಳಗೆ ಅಶಾಂತಿ, ಹಿಂಸಾಚಾರಗಳು ನಡೆಯಲಿದೆ ಅನ್ನೋದು ಪಾಕಿಸ್ತಾನ ರಕ್ಷಣಾ ಸಚಿವರ ಲೆಕ್ಕಾಚಾರ. ಔರಂಗಜೇಬ್, ಟಿಪು ಸುಲ್ತಾನ್ ಹೆಸರಿನಲ್ಲಿ ಭಾರತದಲ್ಲಿ ಹಲವು ಬಾರಿ ಸಮುದಾಯಗಳ ನಡುವೆ ಅಶಾಂತಿ ಸೃಷ್ಟಿಯಾಗಿದೆ. ಇದೇ ತಂತ್ರವನ್ನು ಪಾಕಿಸ್ತಾನ ಇದೀಗ ಬಳಸಿಕೊಂಡಿದೆ.
