ಅಲ್ಲಾಹು ಅಕ್ಬರ್, ಪತನಗೊಂಡ ವಿಮಾನ ಅಡಿಯಲ್ಲಿ ಹೂತುಹೋಗಲಿದೆ ಭಾರತ, ಪಾಕ್ ಸಚಿವನ ಎಚ್ಚರಿಕೆ ನೀಡಿದ್ದಾರೆ. ಅಲ್ಲಾ ಹೆಸರಿನಲ್ಲಿ ಪಾಕಿಸ್ತಾನ ನಿರ್ಮಾಣವಾಗಿದೆ. ನಮ್ಮ ಸೈನಿಕರಿಗೆ ಅಲ್ಲಾಹು ಪ್ರೇರಣೆಯಾಗಿದ್ದಾರೆ ಎಂದು ಪಾಕ್ ರಕ್ಷಣಾ ಸಚಿವ ಎಚ್ಚರಿಕೆ ನೀಡಿದ್ದಾರೆ.

ಇಸ್ಲಾಮಾಬಾದ್ (ಅ.05) ಭಾರತ ಹಾಗೂ ಪಾಕಿಸ್ತಾನ ನಡುವಿನ ಟೆನ್ಶನ್ ಮತ್ತೆ ಹೆಚ್ಚಾಗುವ ಸಾಧ್ಯತೆಗಳು ಗೋಚರಿಸುತ್ತಿದೆ. ಇತ್ತೀಚೆಗೆ ಪಾಕಿಸ್ತಾನ ಹಾಗೂ ಅಮೆರಿಕ ಮಾಡಿಕೊಂಡಿರುವ ಕೆಲ ಒಪ್ಪಂದಗಳು ಭಾರತದ ತಾಳ್ಮೆ ಪರೀಕ್ಷಿಸುತ್ತಿದೆ. ಇದರ ಬೆನ್ನಲ್ಲೇ ಭಾರತ ಸೇನಾಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ. ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಭಾರತೀಯ ಸೇನಾ ಮುಖ್ಯಸ್ಥರು, ಪಾಕಿಸ್ತಾನ ದೇಶ ಅಳಿಸಿ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದೆ. ಈ ಎಚ್ಚರಿಕೆಯಿಂದ ಬೆಚ್ಚಿ ಬಿದ್ದಿರುವ ಪಾಕಿಸ್ತಾನ ಇದೀಗ ನಮ್ದೂ ಒಂದು ಇರ್ಲಿ ಎಂದು ಹೇಳಿಕೆ ನೀಡುತ್ತಿದೆ. ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸೀಫ್ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ಭಾರತ ಪತನಗೊಂಡ ಯುದ್ಧವಿಮಾನಗಳ ಅಡಿಯಲ್ಲಿ ಹೂತು ಹೋಗಲಿದೆ ಎಂದಿದ್ದಾರೆ.

ಅಲ್ಲಾಹು ದೇಶದ ಶಕ್ತಿ ತೋರಿಸುತ್ತೇವೆ

ಪಾಕಿಸ್ತಾನ ಅಲ್ಲಾಹುವಿನಿಂದ ಸೃಷ್ಟಿಯಾದ ದೇಶ. ನಮ್ಮ ಸೈನಿಕರಿಗೆ ಅಲ್ಲಾಹು ಪ್ರೇರಣೆ ಹಾಗೂ ಶಕ್ತಿ. ನಮ್ಮ ಶಕ್ತಿ ತೋರಿಸಿದರೆ ಭಾರತದ ಯುದ್ಧ ವಿಮಾನಗಳು ಪತನಗೊಳ್ಳುತ್ತದೆ. ನಾವು ಆರಂಭಿಸಿದರೆ ಭಾರತದ ಯುದ್ಧ ವಿಮಾನಗಳು ಆಕಾಶ ನೋಡುವುದಿಲ್ಲ. ಈ ಯುದ್ಧವಿಮಾನಗಳ ಅವಶೇಷಗಳಡಿಯಲ್ಲಿ ಭಾರತ ಹೂತು ಹೋಗಲಿದೆ ಎಂದು ಖವಾಜ ಆಸೀಫ್ ಎಚ್ಚರಿಸಿದ್ದಾರೆ.

ಭಾರತ ವಿಫಲ ಪ್ರಯತ್ನ ಮಾಡುತ್ತಿದೆ

ಭಾರತ ಈಗಾಗಲೇ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ವಿಶ್ವದ ಇತರ ರಾಷ್ಟ್ರಗಳು ಪಾಕಿಸ್ತಾನ ಜೊತೆ ನಿಂತಿದೆ. ಅಮೆರಿಕ ಸಂಪೂರ್ಣ ಬೆಂಬಲವನ್ನು ಪಾಕಿಸ್ತಾನಕ್ಕೆ ನೀಡಿದೆ. ಭಾರತದ ಅಸಲಿಯತ್ತು ಬಹಿರಂಗವಾಗಿದೆ. ಹೀಗಾಗಿ ಭಾರತದ ರಾಜಕೀಯ ನಾಯಕರು, ಮಿಲಿಟರಿ ಮುಖ್ಯಸ್ಥರು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಜನರ ಆಕ್ರೋಶ, ಗಮನ ಬೇರೆಡೆಗೆ ಸೆಳೆಯಲು ಹೇಳಿಕೆ ನೀಡುತ್ತಿದ್ದಾರೆ. ಪಾಕಿಸ್ತಾನ ಸೇನೆ, ಭಾರತದ ರಾಫೆಲ್ ಸೇರಿದಂತೆ ಯುದ್ಧವಿಮಾನಗಳನ್ನು ಹೊಡೆದುರುಳಿಸಿತ್ತು. ಮುಂದೆ ತೀವ್ರ ಕಾರ್ಯಾಚರಣೆ ನಡೆಸಿದರೆ ಭಾರತ ತನ್ನದೇ ಯುದ್ಧವಿಮಾನಗಳ ಅವಶೇಷಗಳ ಅಡಿಯಲ್ಲಿ ನಾಶವಾಗಲಿದೆ ಎಂದು ಖವಾಜಾ ಆಸೀಫ್ ಎಚ್ಚರಿಸಿದ್ದಾರೆ.

ಪಾಕಿಸ್ತಾನದಲ್ಲಿ ಎದ್ದಿರುವ ದಂಗೆ ನಿಲ್ಲಿಸಲು ಭಾರತ ಅಸ್ತ್ರ

ಪಾಕಿಸ್ತಾನದಲ್ಲಿ ಹಲೆವೆಡೆ ಜನರು ದಂಗೆ ಎದ್ದಿದ್ದಾರೆ. ಪ್ರಮುಖವಾಗಿ ಬಲೂಚಿಸ್ತಾನ ಸೇರಿದಂತೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರಿ ಪ್ರತಿಭಟನೆಗಳು ನಡೆಯುತ್ತಿದೆ. ಪಾಕಿಸ್ತಾನ ಸೇನೆ ವಿರುದ್ದ ದಾಳಿಯಾಗುತ್ತಿದೆ. ಈ ದಂಗೆಯಿಂದ ಜರನ್ನು ಬೇರೆಡೆ ಸೆಳೆಯಲು, ಪಾಕಿಸ್ತಾನ ಸರ್ಕಾರ ಪತನದಿಂದ ಪಾರಾಗಲು, ಭಾರತದ ಹೆಸರನ್ನು ಅಸ್ತ್ರವಾಗಿ ಉಪಯೋಗಿಸಿಕೊಳ್ಳುತ್ತಿದೆ ಎಂದು ಭಾರತ ಉನ್ನತ ಮೂಲಗಳು ಹೇಳಿದೆ. ಪಾಕಿಸ್ತಾನದ ಪರಿಸ್ಥಿತಿ ಯಾರೂ ಬಿಡಿಸಿ ಹೇಳಬೇಕಿಲ್ಲ. ದಂಗೆ, ಪ್ರತಿಭಟನೆಗಳು ಎಲ್ಲೆಡೆ ರಾರಾಜಿಸುತ್ತಿದೆ. ಇದೀಗ ಭಾರತದ ವಿರುದ್ದ ದಾಳಿ, ಯುದ್ಧ ವಿಮಾನ ಪತನ ಸೇರಿದಂತೆ ಹಲವು ಸುಳ್ಳು ವಿಚಾರಗಳನ್ನು ಹೇಳಿ ಜನರನ್ನುದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ಭಾರತ ಹೇಳಿದೆ.

ನಕ್ಷೆಯಿಂದಲೂ ಅಳಿಸಿ ಹಾಕುತ್ತೇವೆ

ಭಾರತ ಇತ್ತೀಚೆಗೆ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದೆ. ಭಾರತೀಯ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ, ಪಾಕಿಸ್ತಾನ ನೆಟ್ಟಗಿದ್ದರೆ ಸರಿ, ಇಲ್ಲದಿದ್ದರೆ ಪಾಕಿಸ್ತಾನ ಅನ್ನೋ ದೇಶ ನಕ್ಷೆಯಲ್ಲೂ ಇರಲ್ಲ ಎಂದಿದ್ದಾರೆ. ಬಾಲಬಿಚ್ಚಿದ್ದರೆ, ನುಗ್ಗಿ ಹೊಡೆಯುತ್ತೇವೆ ಎಂದು ದ್ವಿವೇದಿ ಎಚ್ಚರಿಸಿದ್ದಾರೆ. ಆಪರೇಶನ್ ಸಿಂದೂರ್ ತಾಳ್ಮೆಯಿಂದ, ಸಂಯಮದಿಂದ ಕಾರ್ಯಾಚರಣೆ ಮಾಡಿದ್ದೇವೆ. ಆದರೆ ಆಪರೇಶನ್ ಸಿಂದೂರ್ 2.0 ಇಷ್ಟು ತಾಳ್ಮೆಯಿಂದ ಕೂಡಿರಲ್ಲ. ಧ್ವಂಸ ಮಾಡಿಬಿಡುತ್ತೇವೆ ಎಂದು ಉಪೇಂದ್ರ ದ್ವಿವೇದಿ ಎಚ್ಚರಿಸಿದ್ದರು. ಇತ್ತ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಎಚ್ಚರಿಕೆ ನೀಡಿದ್ದರು. ಭಾರತ ತನ್ನ ದೇಶ, ಜನರ ರಕ್ಷಣೆಗೆ ಯಾವುದೇ ಗಡಿ ನುಗ್ಗಿ ಬೇಕಾದರೂ ಹೊಡೆಯುತ್ತದೆ. ಪಾಕಿಸ್ತಾನ ಗಡಿಯೊಳಗ್ಗೆ ನುಗ್ಗಿ ಹೊಡೆದಿದ್ದೇವೆ. ಇದು ಎಚ್ಚರಿಕೆ ಎಂದು ರಾಜನಾಥ್ ಸಿಂಗ್ ಹೇಳಿದ್ದರು.