ಅಮೆರಿಕದ H-1B ವೀಸಾ ಮೇಲೆ ದುಬಾರಿ ಶುಲ್ಕ ವಿಧಿಸಿದ್ದರಿಂದ, ಭಾರತೀಯ ಮಹಿಳೆಯೊಬ್ಬಳು ತನ್ನ ಪತಿಗೆ ವಿಚ್ಛೇದನ ನೀಡಿ ಗ್ರೀನ್ ಕಾರ್ಡ್ ಹೊಂದಿರುವ ಸಹೋದ್ಯೋಗಿಯನ್ನು ಮದುವೆಯಾಗಲು ನಿರ್ಧರಿಸಿದ್ದಾಳೆ. ಈ ಕುರಿತು ಸಲಹೆ ಕೇಳಿ ಆಕೆ ಹಾಕಿರುವ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗಿದೆ. 

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಆಡಳಿತವು ಹೊಸದಾಗಿ ಪರಿಚಯಿಸಿದ H-1B ವೀಸಾ ಮೇಲೆ 1 ಲಕ್ಷ ಡಾಲರ್‌ ಶುಲ್ಕ ನಿರ್ಧಾರದಿಂದ ಭಾರತೀಯರು ಅಕ್ಷರಶಃ ಕಂಗಾಲು ಆಗಿ ಹೋಗಿದ್ದಾರೆ. ಏಕೆಂದರೆ ಈ ವೀಸಾವು, ಅಮೆರಿಕದ ವೀಸಾ ಆಗಿದೆ. ಇದು ವಿಶೇಷ ಉದ್ಯೋಗಿಗಳಿಗೆ ಮುಕ್ತವಾಗಿದೆ. ಇದರ ಅರ್ಥ ಪದವಿ ಅಥವಾ ಕೆಲಸದ ಅನುಭವದ ಮೂಲಕ ಪಡೆದ ವಿಶೇಷ ವೃತ್ತಿಪರ ಪರಿಣತಿಯನ್ನು ಹೊಂದಿರುವ ವಿದೇಶಿ ಪ್ರಜೆಗಳಿಗೆ ಅಮೆರಿಕದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಅನುಮತಿ ನೀಡುತ್ತದೆ. ಅಮೆರಿಕೇತರರು ಅದರಲ್ಲಿಯೂ ಹೆಚ್ಚಾಗಿ ಭಾರತೀಯರು ಇದೇ ವೀಸಾ ಪಡೆದುಕೊಂಡು ಅಮೆರಿಕದಲ್ಲಿ ವಾಸವಾಗಿದ್ದಾರೆ. ಆದರೆ ಇದೀಗ H-1B ವೀಸಾ ಮೇಲೆ 1 ಲಕ್ಷ ಡಾಲರ್‌ ಶುಲ್ಕ ವಿಧಿಸಿದ್ದು, ಹಲವು ಭಾರತೀಯರ ಸ್ಥಿತಿ ಗರಬಡಿದಂತಾಗಿದೆ.

ಡಿವೋರ್ಸ್​ ಕೊಡಲು ಮುಂದಾದ ಮಹಿಳೆ

ಭಾರತೀಯ ಮಹಿಳೆಯೊಬ್ಬಳು ಇದೇ ಕಾರಣಕ್ಕೆ ಗಂಡನಿಗೆ ಡಿವೋರ್ಸ್​ ಕೊಟ್ಟು, ಅಮೆರಿಕದ ಪ್ರಜೆಯಾಗಿರುವ ಅರ್ಥಾತ್​ ಗ್ರೀನ್​ ಕಾರ್ಡ್​ ಹೊಂದಿರುವ ಸಹೊದ್ಯೋಗಿಯನ್ನು ಮದುವೆಯಾಗಲು ನಿರ್ಧರಿಸಿರುವುದಾಗಿ ಹೇಳಿರುವ ಪೋಸ್ಟ್​ ಒಂದು ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸಿದೆ. ಈ ಬಗ್ಗೆ ಆಕೆ ಜನರ ಅಭಿಪ್ರಾಯವನ್ನು ಕೇಳಿದ್ದಾಳೆ. ಇದು ಅಸಲಿಯೋ, ನಕಲಿಯೋ ಎನ್ನುವುದು ತಿಳಿದಿಲ್ಲ. ಆದರೆ ಸೋಷಿಯಲ್​ ಮೀಡಿಯಾದಲ್ಲಿ ಮಾತ್ರ ಭಾರಿ ವೈರಲ್​ ಆಗುತ್ತಿದೆ. ಇದು ಒಂದು ವೇಳೆ ನಕಲಿಯಾದರು ಕೂಡ, ಕೆಲವರು ಇದೇ ರೀತಿ ಯೋಚಿಸಿದರೂ ಅಚ್ಚರಿಯೇನಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಅಷ್ಟಕ್ಕೂ ಇದರಲ್ಲಿ ಇರುವುದು ಏನೆಂದರೆ, ಈಕೆ ಅಮೆರಿಕದಲ್ಲಿ ಪತಿಯೊಂದಿಗೆ ವಾಸಿಸುತ್ತಿದ್ದಾಳೆ. ಪತಿಗೆ 'H-1B ವೀಸಾ' ಇದೆ. ಇವಳ ಬಳಿ 'H4 ವೀಸಾ' ಇದೆ. H4 ವೀಸಾ' ಎಂದರೆ, 'H-1B ವೀಸಾ' ಇರುವ ಪತಿ ಅಥವಾ ಪತ್ನಿಯ ಜೊತೆ ವಾಸಿಸಲು ಸಿಗುವ ಅನುಮತಿಯಾಗಿದೆ.

ವೀಸಾದ ಮೇಲೆ ದುಬಾರಿ ಶುಲ್ಕ

ಇದೀಗ ಟ್ರಂಪ್​ H-1B ವೀಸಾ ಮೇಲೆ 1 ಲಕ್ಷ ಡಾಲರ್‌ ಶುಲ್ಕ ವಿಧಿಸಿರೋ ಕಾರಣದಿಂದ, ತಾನು ಕಂಗಾಲಾಗಿ ಹೋಗಿದ್ದೇನೆ ಎಂದಿದ್ದಾಳೆ ಮಹಿಳೆ. ತನ್ನ ಗಂಡನಿಗೆ 1.40 ಲಕ್ಷ ಡಾಲರ್​ ಸಂಬಳ ಇದೆ. ಆದರೆ ಇಷ್ಟೊಂದು ದುಬಾರಿ ಶುಲ್ಕವನ್ನು H-1B ವೀಸಾಕ್ಕೆ ಕೊಟ್ಟರೆ ತಮ್ಮ ಕಥೆ ಅಷ್ಟೇ ಎಂದಿರುವ ಮಹಿಳೆ, ತನ್ನ ಗಂಡನಿಗೆ ಡಿವೋರ್ಸ್​ ಕೊಟ್ಟು ಅಮೆರಿಕದ ಗ್ರೀನ್​ ಕಾರ್ಡ್​ ಹೊಂದಿರುವ ಸಹೊದ್ಯೋಗಿಯನ್ನು ಮದುವೆಯಾಗ ಬಯಸಿರುವೆ. ಇದಕ್ಕೆ ಸಲಹೆ ಕೊಡಿ ಎಂದಿದ್ದಾಳೆ. ಆ ಸಹೊದ್ಯೋಗಿ ಕೂಡ ತನ್ನನ್ನು ಇಷ್ಟಪಡುತ್ತಿದ್ದು, ಮದುವೆಗೆ ಒಪ್ಪಿಕೊಂಡಿದ್ದಾನೆ ಎಂದಿರೋ ಮಹಿಳೆ, ಈ ಬಗ್ಗೆ ಸಜೆಷನ್​ ಕೇಳಿದ್ದಾಳೆ.

ಪೋಸ್ಟ್​ನಲ್ಲಿ ಏನಿದೆ?

ಪೋಸ್ಟ್​ನಲ್ಲಿ ಆಕೆ, "ನಮಸ್ಕಾರ ಗೆಳೆಯರೇ, ದಯವಿಟ್ಟು ನಿರ್ಧಾರ ತೆಗೆದುಕೊಳ್ಳಲು ನನಗೆ ಸಹಾಯ ಮಾಡಿ. ನನ್ನ ಪತಿ ವರ್ಷಕ್ಕೆ 140 ಸಾವಿರ ಸಂಪಾದಿಸುವ H1B ಹೋಲ್ಡರ್, ನಾನು H4 ಮತ್ತು ಕೆಲಸ ಮಾಡುತ್ತಿದ್ದೇನೆ. ಈ H1B ವೀಸಾ ಅನಿಶ್ಚಿತತೆಯಿಂದಾಗಿ ನಮಗೆ ಮಕ್ಕಳಿಲ್ಲ, ನಾವು ತುಂಬಾ ಒತ್ತಡದಲ್ಲಿದ್ದೇವೆ. ನನ್ನ ಕಚೇರಿಯಲ್ಲಿ ಒಬ್ಬ ವ್ಯಕ್ತಿ ಗ್ರೀನ್ ಕಾರ್ಡ್ ಹೋಲ್ಡರ್ ಆಗಿದ್ದಾರೆ, ಅವರು ಆರ್ಥಿಕವಾಗಿ ಚೆನ್ನಾಗಿ ನೆಲೆಸಿದ್ದಾರೆ, ಅವರು ನನ್ನನ್ನು ತುಂಬಾ ಇಷ್ಟಪಡುತ್ತಾರೆ ಮತ್ತು ನಾನು ಅವರನ್ನು ಸ್ವಲ್ಪ ಇಷ್ಟಪಡುತ್ತೇನೆ. ನಾನು ನನ್ನ ಗಂಡನನ್ನು ವಿಚ್ಛೇದನ ಮಾಡಿ ನನ್ನ ಸಹೋದ್ಯೋಗಿಯನ್ನು ಮದುವೆಯಾಗಬಹುದೇ..? ನಾನು ಭವಿಷ್ಯದಲ್ಲಿ ವೀಸಾಕ್ಕಾಗಿ ಒತ್ತಡಕ್ಕೊಳಗಾಗಲು ಬಯಸುವುದಿಲ್ಲ ಮತ್ತು ನಾನು ಮತ್ತೆ ಎಂದಿಗೂ ಭಾರತಕ್ಕೆ ಭೇಟಿ ನೀಡಲು ಬಯಸುವುದಿಲ್ಲ" ಎಂದು ಬರೆದುಕೊಳ್ಳಲಾಗಿದೆ.

ಇದು ನಕಲಿ ಪೋಸ್ಟ್​ ಇರಬಹುದು ಎಂದು ಹಲವರು ಊಹಿಸುತ್ತಿದ್ದಾರೆ. ಇದರ ಹೊರತಾಗಿಯೂ ಮಹಿಳೆಗೆ ಸಿಕ್ಕಾಪಟ್ಟೆ ಬೈದು, ಉಗಿದಿದ್ದಾರೆ ನೆಟ್ಟಿಗರು. ಭಾರತಕ್ಕೆ ನೀನು ಬರಲೇಬೇಡ. ನಿನ್ನಂಥ ಹೆಣ್ಣು ನಮ್ಮ ನೆಲದಲ್ಲಿ ಬೇಡ ಎಂದು ಹಲವು ಭಾರತೀಯರು ಕಿಡಿ ಕಾರಿದ್ದರೆ, ಎಲ್ಲವೂ ಚೆನ್ನಾಗಿರುವ ಗಂಡು ಮಾತ್ರ ಹೆಣ್ಣಿಗೆ ಬೇಕು ಎನ್ನುವುದನ್ನು ಇದು ಸಾಬೀತು ಮಾಡುತ್ತದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

View post on Instagram

ಇದನ್ನೂ ಓದಿ: ಡಿವೋರ್ಸ್​ ದಿನವೇ ನನ್ನನ್ನು ಟ್ರಂಪ್​ ಡೇಟಿಂಗ್​ಗೆ ಕರೆದಿದ್ರು, ಅಂದು ನಾನು ಹೋಗಿದ್ದರೆ... ನಟಿ ಹೇಳಿದ್ದೇನು?